ADVERTISEMENT

ಭಾವೋತ್ಕರ್ಷದ ಜನಪ್ರಿಯ ಸೂತ್ರ

ನೂರು ಕಣ್ಣು ಸಾಲದು

ನೇಸರ ಕಾಡನಕುಪ್ಪೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಪುರಾಣದ ಜನಜನಿತ ಕಥೆಗಳನ್ನು ಆಧರಿಸಿದ ಚಲನಚಿತ್ರಗಳು ಭಾರತೀಯ ಚಿತ್ರ ಜಗತ್ತು ಉಗಮಿಸಿದ ವರ್ಷಗಳಲ್ಲಿ ಹೆಚ್ಚಾಗಿ ತೆರೆಗೆ ಬರುತ್ತಿದ್ದರೆ ನಂತರದ ವರ್ಷಗಳಲ್ಲಿ ತಯಾರಾದ ಚಲನಚಿತ್ರಗಳಲ್ಲಿ ಬಹುಪಾಲು ಕೌಟುಂಬಿಕ ಕಥನಗಳು. ಸಂಸಾರಗಳಲ್ಲಿ ಕಂಡು ಬರುವ ಹತ್ತಾರು ಸಮಸ್ಯೆ ಇಕ್ಕಟ್ಟುಗಳಿಗೆ ಪರಿಹಾರದ ಮಾರ್ಗೋಪಾಯಗಳನ್ನು ಹುಡುಕುವುದೇ ಇಂತಹ ಸಿನಿಮಾಗಳ ಕಥಾ ಹಂದರದಲ್ಲಿ ಇರುತ್ತಿದ್ದವು.

ಮನೆಯೊಳಗಿನ ಆಗುಹೋಗುಗಳಿಗೆ ಭಾವನಾತ್ಮಕ ಅಂಶಗಳ ಹೊದಿಕೆ ಹಾಕಿ ಕೌಟುಂಬಿಕ ಚೌಕಟ್ಟನ್ನು ವೈಭವೀಕರಿಸುವ ಸಾಲು ಸಾಲು ಚಿತ್ರಗಳು ಭಾರತೀಯ ಚಿತ್ರ ಪರದೆಯಲ್ಲಿ ಅವ್ಯಾಹತವಾಗಿ ಕಾಣಿಸಿಕೊಳ್ಳುವುದು ನೂರು ವರ್ಷಗಳ ನಂತರವೂ ನಿಂತಿಲ್ಲ.
ಬಡತನದಿಂದ ಸಿರಿತನದ ಕಡೆಗೆ ನಡೆಯುವ ವ್ಯಕ್ತಿ ಅಥವಾ ಕುಟುಂಬಗಳಲ್ಲಿ ಜರುಗುವ ಘಟನೆಗಳು, ಉಂಟಾಗುವ ತಿರುವುಗಳು, ಕಂಡು ಬರುವ ನಾಟಕೀಯ ಅಂಶಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಎಂಬ ಸುಳಿವು ಹಿಡಿದ ಚಿತ್ರ ತಯಾರಕರು ಇದೇ ಮಾದರಿಯ ಹತ್ತಾರು ಚಿತ್ರಗಳನ್ನು ತೆರೆಗಿತ್ತರು.

ಎಸ್.ಎಂ. ಯೂಸುಫ್ 1948ರಲ್ಲಿ ತಯಾರಿಸಿದ `ಗ್ರಹಸ್ಥಿ' ಇಂತಹ ಕಥಾವಸ್ತುವಿದ್ದ ಆರಂಭಿಕ ಚಿತ್ರ. ಆ ವೇಳೆಗಾಗಲೇ ವಿ. ಶಾಂತಾರಾಂ ಪ್ರಯೋಗಗಳಿಗೆ ಹೆಸರಾಗಿದ್ದು `ದಹೇಜ್' (1951) ಮೂಲಕ ಮೆಲೋಡ್ರಾಮ ಚಿತ್ರಗಳ ತಯಾರಿಕೆಗೂ ಅವರು ಕೈಇಟ್ಟರು. ಆದರೆ ಕೌಟುಂಬಿಕ ಚಿತ್ರಗಳಿಗೆ ದೊಡ್ಡ ಮಟ್ಟದ ಯಶಸ್ಸು ದೊರಕಿಸಿಕೊಟ್ಟದ್ದು ದಕ್ಷಿಣ ಭಾರತದಲ್ಲಿ ನಿರ್ಮಾಣಗೊಂಡ ಚಿತ್ರಗಳು.

