ಸಿನಿಮಾ ತಾರೆಗಳು ತಾವು ತಂಗಲೆಂದೇ ವಿನ್ಯಾಸಗೊಳಿಸಿದ ವಿಶೇಷ ವಾಹನಗಳಿರುತ್ತವೆ. ಅಂಥ ಒಂದು ವಾಹನ ಚಿತ್ರೀಕರಣದ ಜಾಗಕ್ಕೆ ಬಂದುನಿಂತಿತು.
ಮೊದಲಿಗೆ ಸಹಾಯಕನೊಬ್ಬ ಕೆಳಗಿಳಿದು ಕೊಡೆ ಬಿಚ್ಚಿದ. ಅಗಲವಾದ ಆ ಕೊಡೆ ಮೂಡಿಸಿದ ನೆರಳ ಮೇಲೆ ಬೂಟು ಕಾಲನ್ನಿಟ್ಟು ಕೆಳಗಿಳಿದವರು ಹೃತಿಕ್ ರೋಷನ್. ಕೆಲವೇ ಕ್ಷಣಗಳಲ್ಲಿ ವಿಶೇಷ ವಿನ್ಯಾಸದ ಕುರ್ಚಿಯೊಂದು ವಾಹನದಿಂದ ಹೊರಬಂದಿತು. ಅದನ್ನು ತಂದದ್ದು ಒಬ್ಬ ಫಿಸಿಯೋ. ಶೂಟಿಂಗ್ ಲೋಕೇಷನ್‌ಗೆ ಅಲ್ಲಿಂದ ಕೆಲವೇ ಹೆಜ್ಜೆಗಳ ದೂರ.
ಹೃತಿಕ್ ಆ ಜಾಗ ತಲುಪುವ ಮೊದಲೇ ಆ ವಿಶೇಷ ಕುರ್ಚಿ ಅಲ್ಲಿತ್ತು. ಅದಾಗಲೇ ಅಗಲವಾದ ಕೊಡೆಯ ನೆರಳೂ ಅದನ್ನು ಆವರಿಸಿಕೊಂಡಿತ್ತು. ಹೋದವರೇ ಹೃತಿಕ್ ಕುರ್ಚಿ ಮೇಲೆ ಕೂತರು. ಮುಖ ಸಣ್ಣಗೆ ಕಿವುಚಿದ ಅವರು ಯಾಕೋ ನರಳಿದ್ದು ಸ್ಪಷ್ಟವಿತ್ತು.
ಶೂಟಿಂಗ್ ಲೊಕೇಷನ್‌ನಲ್ಲಿ ಲೈಟ್‌ಬಾಯ್‌ನಿಂದ ಹಿಡಿದು ಸಹಾಯಕ ನಿರ್ದೇಶಕನವರೆಗೆ ಎಲ್ಲರ ನಡುವೆ ಹೃತಿಕ್ ಮುಖ ಕಿವುಚಿದ್ದೇ ಚರ್ಚೆ.
ಹೃತಿಕ್ ಚಿತ್ರೀಕರಣಕ್ಕೆಂದು ಎದ್ದುಹೋದರೆ, ಚಿತ್ರತಂಡದ ಅನೇಕರು ಅವರು ಕೂತಿದ್ದ ಕುರ್ಚಿಯ ಕಡೆಗೆ ಧಾವಿಸುತ್ತಿದ್ದರು. ಆ ಕುರ್ಚಿಯಲ್ಲಿ ಅಂಥ ವಿಶೇಷತೆ ಏನಿದೆ ಎಂಬುದು ಎಲ್ಲರ ಕುತೂಹಲ. ಚಿತ್ರೀಕರಣದಲ್ಲಿ ಸೆಟ್ ಹಾಕುವ ಕಲಾ ನಿರ್ದೇಶಕನನ್ನು ಕರೆಸಿ ಆ ಕುರ್ಚಿಯಲ್ಲಿ ಅಂಥಾದ್ದೇನಿದೆ ಎಂದು ಕೆಲವರು ಕುತೂಹಲ ತಣಿಸಿಕೊಳ್ಳಲು ಯತ್ನಿಸಿದರು.
