ADVERTISEMENT

ಹಳ್ಳಿಯ ಇಲಿ ಪೇಟೆಗೆ ಹೋಗಿತ್ತು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ಒಂದು ಹಳ್ಳಿ. ಅಲ್ಲಿ ಭೀಮಣ್ಣನೆಂಬ ಬಡ ರೈತನಿದ್ದ. ಅವನ ಆಸ್ತಿಯೆಂದರೆ ಕೇವಲ ಒಂದೆಕರೆ ಭೂಮಿ. ಕೃಷಿ ಮಾಡಿಕೊಂಡು ಸುಖವಾಗಿದ್ದ. ಹೊಲದಲ್ಲಿಯೇ ಮನೆ. ಮನೆಯಲ್ಲಿ ಎರಡೇ ಎರಡು ಕೋಣೆ. ಒಂದರಲ್ಲಿ ಕಾಳುಕಡಿಯ ಸಂಗ್ರಹ. ಇನ್ನೊಂದರಲ್ಲಿ ಹೆಂಡತಿ ಮಕ್ಕಳೊಂದಿಗೆ ಆತನ ಸಂಸಾರ. ಕಾಳೊಟ್ಟಿದ ಕೋಣೆಯಲ್ಲಿ ಒಂದು ಇಲಿಯ ಸಂಸಾರವೂ ತಿಂದುಂಡು ಸುಖವಾಗಿತ್ತು.

ಸುಗ್ಗಿಯಾಗಿತ್ತು. ಹೊಲದಲ್ಲಿ ಅಲ್ಲಲ್ಲಿ ಬಿದ್ದುಕೊಂಡಿದ್ದ ಕಾಳು ತಿನ್ನುವ ಆಸೆಯಿಂದ ಹಳ್ಳೀ ಇಲಿ ಸುತ್ತಾಡತೊಡಗಿತು. ಹೊಲದಲ್ಲಿ ಹೈವೇದಿಂದ ಒಂದು ಅಪರಿಚಿತ ಇಲಿ ಭೀಮಣ್ಣನ ಹೊಲ ಸೇರುವುದನ್ನು ಅದು ನೋಡಿತು. ಹೊಸ ಇಲಿ ಸಮೀಪದ ಪೇಟೆಯೂರಿನದಾಗಿತ್ತು. ಅದನ್ನು ಇದಿರುಗೊಳ್ಳುತ್ತ ಖುಷಿಪಟ್ಟ ಹಳ್ಳೀ ಇಲಿ ತನ್ನ ಮನೆಗೆ ಕರೆದು ತಂದಿತು. ದಣಿದು ಬಂದ ಪೇಟೆಯ ಇಲಿಗೆ ಜೋಳದ ಚೀಲದಲ್ಲಿ ತಿನ್ನಲು ಬಿಟ್ಟ ಬಳಿಕ ಕುಡಿಯಲು ನೀರು ಕೊಟ್ಟು ವಿಶ್ರಮಿಸಲು ಹೇಳಿತು.

