ADVERTISEMENT

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST
ಮಿನುಗು ಮಿಂಚು
ಮಿನುಗು ಮಿಂಚು   

`ಗ್ರ್ಯಾಂಡ್ ಸ್ಲಾಮ್~ನ ಸ್ವರೂಪವೇನು?
ಟೆನಿಸ್ ಆಟದಲ್ಲಿ ಕೇಳಿಬರುವ ಪ್ರತಿಷ್ಠಿತ ಪ್ರಶಸ್ತಿ ಇದು. ಗ್ರೇಟ್ ಬ್ರಿಟನ್, ಅಮೆರಿಕ, ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ ನಡೆಯುವ ಅಂತರರಾಷ್ಟ್ರೀಯ ಟೆನಿಸ್ ಓಪನ್ ಚಾಂಪಿಯನ್‌ಷಿಪ್‌ಗಳು ಅಮೆರಿಕ ಓಪನ್, ಫ್ರೆಂಚ್ ಓಪನ್, ಆಸ್ಟ್ರೇಲಿಯಾ ಓಪನ್ ಹಾಗೂ ವಿಂಬಲ್ಡನ್ ಎಂದೇ ಜನಪ್ರಿಯ. ಇವೆಲ್ಲವನ್ನೂ ಸೇರಿಸಿ `ಗ್ರ್ಯಾಂಡ್ ಸ್ಲಾಮ್~ ಎನ್ನುತ್ತಾರೆ. ಪ್ರತಿ ಚಾಂಪಿಯನ್‌ಷಿಪ್ ಅನ್ನು `ಗ್ರ್ಯಾಂಡ್ ಸ್ಲಾಮ್ ಟೈಟಲ್~ ಎಂದು ಕರೆಯುತ್ತಾರೆ.

ಆಟಗಾರನೊಬ್ಬ ಗ್ರ್ಯಾಂಡ್ ಸ್ಲಾಮ್ ಗೆಲ್ಲುವುದು ಹೇಗೆ?
ಮೊದಲು ಆಟಗಾರನೊಬ್ಬ ಒಂದೇ ವರ್ಷದಲ್ಲಿ ಅಷ್ಟೂ ಟೆನಿಸ್ ಓಪನ್ ಚಾಂಪಿಯನ್‌ಷಿಪ್‌ಗಳಲ್ಲಿ ಜಯಶಾಲಿಯಾದರೆ ಗ್ರ್ಯಾಂಡ್ ಸ್ಲಾಮ್ ವಿಜಯಿ ಎಂಬ ಗೌರವಕ್ಕೆ ಭಾಜನನಾಗುತ್ತಿದ್ದ. ಆದರೆ, 1982ರ ನಂತರ ಈ ನಿಯಮವನ್ನು ಸಡಿಲಿಸಲಾಯಿತು. ನಾಲ್ಕು ವರ್ಷದಲ್ಲಿ ನಿರಂತರವಾಗಿ ಕನಿಷ್ಠ ಒಂದಾದರೂ ಟೆನಿಸ್ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಜಯಶಾಲಿಯಾದವನು `ಗ್ರ್ಯಾಂಡ್ ಸ್ಲಾಮ್ ವಿಜೇತ~ ಎಂದು ನಿಯಮ ಬದಲಾಯಿತು.

ಮೊದಲಿಗೆ ಗ್ರ್ಯಾಂಡ್ ಸ್ಲಾಮ್ ಗೆದ್ದದ್ದು ಯಾರು?
ವರ್ಷದ ಎಲ್ಲಾ ಚಾಂಪಿಯನ್‌ಷಿಪ್‌ಗಳಲ್ಲೂ ಮೊದಲು ಗೆದ್ದವನು ಅಮೆರಿಕದ ಡಾನ್ ಬಡ್ಜ್. 1938ರಲ್ಲಿ ಅವನು ಈ ಸಾಧನೆ ಮಾಡಿದ. ಇದೇ ಸಾಧನೆ ಮಾಡಿದ ಮೊದಲ ಮಹಿಳೆ ಮೌರೀನ್ ಕ್ಯಾಥರೀನ್ ಕೊನೋಲಿ. 1953ರಲ್ಲಿ ವಿಕ್ರಮ ಮೆರೆದ ಈ ಆಟಗಾರ್ತಿಯೂ ಅಮೆರಿಕದವರೆ.

