ಸಿನಿಮಾಕ್ಕೆ ಸಮಾಜದ ಜಡ್ಡನ್ನು ಗುಣಪಡಿಸುವ ಔಷಧ ಗುಣವಿದೆಯೇ? `ಹೌದು' ಎನ್ನುತ್ತಲೇ ಸಿನಿಮಾದ ವಿವಿಧ ಆಯಾಮಗಳನ್ನು ಚರ್ಚಿಸುವ ಈ ಬರಹ, ಸಮಕಾಲೀನ ಸಿನಿಮಾದ ದೌರ್ಬಲ್ಯಗಳನ್ನು ವಿಶ್ಲೇಷಿಸುತ್ತದೆ.
ಚಿತ್ರಮಂದಿರಗಳಿಂದ ಜನ ದೂರ ಸರಿದಿದ್ದಾರೆಯೇ?
ಹೌದು ಎಂದೇ ಹೇಳಬೇಕಾಗುತ್ತದೆ. ಈ `ಹೌದು' ಉತ್ತರಕ್ಕೆ ಕಳಪೆ ಚಿತ್ರಗಳೇ ಕಾರಣ. ಚಲನಚಿತ್ರಗಳು ಸಮಾಜದ ಹಿತ, ಮನರಂಜನೆಗಿಂತ ಹೆಚ್ಚಾಗಿ ಅರ್ಥವಿರದ ಆವೇಶ, ಕಾಮಾಕ್ರೋಶಕ್ಕೆ ಮಹತ್ವ ನೀಡುತ್ತಿವೆ. ಇದನ್ನು ಪ್ರೇಕ್ಷಕ ಗುರುತಿಸಿದ್ದಾನೆ. ಸಿನಿಮಾ ನೋಡುವ ಆರೋಗ್ಯವಂತನ ಮನಸ್ಸನ್ನು ಇದು ಕೆಡಿಸುತ್ತದೆ ಎನ್ನುವುದು ಅವನಿಗೆ ಗೊತ್ತಾಗಿದೆ.
ಹಣ ಕೊಟ್ಟು ರೋಗ ತರಿಸಿಕೊಳ್ಳುವಷ್ಟು ದಡ್ಡರಲ್ಲ ನಮ್ಮ ಪ್ರೇಕ್ಷಕರು! ಚಿತ್ರರಸಿಕ ಬಯಸುವುದೇನೆಂದರೆ ಸಮಸ್ಯೆ ಮತ್ತು ಅದಕ್ಕೆ ಅರ್ಥಪೂರ್ಣ ಪರಿಹಾರ. ಇದು ಕಲ್ಪನೆಯಿಂದಲೇ ಆಗಿದ್ದರೂ ಅದಕ್ಕೊಂದು ಕಲಾತ್ಮಕ ಹೊದಿಕೆ ಇರಬೇಕು ಎನ್ನುವುದು ನಿರೀಕ್ಷೆ. ಇಂದಿನ ಚಿತ್ರಗಳಲ್ಲಿ ಇಂತಹದೊಂದು ಸೂತ್ರ ಇಲ್ಲವಾಗಿದೆ. ಇದರಿಂದಾಗಿ ಚಿತ್ರಮಂದಿರದಿಂದ ಚಿತ್ರರಸಿಕ ದೂರವಾಗಿದ್ದಾನೆ.
ಸಿನಿಮಾ - ಮನೋಲ್ಲಾಸ
1895ರ ಆಸುಪಾಸಿನಲ್ಲಿ ಚಲನಚಿತ್ರವೆಂಬ ಮನರಂಜನೆಯ ಮಾಧ್ಯಮ ಜನ್ಮ ತಾಳಿತು. ಅದೇ ಸಮಯದಲ್ಲಿ ಮನೋವಿಶ್ಲೇಷಣಾ ಕ್ರಮವೊಂದರ ಬಗ್ಗೆ ಸಿಗ್ಮಂಡ್ ಫ್ರಾಯ್ಡ ಮಾತನಾಡಿದ್ದರು. `ಸಿನಿಮಾ ಮತ್ತು ಒಳಮನಸ್ಸು ಒಂದನ್ನೊಂದು ಹೋಲುತ್ತದೆ, ತೆರೆಯ ಮೇಲೆ ಮೂಡಿಬರುವ ಬಿಂಬಗಳು ಅಪರಿಚಿತವೆನಿಸಿದರೂ ಅದು ವಾಸ್ತವಿಕವೇ ಎನಿಸುತ್ತದೆ. ತೆರೆಯ ಮೇಲೆ ಮೂಡಿಬರುವ ಚಿತ್ರಗಳು ಪ್ರಾಣವಿರದ ಚಿತ್ರವಷ್ಟೇ ಅನಿಸಿದರೂ ಅದು ಜೀವಂತವಾಗಿದೆ ಅನಿಸದಿರುವುದು ಅಪರೂಪ. ಹೀಗಾಗಿ ಚಲನಚಿತ್ರಗಳು ಭ್ರಮೆ ಎಂದೆನಿಸಿದರೂ ಅವಾಸ್ತವಿಕ ಅನಿಸುವುದಿಲ್ಲ'.