ಕಲಾ ನಿರ್ದೇಶಕನಿಗೆ ಆ ಕುರ್ಚಿಯ ಮರ್ಮ ಬೇಗ ಅರ್ಥವಾಯಿತು. `ಹೃತಿಕ್‌ಗೆ ಬೆನ್ನುನೋವಿರಬೇಕು; ಅದಕ್ಕೇ ಈ ವಿಶೇಷ ವಿನ್ಯಾಸದ ಕುರ್ಚಿ ತರಿಸಿಕೊಂಡಿದ್ದಾರೆ~ ಎಂದು ಆತ ಅಭಿಪ್ರಾಯ ತೇಲಿಬಿಟ್ಟ. ಅದರಿಂದಲೂ ಚಿತ್ರತಂಡದವರಿಗೆ ಸಮಾಧಾನವಾಗಲಿಲ್ಲ. ಕೊಡೆ ಹಿಡಿಯುತ್ತಿದ್ದವನನ್ನು ಮಾತಿಗೆಳೆದು ಸತ್ಯ ಹೊರತೆಗೆಯಲೆತ್ನಿಸಿದರು. ಧಣಿ ಹೇಳಿದ್ದನ್ನು ಮಾಡುವುದಷ್ಟೇ ತನ್ನ ಕೆಲಸ ಎನ್ನುತ್ತಾ ಅವನೂ ಜಾರಿಕೊಂಡ.
ನೇರವಾಗಿ ಹೃತಿಕ್ ಹತ್ತಿರ ಕುರ್ಚಿ ವಿಷಯ ಪ್ರಸ್ತಾಪಿಸುವುದು ಅವರೆಲ್ಲರಿಗೆ ಕಷ್ಟವಾಗಿತ್ತು. ಒಬ್ಬ ಹೆಸರಾಂತ ನಾಯಕನ ಹತ್ತಿರ ಹೋಗಿ ಎಲ್ಲಾ ಚಿತ್ರಕರ್ಮಿಗಳು ಖಾಸಗಿ ವಿಚಾರ ಮಾತನಾಡುವುದು ಬಾಲಿವುಡ್‌ನಲ್ಲಿ ಸುಲಭದ ಮಾತಂತೂ ಅಲ್ಲ. ಆ ಜಿಜ್ಞಾಸೆಯಲ್ಲೇ ಇಡೀ ಚಿತ್ರೀಕರಣದ ವಾತಾವರಣದಲ್ಲಿ ದೊಡ್ಡ ಗುಸುಗುಸು ಶುರುವಾಯಿತು. ಬಾಯಿಯಿಂದ ಕಿವಿಗೆ, ಅಲ್ಲಿಂದ ಇನ್ಯಾರದೋ ಕಿವಿಗೆ ಮಾತು ಹಂಚಿಕೆಯಾಗುತ್ತಾ ಹೋಗಿ ಹೃತಿಕ್‌ಗೂ ತನ್ನ ಕುರ್ಚಿ ಚರ್ಚೆಗೆ ಗ್ರಾಸವಾಗಿದೆ ಎಂಬುದು ಗೊತ್ತಾಯಿತು.
ಸಜ್ಜನ ಹೃತಿಕ್ ಎಲ್ಲರನ್ನೂ ತಾವಿದ್ದ ಜಾಗಕ್ಕೆ ಕರೆಸಿದರು. ಸಹಾಯಕನಿಗೆ ಹೇಳಿ ಆ ಕುರ್ಚಿಯನ್ನೂ ತರಿಸಿಕೊಂಡರು. ಅದರ ಮೇಲೆ ದಿವಿನಾಗಿ ಕುಳಿತರು. `ಈಗ ಹಿತವೆನ್ನಿಸುತ್ತಿದೆ, ನೋಡಿ~ ಎಂದರು. ಎಲ್ಲರೂ ಬಿಟ್ಟಕಣ್ಣು ಬಿಟ್ಟಹಾಗೆ ನೋಡುತ್ತಾ ನಿಂತಿದ್ದರು. ಹೃತಿಕ್ ಮಾತಾಡಲು ಪ್ರಾರಂಭಿಸಿದರು: `ನನಗೆ ಸ್ಲಿಪ್ ಡಿಸ್ಕ್ ಆಗಿತ್ತು.
