ADVERTISEMENT

ಸೌಂದರ್ಯ ಸ್ಪರ್ಧೆಗಳು: ಒಂದು ಟಿಪ್ಪಣಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2017, 19:30 IST
Last Updated 9 ಡಿಸೆಂಬರ್ 2017, 19:30 IST
ಸೌಂದರ್ಯ ಸ್ಪರ್ಧೆಗಳು: ಒಂದು ಟಿಪ್ಪಣಿ
ಸೌಂದರ್ಯ ಸ್ಪರ್ಧೆಗಳು: ಒಂದು ಟಿಪ್ಪಣಿ   

*ವಿಶ್ವದಲ್ಲಿ ನಡೆಯುವ ದೊಡ್ಡ ಮಟ್ಟದ ಸೌಂದರ್ಯ ಸ್ಪರ್ಧೆಗಳು ಯಾವುವು?
ವಿಶ್ವ ಸುಂದರಿ, ಭುವನ ಸುಂದರಿ, ಅಂತರರಾಷ್ಟ್ರೀಯ ಸುಂದರಿ, ಮಿಸ್ ಅರ್ತ್.

*ಅವು ಪ್ರಾರಂಭವಾಗಿದ್ದು ಯಾವಾಗ?
ಮೊದಲಿಗೆ ವಿಶ್ವ ಸುಂದರಿ ಸ್ಪರ್ಧೆ ಪ್ರಾರಂಭವಾಯಿತು. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಎರಿಕ್ ಮೋರ್ಲೆ 1951ರಲ್ಲಿ ಅದಕ್ಕೆ ನಾಂದಿ ಹಾಡಿದರು. ಅದಾಗಿ ಒಂದು ವರ್ಷದ ನಂತರ ಮಿಸ್ ಯೂನಿವರ್ಸ್ ಸ್ಪರ್ಧೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಶುರುವಾಯಿತು. ಪೆಸಿಫಿಕ್ ಮಿಲ್ಸ್ ಎಂಬ ಜವಳಿ ಕಂಪೆನಿಯು ಆ ಸ್ಪರ್ಧೆ ಆಯೋಜಿಸಿತ್ತು. ಮಿಸ್ ಇಂಟರ್‌ನ್ಯಾಷನಲ್ ಸ್ಪರ್ಧೆಯೂ ಮೊದಲು ನಡೆದದ್ದು ಕ್ಯಾಲಿಫೋರ್ನಿಯಾದಲ್ಲಿಯೇ; 1960ರಲ್ಲಿ. ಆಮೇಲೆ ಅದು ಟೋಕಿಯೊಗೆ ಸ್ಥಳಾಂತರಗೊಂಡಿತು. ಮಿಸ್ ಅರ್ತ್ ಫಿಲಿಪ್ಪೀನ್ಸ್‌ನಲ್ಲಿ ಶುರುವಾದ ಸ್ಪರ್ಧೆ. 2001ರಲ್ಲಿ ಅದು ಪ್ರಾರಂಭವಾಯಿತು. ಪರಿಸರ ಜಾಗೃತಿ ಮೂಡಿಸುವುದು ಆ ಸ್ಪರ್ಧೆಯ ಉದ್ದೇಶವಾಗಿತ್ತು.

*ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಅತಿ ಹೆಚ್ಚು ಕಿರೀಟಗಳನ್ನು ಗೆದ್ದಿರುವ ದೇಶ ಯಾವುದು?
ಭಾರತವು ಆರು ಸಲ ಗೆದ್ದಿದೆ. ಇತ್ತೀಚೆಗೆ ವಿಜಯಿಯಾದ ಮಾನುಷಿ ಛಿಲ್ಲರ್ ಆರನೇ ಪ್ರಶಸ್ತಿಯನ್ನು ದೇಶಕ್ಕೆ ಗೆದ್ದು ತಂದರು. ವೆಲಿಜುವೆಲಾ ಕೂಡ ಭಾರತದಷ್ಟೇ ಪ್ರಶಸ್ತಿಗಳನ್ನು ಗೆದ್ದಿದೆ. ರೀಟಾ ಫರಿಯಾ ಪೊವೆಲ್ 1966ರಲ್ಲಿ ಭಾರತಕ್ಕೆ ಮೊದಲ ವಿಶ್ವ ಸುಂದರಿ ಕಿರೀಟ ಗೆದ್ದು ತಂದರು. ಐಶ್ವರ್ಯಾ ರೈ, ಡಯಾನಾ ಹೇಡನ್, ಯುಕ್ತಾ ಮುಖಿ ಹಾಗೂ ಪ್ರಿಯಾಂಕಾ ಚೋಪ್ರಾ ಈ ಕಿರೀಟ ತೊಟ್ಟ ಭಾರತೀಯರು.