ಚಲನಚಿತ್ರದ ಮಾಧ್ಯಮ ಹುಟ್ಟಿದ ಸಮಯದಲ್ಲಿ ಸಿಗ್ಮಂಡ್ ವ್ಯಾಖ್ಯಾನ ಹೀಗಿತ್ತು ಎಂದರೆ ಅಚ್ಚರಿ ಮೂಡಿಸುವಂತಹ ಬೆಳವಣಿಗೆಯದು. ಆದರೆ ಫ್ರಾಯ್ಡ ಮಾತ್ರ ಚಲನಚಿತ್ರದ ಸಹವಾಸದಿಂದ ದೂರವೇ ಉಳಿದಿದ್ದರು. ಒಮ್ಮೆಯಂತೂ ಅವರು ಕೇಳಿದಷ್ಟು ಹಣ ಕೊಡಲು ಮುಂದೆ ಬಂದಿದ್ದ ಹಾಲಿವುಡ್‌ನ ಚಿತ್ರನಿರ್ಮಾಪಕರನ್ನು ಹತ್ತಿರವೂ ಬರಮಾಡಿಕೊಳ್ಳಲಿಲ್ಲ. ಮನಸ್ಸನ್ನು ಸೆರೆ ಹಿಡಿಯವುದು ಸುಲಭವಲ್ಲ ಮತ್ತು ಮನೋವಿಶ್ಲೇಷಣೆಯ ಕ್ರಮಗಳು ತೆರೆಯ ಹಿಂದೆಯೇ ಇದ್ದಷ್ಟೂ ಉತ್ತಮ ಎನ್ನುವ ವೈಜ್ಞಾನಿಕ ಮನೋಭಾವವೇ ಈ ನಿಲುವಿಗೆ ಕಾರಣವೆಂದು ವ್ಯಾಖ್ಯಾನಿಸುವವರು ಇದ್ದಾರೆ. ಗೊಂದಲದ ಒಳಮನಸ್ಸು ಸದಾ ಹೊರಬರುವುದಕ್ಕೆ ಯಾತನೆ ಪಡುತ್ತಿರುತ್ತದೆ.
ಅಂತಹದೊಂದು ಸ್ಥಿತಿಯನ್ನು ಚಿತ್ರಿಸುವ ತಂತ್ರಗಾರಿಕೆ ಕೊಂಚ ಅಪಾಯಕಾರಿ ಎನ್ನುವ ಭಾವನೆ ಇದ್ದಿರಲೂಬಹುದು. ಒಟ್ಟಿನಲ್ಲಿ ವ್ಯಕ್ತಿಯು ತನ್ನ ಒಳಮನಸ್ಸು ಎಂತಹದ್ದು ಎನ್ನುವುದನ್ನು ಸ್ವತಃ ವ್ಯಕ್ತಪಡಿಸುವುದು ಆರೋಗ್ಯಕರ ಎನ್ನುವುದೇ ಅವರ ಗಾಢ ಭಾವ.ಸಿನಿಮಾಗಳಿಂದ ಫ್ರಾಯ್ಡ ದೂರ ಉಳಿಯಲು ಇಷ್ಟಪಟ್ಟಿದ್ದರಾದರೂ ಅವರ ತತ್ವಗಳ ಪ್ರಭಾವದಿಂದ ಖ್ಯಾತಿ ಪಡೆದ ನಿರ್ದೇಶಕರ ಪಟ್ಟಿ ದೊಡ್ಡದಿದೆ. ಫ್ರಾಯ್ಡರ ಖ್ಯಾತಿ, ಅಪಖ್ಯಾತಿ ಎರಡಕ್ಕೂ ಲೈಂಗಿಕ ವಿಷಯಗಳೇ ಮೂಲ. ಮನುಷ್ಯ ವರ್ತನೆಗಳಲ್ಲಿ ವೈವಿಧ್ಯತೆ, ವಿಭಿನ್ನತೆಗಳು ಲೆಕ್ಕಕ್ಕೆ ಸಿಗುವುದಿಲ್ಲ. ಕೆಲವು ತಾತ್ಕಾಲಿಕ, ಕ್ಷಣಿಕ ಎಂದೆನಿಸಿದರೆ, ಮತ್ತೆ ಕೆಲವು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತವೆ. ಇಂತಹವುಗಳನ್ನೇ ವ್ಯಕ್ತಿತ್ವದ ಸೂಚನೆ ಎಂದು ಮನೋವಿಜ್ಞಾನ ಪರಿಗಣಿಸುತ್ತದೆ.
