ADVERTISEMENT

ಕಲಿಸುವ ದೇವತೆಗಳು

ಲಿಂಗರಾಜು ಡಿ.ಎಸ್
Published 5 ಮೇ 2018, 19:30 IST
Last Updated 5 ಮೇ 2018, 19:30 IST

ನಾನು ಹತ್ತನೇ ಕ್ಲಾಸಿನಲ್ಲಿ ಓದುವಾಗ ಲೆಕ್ಕ (ಗಣಿತ) ತಲೆಗೆ ಹತ್ತದೇ ಬಲು ತಾಪತ್ರಯವಾಗುತ್ತಿತ್ತು. ಆಗ ಕೋಲಾರದಲ್ಲಿ ನಮ್ಮಪ್ಪನ ಆಫೀಸಿನಲ್ಲಿ ಗುಮಾಸ್ತನಾಗಿದ್ದ ಮುಸ್ತಾಫ ಎನ್ನುವವನು, ತನ್ನಣ್ಣ ಸ್ಕೂಲು ಮೇಷ್ಟ್ರೆಂದೂ ಅವರು ಚೆನ್ನಾಗಿ ಲೆಕ್ಕ ಹೇಳಿಕೊಡುತ್ತಾರೆ ಅಂತಲೂ ಅಪ್ಪನ ಕಿವಿ ಊದಿದ್ದ. ಹಾಗಾಗಿ ನಾನು ಫಕ್ರುದ್ದೀನ್ ಮೇಷ್ಟ್ರ ಶಿಷ್ಯನಾಗಿದ್ದೆ. ನನ್ನ ಜೊತೆಗೆ ಲೆಕ್ಕ ಮತ್ತು ಇಂಗ್ಲಿಷ್ ಕೂಡ ಬಾರದ ರಮೇಶನೂ ಪಾಠಕ್ಕೆ ಬರುತ್ತಿದ್ದ. ನಮ್ಮ ಗುರುಕುಲದಲ್ಲಿ ಮೇಷ್ಟ್ರ ಮಗ ಇಸ್ಮಾಯಿಲ್ ಕೂಡ ಇದ್ದ. ನಾವೆಲ್ಲಾ ಸಂಜೆ ಹೋಗಿ ಓದಿಕೊಂಡು ರಾತ್ರಿ ಮೇಷ್ಟ್ರ ಮನೆಯಲ್ಲೇ ಮಲಗುತ್ತಿದ್ದೆವು.

ಫಕ್ರುದ್ದೀನ್ ಮೇಷ್ಟ್ರು ಸುಶ್ರಾವ್ಯವಾಗಿ ಭಾವಗೀತೆಗಳನ್ನು ಹಾಡುತ್ತಿದ್ದರು. ಅವರು ಹಾಡುತ್ತಿದ್ದ ಪುಣ್ಯಕೋಟಿಯ ಪದ್ಯ ಇವತ್ತಿಗೂ ನನ್ನ ಕಿವಿಯಲ್ಲಿ ಗುನುಗುತ್ತಿದೆ. ಅವರು ಬೇಂದ್ರೆ ಪದ್ಯ ಪಾಠ ಮಾಡುವಾಗ ಅಲ್ಲಿ ಬರುವ ತಂದಾನ, ಬಂದಾನ ಅನ್ನುವ ಪದಗಳ ಕೊನೆಯಲ್ಲಿ ದೀರ್ಘ ಎಳೆಯಲೆಂದು ಸೂಚಿಸಿರುತ್ತಿದ್ದ ಇಂಗ್ಲೀಷಿನ ‘ಎಸ್’ ಅಕ್ಷರಗಳನ್ನು ಅದೇಕೋ ಎಳೆದೂ ಎಳೆದೂ ಬಂದಾಸ್ನಾ, ತಂದಾಸ್ನಾ ಅಂತ ಓದುತ್ತಿದ್ದರು. ಈ ರಾಗ ನನಗೆ ನಗು ತರಿಸುತ್ತಿತ್ತು. ಇದಕ್ಕಾಗಿ ಒಮ್ಮೆ ಮೇಷ್ಟ್ರಿಂದ ಒದೆ ತಿಂದಿದ್ದೆ.

