ADVERTISEMENT

ಡಾ. ಮಾನವರಾವ್ ಅತ್ತಿದ್ದು ಯಾಕೆ?

ಡಿ.ಕೆ.ರಮೇಶ್
Published 17 ಡಿಸೆಂಬರ್ 2016, 19:30 IST
Last Updated 17 ಡಿಸೆಂಬರ್ 2016, 19:30 IST
ಚಿತ್ರ: ಶ್ರೀಕಂಠಮೂರ್ತಿ
ಚಿತ್ರ: ಶ್ರೀಕಂಠಮೂರ್ತಿ   

ಹಲ್ಲು ಡಾಕ್ಟರು ಇದ್ದಾರಾ ಅಂತ ಹುಲಿನಾಥ್ ಕಾಡೆಲ್ಲಾ ಹುಡುಕುತ್ತಿದ್ದರು. ಆಗಲೇ ಮುದಿಯಾಗಿದ್ದ ಹುಲಿನಾಥರಿಗೆ ಕಾಡಿನಲ್ಲಿ ಒಳ್ಳೆ ಡಾಕ್ಟರು ಸಿಗಲೇ ಇಲ್ಲ. ಅಲ್ಲೇ ಇದ್ದ ಮಿನಿಷ್ಟ್ರು ನರಿರಾಮನನ್ನು ಕೇಳಿದರು. ನರಿರಾಮನಿಗೆ ಮೊದಲಿನಿಂದಲೂ ಕಾಡಿನ ರಾಜ ಆಗೋ ಆಸೆ. ಹುಲಿನಾಥರನ್ನು ಓಡಿಸಲು ಇದೇ ಸರಿಯಾದ ಟೈಮು ಎಂದುಕೊಂಡು, ‘ಬಾಸ್ ಈ ಕಾಡಲ್ಲಿ ಒಳ್ಳೆ ಡಾಕ್ಟರು ಯಾರೂ ಸಿಗಲ್ಲ.

ನಾಟಿ ವೈದ್ಯ ಕರಡಿಕುಮಾರ್ ಕೂಡ ಮೊನ್ನೆ ಸತ್ತು ಹೋದರಂತೆ. ಫ್ಯಾಕ್ಟರಿಯಿಂದ ಬರುತ್ತಿದ್ದ ಕೆಟ್ಟನೀರನ್ನು ಅಕಸ್ಮಾತ್ತಾಗಿ ಕುಡಿದು ಗೊಟಕ್ ಅಂದರಂತೆ. ಪಾಪ ಅವರು ತಮ್ಮ ಮಕ್ಕಳಿಗೂ ನಾಟಿ ವೈದ್ಯ  ಹೇಳಿಕೊಟ್ಟಿಲ್ಲವಂತೆ. ಹಾಗಾಗಿ ನೀವು ಸಿಟಿಯಲ್ಲಿರೋ ಡಾಕ್ಟರನ್ನು ಕಾಣುವುದು ಒಳ್ಳೆಯದು’ ಎಂದಿತು.

ಹುಲಿನಾಥರು ಕಾಡು ತೊರೆದು, ಘಟ್ಟ ಇಳಿದು ಮಂಗಳೂರಿನತ್ತ ಹೋದರು. ಅಲ್ಲಿ ಎಲ್ಲರನ್ನೂ ವಿಚಾರಿಸಿ ಕಡೆಗೆ ಡಾಕ್ಟರ್ ಮಾನವರಾವ್ ಆಸ್ಪತ್ರೆಗೆ ಅಡ್ಮಿಟ್ ಆದರು. ಮಾನವರಾವ್ ಭರ್ಜರಿ ಡಾಕ್ಟ್ರು. ಅವರು ಜನಗಳಿಗಷ್ಟೇ ಅಲ್ಲ ದನಗಳಿಗೂ ಔಷಧ ಕೊಡುತ್ತಿದ್ದರು. ಹುಲಿನಾಥರ ಬೆಡ್ ಪಕ್ಕದಲ್ಲೇ ಮಾರನೇ ದಿವಸ ಹಸುದೇವಿಯೂ ಅಡ್ಮಿಟ್ ಆದಳು. ಸಿಟಿಯಲ್ಲಿ ಹುಲ್ಲು ಸಿಗದೇ ಬರೀ ಪ್ಲಾಸ್ಟಿಕ್ ತಿಂದು ಅವಳಿಗೆ ಆಪರೇಷನ್ ಮಾಡೋ ಪರಿಸ್ಥಿತಿ ಬಂದಿತ್ತು. ಇತ್ತ ಹುಲಿಯನ್ನು ನೋಡಿದ್ದೇ ಅವಳಿಗೆ ಕೆಟ್ಟ ಆಸೆ ಹುಟ್ಟಿತು.