ವ್ಯಕ್ತಿತ್ವವೆಂದ ಮೇಲೆ ಭಿನ್ನತೆಗಳು ಇದ್ದೇ ಇರುವುದು. ಇವುಗಳೇ ಅದೆಷ್ಟೋ ಸಂದರ್ಭಗಳಲ್ಲಿ ವಕ್ರ ಮತ್ತು ವಿಚಿತ್ರ ವರ್ತನೆಗಳಿಗೆ ಪ್ರೇರಣೆ. ಮನದೊಳಗಿನ ಇಂತಹ ಪರಿಸ್ಥಿತಿಗಳನ್ನು ತೋರಿಸುವ ಪ್ರಯತ್ನವನ್ನು ಚಿತ್ರಕತೆಗಳು ಮಾಡುತ್ತವೆ. ಇದೇ ಮಾದರಿಯಲ್ಲಿಯೇ ಮನೋವೈಜ್ಞಾನಿಕ ಕ್ಲಿನಿಕ್‌ಗಳಲ್ಲಿ ವ್ಯಕ್ತಿಯ ಮಾನಸಿಕ ಸಮಸ್ಯೆಗಳನ್ನು ವಿಶ್ಲೇಷಿಸಲಾಗುತ್ತದೆ.
ಬಹಳಷ್ಟು ಮಾನಸಿಕ ಅಸ್ವಸ್ಥತೆಗಳ ಹಿನ್ನೆಲೆಯಲ್ಲಿ ಲೈಂಗಿಕ ಆಸೆ, ನಿರಾಸೆಗಳು ಬಲವಾಗಿರುತ್ತವೆ. ಅದರಲ್ಲಿಯೂ ವಿಶೇಷವಾಗಿ `ಹಿಸ್ಟೀರಿಯಾ' (ಈ ಪದವನ್ನು ಮನಶಾಸ್ತ್ರ ಈಗ ಬಳಸುತ್ತಿಲ್ಲ) ರೋಗ ಚಿಹ್ನೆಗಳೆಲ್ಲವೂ ಶಿಷ್ಟಾಚಾರದ ಹೆಸರಿನಡಿಯಲ್ಲಿ ಜರಗುವ ಲೈಂಗಿಕ ಹೀಯಾಳಿಕೆಯಿಂದಲೇ ಆದದ್ದು ಎನ್ನುವಂತಹ ನಂಬಿಕೆ ಮನೋವಿಶ್ಲೇಷಣೆಯ ಆರಂಭದ ದಿನಗಳಲ್ಲಿ ಪ್ರಬಲವಾಗಿತ್ತು. ಇದರ ಬಗ್ಗೆ ವಿರೋಧ, ಗೊಂದಲಗಳೂ ಉಂಟಾಗಿದ್ದವು. ಈ ಗೊಂದಲವನ್ನೇ ಕೇಂದ್ರವಾಗಿರಿಸಿಕೊಂಡಿರುವ ಚಲನಚಿತ್ರವೊಂದು ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿದೆ.
