ADVERTISEMENT

ಗುಂಬಜ್, ನಿನಗಿದೋ ಪ್ರಣಾಮ

ಕವಿತೆ

ಡಾ.ಲೋಕೇಶ ಅಗಸನಕಟ್ಟೆ
Published 14 ಜೂನ್ 2014, 19:30 IST
Last Updated 14 ಜೂನ್ 2014, 19:30 IST

ಗುಂಬಜ್, ನಿನಗಿದೋ ಪ್ರಣಾಮ

ಇದು ಎಷ್ಟನೇ ಬಾರಿಯೋ?
ಈ ಬಾರಿಯೂ
ಗುಂಬಜ್‌ ಹತ್ತಿ ಇಳಿದೆ

ಕೇಕೆ ಹಾಕಿ ಚಪ್ಪಾಳೆ ತಟ್ಟಿ
ದುಡು ದುಡನೆ ಹತ್ತುವ ಹುಡುಗರು
ಅವರೆದೆಯೊಳಗೆ ಅವಳ ಚಿತ್ರ
ಜೋರಾಗಿ ಕೂಗಿ ಕರೆದು ಬಿಡುವ ರೋಮಾಂಚನದ
ಕ್ಷಣಗಣನೆ

ಚಣ ಚಣ ನಿಂತು
ಉಸಿರು ತೆಗೆದು ಬಿಟ್ಟು ಮೊಳದುದ್ದದ
ಮೆಟ್ಟಿಲ ಮೇಲೆ ಕಾಲು ಎತ್ತಿಡುತ್ತಿರುವೆ
ಓಡಿ ಹೋಗಿ
ಪ್ರತಿಧ್ವನಿಗೊಳುವಂತೆ ಕೂಗಲು ಯಾವ ಹೆಸರಿದೆ?
ಅವಳ ಚಿತ್ರ ಮಂಕಾಗಿದೆ

ADVERTISEMENT

ಸೈಡು ಹೊಡೆದು ಓಡುತ್ತಾರೆ ಹುಡುಗರು
ಜೊತೆಗೆ ಹುಡುಗಿಯರು
ಗಲಗಲವೆನ್ನುವ ಗುಲ್ಲು
ಕಿಂಡಿಗಳಲಿ ಕಾಣುತಿದೆ ಪೇಲವ ಶಹರ
ಕುಣಿಯುತಿದೆ ಬಿಸಿಲಗುದುರೆ
ಮಾತುಗಾರನ ಕೈಯಲ್ಲಿ
ವಿಜೃಂಭಿಸುತಿದೆ ಗತಕಾಲ

ಬಾಯ್ತೆರೆದು ನಿಂತಿದ್ದಾರೆ ಮಾತುಗಾರನ ಮುಂದೆ
ಗುಂಬ ಗುಂಬಗಳ ನೂರು ಕಥೆ ಹೇಳಿ

ಕೈ ಚಪ್ಪಾಳೆ ಬಾರಿಸುತ್ತಾನೆ
ಗೂಡಿನಿಂದ ಹಾರುತ್ತವೆ ರೆಕ್ಕೆಯಗಲಿಸಿ
ಜೋಡಿ ಪಾರಿವಾಳ
ಮರಳುವುದು ಯಾವಾಗಲೋ
ಕತ್ತಲಿಳಿಯಬೇಕೋ ಏನೋ

ಪಿಸುಗುಟ್ಟಿದೆ ಸಾವಿರ ದನಿ ಸಾವಿರಬಾರಿ
ಆಯೋಮಯ ಗೋಲ
ಕಂಗೆಟ್ಟು ಕಣ್ಣು ಬಿಡುತ್ತಿರುವೆ
ಯಾರ ಹೆಸರಿಗೇಂತ ದನಿ ತೆಗೆಯಲಿ! ಬೇಸತ್ತು
ಬಳಲಿ ಬಾಯಾರಿದ ಶತಮಾನ

ಅಲ್ಲೊಂದು ಸೆಳಕಿನ ಮಿಂಚು
ದನಿಗಳೊಳಗಿಂದ ಪಿಸುದನಿಯ ರವಾನಿಸಿತು ಗುಂಬಜ್‌
ನನ್ನೆದೆಯಿಂದ ಹಾರಿ ಹೋದ ಹಕ್ಕಿ
ಅಂಚಿನಿಂದ ಉಲಿಯುತಿದೆ
ನೆಲತಪ್ಪಿದ ಹಕ್ಕಿಗೆ ನೆಲೆ ಒದಗಿಸಿದೆ ಗುಂಬಜ್‌
ನಿನಗಿದೋ ಪ್ರಣಾಮ

ಗುಂಬಜ್‌ ಇಳಿವಾಗ ಕಾಲಿಗೆ ಹರೆಯ
ಅವಳ ಕೈ ಹೆಗಲ ಮೇಲೆ ಆಸರೆಗೆಂದೇ..!
ಅವಳಿಗೂ ಜೀವ ಸಂಚಾರ
ಕೊರಡು ಕೊಸರುವ ಪರಿಗೆ ಇದು ದಿಬ್ಬ.

ಗುಂಬಗಳ ಬಿಟ್ಟು ಹಾರಿದ್ದ ಪಾರಿವಾಳಗಳು.
ಮರಳಿ ಗೂಡಿಗೆ ಸೇರುವ ಸಮಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.