ಈ ಮಧ್ಯೆ ಹುಲಿನಾಥರ ಹಲ್ಲು ಕೀಳುವ ದಿನ ಹತ್ತಿರ ಬಂತು. ಅವರ ಹಲ್ಲುಗಳನ್ನು ಟೆಸ್ಟ್ ಮಾಡಿದ ಮಾನವರಾವ್, ‘ಮಿಸ್ಟರ್ ಹುಲಿನಾಥ್ ನಿಮ್ಮ ಬಗ್ಗೆ ಪೇಪರ್–ಟೀವಿಗಳಲ್ಲಿ ನೋಡಿದ್ದೆ. ಝೂನಲ್ಲೂ ನಿಮ್ಮ ವಂಶಸ್ಥರಿದ್ದಾರೆ. ಗುಡ್, ನಿಮ್ಮನ್ನು ಇಲ್ಲಿ ನೋಡಿದ್ದು ಖುಷಿ ಆಯಿತು. ಅಂದಹಾಗೆ ನಿಮ್ಮ ಹಲ್ಲುಗಳನ್ನು ರಿಪೇರಿ ಮಾಡೋಕೆ ಆಗಲ್ಲ. ಅವುಗಳನ್ನು ಕೀಳುವುದೇ ಉತ್ತಮ. ಆದರೆ ಆಪರೇಷನ್‌ಗೂ ಮೊದಲು ನಿಮ್ಮ ಸಂಬಂಧಿಕರು ಅಥವಾ ಪೇರೆಂಟ್ಸ್ ಅನುಮತಿ ಬೇಕು’ ಎಂದರು. 

ಸಮೀಪದ ಬಂಧುಗಳಾರೂ ಇಲ್ಲದ ಹುಲಿನಾಥರು ಹಸುದೇವಿಯ ಬಳಿ ಬಂದು ಅನುಮತಿ ಪತ್ರಕ್ಕೆ ಸಹಿ ಹಾಕುವಂತೆ ಬೇಡಿಕೊಂಡರು. ಇದಕ್ಕೆ ಒಪ್ಪಿದ ಹಸುದೇವಿ ಒಂದು ಕಂಡೀಷನ್ ಹಾಕಿದಳು. ‘ಈಗ ಕೀಳುವ ನಿಮ್ಮ ಹಲ್ಲುಗಳನ್ನು ನನಗೆ ಕೊಡುವುದಾದರೆ ಮಾತ್ರ ಸಹಿ ಹಾಕುತ್ತೇನೆ’ ಅನ್ನೋದು ಆ ಕಂಡೀಷನ್ನು. ಅಯ್ಯೋ ಈ ಮುದಿಯನ ಹಲ್ಲು ತಗೊಂಡು ಈಯಮ್ಮ ಏನು ಮಾಡ್ತಾಳೆ? ಏನಾದರೂ ಮಾಡಿಕೊಳ್ಳಲಿ. ಒಟ್ಟಾರೆ ನನ್ನ ನೋವು ವಾಸಿಯಾದರೆ ಸಾಕು ಅಂತ ಹುಲಿನಾಥರು ಒಪ್ಪಿದರು.

ಆಪರೇಷನ್ ಆಯಿತು. ಅವರ ಎಲ್ಲಾ ಹಲ್ಲುಗಳನ್ನು ಕೀಳಲಾಯಿತು. ಮತ್ತೆ ಹಲ್ಲು ಕಟ್ಟಿಸಿಕೊಳ್ಳುವ ಅವರ ಬಯಕೆ ಈಡೇರಲಿಲ್ಲ. ಏಕೆಂದರೆ ಡಾ. ಮಾನವರಾವ್ ಬಳಿ ಹುಲಿಹಲ್ಲಿನ ಇನ್ನೊಂದು ಸೆಟ್ ಇರಲಿಲ್ಲ. ಎಲ್ಲಿ ಹುಡುಕಿದರೂ ಹುಲಿ ಹಲ್ಲು ಸಿಗಲೇ ಇಲ್ಲ. ಕಾಡುಗಳಲ್ಲಿ ಹುಲಿಹಲ್ಲು ಸಿಗೋದಿರಲಿ ಪ್ರಾಣಿಗಳಿಗೆ ತಿನ್ನೋಕೆ ಹಿಡಿ ಹುಲ್ಲೂ ಇರಲಿಲ್ಲ. ಬೇರೆ ಪ್ರಾಣಿಗಳ ಹಲ್ಲೂ ಅಡ್ಜಸ್ಟ್ ಆಗದೇ ಹುಲಿನಾಥರು ಬೊಚ್ಚುಬಾಯಿಯಲ್ಲೇ ಕಾಡಿನತ್ತ ಹೊರಡಲು ರೆಡಿ ಆದರು. ಅಷ್ಟರಲ್ಲೇ ಪಕ್ಕದ ಬೆಡ್ಡಿನಲ್ಲಿದ್ದ ಹಸುದೇವಿ ಗರ್ಜಿಸಿದಳು. ಅವಳ ಬಾಯಲ್ಲಿ ಹುಲಿನಾಥರ ಹಲ್ಲುಗಳು ಮಿಂಚ್ತಾ ಇದ್ದವು.