ಸಿನಿಮಾ ನಿರ್ಮಾಣ ಸಂಸ್ಥೆಗಳಾದ ಜೆಮಿನಿ, ಪ್ರಸಾದ್, ಎ.ವಿ.ಎಂ. ಲಾಂಛನದಲ್ಲಿ ತೆರೆಗೆ ಬಂದ ಕುಟುಂಬಕ ಕಥನಗಳು ಪ್ರೇಕ್ಷಕನ ಮನಸ್ಸಿಗೆ ಲಗ್ಗೆ ಹಾಕಿದವು. ಎಸ್.ಎಸ್. ವಾಸನ್ ಅವರ ಕಣ್ಣೀರು ತರಿಸುವ ಅಂಶಗಳೇ ಹೆಚ್ಚಿದ್ದ `ಸಂಸಾರ್' ಹಿಂದಿ ಭಾಷೆಯಲ್ಲಿ ಅಮೋಘ ಯಶಸ್ಸುಗಳಿಸಿತು.

ಭಾವಾತಿರೇಕದ ಘಟನೆಗಳನ್ನು ಪೋಣಿಸಿ ಮೆಲೋಡ್ರಾಮ ಚಿತ್ರಗಳನ್ನು ತಯಾರಿಸುವ ಪ್ರಕ್ರಿಯೆ ಸದಾ ಜಾರಿಯಲ್ಲಿದ್ದು ಒಂದಿಷ್ಟು ಅಂಶಗಳ ಬದಲಾವಣೆಯೊಂದಿಗೆ ಆ ಚಿತ್ರಗಳು ಪುನರಾವರ್ತನೆಗೊಳ್ಳುತ್ತಲೇ ಇವೆ. ಅನೇಕ ಸಾಂಸಾರಿಕ ಚಿತ್ರಗಳಿಗೆ ವಸ್ತು ಒದಗಿಸುವ ಬಡತನ - ಸಿರಿತನ ವಿಷಯವುಳ್ಳ `ಸ್ವರ್ಗ್ ನರಕ್' 1960ರ ದಶಕದಲ್ಲಿ ಭರ್ಜರಿ ಯಶಸಾಧಿಸಿದ್ದೇ ತಡ ಮುಂಬೈ ಮೂಲದ ಹಲವು ನಿರ್ಮಾಣ ಸಂಸ್ಥೆಗಳು ಸಾಂಸಾರಿಕ ಚಿತ್ರಗಳನ್ನು ತಯಾರಿಸಲು ಮೊದಲಿಟ್ಟವು. ಅಷ್ಟೇನೂ ಜನಪ್ರಿಯರಲ್ಲದ ಕಲಾವಿದರನ್ನು ತಾರಾಗಣದಲ್ಲಿಟ್ಟುಕೊಂಡು ಕೌಟುಂಬಿಕ ಏಳುಬೀಳುಗಳ ಕಥಾವಸ್ತುಗಳೊಂದಿಗೆ ಕುಟುಂಬ ವೈಭವೀಕರಣದ ಅನೇಕ ಚಿತ್ರಗಳನ್ನು ಪ್ರಸಿದ್ಧ `ರಾಜಶ್ರೀ' ಸಂಸ್ಥೆ ನಿರ್ಮಿಸಿದ್ದು ಇದಕ್ಕೊಂದು ನಿದರ್ಶನ.

ಹದಿಹರೆಯದವರ ಪ್ರೇಮ ಕುಟುಂಬ ಕಥನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಂಶ. ಮಾನವೀಯ ಸಂಬಂಧಗಳ ನೆಲೆಯಲ್ಲಿ ಅನಾವರಣಗೊಳ್ಳುವ ಪ್ರೇಮ ಕೇಂದ್ರಿತ ಚಲನಚಿತ್ರ ನೋಡುಗರ ಮೇಲೆ ಮಾಡುವ ಪರಿಣಾಮ ಕೂಡ ದೊಡ್ಡದು. ಹೀಗಾಗಿ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಪ್ರೇಮ ವಿಷಯಗಳು ಈಗಲೂ ಪ್ರತಿಬಿಂಬಿತವಾಗುತ್ತಿದೆ. ಚಿತ್ರದ ಸುಖಾಂತ ದುಃಖಾಂತಗಳೂ ಚಿತ್ರದ ಯಶಸ್ಸಿನ ಮೇಲೆ ಪರಿಣಾಮ ಬೀರುವುದನ್ನು ಮನಗಂಡ ತಯಾರಕರು ಇದಕ್ಕನುಗುಣವಾಗಿ ಚಿತ್ರಗಳನ್ನು ನಿರ್ಮಿಸುವುದು ಆಗಿನಿಂದಲೂ ನಡೆದು ಬಂದಿದೆ.

