ADVERTISEMENT

ಸಿ ವಿಭಾಗದೋಳ್

ಪ್ರಜಾವಾಣಿ ವಿಶೇಷ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಸಿ ವಿಭಾಗದೋಳ್
ಸಿ ವಿಭಾಗದೋಳ್   

ಬಾಗಿಲ ಸಂದಿಯಲ್ಲಿ ಇಣುಕಿ ನೋಡುತ್ತ ಹೋಗುವವರ, ಬರುವವರ ಬಗ್ಗೆ ಕಮೆಂಟ್ ಮಾಡುತ್ತ ಮಗ್ಗುಲಲ್ಲಿ ಕುಳಿತ ಸಚಿನ್‌ನಿಂದ ಇರಿಟೇಟ್ ಆಗುತ್ತಿದ್ದರೂ, ಅವನೊಂದಿಗೆ ಹರಟೆ ಹೊಡೆಯುತ್ತ ಕುಳಿತಿದ್ದೆ. ನಾನೊಬ್ಬನೇ ಅಲ್ಲ ಇಡೀ ಕ್ಲಾಸ್‌ರೂಂ ಹರಟೆಯಲ್ಲಿ ಮಿಂದು ಹೋಗಿತ್ತು. ಈ ಚಿತ್ರಣ ಎಲ್ಲ ಕಾಲೇಜುಗಳಲ್ಲೂ ಸಾಮಾನ್ಯವಾದದ್ದು. ಮಾತಾಡ್ರೋ ಮಾತಾಡ್ರೀ... ಅಂತ ಮಾತೇ ಮಾತು. ಕ್ಯಾಂಪಸ್‌ನಲ್ಲಿ ಗುಂಪು ಗುಂಪಾಗಿ ನಿಂತ ಹುಡುಗರು, ಮುಂದಿನ ಪಾಠದ ಬಗ್ಗೆ ಸಿದ್ಧತೆ ನಡೆಸಿರುವ ಗುರುಗಳು, ಆಡಿಯೊ, ವಿಡಿಯೊ ಹಾಲ್‌ನ ಕೀ ಹುಡುಕುತ್ತಿರುವ ಚಾಚಾ, ಹಾಸ್ಟೆಲ್‌ನಲ್ಲಿ ಮಲಗಿರುವ ಚೆನ್ನಿಗರು, ಪ್ರಿನ್ಸಿಪಾಲ್ ಕಣ್ ತಪ್ಪಿಸಿ ಹಾಸ್ಟೆಲ್‌ಗೆ ಓಡುತ್ತಿರುವ ಕನ್ನೆಯರು ವಿವಿಧತೆಯಲ್ಲಿ ಏಕತೆ ಎಂಬುದು ಈ ಎಲ್ಲ ಸಂದರ್ಭಗಳಿಂದಲೇ ಬಂದಿರಬಹುದು.

ಕಾಲೇಜಿನಲ್ಲಿ ಕ್ಲಾಸ್ ಬೋರಿಂಗ್ ಎಂದು ರೀಡಿಂಗ್‌ ರೂಂನಲ್ಲಿ ಮೆಲ್ಲಗೆ ನಿದ್ದೆಗೆ ಜಾರುವ ಹುಡುಗರು. ಇದು ನಮ್ಮ ಕಾಲೇಜಿನ ಪರಿಸ್ಥಿತಿ. ಮೊದಲೆಲ್ಲ ಹೇಗೆ ಓದಿನ ಮೇಲೆ ಆಸಕ್ತಿ ಇತ್ತೋ ಹಾಗೆಯೇ ಈಗ ಫ್ಯಾಷನ್ ಎಂಬ ಮಹಾಮಾಯೆಯ ಮೇಲೆ ಎಲ್ಲರಿಗೂ ಆಸಕ್ತಿ ಆದರೆ ಈ ಫ್ಯಾಷನ್‌ಗೆ ಕಡಿವಾಣ ಹಾಕುವ ಗಟ್ಟಿ ಸರಪಳಿಗಳಂತಹ ನಿಯಮಗಳು ನಮ್ಮ ತುಂಗಳ ಕಾಲೇಜಿನಲ್ಲಿವೆ. ಈ ನಿಯಮಗಳು ಇರುವುದು ಮುರಿಯಲು ಮಾತ್ರ ಎಂಬ ವಿದ್ಯಾರ್ಥಿಗಳ ಅನಿಸಿಕೆ ಸತ್ಯವಾಗಿಯೇ ಇದೆ.