ಸಿನಿಮಾ ನೋಡುವ ಆಸೆ, ಮತ್ತು...
ಮನಸ್ಸಿನೊಳಗಿನ ಚಹರೆಯನ್ನು ಗುರುತಿಸುವುದು ಒಂದು ಕಲೆ. ಇಂತಹದೊಂದು ಕಲೆಯನ್ನು ಕರಗತ ಮಾಡಿಕೊಳ್ಳುವ ಪ್ರಯತ್ನದಲ್ಲಿ ಚಲನಚಿತ್ರ ಮಾಧ್ಯಮ ಹಿಂದೆಬಿದ್ದಿಲ್ಲ. ನಟನೆಯ ಮೂಲಕವೇ ಒಳಮನಸ್ಸಿನ ಗುಟ್ಟುಗಳನ್ನು ಗುರುತಿಸುವಲ್ಲಿ ಚಲನಚಿತ್ರಗಳು ಪರಿಣಾಮಕಾರಿಯಾಗಿವೆ. ಮನೋತಜ್ಞರು, ಮನೋವೈಜ್ಞಾನಿಕ ನಿಲುವುಗಳನ್ನು ನೆಲೆಯಾಗಿಸಿಕೊಂಡು ವ್ಯಕ್ತಿಯ ತೊಳಲಾಟ, ತೋರ್ಪಡಿಕೆಗಳನ್ನು ಪ್ರದರ್ಶಿಸುವಲ್ಲಿ ಅನೇಕ ಸಿನಿಮಾಗಳು ಯಶಸ್ವಿಯಾಗಿವೆ.
ಆದರೆ ಭಾರತೀಯ ಭಾಷೆಗಳಲ್ಲಿ ಮಾನಸಿಕ ದೌರ್ಬಲ್ಯವನ್ನು ಬಿಂಬಿಸುವ ರೀತಿಗೆ ಅಪಹಾಸ್ಯವೇ ಮಾದರಿ. ವಕ್ರವಕ್ರವಾಗಿ ವರ್ತಿಸುವುದಷ್ಟೇ ಮನೋರೋಗಿಗಳ ಲಕ್ಷಣವೆನ್ನುವಂತಹ ಮೌಢ್ಯವನ್ನು ಚಲನಚಿತ್ರ ನಿರ್ದೇಶಕ/ನಿರ್ಮಾಪಕರು ಇನ್ನೂ ಬದಲಾಯಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಚಲನಚಿತ್ರ ತಯಾರಿಸುವವರಲ್ಲಿ ಮನೋರೋಗದ ಬಗ್ಗೆ ಇರುವ ತಪ್ಪು ಕಲ್ಪನೆ ಮತ್ತು ಮನೋಭಾವ.
ಮನೋವಿಶ್ಲೇಷಣೆಯ ಮಾದರಿಯನ್ನು ಆಧಾರವಾಗಿರಿಸಿಕೊಂಡು ವ್ಯಕ್ತಿಯ ಮಾನಸಿಕ ಸಂಘರ್ಷಗಳ ಜಾಡನ್ನು ಶೋಧಿಸುತ್ತಾ ಹೋದರೆ ಸಿನಿಮಾದಲ್ಲಿ ಕಂಡುಬರುವ ಪಾತ್ರ ರಚನೆಗೂ ಮನೋವಿಶ್ಲೇಷಣಾಕಾರನು ಹುಡುಕುವ ಸಂಘರ್ಷಗಳಿಗೂ ಹತ್ತಿರದ ಸಂಬಂಧವಿದೆ ಎನಿಸುತ್ತದೆ. ಸಿನಿಮಾದ ಪಾತ್ರವೊಂದರ ಹಿನ್ನೆಲೆಗಳು ಬೆಳಕಿಗೆ ಬಂದ ನಂತರವೇ ಸಮಸ್ಯೆಗೆ ಅಂತ್ಯ ಕಾಣಿಸುವುದು. ಇಂತಹದ್ದೇ ಕ್ರಮವನ್ನು ಮನೋವಿಜ್ಞಾನಿ/ವಿಶ್ಲೇಷಣಾಕಾರ ಪ್ರಯತ್ನಿಸುತ್ತಿರುತ್ತಾನೆ. ಯಾವುದೋ ಒಂದು ಸಂಘರ್ಷ, ಅದರಿಂದ ಹುಟ್ಟಿಕೊಳ್ಳುವ ದ್ವಂದ್ವ, ಕ್ಲೇಷಗಳು ಮತ್ತು ಅದರ ಪರಿಣಾಮವು ವ್ಯಕ್ತಿ ಮತ್ತು ಸಾಮಾಜಿಕ ವರ್ತನೆಗಳ ಮೂಲಕ ವ್ಯಕ್ತವಾಗುವ ರೀತಿಯನ್ನು ಸಿನಿಮಾ ತೋರಿಸುವ ಪ್ರಯತ್ನ ಮಾಡುತ್ತದೆ.
