ADVERTISEMENT

ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 19:30 IST
Last Updated 23 ಡಿಸೆಂಬರ್ 2017, 19:30 IST
ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ
ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ   

ಜಗತ್ತು ಕಂಡ ಕೆಲವೇ ಕೆಲವು ಶ್ರೇಷ್ಠ ಲೇಖಕರಲ್ಲಿ ರಷ್ಯಾದ ಲಿಯೋ ಟಾಲ್‌ಸ್ಟಾಯ್‌ ಕೂಡ ಒಬ್ಬರು. ‘ಅನ್ನಾ ಕರೆನಿನಾ’, ‘ವಾರ್‌ ಆ್ಯಂಡ್‌ ಪೀಸ್‌’ನಂಥ ಕಾದಂಬರಿಗಳು, ಹಲವಾರು ಸಣ್ಣ ಕಥೆಗಳ ಮೂಲಕ ಅವರು ಅವರು ನಡೆಸಿದ ಸೃಜನಶೀಲ ಶೋಧ ಅಪೂರ್ವವಾದದ್ದು. ಲೇಖಕನಾಗಿಯಷ್ಟೇ ಅಲ್ಲ, ಅವರ ಬದುಕಿಗೆ ಇರುವ ದಾರ್ಶನಿಕ ಆಯಾಮವೂ ಅಷ್ಟೇ ಮಹತ್ವದ್ದು. ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿ, ವೈಭೋಗದಲ್ಲಿಯೇ ಬೆಳೆದು ಇಹದ ಎಲ್ಲವನ್ನೂ ತೊರೆದು ಪರಕ್ಕಾಗಿ ಹಾತೊರೆಯುವ ಸಂತನ ಬದುಕಿಗಾಗಿ ಹಂಬಲಿಸಿದ ವ್ಯಕ್ತಿ ಅವರು.

ಕನ್ನಡಕ್ಕೆ ಟಾಲ್‌ಸ್ಟಾಯ್‌ ಹೊಸಬರೇನಲ್ಲ, ಅವರ ಕಥೆಗಳು, ಕಾದಂಬರಿಗಳನ್ನು ಹಲವರು ಅನುವಾದ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಆದರೆ ಒಬ್ಬ ದಾರ್ಶನಿಕನಾಗಿ, ಸಂತನಾಗಿ ಅವರು ನಮ್ಮಲ್ಲಿ ಅಷ್ಟಾಗಿ ಪರಿಚಿತರಲ್ಲ. ಟಾಲ್‌ಸ್ಟಾಯ್‌ ಅವರ ಈ ದಾರ್ಶನಿಕ ಮುಖವನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿ.ಎಸ್‌. ಜಯಪ್ರಕಾಶ ನಾರಾಯಣ ಅನುವಾದಿಸಿರುವ ‘ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ’ ಎಂಬ ಕೃತಿ ಮಹತ್ವದ್ದಾಗಿದೆ. ಇದು ಟಾಲ್‌ಸ್ಟಾಯ್‌ ಅವರ ‘ವೈಸ್‌ ಥಾಟ್ಸ್‌ ಫಾರ್‌ ಎವೆರಿಡೇ’ ಎಂಬ ಪುಸ್ತಕದ ಕನ್ನಡ ಅವತರಣಿಕೆ. ಇದಕ್ಕೆ ಹೊಂದಿಕೆಯಾಗುವಂತೆ ‘ದಿನಕ್ಕೊಂದು ದರ್ಶನ’ ಎಂಬ ಅಡಿಶೀರ್ಷಿಕೆಯನ್ನೂ ನೀಡಲಾಗಿದೆ.

ಟಾಲ್‌ಸ್ಟಾಯ್‌ ತಮ್ಮ ಬದುಕಿನ ಅನುಭವದ ಮೂಸೆಯಲ್ಲಿ ಕಂಡುಕೊಂಡ ಸತ್ಯಗಳು ಮತ್ತು ಜಗತ್ತಿನ ಶ್ರೇಷ್ಠ ದಾರ್ಶನಿಕರ ಮಾತುಗಳನ್ನು ಸೇರಿಸಿ ಈ ಪುಸ್ತಕವನ್ನು ರೂಪಿಸಿದ್ದಾರೆ. ವೈಯಕ್ತಿಕವಾಗಿಯೂ ಇದು ಅವರಿಗೆ ತುಂಬ ಸಂತೃಪ್ತಿ ನೀಡಿದ ಕೃತಿ. ಇದನ್ನು ಅವರೇ ಬರೆದುಕೊಂಡಿದ್ದಾರೆ. ಮುನ್ನೂರ ಅರವತ್ತೈದು ಸರಳ, ಅಷ್ಟೇ ಮಹತ್ವದ ಸಂಗತಿಗಳನ್ನು ಪುಟ್ಟಪುಟ್ಟದಾಗಿ ಇಲ್ಲಿ ನೀಡಲಾಗಿದೆ. ಪ್ರತಿದಿನವೂ ಒಂದೊಂದು ಅಧ್ಯಾಯವನ್ನು ಓದಿಕೊಳ್ಳಲು ಅನುಕೂಲವಾಗುವಂತೆ ದಿನಾಂಕದ ಪ್ರಕಾರವೇ ಸಂಕಲಿಸಲಾಗಿದೆ.

ADVERTISEMENT

ಡಾ. ಟಿ.ಎನ್‌. ವಾಸುದೇವಮೂರ್ತಿ ಅವರು ಬರೆದಿರುವ ಮುನ್ನುಡಿ ಟಾಲ್‌ಸ್ಟಾಯ್‌ ಬದುಕಿನ ಕುರಿತು ಸ್ಪಷ್ಟವಾದ ಚಿತ್ರಣ ನೀಡುವಷ್ಟು ಸಶಕ್ತವಾಗಿದೆ. ಆದ್ದರಿಂದಲೇ ಮುಂದಿನ ಓದಿಗೆ ಇದು ಗಟ್ಟಿಯಾದ ಅಡಿಪಾಯವನ್ನೂ ಹಾಕುತ್ತದೆ. ಒಂದೇ ಗುಕ್ಕಿಗೆ ಓದಿ ಮುಗಿಸುವಂಥ ಪುಸ್ತಕ ಇದಲ್ಲ, ಬದಲಿಗೆ ದಿನಕ್ಕೊಂದು ಗುಟುಕು ಗುಟುಕರಿಸಿ ಅದರಲ್ಲಿನ ಸಂಗತಿಗಳನ್ನು ಮನನ ಮಾಡಿಕೊಳ್ಳುವಂಥ ಕೃತಿ ಇದು. ಹೊಸ ವರ್ಷದ ಮೊದಲ ದಿನದಿಂದ ಆರಂಭಿಸಿ ಕೊನೆಯ ದಿನದವರೆಗೂ ಪ್ರತಿದಿನ ಒಂದೊಂದು ಒಳ್ಳೆಯ ಸಂಗತಿ ತಿಳಿದುಕೊಳ್ಳಬೇಕು ಎಂದು ಬಯಸುವವರು ಈ ಪುಸ್ತಕವನ್ನು ಕೊಂಡುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.