ಈ ತುಂಗಳದ ದ್ವಿತೀಯ ಪಿ.ಯು.ಸಿಯ ‘ಸಿ’ ಸೆಕ್ಷನ್ ಎಂದರೆ ನೆನಪಾಗುವುದು ನಮ್ಮ ಕ್ಲಾಸ್ ಟೀಚರ್ ಲಕ್ಷ್ಮಣ ಸರ್. ಲಕ್ಷಣವಾಗಿಯೇ ಇದ್ದಾರೆ. ಅವರಂತಹ ಒಳ್ಳೇ ಸರ್ ಎಲ್ಲೂ ಇಲ್ಲ ಎನ್ನುವುದು ‘ಸಿ’ ಸೆಕ್ಷನ್ ವಿದ್ಯಾರ್ಥಿಗಳ ಭಾವನೆ, ಏಕೆಂದರೆ ಅಟೆಂಡೆನ್ಸ್‌ನಲ್ಲಿ ಗೈರಾಗಿದ್ದರೆ ದಂಡ ವಸೂಲಿ ಮಾಡುವ ನಿಯಮಗಳನ್ನು ಸಡಿಲಗೊಳಿಸಿದವರೆಂಬ ಕಾರಣ ಮಾತ್ರ (ಸಿ ಸೆಕ್ಷನ್‌ಗೆ ಮಾತ್ರ). ಬೇರೆ ಸೆಕ್ಷನ್‌ಗಳ ಗೆಳೆಯರಿಂದ ಕೇಳಿದ ಪ್ರಕಾರ ಕೆಲವೊಬ್ಬರು ಬಡ್ಡಿ ವಸೂಲಿಗೆ ನಿಂತ ಲೇವಾದೇವಿಗಳ ತರಹ ಎಂಬುದು ತಿಳಿದಾಗಿನಿಂದ ನಮ್ಮ ಲಕ್ಷ್ಮಣರೇ ಉತ್ತಮ ಎಂಬುದು ಅವರವರ ಭಾವ.

ADVERTISEMENT

‘ಸಿ’ ಕ್ಲಾಸ್ ಬಗ್ಗೆ ನೆನಪಾಗೋದು ಅನೇಕ ಸಂಗತಿಗಳು. ತರಗತಿಗೆ ತಡವಾಗಿ ಬಂದ ಕಾರಣ ‘ನೆಕ್ಸ್ಟ್ ಪಿರೀಡ್ ಯಾವುದು?’ ಪಕ್ಕದಲ್ಲಿದ್ದ ಚನಮಲ್ಲನನ್ನು ಕೇಳಿದೆ. ‘ಮುತ್ಯಾನ ಪಿರೀಡ್ ಐತಿ’ ಎನ್ನುವ ಮಾತಿಗೆ ಅಡ್ಡ ಬಂದ ಸಚಿನ್ ‘ಬಯೋಲಾಜಿ ಮುತ್ಯಾ’ ಹೇಳುವ ಸಮಯಕ್ಕೆ ಶಿಕ್ಷಕರು ಬಂದರು. ಅವರ ಪಾಠ ಆಧುನಿಕ ಮಕ್ಕಳಿಗೆ ಪ್ರವಚನ ಆಲಿಸುವ ಕರ್ಮಫಲ. ಮಧ್ಯದಲ್ಲಿ ಗುರುಗಳು ಆಯ್ (I) ಎಂದದ್ದೇ ತಡ ಎಲ್ಲರೂ ಬಿದ್ದು ಬಿದ್ದು ನಕ್ಕರು. ನನಗೆ ಅರ್ಥ ಆಗಲಿಲ್ಲ; ಇವರೆಲ್ಲ ಏಕೆ ನಕ್ಕರು ಎಂದು.