ಉತ್ತಮ ನಿರ್ದೇಶಕನ ಮಾರ್ಗದರ್ಶನದಲ್ಲಿ ಇದು ತುಂಬಾ ನಿಖರವಾಗಿ ಹೊರಬರುತ್ತದೆ. ಹೀಗಾಗಿ ಗೊಂದಲಗಳ ಗೂಡಿನ ಜಾಡನ್ನು ಹಿಡಿಯುವ ಚಿತ್ರನಿರ್ದೇಶಕನ ಮನಸ್ಸಿನ ರೀತಿಗೂ ಮನೋವಿಜ್ಞಾನಿಯ ಶೋಧನೆಯ ಕ್ರಿಯೆಗೂ ಹೋಲಿಕೆ ಇರಲಾರದು ಎಂದು ಹೇಳುವುದು ಕಷ್ಟ. ಆದರೆ, ಇಂತಹದೊಂದು ಉತ್ತಮ ಮಾದರಿಯನ್ನು ಅನುಸರಿಸುವ ಚಿತ್ರನಿರ್ದೇಶಕರ ಸಂಖ್ಯೆ ಕಡಿಮೆ. ಇತ್ತೀಚಿನ ದಿನಗಳಲ್ಲಂತೂ ಚಿತ್ರಕತೆಯ ಉದ್ದೇಶಗಳಲ್ಲಿ ನಿರ್ಮಾಪಕ/ನಿರ್ದೇಶಕರ ಬಯಕೆಗಳಿಗೇ ಆದ್ಯತೆ.
ಕಾಮಕೇಂದ್ರಿತ ಚಟುವಟಿಕೆಗಳಿಗೆ ಹೆಚ್ಚು ಒತ್ತು. ಇಂತಹದ್ದೇ ಒಂದು ವಿಷಯದ ಬಗ್ಗೆ ಇತ್ತೀಚೆಗೆ ಕನ್ನಡದ ವಾಹಿನಿಯೊಂದರಲ್ಲಿ ಚರ್ಚೆ ನಡೆದಿತ್ತು. ಚಿತ್ರದ ನಟ/ನಿರ್ದೆಶಕನ ಕಾಮೋನ್ಮಾದಕ್ಕೆ ಚಿತ್ರದ ನಾಯಕಿಯನ್ನು ಬಲಿಕೊಡುವ ಪ್ರಯತ್ನವನ್ನು ಮಾಡಿದ್ದರೆನ್ನುವುದು ಆರೋಪ.ಚಿತ್ರದಲ್ಲಿ ಇರದ ಕಾಮಾಭಿನಯವನ್ನು `ಯುಟ್ಯೂಬ್' ಮೂಲಕ ಹೊರತಂದರೆ ಚಿತ್ರ ಚೆನ್ನಾಗಿ ಓಡುತ್ತದೆ ಎನ್ನುವುದೇ ಈ ನಟ/ನಿರ್ದೆಶಕನ ಮನದಾಳ.
