ADVERTISEMENT

ಬದುಕು

ಕವಿತೆ

ಡಾ.ಅನಸೂಯ ಕಾಂಬಳೆ
Published 12 ಮಾರ್ಚ್ 2016, 19:30 IST
Last Updated 12 ಮಾರ್ಚ್ 2016, 19:30 IST
-ಬಾದಲ್‌
-ಬಾದಲ್‌   

ಇಂದು....
ನಾನು ಪಾಠಮಾಡುತ್ತಿದ್ದೇನೆ
ಅಂದು, ಕಲಿಯಲು ಬಂದ ಪಾಠ
ಮಲೆತು ನಿಂತಿದೆ ಕಣ್ಣಲ್ಲಿ

ಕೆಂಪು ಜರಿ ಅಂಚಿನ ಬಿಳಿ ರೇಷ್ಮೆಯ
ಗರಿಗರಿ ಸೀರೆ ಉಟ್ಟು, ನವಿಲ ಮೇಲೆ
ನಾಟ್ಯ ಭಂಗಿಯಲಿ ವೀಣೆ ಮೀಟುತ್ತಿರುವ
ಶಾರದೆ! ಮುಂದೆ ಭಕ್ತಿಭಾವದಲಿ
ಮಂಡಿಯೂರಿ ಕಣ್ಮುಚ್ಚಿ ಕೈಮುಗಿದು
ಶತಪಥ ಗಲ್ಲ ಬಡಿದುಕೊಳ್ಳುತ್ತ
ಲಕ್ಷ್ಮಿಯ ಅಭಯ ಹಸ್ತದಿಂದ
ಗಲಗಲ ಉದುರುವ ನಾಣ್ಯದಂತೆ
ಉದರದಿಂದೆದ್ದು ಅಧರದಿಂದ ಉಲಿವ
ಅಕ್ಷರಗಳಿಗಾಗಿ ಅರಳುಗಣ್ಣಲಿ ಕಾಯ್ದು...

ಅಂದು, ನನ್ನೊಂದಿಗೆ ಬಂದು
ಉದುರುವ ಅಕ್ಷರಗಳನ್ನು ಎದೆಯ
ಪದಕವಾಗಿಸಬೇಕೆಂದು ತಲೆಯ ಕಿರೀಟ
ವಾಗಿಸಬೇಕೆಂದು ಕಾಯ್ದವರು ಅಸಂಖ್ಯ
ಹಂಗೇ ಕುಂತಿದ್ದಾರೆ ಇನ್ನೂ ಅದೇ ಭಾವಭಂಗಿ
ಯಾರ ಆಜ್ಞೆಯೋ ಮೀರುವಂತಿಲ್ಲ

ADVERTISEMENT

ಅವರ ಹಿಂದೆಯೇ ನನ್ನ ಮಕ್ಕಳು
ಕಟೆದ ಶಿಲ್ಪಗಳಾಗಿದ್ದಾರೆ
ನವಿಲ ಹಾಸಿನ ಮೇಲೆ ಶಾರದೆ
ವನವನವ ಅಲೆದು ನಂದನವನವಾಗಿಸದೆ
ಯಾವ ಹಾಡ ಹಾಡುತ್ತಿದ್ದಾಳೆ
ಗಾಜಿನ ಮನೆಯಲ್ಲಿ...
ಏಕೆ ಒಸರುತ್ತಿದೆಯೋ ಬೆರಳುಗಳಿಂದ ರಕ್ತ
ನನ್ನ ಕಣ್ಣೀರಲಿ ಬೆರೆತು

ನಾನು ಹುಟ್ಟಿದ ಮಣ್ಣಿನಲಿ ನಾನೊಂದು ಇತಿಹಾಸ
ಕಳೆದ ಚರಿತ್ರೆಯ ಹೊಸ ಬೆಳಗು
ಗೋಡೆಗಳಿರದ ನಾಳೆಗಳಲಿ ಅನುರಣಿಸುವುದು ಅಕ್ಷರ
ವೇಮುಲ - ಕನ್ಹಯ್ಯ ಕುಮಾರರು
ಅವಳು ಮೀಟುವ ತಂತಿಯ ನವನಿನಾದಗಳು
ಶಾರದೆ ಎಂದರೆ... ದೇಶವೆಂದರೆ
ನಮಗೆ ಬರೀ ಸಂಕೇತಗಳಲ್ಲ
ಬದುಕು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.