ADVERTISEMENT

ಬಾಬಾ ಸಾಹೇಬರ ಬೆಳಕಿನಲ್ಲಿ...

ಡಾ.ಅನಸೂಯ ಕಾಂಬಳೆ
Published 11 ಏಪ್ರಿಲ್ 2015, 19:30 IST
Last Updated 11 ಏಪ್ರಿಲ್ 2015, 19:30 IST

‘ನಿಮ್ಮ ಉದ್ಧಾರ ನಿಮ್ಮ ಕೈಯಲ್ಲಿದೆ’ ಎಂಬ ಅಂಬೇಡ್ಕರ್ ಅವರ ಬೀಜ ಬೆಳಕಿನ ಮಾತು ನನ್ನೊಳಗೆ ಸ್ಥಾಪಿಸಲ್ಪಟ್ಟ ದೇವತಾಮೂರ್ತಿಗಳನ್ನು ಭಂಜಿಸಿ ಮನುಷ್ಯ ಸತ್ಯದೆಡೆಗೆ ಕರೆದೊಯ್ಯುತ್ತಿದೆ. ನಮ್ಮವರ ನಡುವೆ ನಾವೇ ಹೋರಾಡಬೇಕಾದ ರಾಮಬಾಣದ ದುರಂತಕ್ಕೆ ಭೀಮ ಬಾಣವೇ ಮದ್ದು,  ಇದು ಯಾರ ಎದೆಯನ್ನೂ ಇರಿಯುವುದಿಲ್ಲ, ತಲೆಯನ್ನು ಬೆಳಗುತ್ತದಷ್ಟೆ.

ಅಂಬೇಡ್ಕರ್ ಎನ್ನುವುದು ಭಾರತದ ಮಟ್ಟಿಗೆ ಹೋರಾಟದ ಪ್ರತಿರೂಪ. ಸಾಮಾಜಿಕವಾಗಿ ಶೋಷಣೆಗೊಳಗಾದ ಕೋಟ್ಯಂತರ ಜನಗಳ ಹಕ್ಕು ಮತ್ತು ಸ್ವಾತಂತ್ರ್ಯಗಳ ಪ್ರವಾದಿ. ಹಾಗೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಸೋದರತೆಯ ಪ್ರತೀಕವಾಗಿ ಮೂಡಿ ನಿಂತ ವ್ಯಕ್ತಿತ್ವ. ಅಂಬೇಡ್ಕರ್ ಅವರ ಹೋರಾಟ ಮಾನವನ ಜೀವವಿರೋಧಿ ನಿಲುವುಗಳ ವಿರುದ್ಧದ ಹೋರಾಟವಾಗಿದೆ.

ಅದನ್ನೇ ಭಾರತೀಯರಾದ ನಾವು ಪುರೋಹಿತಶಾಹಿ ಮತ್ತು ಪಾಳೇಗಾರಿಕೆ ವ್ಯವಸ್ಥೆ ಎನ್ನುತ್ತೇವೆ. ಇದರ ನಿರ್ಮೂಲನೆಗಾಗಿ ಅಂಬೇಡ್ಕರ್‌ ಅವರು ಆಯ್ಕೆ ಮಾಡಿದ್ದು ಅರಿವಿನ ಹೋರಾಟ. ಈ ಅರಿವಿನ ಅಹಿಂಸಾತ್ಮಕ ಹೋರಾಟ ಮನುಷ್ಯರನ್ನು ಮಾನಸಿಕ ಗುಲಾಮಗಿರಿಯಿಂದ ಹೊರತರುವುದು ಮತ್ತು ಸ್ವತಂತ್ರ ವ್ಯಕ್ತಿತ್ವದ ಚಹರೆಯನ್ನು ಪಡೆಯುವುದೇ ಆಗಿತ್ತು.