ಎಂದೂ ತಿನ್ನದಷ್ಟು ಕಾಳು ತಿಂದು, ಎಂದೂ ಮಾಡದಷ್ಟು ನಿದ್ದೆ ಮಾಡಿ ಎರಡು ದಿನದ ಮೇಲೆ ಎದ್ದಿತು ಪೇಟೆ ಇಲಿ. ತನಗೆ ಸಿಕ್ಕ ಸುಖವನ್ನು ಮುಚ್ಚಿಕೊಂಡು ಹಳ್ಳಿಯ ಇಲಿಗೆ, `ನನಗೆ ಊಟದಲ್ಲಿ ರುಚಿ ಇಲ್ಲ, ಕಣ್ಣಿಗೆ ನಿದ್ದೆ ಇಲ್ಲ. ಪೇಟೆ ನನ್ನ ಮನೆಯ ಸುಖ ಇಲ್ಲಿ ಇಲ್ಲವೇ ಇಲ್ಲ' ಎಂದಿತು. ಹಳ್ಳೀ ಇಲಿ ಕುತೂಹಲದಿಂದ ಕೇಳಿತು `ನೀನಿರುವುದೆಲ್ಲಿ? ನಿನ್ನ ಆಹಾರವೇನು?' ಅದಕ್ಕೆ ಎದೆಯುಬ್ಬಿಸುತ್ತ ಪೇಟೆ ಇಲಿ ಹೇಳಿತು `ಓ ಅದೊಂದು ಶ್ರೀಮಂತ ರಾಜಕಾರಣಿಯ ಮನೆ. ಆ ಮನೆಯಲ್ಲಿ ಹದಿನಾರು ಕೋಣೆ. ಅಲ್ಲಿ ವಿಶಾಲವಾದ ಅಡುಗೆ ಮನೆ, ವಿಶಾಲ ಆಹಾರ ಸಂಗ್ರಹದ ನಾಲ್ಕು ಕೋಣೆ. ಅಲ್ಲಿ ತಿನ್ನಲು ಬೇಕಾದಷ್ಟು ಪದಾರ್ಥ! ಮಲಗಲು ಮೆತ್ತನೆ ಹಾಸಿಗೆ. ಅದಕ್ಕೆ ಬಾ ನನ್ನ ಜೊತೆ, ಅಲ್ಲಿ ನನ್ನ ಸುಖವನ್ನು ನೋಡು? ಅಂದಿತು. ಹಳ್ಳೀ ಇಲಿಗೆ ಎಲ್ಲಿಲ್ಲದಷ್ಟು ಆಸೆಯಾಯ್ತು. ಹೆಂಡತಿ ಮಕ್ಕಳಿಗೆ ಹೇಳಿ ಪೇಟೆ ಇಲಿಯ ಜೊತೆ ಹೊರಟುಬಿಟ್ಟಿತು.

ವಿಶಾಲವಾದ ತೋಟದಲ್ಲಿ ವಿಶಾಲವಾದ ಮನೆ. ಬಣ್ಣ ಬಣ್ಣದ ಚೆಂದದ ಮನೆ. ನಾಲ್ಕು ಕಾರು, ಹಲವಾರು ಆಳು ಕಾಳು! ಹಿತ್ತಿಲು ಬಾಗಿಲಿನಿಂದ ನೇರವಾಗಿ ಸ್ಟೋರ್ ರೂಂಗೆ ಎರಡೂ ಇಲಿಗಳ ಪ್ರವೇಶ. ಇದನ್ನೆಲ್ಲ ನೋಡುತ್ತ ತಾನು ಭೂಮಿ ಮೇಲಿದ್ದೇನೊ ಸ್ವರ್ಗದಲ್ಲಿದ್ದೇನೋ ಎಂದು ಹಳ್ಳೀ ಇಲಿ ಅಚ್ಚರಿಪಟ್ಟಿತು.

ಮಧ್ಯಾಹ್ನದ ಊಟದ ನಂತರ ಎಲ್ಲರೂ ಮಲಗಿಕೊಂಡಾಗ ಪೇಟೆಯ ಇಲಿಯು ಬಾಯಿ ತೆರೆದಿಟ್ಟ ಬೂಂದಿಲಾಡಿನ ಡಬ್ಬಿಯಲ್ಲಿ ಕುಳಿತು ಯಥೇಚ್ಛವಾಗಿ ಲಾಡು ತಿನ್ನಲು ಹೇಳಿತು. ಹಾಗೆ ಒಂದು ಕಾಳನ್ನು ತಿಂದಿತ್ತೋ ಇಲ್ಲವೋ ಮನೆಯೊಡತಿ ಸ್ಟೋರ್ ರೂಂನಲ್ಲಿ ಬಂದು ಬಾಯಿ ತೆರೆದಿಟ್ಟ ಬೂಂದಿಲಾಡಿನ ಡಬ್ಬಿಯನ್ನು ಮುಚ್ಚಲು ಹೋದಾಗ ಒಳಗಿದ್ದ ಇಲಿಯನ್ನು ಕಂಡು ಚಿಟಾರನೆ ಚೀರಿಕೊಂಡಳು.

