ADVERTISEMENT

ಯಾರು ಭಿಕ್ಷುಕರು?

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST
ಯಾರು ಭಿಕ್ಷುಕರು?
ಯಾರು ಭಿಕ್ಷುಕರು?   

ಒಂದು ಊರಿನಲ್ಲಿ ಒಬ್ಬ ಶ್ರಿಮಂತನಿದ್ದ. ಅವನು ಬಹಳ ಜಿಪುಣ. ತಾನು ಊಟ ಮಾಡುವಾಗ ಎಂಜಲು ಕೈಯ್ಯಲ್ಲಿ ಕಾಗೆಯನ್ನು ಓಡಿಸಿದರೆ ಕೈಗೆ ಅಂಟಿದ ಅನ್ನದ ಅಗುಳು ಎಲ್ಲಿ ನಷ್ಟವಾಗುತ್ತದೋ ಎಂದು ಚಿಂತಿಸುವಷ್ಟು ಜುಗ್ಗ.
ಒಂದು ದಿನ ಅವನ ಮನೆಗೆ ಒಬ್ಬ ತಿರುಕ ಬಂದು ಭಿಕ್ಷೆ ಕೇಳಿದ.
`ಭಿಕ್ಷೆ ಗಿಕ್ಷೆ ಏನೂ ಇಲ್ಲ, ಮುಂದಕ್ಕೆ ಹೋಗು~ ಎಂದ ಶ್ರಿಮಂತ.
`ನಾನು ಉಟ್ಟಿರುವದು ಚಿಂದಿಬಟ್ಟೆ. ಒಂದು ಹರಕಲು ಬಟ್ಟೆಯನ್ನಾದರೂ ಕೊಡಿ ಸ್ವಾಮಿ~
ಪಾರ್ಥಿಸಿದ ಭಿಕ್ಷುಕ.
`ಬಟ್ಟೆ ಗಿಟ್ಟೆ ಏನೂ ಇಲ್ಲ, ನಡಿ ನಡಿ~.
`ಹೋಗಲಿ ಒಂದು ರೂಪಾಯಿಯನ್ನಾದರೂ ಕೊಡಿ~.
`ಓಹೋ, ನಿನಗೆ ರೂಪಾಯಿ ಬೇಕೋ, ರೂಪಾಯಿಯೂ ಇಲ್ಲ, ಸಿಪಾಯಿಯೂ ಇಲ್ಲ ನಡಿ ಆಚೆ~.
`ರವಷ್ಟು ಗಂಜಿಯಾದರೂ ಕೊಡಿ ಬುದ್ದಿ~.
`ಅದೂ ಇಲ್ಲ~.
`ಬಾಯಾರುತ್ತಿದೆ, ಒಂದು ಗೋಟಡಿಕೆಯಾದರೂ ಕೊಡಿ ಮಹಾಸ್ವಾಮಿ~.
`ಸುಮ್ಮನೆ ನಡೆಯುವೆಯೊ ಇಲ್ಲವೊ? ಗೋಟಡಿಕೆಯನ್ನು ಎಲ್ಲಿಂದ ತರಲಿ?~
`ಓಹೋ ನೀವೂ ನನ್ನ ಹಾಗೆಯೇ ತಿರುಕರೇನು? ನಿಮ್ಮ ಹತ್ತಿರವೂ ಏನೂ ಇಲ್ಲ. ನನ್ನ ಹತ್ತಿರವೂ ಏನೂ ಇಲ್ಲ. ನಡೆಯಿರಿ ನಾವಿಬ್ಬರೂ ಒಟ್ಟಿಗೆ ಭಿಕ್ಷೆ ಬೇಡೋಣ~ ಎಂದ ತಿರುಕ ನಗುತ್ತ.
ಶ್ರಿಮಂತನ ಬಾಯಿ ಕಟ್ಟಿತು. ಅರೆ ಮನಸ್ಸಿನಿಂದ ಪಾವಲಿ ಬಿಲ್ಲೆಯನ್ನು ಭಿಕ್ಷುಕನಿಗೆ ಕೊಟ್ಟು ಕಳುಹಿಸಿದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.