ಹುಲಿಹಲ್ಲು ಬಂದೊಡನೆ ಅವಳಿಗೆ ಹುಲಿಯೇ ಮೈಮೇಲೆ ಬಂದಂತೆ ಆಗಿತ್ತು. ಅವಳು ಮಾಡಿದ ಮೊದಲ ಕೆಲಸ ಅಂದರೆ ಪಕ್ಕದಲ್ಲೇ ಇದ್ದ ಹುಲಿನಾಥರನ್ನು ಫಿನಿಶ್ ಮಾಡಿದ್ದು. ಆಮೇಲೆ ಆಸ್ಪತ್ರೆಯಲ್ಲಿದ್ದವರನ್ನು ತಿನ್ನಲು ಹೊಂಚುಹಾಕಿದಳು. ಇದು ಗೊತ್ತಾದ ಕೂಡಲೇ ಡಾಕ್ಟರ್ ಮಾನವರಾವ್ ಇಂಜಕ್ಷನ್ ತಂದು ಅವಳ ಜ್ಞಾನ ತಪ್ಪಿಸಿದರು. ಹುಲಿ ಹಲ್ಲು ಕಿತ್ತು ದನದ ಹಲ್ಲನ್ನೇ ಜೋಡಿಸಿದರು. ‘ಯಾಕೆ ಹೀಗೆ ಮಾಡಿದೆ?’ ಎಂದು ಕೇಳಿದರು.

ಅದಕ್ಕೆ ಹಸುದೇವಿ ಹೇಳಿದಳು ‘ನಾನೇನು ಮಾಡ್ಲಿ ಸ್ವಾಮಿ, ನೀವು ಮನುಷ್ಯರು ಸ್ವಲ್ಪಾನೂ ಸರಿ ಇಲ್ಲ. ನಮ್ಮಿಂದ ನಿಮಗೆ ಹಾಲು ಮೊಸರು ಬೆಣ್ಣೆ ತುಪ್ಪ ದೂಧ್–ಪೇಡ ಬೇಕು, ಅದಕ್ಕೆ ಚೆನ್ನಾಗಿ ಮೇಯೋಕೆ ನಮ್ಮನ್ನು ಕಾಡಿಗೆ ಕಳಿಸಿದಿರಿ. ಮೊದಲು ದನಗಳು ಕಾಡಿಗೆ ನುಗ್ಗಿದವು. ಆಮೇಲೆ ಜನ ದಾಳಿ ಮಾಡಿದರು. ಕಾಡೆಲ್ಲಾ ಕುಲಗೆಟ್ಟು ಹೋಯಿತು. ಹಾಗೆ ಕಾಡಿಗೆ ಹೋದ ಹೊತ್ತಿನಲ್ಲೇ ನನಗೆ ಹುಲಿನಾಥರು ಕಂಡಿದ್ದು. ಎಂಥ ರೂಪ ಅಂತೀರಿ! ನಕ್ಕರೆ ಥೇಟು ಅಮಿತಾಭ್ ಬಚ್ಚನ್ ಹಲ್ಲು ಬಿಟ್ಟ ಹಾಗೆ ಆಗೋದು.

ಅವರು ಗರ್ಜಿಸಿದರೆ ಇಡೀ ಫಾರೆಸ್ಟು ಗಡಗಡ ನಡುಗುತ್ತಿತ್ತು. ನಾವು ಹಸುಗಳು ಸ್ವಾಮಿ ನಮಗೂ ಆಸೆ ಇರುತ್ತೆ. ನನಗೆ ಹುಲಿನಾಥರ ಥರ ಹಲ್ಲು ಪಡೆಯುವ ಆಸೆ. ಬಹಳ ದಿನ ಹೊಂಚು ಹಾಕಿದೆ. ನರಿರಾಮನ ಬಳಿ ಉಪಾಯ ಕೇಳಿದೆ. ಕಾಡಿನ ಹುಲಿ ನಾಡಿಗೆ ಬಂದಾಗ ಬಿಡಬೇಡ ಎಂದ. ಇವತ್ತು ನನ್ನ ಆಸೆ ಈಡೇರಿತು’ ಎನ್ನುತ್ತ ಬಾಯಿ ಚಪ್ಪರಿಸಿತು.

ಡಾ. ಮಾನವರಾವ್ ಯೋಚಿಸಿದರು. ‘ತಪ್ಪು ಯಾರದ್ದು? ಹುಲಿಯದ್ದೇ, ನರಿಯದ್ದೇ, ಹಸುವಿನದ್ದೇ ಅಥವಾ ಕಾಡನ್ನು ಕಡಿದ ಮನುಷ್ಯರದ್ದೇ?’ – ಅರ್ಥವಾಗದೆ ಕಣ್ಣೀರು ಹಾಕಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT