ADVERTISEMENT

ಪ್ರಶ್ನೆ

ಸ.ರಘುನಾಥ
Published 3 ಜೂನ್ 2017, 19:30 IST
Last Updated 3 ಜೂನ್ 2017, 19:30 IST
ಚಿತ್ರ: ಎಸ್‌.ವಿ. ಹೂಗಾರ್
ಚಿತ್ರ: ಎಸ್‌.ವಿ. ಹೂಗಾರ್   

ಮೊಳೆ ಹೊಡೆದವರ ಆತುರವೋ ಅವಸರವೋ ಮತ್ತೇನೋ
ಮೊಳೆ ಸಹಿತ ಕಳಚಿ ನೇತಾಡುತ್ತಿತ್ತು
ತೋರಣದೊಂದು ತುದಿ
ನಿಂತಂತೆ ಅನಾಥ ಬಾಗಿಲಲ್ಲಿ

ಏನು ಶುಭದಿನವೊ ಮನೆಯಲ್ಲಿ
ಬಂದು ನೋಡಿದರೆ ಒಳಗಿಂದ
ನೊಂದಾರು ಅಪಶಕುನವೆಂದು
ಮೂದಲಿಸಲೂ ಬಹುದು ಸೊಸೆಯನ್ನು.

ಮೆಲ್ಲನೇ ನಡೆದು ಮೆತ್ತಗೇ ಎತ್ತಿ
ಮೊಳೆಯ ರಂಧ್ರದಲ್ಲಿರಿಸಿ
ಒತ್ತಿದೆ ಭದ್ರ ಹೆಬ್ಬೆಟ್ಟಿನಲ್ಲಿ
ಈಗದರ ಮುಖ ನೇಣು ತಪ್ಪಿದ ಖೈದಿಯ ಹಸನ್ಮುಖ

ADVERTISEMENT

ಸಮಾಧಾನಗೊಳ್ಳದೆ ಕರೆದೆ
ಯಾರಾದರೂ ಬನ್ನಿ ಹೊರಗೆ. 
ರೇಷ್ಮೆ ಲಂಗದ ಹುಡುಗಿ ಪುಟ್ಟಗೌರಿ
ಬಂದಂತೆಯೇ ಹೋದಳು ಒಳಗೆ

ನಡುಬೈತಲೆ ಬೊಟ್ಟು ಕಾಲುಂಗುರದ ಹೆಣ್ಣು
ಕೈಯಿ ಸೊಂಟದ ಮೇಲೆ
ನಿಂತ ಭಂಗಿಯೇ ಕೇಳಿತು
ಬಂದದ್ದು, ಏಕೆ?

ತೋರಣ ಕಳಚಿತ್ತು, ಸಿಗಿಸಿರುವೆ ಸುಮ್ಮನೆ
ಮೊಳೆ ಹೊಡೆದರೆ ನಿಲ್ಲುವುದು
ಇಲ್ಲ ಕಳಚಿ ಜೋತಾಡುವುದು
ಬೀಸುತಿರುವಷ್ಟೇ ಗಾಳಿ ಸಾಕು

ಕೊಂಚವಿರುವಂತೆ ಹೇಳಿ ತಂದಳು
ಕರಿಕಪ್ಪು ಗುಂಡು ಕಲ್ಲು
ಹೊಡೆಯಿರೆರಡೇಟು ಸಾಕು
ಉಟ್ಟಿರುವೆ ಹೊಸರೇಷ್ಮೆ ಸೀರೆ

ಕಲ್ಲು ಕೊಡಲು ಚಾಚಿದೆ ಕೈಯಿ
ಇಟ್ಟುಬಿಡಿ ಬಾಗಿಲಲ್ಲೆ.
ಪೂಜೆ ನಡೆದಿದೆ ಒಳಗೆ
ನನಗೆ ಮಡಿ ಇದೆ.

ತಲೆಯಲ್ಲಿ ಹೆಜ್ಜೆ ಹಾಕಿದ
ಪ್ರಶ್ನೆ
ಅವರು ಬ್ರಾಹ್ಮಣರೋ
ಹಣದ ನವಬ್ರಾಹ್ಮಣರೋ

ಕಪ್ಪುಮೋರೆಯ ಕಲ್ಲು
ಬಾಗಿಲಲ್ಲೇ ಇತ್ತು
ಒಳಗೊಯ್ವರೊ, ಹೊರಕ್ಕೆಸೆವರೊ
ಮುಟ್ಟಿದ ನನ್ನಲ್ಲೂ ಅದೇ ಪ್ರಶ್ನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.