ADVERTISEMENT

ಸೀರೆ ಕದ್ದವನು ನೀನೆ...

ಕವಿತೆ

ಡಾ.ಅನಸೂಯ ಕಾಂಬಳೆ
Published 23 ಮೇ 2015, 19:30 IST
Last Updated 23 ಮೇ 2015, 19:30 IST

1
ನೋವು ಹೆತ್ತ ಕೂಸು
ಸೆರೆ ಬಿಡಿಸುವವನಿಗೆ ಸೆರೆಯಾದ
ಬಯಲ ಸಖಿ ರಾಧೆ
ನಿಂತು ಅಳುತ್ತಿದ್ದಾಳೆ ದಾರಿಗಡ್ಡ
ಅಂಗಾಲಿಗೆ ಚುಚ್ಚಿದ ಮುಳ್ಳು
ಎದೆಯೊಳು ಕೊತ ಕೊತ ಕುದಿವ ಕಣ್ಣೀರು
ಪ್ರೇಮವೀಗ ಕುದಿವ ನೀರುಗುಳ್ಳೆ
ಸುಡುವವರು ಯಾರೋ? ಸುಟ್ಟವರು ಯಾರೊ?
ಸಾಕ್ಷಿ ಇಲ್ಲದೆ ಖುಲಾಸೆಯಾಗಿದೆ ಕೇಸು!
ಗೊಲ್ಲ ನೂದುವ ಕೊಳಲ ಗಾನಕೆ
ನಿತ್ಯ ಬೆತ್ತಲೆ ಗಂಗೆ-ಗೌರಿ-ತುಂಗೆ
ಕೃಷ್ಣೆ ಕಾವೇರಿ; ಯಮುನೆ-ಸರಸ್ವತಿ

2
ಮತ್ತೆ ಮತ್ತೆ ಮಹಿಳಾ ದಿನ
ಮೊನ್ನೆ ಶೆಡ್‌ನಲ್ಲಿ ಕೊಲೆಯಾದ ಎಂಟರ ಬಾಲೆಯ
ರಕ್ತಸಿಕ್ತ ಅಂಗಿಯೇ ಇಂದಿನ ಬಾವುಟ!
ಸಾಲಾಗಿ ಬೆಸ್ವರದಲ್ಲಿ ಕೂಗಬಹುದು ನಾವು
ಹೆಣಗಳ ಮೇಲೆ ಹೆಜ್ಜೆ ಹಾಕಿ ನಗಬಹುದು ಅವರು
ಹಾಯ್ದಷ್ಟು ಕೆಂಡ ಸುಟ್ಟವರು ನಾವೇ...
ಮೀಸೆ ಇಲ್ಲದ ಕೃಷ್ಣನಿಗೆ ಸದಾ ಮಂದಹಾಸ

3
ಸೀರೆ ಕದ್ದರೇನು ದೇವರಾಟ
ರತಿ ಕ್ರೀಡೆ, ಜಲಕ್ರೀಡೆ, ಶೃಂಗಾರ ರಸ
ಲೋಕೋದ್ಧಾರದ ಪರಂಪರೆ ಪ್ರಶ್ನಾತೀತ?
ಸಾಧ್ವಿಗೇನು ಗೊತ್ತು ಕಾವ್ಯಾರ್ಥ ಚಿಂತನ
ಪಾಯಸಕ್ಕೆ ಹುಟ್ಟಿದವರ ಪುತ್ರಕಾಮೇಷ್ಠಿ
ಪಾಪ! ಪಾಪಯೋನಿ ಯೋಗಿನಿ

ADVERTISEMENT

4
ಸೀರೆ ಕದ್ದವರಲ್ಲೆ ಸೀರೆ ಮಾತು
ಬಿಟ್ಟಕಣ್ಣು ಬಿಗಿದ ತುಟಿ
ಸ್ಫೋಟಕ್ಕೆ ಕಾದ ಮೌನ ಕಂಪನ

5
ಕೃಷ್ಣಾ!
ಹಡೆದ ತಾಯಿ ಪಡೆದ ತಾಯಿ
ಇಬ್ಬರಿದ್ದೂ ತಿದ್ದಲಾಗಲಿಲ್ಲ ನಿನ್ನ
ಗೋವಿನೊಡನಿದ್ದೂ ಗೋವಿನಂತಾಗಲಿಲ್ಲ
ಸೀರೆ ಕದ್ದವನು ನೀನೆ, ಸೀರೆ ಕೊಟ್ಟವನು ನೀನೆ!
ಕೈ ಮುಗಿವೆ ಕೃಷ್ಣಾ...
ಬೇಡ ನಿನ್ನ ಬೋಧನೆ
ನನ್ನ ಮಗ ಗೋಪಿ ನಿನ್ನಂತಾಗದಿರಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.