ADVERTISEMENT

ಗಂಧರ್ವರು ಧರೆಗಿಳಿದು ಬರುವ ಗಳಿಗೆ...

ಪ್ರಜಾವಾಣಿ ವಿಶೇಷ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST

ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಅಹೋರಾತ್ರಿ ಸಂಗೀತೋತ್ಸವ ನಡೆಸುತ್ತಿರುವ ಅಗ್ಗಳಿಕೆ ಹಿಂದೂಸ್ತಾನಿ ಸಂಗೀತದ ಹಿರಿಯ ಕಲಾವಿದ  ಪಂ. ವಿನಾಯಕ ತೊರವಿ ಅವರದು. ತಮ್ಮ ಗುರು ಪಂ. ಗುರುರಾವ್ ದೇಶಪಾಂಡೆ ಹೆಸರಿನಲ್ಲಿ `ಗುರು ಗಂಧರ್ವ' ರಾಷ್ಟ್ರೀಯ ಪುರಸ್ಕಾರ ಸ್ಥಾಪಿಸಿ, ಪ್ರತೀ ವರ್ಷ ಅಹೋರಾತ್ರಿ ಸಂಗೀತೋತ್ಸವದಂದು ಈ ಪುರಸ್ಕಾರ ಪ್ರದಾನ ಮಾಡುತ್ತಿದ್ದಾರೆ.

ಈ ಬಾರಿ ಡಿ. 24ರಂದು ಬನಾರಸ್ ಘರಾಣೆಯ ಹಿರಿಯ ಕಲಾವಿದರಾದ ಪಂ. ರಾಜನ್ ಮಿಶ್ರಾ-ಸಾಜನ್ ಮಿಶ್ರಾ ಅವರಿಗೆ ಗುರು ಗಂಧರ್ವ ಪುರಸ್ಕಾರ. ಈ ಸಮಾರಂಭ ಸಂಗೀತ ಪ್ರಿಯರಿಗೆ ಅಕ್ಷರಶಃ ಹಬ್ಬ! ಈ ಹಿನ್ನೆಲೆಯಲ್ಲಿ ವಿನಾಯಕ ತೊರವಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ಅಹೋರಾತ್ರಿ ಸಂಗೀತೋತ್ಸವ ಪರಿಕಲ್ಪನೆ ಹುಟ್ಟಿದ್ದು ಹೇಗೆ?
ಅಹೋರಾತ್ರಿ ಸಂಗೀತ ಕಾರ್ಯಕ್ರಮ ಉತ್ತರ ಹಿಂದೂಸ್ತಾನದಲ್ಲಿ ಕಳೆದ 50 ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಈ ಪರಿಕಲ್ಪನೆ ಹುಟ್ಟು ಹಾಕಿದ್ದು ನಾನೇ ಮೊದಲು. 1978-79ರಲ್ಲಿ ಧಾರವಾಡದಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದೆ. ಬಡ್ತಿಯಾಗಿ ಬೆಂಗಳೂರಿಗೆ ಬಂದಾಗ ಹಿಂದೂಸ್ತಾನಿ ಸಂಗೀತ ಅಷ್ಟಾಗಿ ಇಲ್ಲಿರಲಿಲ್ಲ. ಸಂಗೀತಗಾರನಾಗಿದ್ದ ನನಗೆ ಇಲ್ಲಿ ಉತ್ತರಾದಿ ಸಂಗೀತ ಇಲ್ಲದಿರುವುದು ಕಂಡು `ಯಾಕಪ್ಪಾ ಬಂದೆ' ಅನಿಸ್ತು. ಬ್ಯಾಂಕ್ ಮ್ಯಾನೇಜರ್ ಆಗಿದ್ದ ಏಕನಾಥ್ ಕಾಮತ್ `ಇಲ್ಲಿ ಸಂಗೀತವನ್ನು ನೀವು ಬೆಳೆಸಿ' ಎಂದು ಹುರಿದುಂಬಿಸಿದರು. ಆಗ ವರ್ಷಕ್ಕೆ ಒಂದೋ ಎರಡೋ ಸಂಗೀತ ಕಛೇರಿ ನಡೆದರೆ ಅದೇ ಹೆಚ್ಚು.

ದಕ್ಷಿಣಾದಿ ಸಂಗೀತ ಇತ್ತೇ ಹೊರತು ಉತ್ತರಾದಿಯ ಪ್ರಚಾರ ಇರಲೇ ಇಲ್ಲ. ಇಲ್ಲಿ ದಸರಾ, ನವರಾತ್ರಿ, ಗಣೇಶೋತ್ಸವ ಎಲ್ಲ ಹಬ್ಬಗಳಿಗೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಾಡ್ತಾ ಬಂದೆ. ನನ್ನ ಹಿಂದೂಸ್ತಾನಿ ಶೈಲಿಯನ್ನು ಜನ ಮೆಚ್ಚಿದರು. ಧಾರವಾಡದಲ್ಲಿ 15 ವರ್ಷ ಗುರು-ಶಿಷ್ಯ ಪರಂಪರೆಯಲ್ಲಿ ಪಂ. ಗುರುರಾವ್ ದೇಶಪಾಂಡೆ ಅವರಿಂದ ಸಂಗೀತ ಕಲಿತಿದ್ದ ನಾನು 1982ರಲ್ಲಿ ಅವರ ನಿಧನಾನಂತರ ಗುರುಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಅವರ ಸವಿನೆನಪಿಗಾಗಿ `ಗುರುರಾವ್ ದೇಶಪಾಂಡೆ ಸಂಗೀತ ಸಭಾ' ಸ್ಥಾಪಿಸಿದೆ.

