
ಬಿರುಬಿಸಿಲಲ್ಲಿ ವಸಂತ ಬಂದ
ಹೂವು ಅರಳಲೇ ಇಲ್ಲ
ಜೋತಾಡಿದವು ಹೆಣ ಮಾವಿನ ಮರದಲಿ
ಕೋಗಿಲೆಗೆ ಕಂಠವಿಲ್ಲ ವಸಂತನಿಗೆ ಮುಖವೇ ಇಲ್ಲ
ಅನಂಗನ ಸಂಗದಲಿ
ಮಧುರ ಮಿಲನವೊಂದು ಸಾಧ್ಯವೇ?
ಸುಳ್ಳು ಸೃಷ್ಟಿ ಪೊಳ್ಳು ಪುರಾಣಗಳ ಪಹರೆಯಲಿ
ಮೈಯೆಂಬ ಮೈಯಲ್ಲ ಯೋನಿಯಾಗಿ
ಯೋನಿಯೇ ಕಣ್ಣಾಗಿ ಕಲ್ಲಾಗಿ ಶಾಪಗ್ರಸ್ತ ಶಿಶ್ನ ಚರಿತೆಗೆ
ಮುಳ್ಳುಗಳ ಸಾಲು
ಎಲ್ಲಿ ನೋಡಿದರಲ್ಲಿ ಮುಖವಿಲ್ಲದ ಮನುಷ್ಯರು
ವಿಕಲಾಂಗ ಪುರುಷರ ಶಿಶ್ನಗಳು ಚೀರುತ್ತಿವೆ
‘ನಿಮ್ಮ ಅಂಗಗಳು ನಮ್ಮ ಪ್ರಚೋದಿಸುತ್ತಿವೆ’
ಪಾಪ! ಗೊತ್ತಿಲ್ಲ ಅವರಿಗೆ; ಕ್ಷಮೆ ಇರಲಿ ಶಿವನೆ!
ಅನಂಗರ ಶಿಶ್ನಗಳು ಅಸಹ್ಯ ಹುಟ್ಟಿಸುತ್ತಿವೆ
‘ಲಿಂಗವನು ಭಂಗ ಮಾಡುವ’ ಹತಾರುಗಳ ಮಸೆಯುತ್ತಿವೆ
ಅಯ್ಯೊ! ಅನಾರೋಗ್ಯಕರ ಪರಿಸರವೊಂದು ಹುಟ್ಟದಿರಲಿ
ಹಣ್ಣು-ಹೆಣ್ಣುಗಳ ಮನುಷ್ಯತ್ವದ ಮೀಮಾಂಸೆ
ಅರಿಯದ ಚರಿತೆಗೆ ಅನಾಗರೀಕ ಸೋಂಕು
ಮನಸ್ಸಿನ ಮಾತು ಮನಸ್ಸುಳ್ಳವರ ಅಂತರಾಳ
ಮನಸು ಒಲಿಸಿಕೊಳ್ಳುವುದು ಕಲಾಚಾರ
ಹೆಣ್ಣಿನ ಮನಸ್ಸನ್ನು ಒಲಿಸಿಕೊಳ್ಳಲಾರದ
ಗಂಡಿನ ದೌರ್ಬಲ್ಯದ ಅಭಿವ್ಯಕ್ತಿಯೇ ಅತ್ಯಾಚಾರ!
ಛೆ! ಕವಿತೆ ವಾಚ್ಯವಾಯಿತೆ?
ಅತ್ಯಾಚಾರಕ್ಕೆ ಇನ್ನೆಂಥ ಧ್ವನಿ ಹೊರಡುತ್ತೆ?
ಅದು ಮಾಧುರ್ಯದಿಂದ ಹೊರತಾದುದು
ಅಂದು,
ಧನ-ಕನಕ ಕೊಟ್ಟರೆ ಹೆಂಡಿರೊಲಿವರೇ?
ಪ್ರಶ್ನಿಸಿದ್ದಳು ದ್ರೌಪದಿ
ಇಂದು,
ಮನಿಪುರದ ಮಹಿಳೆಯರ ಬಹಿರಂಗ ಆಹ್ವಾನಕ್ಕೆ
ದಕ್ಕಿಲ್ಲ ಇನ್ನೂ ಉತ್ತರ!
ಶಿಶ್ನಕ್ಕೆ ಕಣ್ಣಿಲ್ಲ ಮನಸ್ಸಿಲ್ಲ ಅದು ಪೂರ್ಣದೇಹವಲ್ಲ
ಮುಖವಿಲ್ಲದವರು ಮುಖಾಮುಖಿಯಾಗುವುದಿಲ್ಲ
ಏಕಾಂತದ ಮಿಲನೋತ್ಸವದಲಿ
ಬತ್ತುವ ಗರ್ವರಸದ ಭಯದಲಿ
ತಂಡುಗಟ್ಟಿ ಎರಗುತ್ತಾರೆ
ಮನಸ್ಸಿಲ್ಲದ ಮಿಲನಕ್ಕೆ ಯಾವ ಅರ್ಥ ಉಂಟು?
ನೂರು ನೂರು ಕಣ್ಣುಗಳಲಿ ಬಣ್ಣ ಬಣ್ಣಗಳ ತುಂಬಿ
ಗರಿ ಬಿಚ್ಚಿ ಕುಣಿವ ನವಿಲಿನ ಗುಟ್ಟು
ಈ ನೆಲದ ಹಾಡಾಗಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.