ತದನಂತರ ಗೊತ್ತಾಗಿದ್ದು ಒಬ್ಬಳ ಪೆಟ್ ನೇಮ್ ಆಯಿ (ಅಜ್ಜಿ) ಎಂಬುದು. ಅದು ಪಕ್ಕಾ ಹೊಂದಿಕೆಯಾಗುವ ಹೆಸರು. ಅವಳು ನೋಡಲು ಥೇಟ್ ಅಜ್ಜಿ ತರಹ ಇದ್ದಿದ್ದು ನಿಜ. ಈ ಸಡಗರ ನಡೆಯುತ್ತಿರುವಾಗ ನಿದ್ದೆಯ ಬಾಹು ಬಂಧನದಲ್ಲಿ ಆಕ್ರಮಿತಳಾದವಳನ್ನು ಎಬ್ಬಿಸಿ ಒಂದೇ ಒಂದು ಪ್ರಶ್ನೆ ಕೇಳಲು ಅವಳ ನಿದ್ದೆ ಗದ್ದೆಗೆ ಓಡಿ ಹೋಯಿತು. ಬೆಂಚಿನ ಸಂದಿಯಲ್ಲಿಟ್ಟು ಪ್ರಾಕ್ಟಿಕಲ್ ಬರೆಯುತ್ತಿರುವ ಸಚಿನ್‌ಗೆ ಆಧಾರ ಸ್ತಂಭದಂತೆ ಅದನ್ನು ಮರೆಮಾಚುತ್ತಿದ್ದ ಸೈಲೆಂಟ್ ಕಿಲ್ಲರ್ ಅಶೋಕ. ಇದರ ಮಧ್ಯೆ ಒಂದು ಹೊಸ ಸ್ಟೋರಿ. ಅದೇ ಸಚಿನ್‌ ಮತ್ತು ಜಿ.ಎಸ್.ಟಿ. ಇದು ಬರೀ ಕಣ್ಣಿನಲ್ಲೇ ಆರಂಭವಾಗಿ ಕಣ್ಣಲ್ಲೇ ಮುಕ್ತಾಯವಾಗುವ ಕಥೆ. ‘ಕಣ್ ಕಣ್ಣ ಸಲಿಗೆ...’ ಹಾಡು ಮಂಜುಗಟ್ಟಿದ ಧ್ವನಿಯಲ್ಲಿ ಕೇಳಿಬರುತ್ತಿತ್ತು. ಯಾರೆಂದು ನೋಡುವಷ್ಟರಲ್ಲಿ ಪಿರೀಡ್ ಮುಗಿದು ಮುಂದಿನ ಪ್ರವಚನದ ಸ್ವಾಮಿಗಳು ಆಗಮಿಸುವ ಹೊತ್ತು ಬಂದಿತ್ತು.

ಈಗ ಆಗಮಿಸುವವರು ಮಸ್ತಾನಿ ಅಲ್ಲಲ್ಲ... ಮಸ್ತಾನ್ ಗುರುಗಳು. ಇವರ ಒಂದು ಹವ್ಯಾಸ ಎಂದರೆ ಎಲ್ಲರಿಗೂ ಒಂದೊಂದು ಪೆಟ್‌ನೇಮ್ ಕೊಡುವುದು. ಅವರ ತರಗತಿ ಎಲ್ಲರಿಗೂ ಇಷ್ಟ. ಮಕ್ಕಳ ಮನಸ್ಸು ಅರಿತು ಪಾಠದ ಜೊತೆಗೆ ನಗೆನದಿ ಹರಿಸುವ ಚಾಣಾಕ್ಷರು. ಆದರೆ, ಆವತ್ತಿನ ತರಗತಿ ಬೋರಿಂಗ್ ಅನ್ನಿಸಿತ್ತು. ಅದಕ್ಕೆ ಕ್ಲಾಸ್ ಬಂಕ್ ಮಾಡಿ ಕಾಲೇಜಿನ ಗ್ರಂಥಾಲಯಕ್ಕೆ ಬಂದೆ. ನಮಗಿಂತ ಮೊದಲೇ ನಮ್ಮ ವರ್ಗದ ಹುಡುಗಿಯರೂ ಬಂದಿದ್ದರು. ಅವರಲ್ಲಿ ಒಂದು ಜೋಡಿ ಸಿಲ್ಲಿ-ಲಿಲ್ಲಿ ಎಂಬ ಅಡ್ಡ ಹೆಸರಿನ ಪೂನಂ-ಪದ್ಮಾ. ಯಾವತ್ತೂ ಜೋಡಿಯಾಗಿಯೇ ಇರುತ್ತಿದ್ದರು.