ವಿದುಷಿ ಗಂಗೂಬಾಯಿ ಹಾನಗಲ್ ಅವರು ಸಂಸ್ಥೆಯನ್ನು ಉದ್ಘಾಟಿಸಿ ಬೆಳಗಿನ ರಾಗ `ಮಿಯಾಕಿ ತೋಡಿ' ಅನ್ನು ಅದ್ಭುತವಾಗಿ ಹಾಡಿದರು. ಪಂ.ಭೀಮಸೇನ ಜೋಶಿ ಅವರೂ ಬಂದು ಬೆನ್ನುತಟ್ಟಿದರು. 1983ರಲ್ಲಿ ಮೊದಲ ಬಾರಿಗೆ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ. ಹೀಗೆ ರಾತ್ರಿಯಿಡೀ ನಡೆಯುವ ಸಂಗೀತೋತ್ಸವ ಹುಟ್ಟಿಕೊಂಡಿತು.

ಮೂವತ್ತು ವರ್ಷಗಳ ಹಿಂದಿನ ಅಹೋರಾತ್ರಿ ಸಂಗೀತೋತ್ಸವ ಹೇಗಿತ್ತು?

ಪಂ. ದಿನಕರ ಕಾಯ್ಕಿಣಿ ಅವರನ್ನು ಕರೆಸಿ ಅಹೋರಾತ್ರಿ ಸಂಗೀತೋತ್ಸವಕ್ಕೆ ಚಾಲನೆ ದೊರೆಯುವಂತೆ ಮಾಡಿದೆ. ಮನೆ ಮನೆಗೆ ಹೋಗಿ ಜನರನ್ನು ಆಹ್ವಾನಿಸಿದೆ. ರಾತ್ರಿ 9 ಗಂಟೆಗೆ ಆರಂಭವಾದ ಸಂಗೀತ ಕಾರ್ಯಕ್ರಮ ಮರುದಿನ ಬೆಳಿಗ್ಗೆ 10ರವರೆಗೂ ನಡೆಯಿತು. ಮೊದಲ ಬಾರಿಗೆ ರಾತ್ರಿಯೆಲ್ಲ ಉತ್ಸವದ ವಾತಾವರಣ ನಿರ್ಮಾಣವಾಯಿತು. ಸುಮಾರು 350 ಮಂದಿ ಸೇರಿದ್ರು. ಅಲ್ಲಿಂದ ಬೆಂಗಳೂರಿನಲ್ಲಿ ಆರಂಭವಾದ ಅಹೋರಾತ್ರಿ ಸಂಗೀತೋತ್ಸವ ಪರಂಪರೆ ನಿರಂತರವಾಗಿ ಬಂದಿದೆ. ಸಂಗೀತ ಪ್ರೇಮಿಗಳು ಕಿಕ್ಕಿರಿದು ಸೇರ‌್ತಾರೆ.

ADVERTISEMENT

ಈ ಸಂಗೀತೋತ್ಸವದ ಉದ್ದೇಶ ಏನು?
ಸಂಗೀತದಲ್ಲಿ ಆಯಾಯ ಸಮಯದಲ್ಲಿ ಹಾಡುವ ರಾಗಗಳಿವೆ. ಪ್ರಹರ ರಾಗಗಳೆಂದು ಇದಕ್ಕೆ ಹೆಸರು. ಮುಂಜಾನೆ ರಾಗ, ಮಧ್ಯಾಹ್ನದ ರಾಗ, ಸಂಜೆಯ ರಾಗ, ಇಳಿ ಸಂಜೆ ರಾಗ ಮಧ್ಯರಾತ್ರಿ ರಾಗ... ಹೀಗೆ. ಸಂಗೀತ ಕಛೇರಿ ಹೆಚ್ಚಾಗಿ ಸಂಜೆಯ ವೇಳೆ ಮಾತ್ರ ನಡೆದು ರಾತ್ರಿಯ ರಾಗ, ಮುಂಜಾನೆ ರಾಗಗಳನ್ನು ಕೇಳುವ ಅವಕಾಶ ಸಿಗುವುದು ಕಡಿಮೆ. ಆದರೆ ಅಹೋರಾತ್ರಿಯಲ್ಲಿ ಎಲ್ಲ ಪ್ರಹರದ ರಾಗಗಳನ್ನು ಕೇಳುವ ಸುಯೋಗ ಸಹೃದಯರಿಗೆ. ಜನ ಖುಷಿ ಪಡ್ತಾರೆ. ಹಿಂದೂಸ್ತಾನಿ ಸಂಗೀತದ ಜತೆಗೆ ಕರ್ನಾಟಕ ಸಂಗೀತ ಕಛೇರಿಯನ್ನೂ ಏರ್ಪಡಿಸುತ್ತೇನೆ. ಇದರಿಂದ ಎರಡೂ ಶೈಲಿಯ ಸಂಗೀತ ಒಂದೇ ವೇದಿಕೆಯಲ್ಲಿ ಸಿಗುತ್ತದೆ.