ಇಂತಹ ಸನ್ನಿವೇಶದಲ್ಲಿ ನಟನೆ, ಕಥಾವಸ್ತುವಿಗಿಂತ ಹೆಚ್ಚಾಗಿ ನಿರ್ಮಾಪಕ - ನಿರ್ದೇಶಕನ ಬಯಕೆಗಳನ್ನು ತೀರಿಸಿಕೊಳ್ಳುವುದಕ್ಕೆ ಹೆಚ್ಚು ಅವಕಾಶ ಸಿಗುತ್ತದೆ. ಈ ಗೊಂದಲದ ಮನಸ್ಥಿತಿಗಳ ಬಗ್ಗೆ ವಾಹಿನಿಗಳ ಉತ್ಸಾಹ ಅಷ್ಟಿಷ್ಟಲ್ಲ. ನಿರ್ಮಾಪಕ/ ನಿರ್ದೇಶಕನ ಒಳಮನಸ್ಸಿನ ಸ್ಥಿತಿಗತಿಗಳನ್ನು ಹೊರಹಾಕುವ ಪ್ರಯತ್ನ ವಾಹಿನಿಗಳದ್ದು. ಲೈಂಗಿಕ ಪ್ರಚೋದನೆಯು ಸಿನಿಮಾ ಸರಕು ಎನ್ನುವುದು ಹಳಸಾಗಿರುವ ಮಾತು. ಇಂದಿನ ಯುವ ಸಿನಿಮಾ ಕಲಾವಿದರ ಅರಿವು ಮತ್ತು ಅಂತರಾಳಗಳು ಕ್ಷಿಪ್ರ ಜನಪ್ರಿಯತೆಯ ಕಡೆಯೇ ವಾಲಿರುತ್ತದೆ.
ಅದೆಷ್ಟೊ ಸನ್ನಿವೇಶಗಳಲ್ಲಿ ನಿರ್ಮಾಪಕ/ ನಿರ್ದೇಶಕನ ಮನಸ್ಸಿಗೆ ತಕ್ಕಂತೆಯೇ ಹೊಂದಿಕೊಳ್ಳುವ ವಿಶಾಲ ಮನೋಭಾವವು ಇರುವುದುಂಟು. ಹೀಗಾಗಿಯೇ ಯುವಕಲಾವಿದರಲ್ಲಿರುವ ನೈತಿಕ ಸ್ಥೈರ್ಯ ಮತ್ತು ಪ್ರಬುದ್ಧತೆಗಳನ್ನೂ ಖರೀದಿಸುವಂತಹ ಯುವ ನಿರ್ಮಾಪಕ/ ನಿರ್ದೇಶಕರ ಸಂಖ್ಯೆ ಹೆಚ್ಚಾಗಿವೆ.
ಚಿತ್ರಮಂದಿರಗಳೆಂಬ ಆರೋಗ್ಯ ಕೇಂದ್ರಗಳು!
ಚಲನಚಿತ್ರಗಳಲ್ಲಿ ಹೆಣ್ಣಿನ ದೇಹಕ್ಕೆ ಸಿಗುವಷ್ಟು ಮನ್ನಣೆ ಅಭಿನಯಕ್ಕಿಲ್ಲ ಎನ್ನುವುದು ಹೊಸ ವಿಷಯವೇನಲ್ಲ. ಹದಿಹರೆಯದ ಅದೆಷ್ಟೊ ಹೆಣ್ಣುಮಕ್ಕಳ ಮನಸ್ಸಿಗೆ ವಿರುದ್ಧವೆನಿಸುವಂತಹ ಸನ್ನಿವೇಶಗಳನ್ನು ಸೆರೆಹಿಡಿದು ಅವುಗಳನ್ನು ಜಾಲತಾಣಗಳ ಮೂಲಕ ಹರಿದಾಡಿಸುವ ಹುಮ್ಮಸ್ಸಿನ ಕಲಾ ಕಸುಬುದಾರರು ಹೆಚ್ಚುತ್ತಿದ್ದಾರೆ. ಚಿತ್ರವೊಂದು ಯಶಸ್ವಿಯಾಗುವುದಕ್ಕೆ ಉತ್ತಮ ಕತೆ, ಅಭಿನಯಕ್ಕಿಂತ ಹೆಚ್ಚಾಗಿ ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಕಸರತ್ತುಗಳ ಮೂಲಕ ಸಾಧಿಸುವುದು ಸುಲಭ ಎನ್ನುವುದನ್ನು ಕನ್ನಡ ಚಿತ್ರೋದ್ಯಮದ ಇತ್ತೀಚಿನ ಕೆಲವರ ವರ್ತನೆ ಸ್ಪಷ್ಟಪಡಿಸಿವೆ.