ಫಕ್ರುದ್ದೀನ್ ಮೇಷ್ಟ್ರು ಇಂಗ್ಲಿಷ್ ಮತ್ತು ಗಣಿತ ಪಾಠ ಮಾಡುವಾಗ ನಮ್ಮ ತಲೆಗೆ ಏನಾದರೂ ತುಂಬಲೇಬೇಕೆಂದು ಬಲು ಕಷ್ಟಪಡುತ್ತಿದ್ದರು. ಅದರಲ್ಲೂ ನನ್ನ ತಲೆಗೆ ಎಲ್ಲವನ್ನೂ ತುಂಬಿಸಲು ಅವರ ಪ್ರಯತ್ನ ಜಾಸ್ತಿ ಇರುತ್ತಿತ್ತು. ಯಾಕೆಂದರೆ ನಾನು ಮುಸ್ತಾಫನ ಸಾಹೇಬ್ರ ಮಗ ಅಲ್ಲವೇ?! ಆದರೆ ನನ್ನ ತಲೆಯ ಕವಚ ಬಹಳ ದಪ್ಪ ಇದ್ದುದರಿಂದ ಗಣಿತ ಸುಲಭವಾಗಿ ಒಳಕ್ಕೆ ಸೇರುತ್ತಿರಲಿಲ್ಲ. ನನಗೆ ಲೆಕ್ಕ ಅರ್ಥ ಮಾಡಿಸಲಾಗದ ಅನೇಕ ಮೇಷ್ಟ್ರುಗಳು ಶಿಷ್ಯನಾದ ನನ್ನ ಮುಂದೆ ಸೋಲೊಪ್ಪಿ ನನಗೇ ಕೈ ಮುಗಿದಿದ್ದ ಖ್ಯಾತಿ ಇತ್ತು.

ADVERTISEMENT

ಜೊತೆಗೆ ಮುಸ್ತಾಫ ಬೇರೆ ನನ್ನ ಪ್ರಗತಿಯನ್ನು ಯಥಾವತ್ ಆಗಿ ಅಪ್ಪನಿಗೆ ತಲುಪಿಸಿ ಅವರು ಹೇಳುತ್ತಿದ್ದ ಹಾಗೆ ‘ಉಸ್ಕೋ ಅಚ್ಚಾ ಮಾರ್ನಾ...’ ಅಂತ ಮೇಷ್ಟ್ರಿಗೆ ವರದಿ ನೀಡುತ್ತಿದ್ದ. ನಾನು ಒಮ್ಮೆ ಲೆಕ್ಕವನ್ನು ಪದೇ ಪದೇ ತಪ್ಪಾಗಿ ಮಾಡುತ್ತಿದ್ದಾಗ ಅವರಿಗೆ ತುಂಬಾ ಸಿಟ್ಟು ಬಂದು ಬಲ ಕಿವಿಯ ಹಿಂಭಾಗಕ್ಕೆ ಮುಷ್ಟಿ ಮಾಡಿ ಜೋರಾಗಿ ಗುದ್ದಿಬಿಟ್ಟರು. ಆ ಏಟು ಮೂಳೆಯ ಮೇಲೆ ಬಿದ್ದು ನನಗೇನೂ ನೋವಾಗಲಿಲ್ಲ ಅವರ ಕೈಗೆ ತುಂಬಾ ಏಟಾಯಿತು ಅನ್ನಿಸುತ್ತದೆ. ಸಂಜೆ ಬಂದಾಗ ಹತ್ತಿರ ಕರೆದು ಪಕ್ಕದಲ್ಲಿ ಕೂರಿಸಿಕೊಂಡು ತಲೆ ಸವರುತ್ತಾ ‘ತುಂಬಾ ಏಟಾಯ್ತಾ ಬೆಳಿಗ್ಗೆ ಹೊಡೆದಿದ್ದು?’ ಅಂತ ಮೆತ್ತಗೆ ಕೇಳಿದ್ದರು.