ಗುರುರಾವ್ ದೇಶಪಾಂಡೆ ಸಂಗೀತ ಸಭಾದ ಇತರ ಚಟುವಟಿಕೆಗಳು?
ಸಂಗೀತ ಸಭಾಕ್ಕೆ 25 ವರ್ಷ ಆದ ಮೇಲೆ ಗುರುಗಳ ಹೆಸರಿನಲ್ಲಿ `ಗುರು ಗಂಧರ್ವ' ರಾಷ್ಟ್ರೀಯ ಪುರಸ್ಕಾರ ಕೊಡಲು ಶುರು ಮಾಡ್ದೆ. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಪ್ರಭಾ ಆತ್ರೆ, ಬಾಲಮುರಳಿ ಕೃಷ್ಣ, ಹರಿಪ್ರಸಾದ್ ಚೌರಾಸಿಯಾ ಇವರೆಲ್ಲ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈ ಬಾರಿ ಬನಾರಸ್ ಘರಾಣೆಯ ಮೇರು ಕಲಾವಿದರಾದ ಪಂ. ರಾಜನ್-ಸಾಜನ್ ಮಿಶ್ರಾ ಅವರಿಗೆ ಈ ಪುರಸ್ಕಾರ ಸಲ್ಲಲಿದೆ. ಕಳೆದ ಎರಡು ವರ್ಷಗಳಿಂದ ಗುರು ಪಂ. ಭೀಮಸೇನ ಜೋಶಿ ಅವರ ಹೆಸರಿನಲ್ಲಿ `ಮಲ್ಹಾರ್ ಸಂಗೀತೋತ್ಸವ' ಏರ್ಪಡಿಸುತ್ತಾ ಬಂದಿದ್ದೇನೆ.

ಮಳೆಗಾಲದ ವರ್ಣನೆಯ ರಾಗಗಳಾದ ಮಿಯಾ ಮಲ್ಹಾರ್, ಗೌಡ ಮಲ್ಹಾರ್ ಮುಂತಾದ ರಾಗಗಳು ಈ ಉತ್ಸವದಲ್ಲಿ ರಂಜಿಸುತ್ತದೆ. ಯುವ ಸಂಗೀತೋತ್ಸವ, ಗುರು ಶಿಷ್ಯ ಪರಂಪರೆಯಲ್ಲಿ ಸಂಗೀತ ತರಬೇತಿ, ಸಂಗೀತ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ತಿಂಗಳಿಗೊಂದು ಬೈಠಕ್ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಗೀತ ಸಂಸ್ಥೆ ನಿರಂತರವಾಗಿ ಏರ್ಪಡಿಸಿ ಸಂಗೀತ ಬೆಳೆಸಲು ಸಾಕಷ್ಟು ಶ್ರಮ ಪಟ್ಟಿದ್ದೇನೆ.

ಶಾಸ್ತ್ರೀಯ ಸಂಗೀತದತ್ತ ಯುವಜನರ ಒಲವು ಹೇಗಿದೆ?
ಇಂದಿನ ಮಕ್ಕಳು ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತರಾಗಿದ್ದಾರೆ. ಪೋಷಕರೂ ಕೂಡ ಈ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಆದರೆ ಇಂದಿನ ಮಕ್ಕಳು ಬೇಗ ಸಂಗೀತ ಕಲಿಯಬೇಕು, ವೇದಿಕೆ ಏರಬೇಕು, ಸೀಡಿ ಬರಬೇಕು, ವಿದೇಶಕ್ಕೆ ಹೋಗಬೇಕು, ಪ್ರಚಾರ ಸಿಗಬೇಕು ಎಂಬ ಬಗ್ಗೆ ತೀವ್ರ ಒತ್ತಾಸೆ ತೋರುತ್ತಿದ್ದಾರೆ. ಸಮಾಧಾನ, ತಾಳ್ಮೆ, ಶಾಂತಿ ಕಡಿಮೆ. ಒಬ್ಬ ಪರಿಪಕ್ವ ಕಲಾವಿದ ಆಗಬೇಕಾದರೆ ಕನಿಷ್ಠ 15 ವರ್ಷವಾದರೂ ಸತತ ಸಾಧನೆ ಮಾಡಬೇಕು. ರಾಗ, ಲಯ, ಉಚ್ಛಾರ, ಸಾಹಿತ್ಯ, ತಾಳ ಜ್ಞಾನ, ಶುದ್ಧತೆ ಎಲ್ಲವನೂ ರೂಢಿಸಿಕೊಂಡಾಗಲೇ ಒಬ್ಬ ಪರಿಪೂರ್ಣ ಗಾಯಕ ರೂಪುಗೊಳ್ಳಲು ಸಾಧ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.