ರಾಜ ರಾಜರುಗಳ ನಡುವೆ, ರಾಷ್ಟ್ರರಾಷ್ಟ್ರಗಳ ಮಧ್ಯೆ ನಡೆಯುವ ಸಶಸ್ತ್ರ ಹೋರಾಟಕ್ಕೂ, ಶಾಸ್ತ್ರಗಳ ವಿರುದ್ಧ ದಂಗೆ ಎದ್ದ ಅಂಬೇಡ್ಕರ್‌ ಅವರ ಅರಿವಿನ ಹೋರಾಟಕ್ಕೂ ತುಂಬ ಅಂತರವಿದೆ. ಅಲ್ಲಿ ವೈರಿ ಹೊರಗಿನವನು. ಅದಕ್ಕಾಗಿ ಶಸ್ತ್ರ ಹೋರಾಟ ಸಾಧ್ಯವಿದೆ. ಇಲ್ಲಿ ಒಳಗೇ ನಡೆಯುವ ಅಂತರ್‌ಯುದ್ಧದಲ್ಲಿ ತನ್ನ ನಾಡವರೇ ಇದ್ದಾರೆ. ಕೆಲವೇ ಜನರ ಹಿತಕ್ಕಾಗಿ ರಚನೆಗೊಂಡ ಶಾಸ್ತ್ರ-ಪುರಾಣ- ಕಾವ್ಯಗಳು ಬಹುಜನರಿಗೆ ಮಾರಕವಾಗಿದ್ದನ್ನು ಅರಿತ ಅಂಬೇಡ್ಕರ್‌ ಅವರು ಅವುಗಳನ್ನು ಜನರಿಗೆ ತಿಳಿಯಪಡಿಸುವ ಪಣ ತೊಟ್ಟರು. ಈ ಶಾಸ್ತ್ರಗಳ ವಿರುದ್ಧ ಪ್ರಜ್ಞಾಯುದ್ಧದ ಆಯ್ಕೆ ಅಂಬೇಡ್ಕರ್‌ ಹೋರಾಟದ ಮಾದರಿ. ಅದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದು ಈಗ ಇತಿಹಾಸ.

ಇತಿಹಾಸವೇ ಇಲ್ಲದ ಜನರಿಗೆ ಇತಿಹಾಸದ ಪುನರ್‌ ಸೃಷ್ಟಿ ಮಾಡಿ ನಮ್ಮೊಳಗೊಂದು ರೂಪಕವಾಗಿ ಜೀವಪರ ಮೌಲ್ಯಗಳನ್ನು ಬಿತ್ತಿದ ಬಾಬಾಸಾಹೇಬ ಅಂಬೇಡ್ಕರ್‌ರ ವಿಚಾರಧಾರೆ ನನ್ನನ್ನು ಪ್ರಭಾವಿಸಿದ ಕ್ಷಣ ನನ್ನೊಳಗೊಂದು ಜೀವದೀಪದ ಬೆಳಕು ಹತ್ತಿ ಹಬ್ಬಿದ ದಿನವೂ ಹೌದು.

ಕತ್ತಲಾದರೆ ದಣಿದು ನಿದ್ದೆಗೆ ಜಾರುವ, ಹಗಲಾದರೆ ಬುತ್ತಿಗಂಟು ಹೊತ್ತು ಕೂಲಿಗೆ

ಹೋಗುವ ಬಿಕೋ ಎನ್ನುವ ಓಣಿ. ಮಕ್ಕಳ – ಮೊಮ್ಮಕ್ಕಳ ತಲೆಯ ಹೇನು, ಸೀರು ಹೆಕ್ಕಿ ಕುಕ್ಕುವ ಗೂರಲು ಹಿಡಿದ, ವಯಸ್ಸಾದವರ ನೊಂದ ದನಿಗೆ ನೀರಾಗಿ ನಿದ್ದೆ ಹೋದಂತೆ ಕಾಣುವ ನನ್ನ ಹಳ್ಳಿಯಲ್ಲಿ ನನ್ನಪ್ಪ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಾಸ್ತರ. ಸುತ್ತಮುತ್ತಲ ಊರುಗಳಿಗೆಲ್ಲ ಒಳ್ಳೆಯ ಭಾಷಣಕರರೆಂದು ಹೆಸರು ಪಡೆದಿದ್ದರಿಂದ ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್‌ರ ಚಿಂತನೆಗಳನ್ನು ತಮ್ಮ ಭಾಷಣದುದ್ದಕ್ಕೂ ಉಲ್ಲೇಖಿಸುತ್ತಿದ್ದರು. ಹೆಸರು ಕೇಳಿ ರೋಮಾಂಚಿತರಾಗಿ ಆದರ್ಶ ಪುರುಷರ ಆಕೃತಿಗಳನ್ನು ಎದೆಯಲ್ಲಿ ತುಂಬಿಕೊಂಡು ಕನಸಬಿತ್ತಿಯಲ್ಲಿ ಹೊತ್ತು ನಡೆದ ಹುಡುಗಾಟದ ದಿನಗಳವು.

