ADVERTISEMENT

ಸವತಿಯರ ಹರಟೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 12:15 IST
Last Updated 22 ಜನವರಿ 2011, 12:15 IST

   ಅಕ್ಟೋಬರದ ಮಧ್ಯಾಹ್ನ ಊಟ ಮುಗಿಸಿ, ಮಲಗಿ, ಎದ್ದ
ರುಕ್ಮಿಣಿ ತಪ್ತ ದ್ವಾರಕೆಯಲ್ಲಿ ಮಂಜು ಮುಸುಕಿದ ಮಥುರೆಯನ್ನು
ಉತ್ತರೀಯದಿಂದ ಗಾಳಿ ಹಾಕಿ ನೆನೆಯುತ್ತ
ಸವತಿಯನ್ನು ಹರಟೆಗೆ ಕರೆದಳು

‘ಬಾರೆ ಭಾಮೆ’ ‘ಬಂದೆ’ ‘ಏನಾಗಿದೆ ನಿನಗೆ’ ‘ಏನಾಗಿದೆ ನನಗೆ’
‘ಕನ್ನಡಿಯಲಿ ಮುಖ ನೋಡು ಒಮ್ಮೆ’ ‘ನಾನಿರುವುದೆ ಹೀಗೆ’
‘ಬಾಡಿ ಹೋಗಿದೆ ಮುಖ ಮುಡಿದ ಪಾರಿಜಾತದ ಹಾಗೆ’
‘ಬಹುಶಃ ಆಶ್ವೀಜದ ಬೇಗೆ’

‘ಅಲ್ಲಕ್ಕ, ಈ ರಾಧೆಗೇನಾಯ್ತು? ಎಲ್ಲಿ ಹೋದಳು ಆಕೆ?’
‘ಇರಬಹುದು ಮಥುರೆಯಲಿ ಮೊಮ್ಮಕ್ಕಳ ಅಂಡು ತೊಳೆಯುತ್ತ,
ರೇಷನ್ ತರಲು ಹೋದ ಗಂಡನ ದಾರಿ ಕಾಯುತ್ತ,
ಕೃಷ್ಣನೊಡನಾಡಿದ ಪ್ರಣಯದಾಟಗಳನ್ನು ನೆನೆಯುತ್ತ,
ಕಳೆದ ಸುಖದಿನಗಳ ನೆನಪಿನಲೆ ರೋಮಾಂಚಿಸುತ್ತ’

ADVERTISEMENT

‘ನಿನ್ನ ತೋಳಲ್ಲಿ ಇದ್ದಾಗ ಅವಳ ನೆನಪು?’ ‘ಆಗಾಗ’
‘ಆತ ನನ್ನೊಡನಿದ್ದಾಗಲೆಲ್ಲ ಅವಳ ಜೊತೆಯೇ ಇದ್ದೇನೆ
ಎಂದು ತಿಳಿಯುತ್ತಾನೆ ಅನ್ನುವುದು ನನ್ನ ಚಿಂತೆ’
‘ಇಂಥ ಹುಚ್ಚು ನಿನಗೂ ಬಂತೆ?’ ‘ನಿನಗಿಲ್ಲವೆ?’

‘ಹೇ ಸಖಿ, ಮೊದಮೊದಲು ನನಗೂ ಹಾಗೆಯೇ ಅನ್ನಿಸುತ್ತಿತ್ತು.
ಆದರೆ ಕೃಷ್ಣನ ರೀತಿಯೇ ಹಾಗೆ
ಯಮುನೆಯ ನೀರಿನ ಹಾಗೆ
ಗಂಗೆಯ ರಭಸ ಅದಕಿಲ್ಲ ನಿಜ. ಮೂರು ನಿಮಿಷ
ನೂರು ನಿಮಿಷಗಳ ಹಾಗೆ’