ಅದೇ ರೀತಿಯಲ್ಲಿ ಚಿತ್ರ ನಟರ ವೈವಾಹಿಕ ಜೀವನದ ಏರುಪೇರುಗಳು ಸಹ ಚಿತ್ರ ಮಾರಾಟದ ಸೂತ್ರವಾಗುತ್ತಿವೆ. ಅಂದಮೇಲೆ ಚಲನಚಿತ್ರದ ಪಾತ್ರಗಳ ಮಾನಸಿಕತೆಯನ್ನು ಕಲಾತ್ಮಕವಾಗಿ ತೋರಿಸುವ ಕಾಲ ಬದಲಾಗಿದೆ. ನಿರ್ಮಾಪಕ/ನಿರ್ದೇಶಕನ ಹುದುಗಿದ ಕಾಮಬೇಗುದಿಗಳನ್ನೇ ಬಂಡವಾಳವನ್ನಾಗಿಸಿಕೊಂಡು ಚಿತ್ರ ತಯಾರಾಗುತ್ತಿರುವುದು ದುರದೃಷ್ಟಕರ. ಇದರ ಪರಿಣಾಮ ಪ್ರೇಕ್ಷಕನ ಮೇಲೆ ಆಗುತ್ತದೆ ಎನ್ನುವುದನ್ನು ಬರಡಾಗುತ್ತಿರುವ ಚಿತ್ರಮಂದಿರಗಳು ಸೂಚಿಸುತ್ತಿವೆ. ಚಿತ್ರಮಂದಿರಗಳು ಕೇವಲ ಚಲನಚಿತ್ರ ಪ್ರದರ್ಶನದ ಜಾಗವಷ್ಟೇ ಅಲ್ಲ. ಅದೊಂದು ಮಾನಸಿಕ ತಾಣ. ಸಮುದಾಯದ ಮನಸ್ಸಿನ ಹಿತ ಕಾಪಾಡುವ ಶಕ್ತಿ ಅದರಲ್ಲಿದೆ. ಅದನ್ನು ಕಲ್ಮಷಗೊಳಿಸುವುದರಿಂದ ಸಮುದಾಯದ ಮಾನಸಿಕ ಆರೋಗ್ಯ ಕೆಡಬಲ್ಲದು.
ಚಿಕಿತ್ಸೆ ಸಮಯದಲ್ಲಿ ಕಾಮೋದ್ಭವ
ಮನೋವಿಜ್ಞಾನವು ವೈಜ್ಞಾನಿಕ ಆಯಕಟ್ಟನ್ನು ಸೇರುವ ಕಾಲಘಟ್ಟದಲ್ಲಿ ಮಹಾನ್ ಮನೋತಜ್ಞರಿಬ್ಬರ ಮನಸ್ಸಿನ ಹೊಯ್ದಾಟವನ್ನು ಎತ್ತಿ ಹಿಡಿಯುತ್ತದೆ `ಎ ಡೆಂಜರಸ್ ಮೆತೆಡ್' ಹೆಸರಿನ ಚಲನಚಿತ್ರ. ಜರ್ಮನಿಯ ಜೂರಿಕ್‌ನಲ್ಲಿದ್ದ ಮನೋವೈದ್ಯ ಯುಂಗರ ಚಿಕಿತ್ಸಾಲಯಕ್ಕೆ ಯುವತಿಯೊಬ್ಬಳನ್ನು ಬಲವಂತದಿಂದ ತರುವ ಸನ್ನಿವೇಶದೊಂದಿಗೆ ಚಿತ್ರ ಶುರುವಾಗುತ್ತದೆ. ಆಕೆಯನ್ನು `ಮಾತೇ ಮದ್ದು' (ಟಾಕಿಂಗ್ ಕ್ಯೂರ್- ಸೈಕೋಅನಾಲಿಸಿಸ್) ಎನ್ನುವ ಚಿಕಿತ್ಸಾ ಕ್ರಮದ ಮೂಲಕ ಸಂಪೂರ್ಣವಾಗಿ ಗುಣಪಡಿಸುವ ಸಂದರ್ಭದಲ್ಲಿ ಜರಗುವ ಘಟನಾವಳಿಗಳನ್ನು ಚಿತ್ರದಲ್ಲಿ ಕಾಣಬಹುದು. ಹಾಗೆಯೇ ಮನೋವಿಶ್ಲೇಷಣಾಕಾರ ಮತ್ತು ರೋಗಿಯ ನಡುವೆ ಕಾಮ ಸಂಬಂಧವು ಮೂಡಿಬಿಡುತ್ತದೆ. ಎಷ್ಟೇ ತಿಳಿವಳಿಕೆ ಇದ್ದವರಾಗಿದ್ದರೂ ಲೈಂಗಿಕ ಆಕಾಂಕ್ಷೆಗಳ ಕಡೆ ನಿಗಾ ಇರದಿದ್ದರೆ ಎಡವಟ್ಟು ಖಂಡಿತ ಎನ್ನುವುದರ ಸೂಚನೆ ಇಲ್ಲಿದೆ.
