ADVERTISEMENT

ಪ್ರೀತಿಯಿಲ್ಲದ ಮೇಲೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST

ಮುತ್ತು ಬಂದಿದೆ `ಮುತ್ತು~ ಹುವ್ವ ತೇರಲಿ ಕುಂತು
ಶ್! ಸುಮ್ಮನಿರಿ ; ಸದ್ದು ಮಾಡದೆ ನಿಂತು ನೋಡಿಯೂ
ನೋಡದ ಹಾಗೆ ಮುಂದೆ ಹೋಗಿ ; ಮತ್ತಿಂಥ ಘಮ್ಮನೆ ಹೊತ್ತು
ಎಂದು ಬರುವುದೊ ಈ ಜಕ್ಕವಕ್ಕಿಗೆ ಬೊಮ್ಮಂಗು ಇಲ್ಲ ಗೊತ್ತು

ನೋಡಿ ಮೆಚ್ಚಿರಿ, ಬೇಡಿ ಪಡೆದಿರಬೇಕಿಂಥ ನಿರಂಬಳದ ವರವ
ಎವೆ ಮುಚ್ಚಿ ಬಚ್ಚಿಟ್ಟುಕೊಂಡಿದ್ದಾಳೆ ಹುಡುಗಿ ಚುಂಬನದ ಚಣವ
ಹೂವುಟ್ಟು ಹೂತೊಟ್ಟು ಹುವ್ವ ಕಿರೀಟವನ್ನಿಟ್ಟು ಸಂಚಾರ ಬಂದ ವನದೇವಿ
ಒಪ್ಪಿಸಿದಳೆ ಮೊಗವ ಅಡವಿದೊಂಗನಿಗೊಲಿದು ತೋಳಮಾಲೆಯ ಸೂಡಿ

ಉಪ್ಪಿರದ ಹೆಮ್ಮೆ, ಸಪ್ಪೆ ಮೀಮಾಂಸೆ, ಮಲಗಿಬಿಟ್ಟಿವೆ ಮಕಾಡೆ
ತರ್ಕ ಸಿದ್ಧಾಂತ ; ಕದದ ಹಿಂದಡಗಿವೆ ತಂತ್ರಮಂತ್ರ ; ಶುದ್ಧಪ್ರೇಮ
ದ ಇದಿರು ಕೆಲ ಅವಧಿಗಾದರೂ ತಲೆಮರೆಸಿಕೊಂಡಿದೆ ಯುದ್ಧವಾಂಛೆ
ಮಜ್ಜೆಕುಗ್ಗಿಸಿ ಲಜ್ಜೆಗೊಂಡಿದೆ ದ್ವೇಷದೊಂದಿಯ ಕೊಳ್ಳಿದೆವ್ವ

ADVERTISEMENT

ಅದು ಹೇಗೊ ಸಂಧಿಸಿದೆ ಮೆದೆರಂಗು ಕುಸುಮರಾಜಿಯ ನಡುವೆ
ಇಂಥ ಏಕಾಂತ ವೇಳೆ; ಎಷ್ಟು ಅಂಗೈಭಾಷೆ ಮುಂಗಣ್ಣ ಸನ್ನೆ
ಗಳಡಗಿವೆಯೊ ಈ ಮುತ್ತ ಹಿಂದೆ! ಎಲ್ಯ್‌ವ ಹೊದರಮರೆಯಲಿ
ಸಂಚು ನಡೆದಿದೆಯೊ ಈ ಮೈಮರೆತ ಮುದ್ರಾಭಂಗಿ ಛಿದ್ರಭಂಗಕ್ಕೆ

ಹೇ ಸ್ಥಗಿತಗೊಳ್ಳಿರಿ ಆಕಾಶಕಾಯಗಳೆ, ಇದು ಕವಿಯ ಶಾಪ!
ಇದ್ದುಬಿಡಲೀ ಹೀಗೆ ಮುದ್ದುಗರೆವೀ ಜೀವ ; ಬಾಧಿಸದಿರಲಿ
ಇವರ ಅಕ್ಕಿಬೇಳೆಯ ವ್ಯಾಜ್ಯ, ಕಂಗೆಡಿಸದಿರಲಿ ನೀರುನಿಡಿ ನಿತ್ಯ
ಯಾವುದಿರದಿದ್ದರೂ ನಡೆದೀತು, ಪ್ರೀತಿಯಿಲ್ಲದ ಮೇಲೆ 
ಹೇಗೆ ನಡೆದೀತು ಲೋಕಲೀಲೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.