ಅತ್ತೆಸೊಸೆಯರ ಕಿತ್ತಾಟ, ದಾಯಾದಿಗಳ ಕಲಹ, ಕುಟುಂಬಗಳ ನಡುವಣ ವೈರತ್ವ, ಘಟವಾಣಿಗಳ ಗದ್ದಲ, ಗಯ್ಯಾಳಿಗಳ ಗಲಾಟೆ, ಖಳನಾಯಕ - ನಾಯಕಿಯರ ಅಪಾಯದ ಹೆಜ್ಜೆಗಳ ನಡುವೆ ಭಾವನಾತ್ಮಕ ಅಂಶಗಳು, ಮಾನವೀಯ ಸಂಬಂಧಗಳೂ ಕೌಟುಂಬಿಕ ಕಥನಗಳಲ್ಲಿ ಸೇರುವ ಹಲವಾರು ಚಲನಚಿತ್ರಗಳನ್ನು ಎಲ್ಲಾ ಭಾಷೆಗಳಲ್ಲೂ ಕಾಣಬಹುದಾಗಿದೆ.

ಮೇಲ್ಕಂಡ ಅಂಶಗಳಲ್ಲಿ ಅನೇಕ ವಿಚಾರಗಳು ಭಾರತೀಯ ಕುಟುಂಬ ಪದ್ಧತಿಯಲ್ಲಿ ಸಾಮಾನ್ಯವಾಗಿ ಕಂಡು ಬಂದರೂ ಚಿತ್ರಗಳಲ್ಲಿ ಅವುಗಳನ್ನು ಅಳವಡಿಸುವಾಗ ತೀರಾ ಹಸಿ ಹಸಿಯಾಗಿ ಸೇರ್ಪಡೆಗೊಳಿಸುವ ಉದಾಹರಣೆಗಳೂ ಇಲ್ಲದಿಲ್ಲ. ಒಂದೇ ವಿಷಯವನ್ನು ಬೇರೆ ಬೇರೆ ಸನ್ನಿವೇಶಗಳ ಮೂಲಕ ತೆರೆಯ ಮೇಲೆ ತರುವ ಪ್ರಯತ್ನಗಳನ್ನು ಸಾಕಷ್ಟು ಚಿತ್ರಗಳು ಹೊತ್ತು ತಂದಿವೆ.

ಶತಮಾನದ ಭಾರತೀಯ ಸಿನಿಮಾ ವೃಕ್ಷ ವಿಶಾಲವಾಗಿ ಹುಲುಸಾಗಿ ಬೆಳೆದಿದ್ದರೂ ಕಾಲಕ್ಕೆ ತಕ್ಕಂತೆ ಬದಲಾದ ಕೊಂಬೆಗಳೂ ಬಹಳಷ್ಟಿವೆ. ಆದರೆ ಮೇಲೊಡ್ರಾಮ ಎನ್ನಿಸಿಕೊಳ್ಳುವ ವಿಷಯ ಮಾತ್ರ ವಿವಿಧ ರೂಪಗಳಲ್ಲಿ ವಿನ್ಯಾಸಗಳಲ್ಲಿ ನುಸುಳುವುದು ನಿಂತಿಲ್ಲ. ಸ್ವಲ್ಪ ಕಾಲ ಇಂತಹ ಚಿತ್ರಗಳಲ್ಲಿನ ವಿಚಾರಗಳು ಏಕತಾನತೆ ಎನ್ನಿಸಿದರೂ ವಾಣಿಜ್ಯ ದೃಷ್ಟಿಯಿಂದ ಇವು ಅನಿವಾರ್ಯ ಎನ್ನುವಂತಾಗಿತ್ತು.