`ಕೆರಿಯರ್ ಗ್ರ್ಯಾಂಡ್ ಸ್ಲಾಮ್~ ಎಂದರೇನು?
ಟೆನಿಸ್ ಬದುಕಿನಲ್ಲಿ ಯಾವಾಗಲಾದರೂ ಆಗಲೀ, ಎಲ್ಲಾ ಓಪನ್ ಚಾಂಪಿಯನ್‌ಷಿಪ್‌ಗಳಲ್ಲಿ ಗೆದ್ದರೆ ಅದನ್ನು `ಕೆರಿಯರ್ ಗ್ರ್ಯಾಂಡ್ ಸ್ಲಾಮ್~ ಎನ್ನುತ್ತಾರೆ. ಸತತ ವರ್ಷಗಳಲ್ಲಿ ಈ ಸಾಧನೆ ಮಾಡಲಾಗದಿದ್ದರೂ ಒಂದಲ್ಲ ಒಂದು ವರ್ಷ ಜಯಶಾಲಿಯಾದವರಿಗೆ ಈ ಗೌರವ.

ಹೆಚ್ಚು ಗ್ರ್ಯಾಂಡ್ ಸ್ಲಾಮ್ ಟೈಟಲ್‌ಗಳನ್ನು ಗೆದ್ದಿರುವವರು ಯಾರು?
ಆಸ್ಟ್ರೇಲಿಯಾದ ಮಾರ್ಗರೆಟ್ ಕೋರ್ಟ್ 24 ಟೈಟಲ್‌ಗಳನ್ನು ಅರ್ಥಾತ್ ಪ್ರಶಸ್ತಿಗಳನ್ನು ಗ್ದ್ದೆದು, ಮಹಿಳೆಯರಲ್ಲಿ ಅಗ್ರಮಾನ್ಯರೆನಿಸಿದ್ದಾರೆ. ಸ್ವಿಟ್ಜರ‌್ಲೆಂಡ್‌ನ ರೋಜರ್ ಫೆಡರರ್ ಖಾತೆಯಲ್ಲಿ 16 ಪ್ರಶಸ್ತಿಗಳಿವೆ. ಅವರೇ ಸದ್ಯಕ್ಕೆ ಟೈಟಲ್‌ಗಳ ವಿಷಯದಲ್ಲಿ ಮುಂದಾಳು.

ಸ್ಟೆಫಿ ಗ್ರಾಫ್ ಮಾಡಿದ ಅಪರೂಪದ ಸಾಧನೆ ಯಾವುದು?
ಸ್ಟೆಫಿ ಗ್ರಾಫ್ ಒಟ್ಟು 22 ಗ್ರ್ಯಾಂಡ್ ಸ್ಲಾಮ್ ಟೈಟಲ್‌ಗಳನ್ನು ಗೆದ್ದಿದ್ದಾರೆ. ಇದುವರೆಗೆ `ಗೋಲ್ಡನ್ ಗ್ರ್ಯಾಂಡ್ ಸ್ಲಾಮ್~ ಪ್ರಶಸ್ತಿ ಗೆದ್ದಿರುವವರು ಅವರೊಬ್ಬರೆ. ಒಂದೇ ವರ್ಷದಲ್ಲಿ ಅಷ್ಟೂ ಗ್ರ್ಯಾಂಡ್ ಸ್ಲಾಮ್ ಟೈಟಲ್‌ಗಳನ್ನು ಗೆಲ್ಲುವುದರ ಜೊತೆಗೆ ಒಲಿಂಪಿಕ್‌ನಲ್ಲೂ ಚಿನ್ನದ ಪದಕ ಗೆದ್ದರೆ ಒಟ್ಟಾರೆಯಾಗಿ `ಗೋಲ್ಡನ್ ಗ್ರ್ಯಾಂಡ್ ಸ್ಲಾಮ್~ ವಿಜಯಿ ಎಂದಾಗುತ್ತದೆ. ಸ್ಟೆಫಿ ಗ್ರಾಫ್ 1988ರಲ್ಲಿ ಈ ಸಾಧನೆ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.