ಅಂಥ ಸಮಯದಲ್ಲೇ ನನ್ನ ತಂದೆ ಅಂಬೇಡ್ಕರ್‌ರ ಜೀವನ ಚರಿತ್ರೆ ಕುರಿತ ಪುಸ್ತಕ ತಂದಿದ್ದರು. ಆಗಿನ್ನೂ ನಾನು ಐದೋ ಆರನೇ ಕ್ಲಾಸಿನಲ್ಲಿ ಓದುತಿದ್ದೆ. ಆ ಪುಸ್ತಕ ಕಂಡು ಪುಳಕಿತಳಾಗಿ ಎದೆಗವಚಿ ಹಿಡಿದೆ. ಅದನ್ನು ತೆರೆದು ಹೇಗೆ ಓದಿದೆನೆಂದರೆ, ನಮ್ಮ ಗುಡಿಸಲ ಹಿಂದೆ ಸಣ್ಣ ಮರದ ಕೆಳಗೆ ಕುಳಿತು ಪುಸ್ತಕ ಮುಗಿಯುವವರೆಗೂ ಒಂದೇ ಸವನೆ ಓದುತ್ತಾ, ಅಳುತ್ತ, ನಮ್ಮ ಜೀವನ ನಮಗೇ ಪ್ರಶ್ನೆಯಾಗಿ ಕಾಡಿದಂತೆ ಅನಿಸತೊಡಗಿತು. ಮುಂದೆ ಈ ಪ್ರಶ್ನೆ ನನ್ನ ಬೆಳವಣಿಗೆಯೊಂದಿಗೆ ಅದು ಬೆಳೆಯುತ್ತ ಬೆಳೆಯುತ್ತ ನಮ್ಮ ಬದುಕು ಹೀಗೇ ಎಂದೇ ನಂಬಿದ್ದ ನನ್ನ ನಂಬಿಕೆಯ ಬುಡ ಅಲ್ಲಾಡಿ, ನಮ್ಮದಲ್ಲದ ಬದುಕೊಂದು ನಮಗೆ ಹೇರಲ್ಪಟ್ಟಿದೆ ಎಂಬ ಸ್ಥಾಪಿತ ಸಾಂಸ್ಥಿಕ ವ್ಯವಸ್ಥೆಯ ವಿರುದ್ಧ ನನ್ನೊಳಗೆ ನನ್ನದೊಂದು ಸ್ವತಂತ್ರ ವ್ಯಕ್ತಿತ್ವ ರೂಪಿಸಿದ ಅಂಬೇಡ್ಕರ್‌ರು ಎಚ್ಚರಿಸತೊಡಗಿದರು.

ನಾನು ಓದಿದ ಸಮಾಜಶಾಸ್ತ್ರದಲ್ಲಿಯ ಭಾರತೀಯ ಸಮಾಜದ ಸ್ವರೂಪವನ್ನು ಕಟ್ಟಿಕೊಡುವ ಲಕ್ಷಣಗಳನ್ನು ನಾನು ಬದುಕುವ ನನ್ನ ಸಮಾಜದಲ್ಲಿ ಹುಡುಕತೊಡಗಿದೆ. ಈ ತೊಡಗುವಿಕೆಯೇ ಅವಮಾನದ ವಿರುದ್ಧ ಸ್ವಾಭಿಮಾನದ ಕೆಚ್ಚು ಮೂಡಿಸಿ ಬಂಡೆದ್ದ ಅಂಬೇಡ್ಕರ್‌ರ ‘ನಿಮ್ಮ ಉದ್ಧಾರ ನಿಮ್ಮ ಕೈಯಲ್ಲಿದೆ’ ಎಂಬ ಬೀಜ ಬೆಳಕಿನ ಮಾತು ನನ್ನೊಳಗೆ ಸ್ಥಾಪಿಸಲ್ಪಟ್ಟ ದೇವತಾಮೂರ್ತಿಗಳನ್ನು ಭಂಜಿಸಿ ಮನುಷ್ಯ ಸತ್ಯದೆಡೆಗೆ ಕರೆದೊಯ್ಯಿತು.