ರಷ್ಯಾದ ಶ್ರಿಮಂತ ಮನೆತನಕ್ಕೆ ಸೇರಿದ ತರುಣಿ ಝಬೀನ ಶ್ಪಿಲರಾನ್‌ಗೆ ಹಿಸ್ಟಿರಿಯಾ ಹತ್ತಿಕೊಳ್ಳುವುದಕ್ಕೆ ಮನೆತನದ ಕಟ್ಟನಿಟ್ಟಿನ ನಿಯಮಗಳು ಮತ್ತು ಅಪ್ಪನಿಂದಾಗುತ್ತಿದ್ದ ಮಾನಸಿಕ ದೌರ್ಜನ್ಯವೇ ಪ್ರಬಲ ಕಾರಣ. ಅವಳ ಮಾನಸಿಕ ವೇದನೆಗಳು ಶರೀರದ ಮೂಲಕ ಹೊರಬರುತ್ತವೆ. ಬೇಟೆಗಾರನ ಬಲೆಗೆ ಸಿಕ್ಕ ಅಸಹಾಯಕ ಭಲ್ಲೂಕದ ಮರಿಯಂತೆ ಮುಲುಗುವುದು, ಚೀರಾಡುವುದು, ಕಣ್ಣುಗುಡ್ಡೆಗಳು ಹೊರಬಂದು ಬಿಡುವುದೇನೋ ಎನ್ನುವ ಹಾಗೆ ಕಣ್ಣಾಡಿಸುವುದು, ಕೈಗಳು ಹಿಂದೆ ಸರಿದು ಕಾಲುಗಳು ಮುದುರುವ ರೀತಿ, ಬಿಲ್ಲಿನಂತೆ ಬಾಗುವ ಬೆನ್ನೆಲಬು ಮಾನಸಿಕ ಹಿಂಸೆಯ ತೀವ್ರತೆಯನ್ನು ಸಂಕೇತಿಸುತ್ತದೆ.
ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಈ ದೃಶ್ಯವು ನೋಡುಗನ ಮನಸ್ಸಿನಲ್ಲಿ ಸ್ತಬ್ಧಚಿತ್ರವಾಗಿ ನಿಲ್ಲುತ್ತದೆ. ತನ್ನ ರೋಗಿಯ ಮಾನಸಿಕ ತೊಳಲಾಟವನ್ನು ಮಾತಿನ ಮೂಲಕವೇ ಹೊರಬರುವಂತೆ ಮಾಡುವ ಡಾ. ಯುಂಗ್, `ಹಿಸ್ಟಿರಿಯಾ'ದ ಮೂಲ ಕಾರಣವನ್ನು ಗುರುತಿಸುವಂತೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ. ಶರೀರ ಮತ್ತು ಮನಸ್ಸಿಗೆ ಉಂಟಾಗುತ್ತಿದ್ದ ಹಿಂಸೆ ಲೈಂಗಿಕ ತೃಪ್ತಿಗೂ ಕಾರಣವಾಗಿರುತ್ತದೆ. ರೋಗ ಚಿಹ್ನೆಗಳ ಉಲ್ಬಣಕ್ಕೆ ಈ ದ್ವಂದ್ವ ಸ್ಥಿತಿಯೇ ಕಾರಣವೆನ್ನುವ ಅರಿವು ಆಕೆಯಲ್ಲಿ ಮೂಡುವಂತೆ ಮಾಡುತ್ತದೆ ಯೂಂಗರ ಮನೋಚಿಕಿತ್ಸೆ.
ಲೇಖಕರು ಮನೋವಿಜ್ಞಾನಿ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.