ಹೇಗೋ ಆ ವರ್ಷ ನಾನು ಗಣಿತದಲ್ಲಿ ಜಸ್ಟ್ ಪಾಸಾಗಿದ್ದೆ. ಅಪ್ಪನಿಗೆ ವರ್ಗವಾದ ಕಾರಣ ನಾವು ಬೇರೆ ಊರಿಗೆ ಹೋದೆವು. ಮುಂದೆ ಲೆಕ್ಕದ ಸಹವಾಸ ಬೇಡ ಎಂದು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ನನ್ನ ದುರಾದೃಷ್ಟಕ್ಕೆ ಸರ್ಕಾರದ ತೆರಿಗೆ ಇಲಾಖೆಯಲ್ಲೇ ಕೆಲಸ ಸಿಕ್ಕಿತು. ಅಲ್ಲೂ ಲೆಕ್ಕ! ಇತ್ತೀಚೆಗೆ ಒಮ್ಮೆ ಕೆಲಸದ ಮೇಲೆ ಕೋಲಾರಕ್ಕೆ ಹೋಗಬೇಕಾಗಿ ಬಂದಿತ್ತು. ಆಗ ಪಕ್ಕನೆ ಫಕ್ರುದ್ದೀನ್ ಮೇಷ್ಟ್ರು ನೆನಪಾಗಿದ್ದರು. ಅವರನ್ನು ನೋಡಲೇಬೇಕು ಎಂದು ತೀರ್ಮಾನಿಸಿ ಕಷ್ಟಪಟ್ಟು ಅವರ ಮನೆ ಹುಡುಕಿದ್ದೆ. ಅವರಿದ್ದ ಗಲ್‌ಪೇಟೆ ಈಗ ಗುರುತೇ ಸಿಗದ ಹಾಗೆ ಬದಲಾಗಿತ್ತು. ಎಂಬತ್ತು ದಾಟಿದ್ದ ಮೇಷ್ಟ್ರು ಬಹಳ ಮೆತ್ತಗಾಗಿದ್ದರು.

ನಾನು ಪರಿಚಯ ಹೇಳಿಕೊಂಡಾಗ ಅವರಿಗೆ ಬಹಳ ಸಂತೋಷವಾಗಿತ್ತು. ತಾವು ಗಣಿತದ ಪಾಠ ಹೇಳಿಕೊಟ್ಟದ್ದರಿಂದಲೇ ನನಗೆ ಈ ಕೆಲಸ ಸಿಕ್ಕಲು ಕಾರಣ ಅಂತ ಹೇಳಿಕೊಂಡು ಸಂತೋಷಪಟ್ಟರು. ‘ಆವತ್ತು ನಿನಗೆ ಹೊಡೆದಾಗ ನನಗೆ ತುಂಬಾ ಭಯ ಆಗಿತ್ತು ಕಣಪ್ಪಾ. ಅಷ್ಟು ಜೋರಾಗಿ ಹೊಡೆಯಬಾರದಾಗಿತ್ತು ನಾನು’ ಅಂತ ನೊಂದುಕೊಂಡರು. ಹಾಗೇ ಮಾತನಾಡುತ್ತಾ ಇಸ್ಮಾಯಿಲ್ ವಿಚಾರ ಬಂತು. ಅವ ಈಗ ಇಂಗ್ಲಿಷ್ ಮೇಷ್ಟ್ರಂತೆ. ಮಂಡ್ಯದ ರಮೇಶನಿಗೆ ಬಾಯಲ್ಲಿ ಶಕಾರ ಹೊರಡದೇ ಎಲ್ಲಕ್ಕೂ ಸ-ಸ ಅನ್ನುತ್ತಾ ಮೇಷ್ಟ್ರಿಂದ ಶಕಾರ ಅಂತ ಹೆಸರು ಪಡೆದಿದ್ದ. ಒಮ್ಮೆ ಇಂಗ್ಲಿಷ್ ಪಾಠ ಓದುವಾಗ ಅವ ಡಿಪ್ರೆಶನ್ ಅಂತ ಹೇಳಲು ಬಾರದೆ ಡಿಫ಼್ರೆಸನ್ ಅಂತ ಪದೇ ಪದೇ ಹೇಳುವಾಗ ಸಿಟ್ಟಿಗೆದ್ದ ಮೇಷ್ಟ್ರು ಅವನಿಗೆ ಚೆನ್ನಾಗಿ ಹೊಡೆದದ್ದು ಹೇಳಿದೆ. ಅವರಿಗೂ ನಗು ಬಂತು.

‘ನಿನ್ನ ಸ್ನೇಹಿತ ರಮೇಶ ಎಲ್ಲವನಪ್ಪಾ ಈಗ ?’ ಅಂದರು. ‘ಆತನೂ ಈಗ ನನ್ನ ಇಲಾಖೆಯಲ್ಲೇ ದೊಡ್ಡ ಅಧಿಕಾರಿ ಸಾರ್’ ಅಂದೆ. ‘ಹೌದಾ... ಅದರೂ ನನಗೊಂದು ಬೇಜಾರು ಕಣಪ್ಪಾ!’ ಅಂದ್ರು.