‘ಹೇ ರುಕ್ಮಿಣಿ, ನೀನು ಪಟ್ಟದ ರಾಣಿ,
ಕೃಷ್ಣನ ಕಣ್ಮಣಿ, ನಡೆಯುತ್ತದೆ ನಿನ್ನ ವಾಣಿ,
ನನ್ನದು ಹಾಗಲ್ಲ, ಕೃಷ್ಣನಿಗೆ ನಾನು ಬೇಕಿಲ್ಲ’
‘ನೋಡೆ ಗೆಳತಿ, ಕೃಷ್ಣ ಮುಳುಗಿದ್ದಾನೆ ಈಗ
ರಾಜಕಾರಣದಲ್ಲಿ, ಮಹಾಭಾರತದ ಹೂರಣದಲ್ಲಿ
ಹಸ್ತಿನಾವತಿಗಿಂದು ಹೋಗಿದ್ದಾನೆ’ ‘ಹೌದು ಕೇಳಿದ್ದೇನೆ-
ಹೋಗಿರಬಹುದು ದ್ರೌಪದಿಗೆ ಸೀರೆ ಕೊಡಲು,
ಪಾಂಡವರಿಗೆ ಮನೆ ಕೊಡಲು
ಹೋಗಬಹುದು ಅವನ ಸವಾರಿ, ಇದೆ ಮಥುರೆ ಹತ್ತಿರದಲ್ಲಿ’

‘ಆದರೆ ನೋಡೆ, ಬಂದಿದ್ದ ಕೃಷ್ಣ ನನ್ನೆಡೆಗೆ ಮೊನ್ನೆಯ ಇರುಳು’
‘ಬಂದಾಯ್ತು ಅವನು ನನ್ನಲ್ಲಿಗೆ ಆರು ತಿಂಗಳು’
‘ಮನೆಯಲ್ಲಿ ಉಪ್ಪು ಹುಳಿ ಖಾರ ಸಿಹಿ ಒಂದೂ ಇರಲಿಲ್ಲ’
‘ಮನದೊಳಗೆ ಕೂಡ ಅವು ಇಲ್ಲವಲ್ಲ’
‘ತೆರೆದಿತ್ತೆ ನನ್ನ ಅಕ್ಷಯ ಪಾತ್ರೆಯನು’
‘ಜಾಗ್ರತೆ, ಹೋಗಿ ಕೊಟ್ಟಾನು ಬೇರೆಯವರಿಗದನು’
‘ಆ ತನಕದ ವಿರಹ ವಿರಸ ಕೋಪ ತಾಪ
ಕರಗಿ ನೀರಾಯಿತು ನೋಡು’
‘ನನಗೆ ಶಿವ ಬರೆದಿಲ್ಲ ಅಂಥ ಸುಖ
ಏನು ಹೇಳಲಿ ಬಿಡು’
‘ನಗು ನಗುತ ಹೊರಟ ಮತ್ತೆ ಬರುವೆನು ಹೇಳಿ
ಮನದೊಳಗೆ ಧನ್ಯತೆಯ ಧೂಪ ದೀಪಾವಳಿ’

‘ಯಾಕೆ ಸುಮ್ಮನೆ ಕುಳಿತೆ? ಕಣ್ಣಲ್ಲೇಕೆ ನೀರು?
ತಂಗಿ,
ಪ್ರೀತಿ ಎಂದರೆ ಏನು ಬೆಣ್ಣೆಯೇ ಪಾಲು ಮಾಡಲು?
ಪ್ರೀತಿಯಲಿ ಅಪೇಕ್ಷೆಯಿಲ್ಲ ಅಪೇಕ್ಷೆಯ ಪ್ರೀತಿ ಪ್ರೀತಿಯಲ್ಲ.
ಮಾಡಿಕೊಳ್ಳಲಿ ಬಿಡು ಅವನು
ಹದಿನೈದು ಸಾವಿರದ ಒಂಭೈನೂರ ತೊಂಭತ್ತೆಂಟು
ಮುಳುಗಿ ಹೋಗುವುದೇನು ನಮ್ಮ ಗಂಟು?
ಕಾಯಬೇಕು ಮುದ್ದು ತಂಗಿ, ಒಳ್ಳೆಯ ಗಂಡ ಸಿಗಲು
ಸಿಕ್ಕ ಗಂಡನ ಸುಖ ಸಿಗಲು, ಹಾಗೊಮ್ಮೆ ಸಿಕ್ಕಿದರೆ ಅದು
ಮೊಗೆದಷ್ಟೂ ಮುಗಿಯದ ಧಾರೆ, ನಿನ್ನ
ಪಾತ್ರೆ ನೀನು ತುಂಬಿಸುವ ಹುನ್ನಾರ ಬೆಳೆಸಿ ಕೋ’.               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.