ಅಂಬೇಡ್ಕರ್‌ರ ಚಿಂತೆನೆಗಳಿಗೆ ಆಕರ್ಷಿತಳಾದೆ. ಸಹಮಾನವ ದ್ವೇಷವಿರದ ಅವರ ತತ್ವಚಿಂತನೆಗಳು ನನ್ನನ್ನು ಪ್ರಭಾವಿಸಿದವು. ನನ್ನಲ್ಲಿ ಸತತ ಅಭ್ಯಾಸದ ಅನ್ವೇಷಕ ಪ್ರವೃತ್ತಿಯನ್ನು ಹುಟ್ಟಿಸಿದವು.  ಮುಂದೆ ನಾನು ನನ್ನ ಸಂಶೋಧನಾ ಅಧ್ಯಯನಕ್ಕೆ ‘ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್‌ರ ಪ್ರಭಾವ: ಕಾವ್ಯವನ್ನು ಅನುಲಕ್ಷಿಸಿ’ ಎಂಬ ಮಹಾಪ್ರಬಂಧ ಬರೆಯಲೂ ಪ್ರೇರಣೆ ಒದಗಿಸಿತು.  ಇವೊತ್ತಿನ ನನ್ನ ಬರಹ ಎಲ್ಲ ಶೋಷಿತ ದಲಿತ ಮಹಿಳೆ ಹಾಗೂ ಕೋಮುಸೌಹಾರ್ದತೆ ಕುರಿತ ನಡೆವ ಎಲ್ಲ ಪ್ರಗತಿಪರ ವೇದಿಕೆಗಳ ಕಾರ್ಯಕ್ರಮ, ಹೋರಾಟಗಳಲ್ಲೂ ಪಾಲ್ಗೊಳ್ಳುವಂಥ ಮನಸ್ಥಿತಿಯನ್ನು ನನ್ನಲ್ಲಿ ನಿರ್ಮಿಸಿದ್ದು ಅಂಬೇಡ್ಕರ್‌ರರೇ.

ಈಗ ಅಂಬೇಡ್ಕರ್‌ರ ತತ್ವಸಿದ್ಧಾಂತ, ಹೋರಾಟದ ಪ್ರಸ್ತುತತೆಯ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಇಂದು ಸಮಾಜದ ಸ್ವರೂಪದಲ್ಲಿ ಬದಲಾವಣೆಯಾದರೂ ದಲಿತರ ಪರಿಸ್ಥಿತಿ ಬದಲಾಗಿಲ್ಲ.  ಖೈರ್ಲಾಂಜಿ, ಕಂಬಾಲಪಲ್ಲಿ, ತಮಿಳುನಾಡಿನ ಮಾಂಗೆ ಕುಟುಂಬ ದಹನ, ದಲಿತರ ಕೊಲೆ, ಸುಲಿಗೆ, ಅತ್ಯಾಚಾರ, ಬಹಿಷ್ಕಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸಂವಿಧಾನದ ಜಾಗದಲ್ಲಿ ‘ಭಗವದ್ಗೀತೆ’ಯನ್ನು ಪ್ರತಿಷ್ಠಾಪಿಸುವ ಹುನ್ನಾರ ನಡೆಯುತ್ತಲೇ ಇದೆ. ಶಸ್ತ್ರ ಹೋರಾಟ ನಿಂತರೂ ಶಾಸ್ತ್ರ ಹೋರಾಟ ಇಂದು ಎಂದಿಲ್ಲದಷ್ಟು ವಿಜೃಂಭಿಸುತ್ತಿದೆ. ಕಾಲ ಅಂಬೇಡ್ಕರ್ ಅವರಿಗಾಗಿ ಕಾಯಬೇಕಿಲ್ಲ. ಅವರ ಅರಿವಿನ ಪ್ರತಿ ಅಸ್ತ್ರ ನಮ್ಮ ಬಳಿಯೇ ಇದೆ.

ಇದು ಅಹಿಂಸಾತ್ಮಕ ಅಸ್ತ್ರ. ನಮ್ಮವರ ನಡುವೆ ನಾವೇ ಹೋರಾಡಬೇಕಾದ ರಾಮಬಾಣದ ದುರಂತಕ್ಕೆ ಭೀಮ ಬಾಣವೇ ಮದ್ದು,  ಇದು ಯಾರ ಎದೆಯನ್ನೂ ಇರಿಯುವುದಿಲ್ಲ, ತಲೆಯನ್ನು ಬೆಳಗುತ್ತದಷ್ಟೆ.

ಇದೇ ನೆಲದಲ್ಲಿ ಬಾಳಿ ಬದುಕಿ ಹೋದ ಆದರ್ಶ ನಾಯಕರ ಚಿಂತನೆಗಳು ನಮ್ಮ ಮುಂದಿದ್ದರೂ ಅವಕ್ಕೆ ಕಾಲದ ಮಿತಿ ಇದೆ. ಹಾಗಾಗಿ ಅವು ಹೆಚ್ಚು ಪ್ರಸ್ತುತವಾಗಲಾರವು. ಈ ನೆಲದ ಅನಿವಾರ್ಯತೆಯಿಂದ ರೂಪುಗೊಂಡ ಅಂಬೇಡ್ಕರ್‌ರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಹೋರಾಟಗಳೇ ಇಲ್ಲವೇನೋ ಎಂಬ ಕಾಲದ ನಿರೀಕ್ಷೆಗೆ, ತನ್ನ ನಿರಂತರತೆಯನ್ನು ಕಳೆದುಕೊಂಡು ಕ್ಷಣ ಮಾತ್ರದಲ್ಲಿ ಹುಟ್ಟಿ, ವ್ಯಾಪಿಸಿ, ಕ್ಷಣಮಾತ್ರದಲ್ಲೇ ಅವಸಾನ ಹೊಂದುತ್ತಿರುವ ಚಳವಳಿಗಳು ಒಂದೆಡೆಯಾದರೆ, ಆಚರಣೆಗೆ ಮಾತ್ರ ಸೀಮಿತವಾಗಿ ಆಚರೆಣೆಗಳನ್ನೇ ಹೋರಾಟಗಳೆಂದುಕೊಂಡ ಹೊಸ ವರ್ಗವೊಂದು ಸೃಷ್ಟಿಯಾದ ಕಾಲಘಟ್ಟವಿದು.