ಪರಸ್ಪರ ಕಾದಾಡುವ ಸನ್ನಿವೇಶಗಳಂತೆ, ಕರವಸ್ತ್ರ ತೋಯಿಸುವಂತಹ ಕಣ್ಣೀರ ಧಾರೆ ಹರಿಸುವ ಪ್ರಸಂಗಗಳನ್ನು ತುಂಬಿಕೊಂಡ ಸಿನಿಮಾಗಳಂತೆ, ಸಹನೀಯ ಹಾಗೂ ಹೃದಯಂಗಮದ ಕಥಾ ಹೂರಣವುಳ್ಳ ಚಿತ್ರಗಳೂ ಪ್ರೇಕ್ಷಕರನ್ನು ತಲುಪಿವೆ. ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಚಿತ್ರಗಳೂ ತೆರೆಗೆ ಬಂದಿವೆ.

ಸಹೋದರ - ಸಹೋದರಿಯರ ಸಂಬಂಧ, ಮನಕಲಕುವ ವೃದ್ಧ ದಂಪತಿಗಳ ಪರಿಸ್ಥಿತಿ, ಕುಟುಂಬದ ಒಳಿತಿಗಾಗಿ ಒಟ್ಟಾಗಿರುವ ಸನ್ನಿವೇಶ- ಇಂತಹ ಹತ್ತು ಹಲವು ವಿಭಿನ್ನ ಅಂಶಗಳನ್ನೊಳಗೊಂಡ ನೂರಾರು ಚಿತ್ರಗಳು `ಮೇಲೊಡ್ರಾಮ' ಅರ್ಥವನ್ನು ಸರಿದಾರಿಯಲ್ಲಿ ಕೊಂಡೊಯ್ಯುವಂತೆ ಮಾಡಿರುವ ಉದಾಹರಣೆಗಳೂ ನಮ್ಮ ಮುಂದೆ ಇವೆ.

ಷೇಫ್ ಮುಕ್ತಿಯಾರ್ ಅಣ್ಣನಾಗಿ ಅಭಿನಯಿಸಿದ ಮೆಹಬೂಬ್ ಖಾನ್ ಅವರ `ಬೆಹನ್' 1941ರಲ್ಲಿ ತೆರೆಕಂಡಿತು. ಅಣ್ಣ ತನ್ನ ಕಿರಿಯ ತಂಗಿಯ ಬದುಕನ್ನು ಹಸನಾಗಿಸಲು ದುಡಿಯುವ ಕಥೆ ಪ್ರೇಕ್ಷಕರನ್ನು ಸೆಳೆಯಿತು. ಇಂತಹ ಸಂಬಂಧಗಳಿದ್ದ `ಪ್ಯಾರಿ ಬೆಹನ್' ಚಿತ್ರ 1980ರ ದಶಕದಲ್ಲಿ ಸಿದ್ಧವಾಯಿತು. ಮಿಥುನ್ ಚಕ್ರವರ್ತಿ - ತನ್ವಿಕಿರಣ್ ಅಣ್ಣ ತಂಗಿಯರಾಗಿ ಮನೋಜ್ಞ ಅಭಿನಯವಿತ್ತರು.

ದಕ್ಷಿಣದ ಮೂರು ಭಾಷೆಗಳಲ್ಲಿ ಜನಪ್ರಿಯವಾದ ಸಿನಿಮಾವನ್ನು ಹಿಂದಿಯಲ್ಲಿ `ಸಂಸಾರ್' ಹೆಸರಿನಲ್ಲಿ ತಯಾರಿಸಿದರೂ ಅನುಪಮ್ ಖೇರ್, ರೇಖಾ, ರಾಜಬಬ್ಬರ್ ತಾರಾಗಣದಲ್ಲಿ 80ರ ದಶಕದಲ್ಲಿ ಮತ್ತೆ ತಯಾರಿಸಲಾಯಿತು. ಮನೋವಿಶ್ಲೇಷಣಾ ವಸ್ತುಗಳನ್ನು ಹೊಸದಾಗಿ ಚಿತ್ರದಲ್ಲಿ ತಂದಿದ್ದು ಕೂಡ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.