ಬೆನ್ನುಹುರಿಯನ್ನು ಹಿಡಿದ ವೃತ್ತಾಕಾರದ ಡಿಸ್ಕ್ ಸ್ಥಾನಪಲ್ಲಟವಾಗಿತ್ತು. ಸಾಹಸ ದೃಶ್ಯ ಮಾಡುವಾಗ, ವ್ಯಾಯಾಮ ಮಾಡುವಾಗ ಯಮಯಾತನೆಯಾಗುತ್ತಿತ್ತು. ಬೆನ್ನಿಗೇನೋ ಆಗಿದೆ ಎಂದು ಅನುಮಾನ ಬಂದದ್ದೇ ಪರೀಕ್ಷಿಸಿಕೊಂಡೆ. ಆಗಲೇ ಆಗಿರುವ ತೊಂದರೆ ಗೊತ್ತಾದದ್ದು. ಚಿಕಿತ್ಸೆಯಿಂದ ಡಿಸ್ಕ್ ಮೊದಲಿನ ಜಾಗಕ್ಕೇ ಮರಳಿದೆ. ಈಗ ನೋವಿಲ್ಲ.
ಡಾಕ್ಟರ ಸಲಹೆಯಂತೆ ವಿಶೇಷ ವಿನ್ಯಾಸದ ಈ ಕುರ್ಚಿ ತರಿಸಿಕೊಂಡಿದ್ದೇನೆ. ಮನೆಯಲ್ಲಿ ಅದರ ಮೇಲೆಯೇ ಕೂರಬೇಕು. ಹೊರಗೆ ಬಂದಾಗಲೂ ಅದೇ ಅನಿವಾರ್ಯ. ಹೆಚ್ಚು ಹೊತ್ತು ನಿಲ್ಲಕೂಡದು. ಒಂದೊಂದು ಶಾಟ್ ಮುಗಿದ ನಂತರ ಆ ಕುರ್ಚಿ ಮೇಲೆ ಸಾಕಷ್ಟು ಸಮಯ ವಿರಮಿಸಿದ ನಂತರವಷ್ಟೇ ನಟಿಸಲು ಸಾಧ್ಯ. ನನ್ನ ದೇಹಾಕಾರ ನೋಡಿ ಬೆರಗಾಗುವ ಜನರಿಗೆ ನಾವು ಅನುಭವಿಸುವ ಇಂಥ ನೋವಿನ ಅರಿವೇ ಇರುವುದಿಲ್ಲ.
ನಿಮಗೆ ಈ ವಿಷಯ ಹೇಳದೇ ಹೋಗಿದ್ದರೆ ನೀವು ಇಲ್ಲಸಲ್ಲದ್ದನ್ನು ಕಲ್ಪಿಸಿಕೊಂಡು ಅದನ್ನೇ ಹಬ್ಬಿಸುತ್ತಿದ್ದಿರಿ. ನನಗೇನೂ ಆಗಿಲ್ಲ; ಮತ್ತೆ ಮಾಮೂಲಿನಂತೆ ಆಗುತ್ತೇನೆ...~.
ಹೃತಿಕ್ ನೇರವಂತಿಕೆ ಕಂಡು ಚಿತ್ರಕರ್ಮಿಗಳು ಕಣ್ಣರಳಿಸಿದರು. `ಛೆ, ಇಂಥ ಕಟ್ಟುಮಸ್ತು ದೇಹದ ನಟನಿಗೂ ಸ್ಲಿಪ್ ಡಿಸ್ಕ್ ಆಗಬೇಕೆ?~ ಎಂದು ಬೇಸರಪಟ್ಟುಕೊಂಡರು. ಮರುದಿನ ಹೋಟೆಲ್‌ನ ಕೋಣೆಯಲ್ಲಿ ಹೃತಿಕ್ ತಾವು ಮಲಗುವ ಹಾಸಗೆಯನ್ನು ಕೂಡ ತಾವೇ ತರಿಸಿಕೊಂಡದ್ದನ್ನು ಕಂಡು ಮತ್ತೆ ಅಚ್ಚರಿಗೊಂಡರು. ಮರುದಿನ ಬೆಳಿಗ್ಗೆ ಹೃತಿಕ್ ಆ ವಿಶೇಷ ವಿನ್ಯಾಸದ ಕುರ್ಚಿ ಮೇಲೆ ಕೂತೇ ಕಸರತ್ತು ಮಾಡುವುದನ್ನು ಕಂಡು ದಂಗಾದರು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.