‘ಅದೇನು ಸಾರ್ ನಿಮ್ಮಿಂದ ಕಲಿತ ನಾವೆಲ್ಲಾ ಒಳ್ಳೆಯ ಕೆಲಸದಲ್ಲಿದ್ದೇವೆ ಬೇಜಾರು ಯಾಕೆ ಸಾರ್’ ಅಂದೆ. ‘ಅದೇ ಕಣಪ್ಪಾ ಅವನಿಗೆ ಒಂದು ವರ್ಷ ಇಂಗ್ಲಿಷ್ ಪಾಠ ಹೇಳಿದರೂ ಅವನಿಂದ ಸರಿಯಾಗಿ ಡಬ್ಲ್ಯೂ ಅಂತ ಹೇಳಿಸಕ್ಕಾಗಲಿಲ್ಲವಲ್ಲಾ ಅದೇ ನೋವು’ ಅಂದರು. ನನಗೆ ನಗು ತಡೆಯಲಾಗದೇ ಪಕಪಕ ನಕ್ಕೆ. ರಮೇಶ ಡಬ್ಲ್ಯೂ ಅನ್ನುವ ಅಕ್ಷರವನ್ನು ಅದೆಷ್ಟೇ ಬಾರಿ ಹೇಳಿಕೊಟ್ಟರು ಗೊಬ್ಲ್ಯೂ ಅಂತಲೇ ಹೇಳುತ್ತಿದ್ದ. ಕೊನೆಗೂ ಅವನು ಡಬ್ಲ್ಯೂ ಅಂತ ಹೇಳಲೇ ಇಲ್ಲ.

‘ನೋಡು ನೀನು ನಗತೀಯ. ನನ್ನ ಮೇಷ್ಟ ಕೆಲಸಕ್ಕೇ ಸವಾಲಾಗಿದ್ದ ಕಣಪ್ಪ ಅವನು. ಮಕ್ಕಳಿಗೆ ಚೆನ್ನಾಗಿ ಕಲಿಸಿದೆ ಅಂತ ತೃಪ್ತಿ ನನಗೆ ಇದೆ. ಆದರೆ ರಮೇಶನಿಗೆ ಡಬ್ಲ್ಯೂ ಕಲಿಸಕ್ಕಾಗಲಿಲ್ಲವಲ್ಲಾ ಅನ್ನೋ ನೋವು ಇನ್ನೂ ಇದೆ ಕಣಪ್ಪಾ’ ಅನ್ನುತ್ತಾ ನೊಂದುಕೊಂಡರು. ‘ಹೋಗಲಿ ಬಿಡಿ ಸಾರ್’ ಅಂತ ಸಮಾಧಾನಿಸಿದೆ. ಆದರೂ ಕೇಳಲೊಲ್ಲರು.

‘ಅವನೆಲ್ಲಾದರೂ ಚೆನ್ನಾಗಿರಲಿ. ಆದರೂ ಒಂದು ತಿಳಕೋ, ಅವನಿಗೂ ಹೇಳು ಮುಂದಿನ ಜನುಮದಾಗಾದ್ರೂ ತಿರಗಾ ಹುಟ್ಟಿ ಬಂದು ಅವನಿಗೆ ಡಬ್ಲ್ಯೂ ಕಲಸೇ ಕಲಸತೀನಿ’ ಅಂದ್ರು ಮೇಷ್ಟ್ರು ಏದುಸಿರು ಬಿಡುತ್ತಾ. ಮೊನ್ನೆ ಫಕ್ರುದ್ದೀನ್ ಮೇಷ್ಟ್ರು ತೀರಿಹೊದರು ಅಂತ ಕೇಳಿ ಬೇಸರವಾಯ್ತು. ಆದರೂ ‘ರಮೇಶನಿಗೆ ಡಬ್ಲ್ಯೂ ಕಲಿಸಾಕೆ ಅವರ ಕೈಲಿ ಆಗಲಿಲ್ಲವಲ್ಲಾ’ ಅನ್ನುವುದನ್ನು ನೆನಪಿಸಿಕೊಂಡಾಗ ನಗು ಕೂಡಾ ಬಂತು. ಇವತ್ತಿನ ಮೇಷ್ಟ್ರುಗಳ ಬಗ್ಗೆ, ಕೆಲಸದ ಬಗ್ಗೆ ಅವರು ಹೊಂದಿರುವ ಬದ್ಧತೆ ಬಗ್ಗೆ ಆಲೋಚಿಸಿದಾಗ ಫಕ್ರುದ್ದೀನ್ ಮೇಷ್ಟ್ರು ಅನಿವಾರ್ಯವಾಗಿ ನೆನಪಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.