ADVERTISEMENT

ನಾಲ್ಕೂ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳನ್ನು ಒಂದೇ ವರ್ಷ ಗೆದ್ದ ಸಾಧನೆ ಬ್ರೆಜಿಲ್ ಹೆಸರಿನಲ್ಲಿದೆ. ಫಿಲಿಪ್ಪೀನ್ಸ್‌ ದೇಶ ಎಲ್ಲ ಸೌಂದರ್ಯ ಸ್ಪರ್ಧೆಗಳಿಂದ 14 ಪ್ರಶಸ್ತಿಗಳನ್ನು ಗೆದ್ದಿದೆ. ಅಷ್ಟೊಂದು ಪ್ರಶಸ್ತಿ ಬೇರೆ ಯಾವ ದೇಶಕ್ಕೂ ಸಂದಿಲ್ಲ.

*ಇದುವರೆಗೆ ಭಾರತಕ್ಕೆ ಬೇರೆ ಸೌಂದರ್ಯ ಸ್ಪರ್ಧೆಗಳಲ್ಲಿ ಎಷ್ಟು ಸಲ ಪ್ರಶಸ್ತಿ ಸಂದಿದೆ?
ಸುಷ್ಮಿತಾ ಸೇನ್ ಹಾಗೂ ಲಾರಾ ದತ್ತಾ ಇಬ್ಬರಿಗೂ ಭುವನ ಸುಂದರಿ ಪ್ರಶಸ್ತಿ ಒಲಿದಿದೆ. ನಿಕೋಲ್ ಎಸ್ಟೆಲ್ ಫರಿಯಾ 2010ರಲ್ಲಿ ‘ಮಿಸ್ ಅರ್ತ್’ ಪ್ರಶಸ್ತಿ ಗೆದ್ದರು.

*ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವವರ ಪಾತ್ರವೇನು?
ಅವರಿಗೆ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ವಿಶ್ವದ ವಿವಿಧೆಡೆ ಪ್ರಯಾಣ ಮಾಡಿ, ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಅವರ ಮುಖ್ಯ ಕೆಲಸ. ಸಮಾಜಮುಖಿ ಕಾರ್ಯಕ್ರಮಗಳನ್ನೂ ಅವರು ಕೈಗೊಳ್ಳುವರು.

*

ಮಡಗಾಸ್ಕರ್‌ನ ಲೀಮರ್ಕಾ
​ಕಾಡುಪಾಪದಂಥ ಪ್ರಾಣಿ ಲೀಮರ್ ಪ್ರಭೇದಕ್ಕೆ ಸೇರಿದ ‘ಡ್ವಾರ್ಫ್ ಲೀಮರ್’ ಸಣ್ಣ ಕೂದಲುಗಳುಳ್ಳ ಕಿವಿ ಇರುವ ಅಪರೂಪದ ಪ್ರಾಣಿ. ಮಡಗಾಸ್ಕರ್‌ನ ಪೂರ್ವದಲ್ಲಿನ ಅರಣ್ಯ ಪ್ರದೇಶದಲ್ಲಿ ಇವು ವಾಸಿಸುತ್ತವೆ. ಬರೀ 1000 ‘ಡ್ವಾರ್ಫ್ ಲೀಮರ್’ಗಳು ಈಗ ಉಳಿದಿವೆ ಎಂದು ಪ್ರಾಣಿತಜ್ಞರು ಹೇಳುತ್ತಾರೆ.

*


ಅಮ್ಮನ ಚಿತ್ರ
ಜೇಮ್ಸ್‌ ಮೆಕ್‌ನೀಲ್ ರಚಿಸಿದ ‘ವಿಸ್ಲರ್ಸ್ ಮದರ್’ ಜನಪ್ರಿಯ ಪೇಂಟಿಂಗ್. ಅದು ಕಲಾವಿದನ ತಾಯಿ ಅನ್ನಾಳನ್ನು ಬಿಂಬಿಸುತ್ತದೆ. ಕಲಾವಿದ ವಿಸ್ಲರ್‌ ಚಿತ್ರ ಬಿಡಿಸಲು ಮಾಡೆಲ್‌ ಒಬ್ಬಳನ್ನು ಒಪ್ಪಿಸಿದ್ದ. ಆದರೆ, ಅವಳು ಕೈಕೊಟ್ಟಳು. ಕೊನೆಗೆ ಅವನ ತಾಯಿಯೇ ಪೇಂಟಿಂಗ್‌ಗಾಗಿ ಪೋಸ್ ಕೊಡಲು ಮುಂದಾದಳು. ತುಂಬಾ ಹೊತ್ತು ನಿಲ್ಲುವುದು ತಾಯಿಗೆ ಕಷ್ಟವಾಗುತ್ತದೆ ಎಂದೇ ವಿಸ್ಲರ್ ಆರಾಮವಾಗಿ ಕೂರಿಸಿ, ಚಿತ್ರ ಬಿಡಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.