ಕುಟುಂಬಗಳ ಮೇಲಾಟ, ಜಾತಿಕಾರಣ, ಬಡವ ಬಲ್ಲಿದರ ಅಂತರ, ಇತ್ಯಾದಿ ಅಂಶಗಳು ಪ್ರಧಾನವಾಗಿದ್ದು ಜನಪ್ರಿಯವಾದ `ಪ್ರೀತಿ' ವಸ್ತುವುಳ್ಳ ಚಿತ್ರಗಳ ಪಟ್ಟಿಯೂ ದೊಡ್ಡದಿದೆ. ಭಾಷೆಗಳ ಎಲ್ಲೆಗಳಿಲ್ಲದೆ ಈ ಚಿತ್ರಗಳು ಜನಪ್ರಿಯವಾಗಿವೆ. `ಲೈಲಾ ಮಜ್ನು', `ಬಾಬಿ', `ಬೇತಾಬ್', `ಲವ್‌ಸ್ಟೋರಿ', `ಏಕ್‌ದೂಜೆಕೆ ಲಿಯೆ' ಚಿತ್ರಗಳು ಇದಕ್ಕೆ ಕೆಲವು ಉದಾಹರಣೆ, ಇವುಗಳಲ್ಲಿ ಕೆಲವು ಪ್ರಾದೇಶಿಕ ಭಾಷೆಗಳಲ್ಲಿ ಜನಪ್ರಿಯವಾಗಿ ಹಿಂದಿ ಭಾಷೆಯಲ್ಲಿ ತಯಾರಾಗಿ ದೇಶದಾದ್ಯಂತ ಹೆಸರು ಮಾಡಿವೆ.

ಸುಖಾಂತ - ದುಃಖಾಂತವುಳ್ಳ ಪ್ರೇಮ ಚಿತ್ರಗಳು ತೆರೆಗೆ ಬಂದಾಗ ಪ್ರೇಕ್ಷಕರು ವಿಭಿನ್ನ ರೀತಿಯಲ್ಲಿ ಈ ಚಿತ್ರಗಳನ್ನು ಸ್ವೀಕರಿಸಿರುವುದುಂಟು. ಒಟ್ಟಾರೆ ಭಾವನಾತ್ಮಕ ಅಂಶಗಳಿರುವ ಸಂತೋಷ - ನೋವಿನ ಚಿತ್ರಗಳು ಈಗಲೂ ಜಾರಿಯಲ್ಲಿವೆ.
ಬಂಗಾಲಿಯಲ್ಲಿ ಬಿಮಲ್‌ರಾಯ್ ನಿರ್ಮಿಸಿದ `ಪರಿವಾರ್', ಹಿಂದಿಯಲ್ಲಿ ಬಂದ `ಜೀವನಧಾರಾ', `ದಿವಾರ್', ಹೃಷಿಕೇಶ್ ಮುಖರ್ಜಿ ಅವರ `ಜಿಂದಗಿ', `ದೊರಾಸ್ತೆ ಪ್ಯಾರ್' ಚಿತ್ರಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ತಮಿಳು - ತೆಲುಗು - ಕನ್ನಡದ ಹಲವು ಚಿತ್ರಗಳು ಕೂಡ ಭಾವನಾತ್ಮಕ ಎಳೆಗಳಿಂದ ನೇಯ್ದು ಪ್ರೇಕ್ಷಕರನ್ನು ತಲುಪಿವೆ.

ಭಿನ್ನ ಭಿನ್ನ ವಸ್ತುಗಳು ಚಾಲ್ತಿಗೆ ಬಂದರೂ ಸಿನಿಮಾಗಳಲ್ಲಿ `ಮೆಲೊಡ್ರಾಮ' ಅಂಶಗಳು ಸೇರಿಕೊಳ್ಳುವುದು ಈಗಲೂ ಇದೆ. ತಾಂತ್ರಿಕ ವಿಚಾರಗಳು ಮೇಲುಗೈ ಪಡೆದು ಅದ್ದೂರಿತನ ಹೆಚ್ಚುತ್ತಿದ್ದರೂ ಭಾವನಾತ್ಮಕ ಅಂಶಗಳನ್ನು ಅಡಕಗೊಳಿಸಿ ಚಿತ್ರ ನಿರೂಪಿಸುವ ಪ್ರವೃತ್ತಿ ಭಾರತೀಯ ಚಿತ್ರರಂಗದಿಂದ ಮರೆಯಾಗಿಲ್ಲ.    
                             

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.