ಪ್ರದರ್ಶನ, ಪ್ರಹಸನದಂತೆ ಕಾಣುತ್ತಿರುವ ಹೋರಾಟದ ಮಾದರಿಗಳೂ ಅಲ್ಲಲ್ಲಿ ಮಿಂಚುತ್ತಿವೆ. ಮಾಧ್ಯಮವು ಉದ್ಯಮದ ಚಹರೆ ಪಡೆದು ಪ್ರಗತಿಪರರಲ್ಲಿ ಆತಂಕ ಸೃಷ್ಟಿಸಿದೆ. ಇಂಥ ಕಲುಷಿತ ವಾತಾವರಣದಲ್ಲಿ ಮತ್ತೆ ೭೦-೮೦ರ ದಶಕಗಳ ಮರು ನೆನಪು ಅಂಬೇಡ್ಕರ್‌ರ ಚಿಂತನೆ, ಹೋರಾಟವನ್ನು ಒತ್ತಿ ಹೇಳುತ್ತಿರುವಂತೆ ಅನಿಸುತ್ತಿದೆ. ಅವು ಮಾನವ ಕುಲಕ್ಕೆ ಚಿಕಿತ್ಸಕ ಚಿಂತನೆಗಳಾಗಿವೆ.

ಸಮಾಜವಾದವಾಗಲಿ, ಮಾರ್ಕ್‌ವಾದವಾಗಲೀ ಬಂಡವಾಳಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯ ನಿರ್ಮೂಲನೆಗೆ ಹೋರಾಟ ನಡೆಸುತ್ತದೆ. ಆದರೆ, ಅಂಬೇಡ್ಕರ್‌ವಾದ ಬಂಡವಾಳಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯನ್ನು ಬದಲಾಯಿಸದಂತೆ ಅವರಿಗೆ ಅನುಕೂಲವಾದ ಗುಲಾಮರನ್ನು ಸೃಷ್ಟಿಸಿ ಸಮಾಜದಲ್ಲಿ ಏರುಪೇರು ಸೃಷ್ಟಿಸಿರುವ ಪುರೋಹಿತಶಾಹಿಯನ್ನು, ಅದರ ಮೂಲವನ್ನು ಹುಡುಕುತ್ತದೆ. ಯಾಕೆಂದರೆ ಪುರೋಹಿತಶಾಹಿ ವ್ಯವಸ್ಥೆಯ ಬೇರು ವ್ಯವಸ್ಥಿತವಾದ ಆರೋಗ್ಯಪೂರ್ಣವಾದ ಸುಳ್ಳುಗಳ ಮೇಲೆ ನಿಂತಿದೆ. 

ಬಂಡವಾಳಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯ ಅಡಿಪಾಯವೇ ಪುರೋಹಿತಶಾಹಿ ವ್ಯವಸ್ಥೆಯಾಗಿದೆ. ಹೀಗಾಗಿ ಅಂಬೇಡ್ಕರ್‌ವಾದ ಕ್ರಾಂತಿಗೆ, ಆರೋಗ್ಯಪೂರ್ಣ ಸಮಾಜಕ್ಕೆ ಪರಿಪೂರ್ಣ ವೈದ್ಯನಂತಿದೆ.  ಇಂದಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ದಲಿತರಿಗೆ ಮಾತ್ರ ಅಲ್ಲ, ಶೋಷಣೆ - ದೌರ್ಜನ್ಯಕ್ಕೆ ಒಳಗಾಗುತ್ತಿರುವ ಎಲ್ಲ ದಲಿತೇತರರಿಗೂ ಬಾಬಾಸಾಹೇಬ ಅಂಬೇಡ್ಕರ್‌ ಪ್ರಸ್ತುತವಾಗುತ್ತಿರುವ ಕಾಲ ಸನ್ನಿಹಿತವಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.