ಕೆಲಸದಾಳು ಓಡುತ್ತ ಬಂದು ಇಲಿಯನ್ನು ಆಚೆ ಓಡಿಸುತ್ತ ಕಸಬಾರಿಗೆಯಿಂದ ನಾಲ್ಕು ಏಟು ಹಾಕಿದಾಗ ಹಳ್ಳೀ ಇಲಿ ಮೂರ್ಚೆ ಹೋಗಿ ಬಿದ್ದುಕೊಂಡಿತು. ಬಾಲ ಹಿಡಿದು ಬೇಲಿ ಆಚೆ ಆಕೆ ಚೆಲ್ಲಿದಳು. ಪೇಟೆ ಇಲಿ ಹತ್ತಿರ ಬಂದು ನೀರು ಕೊಟ್ಟು ಉಪಚರಿಸಿ ಮತ್ತೆ ಮಕ್ಕಳ ಕೋಣೆಗೆ ಕರೆದೊಯ್ಯಿತು. ಟೇಬಲ್ಲಿನ ಮೇಲಿಟ್ಟ ಲಂಚ್ ಬಾಕ್ಸ್‌ನಲ್ಲಿ ಅರ್ಧಮರ್ಧ ತಿಂದುಬಿಟ್ಟ ಪಿಜ್ಜಾ ಇತ್ತು, ಬ್ರೆಡ್ಡು ಜಾಮಿತ್ತು. ಹಳ್ಳಿ ಇಲಿಗೆ ಸಂಭ್ರಮವೋ ಸಂಭ್ರಮ! ಕಟಕಟ ಸಪ್ಪಳ ಕೇಳಿ ಒಬ್ಬ ದಾಂಡಿಗ ಹುಡುಗ ಎದ್ದು ಬಂದು ನೋಡುತ್ತ `ಅಪ್ಪಾ' ಎಂದು ಕಿರುಚಿಕೊಂಡ.

ಮನೆಯೊಡೆಯ ಹತ್ತಿರ ಬಂದು ಹಳ್ಳೀ ಇಲಿಯನ್ನು ಚಪ್ಪಲಿನಿಂದ ಕುಟ್ಟಿ ಗೇಟಿನಾಚೆ ಚೆಲ್ಲಿದ. ಬೆಳತನಕ ಹಾಗೆ ಬಿದ್ದುಕೊಂಡ ಇಲಿಗೆ ಬೆಳಗಿನ ತಂಗಾಳಿ, ಪಕ್ಷಿಗಳ ಕಲರವ ಪ್ರೀತಿಯಿಂದ ಎಬ್ಬಿಸಿದ್ದವು. ಇದುರಿಗಿದ್ದ ಗೆಳೆಯ ಸೂರ್ಯ ನಕ್ಕು ಕೇಳಿದ `ಹೇಗಿತ್ತು ಪೇಟೆಯ ಸಹವಾಸ?' ಹಳ್ಳೀ ಇಲಿ ಕಣ್ಣೀರಿಟ್ಟಿತು. ಏಳುತ್ತ, ಬೀಳುತ್ತ ತನ್ನ ಹಳ್ಳಿ ಮನೆಯನ್ನು ಸೇರಿಕೊಂಡಿತ್ತು. ನುಗ್ಗಾಗಿ ಬಂದ ಇಲಿಯನ್ನು ನೋಡುತ್ತ ಭೀಮಣ್ಣ ಅಂದ `ಎಲ್ಲಿ ಹೋಗಿತ್ತೋ ಏನೋ'. ಅವನ ಮುಖದಲ್ಲಿ ಕರುಣೆಯಿತ್ತು, ಪ್ರೀತಿಯಿತ್ತು ಅದನ್ನು ಕಂಡ ಇಲಿಯು ತನ್ನ ನೋವನ್ನೆಲ್ಲ ಮರೆತು ಬಿಟ್ಟಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.