ಒಬ್ಬಳು ಪರೀಕ್ಷೆಯನ್ನು ಮುಗಿಸಿ ಎಕ್ಸಾಂ ಹಾಲ್‌ನಿಂದ ಹೋದರೆ ಇನ್ನೊಬ್ಬಳು ಅದೇ ವೇಳೆಗೆ ಹೊರ ಹೋಗುತ್ತಿದ್ದಳು. ಇವರು ಯಾಕಪ್ಪಾ ಇಲ್ಲಿಗೆ ಬಂದಿದ್ದಾರೆ ಎಂಬ ಸಣ್ಣ ಸಂಶಯದಲ್ಲಿ ಯೋಚನೆಗೆ ಬಂದಿದ್ದು ಮರುದಿನದ ಫಿಸಿಕ್ಸ್ ಎಕ್ಸಾಂ. ಇದೇ ‘ಸಿ’ ಸೆಕ್ಷನ್‌ನ ಒಂದು ಗುರುತು. ಮರುದಿನ ಪರೀಕ್ಷೆ ಇದ್ದರೆ ಇವತ್ತು ಬಹುತೇಕರು ಗೈರು ಹಾಜರಾಗಿರುತ್ತಿದ್ದರು. ಇದೇ ಸಮಯಕ್ಕೆ ಮೊದಲೇ ಹೇಳಿರುವ ಲಕ್ಷ್ಮಣ ಸರ್ ಅಟೆಂಡೆನ್ಸ್ ಪಡೆಯುವುದು ಜಾಮೂನಿನಲ್ಲಿ ಕರಿ ನೊಣ ಬಿದ್ದ ಹಾಗಿತ್ತು. ಗ್ರಂಥಾಲಯದಲ್ಲಿ ಹೋಗಿ ಪ್ರಜಾವಾಣಿ ಪತ್ರಿಕೆ ಪಡೆದು ತಿರುವಿ ನೋಡುವಷ್ಟರಲ್ಲಿ ಪ್ರಿನ್ಸಿಪಾಲರ ಬಂದರು. ಅವರಿಗೆ ಕ್ಲಾಸ್ ಬಂಕ್ ಮಾಡುವ ವಿದ್ಯಾರ್ಥಿಗಳನ್ನು ಕಂಡರೆ ಅವರನ್ನು ಮರಳಿ ಕ್ಲಾಸ್‌ಗೆ ಕಳಿಸುವಷ್ಟು ಪ್ರೀತಿ. ಅವರ ಮಂಗಳಾರತಿಗೆ ಕಿವಿಗೊಡದೆ ಇಡೀ ಗ್ರಂಥಾಲಯ ಖಾಲಿ ಖಾಲಿ. ನಾವೂ ಹೊರನಡೆದೆವು.

ಜೊತೆಯಲ್ಲಿದ್ದ ಸಂತೋಷ, ಮಹೇಶ ಎಲ್ಲರೂ ಪ್ರಿನ್ಸಿಪಾಲರಿಗೆ ಮನಸಿನ ಮಾತುಗಳ ಬಾಣಗಳನ್ನು ಎಸೆಯುತ್ತ ಕ್ಲಾಸ್ ಕಡೆಗೆ ಹೋಗುತ್ತಿರಬೇಕಾದರೆ ‘ಸಿ’ ಸೆಕ್ಷನ್ ಹೆಣ್ಣುಮಕ್ಕಳು ನಿಧಾನವಾಗಿ ಅವರ ಹಾಸ್ಟೆಲ್‌ಗೆ ನುಗ್ಗಿದರು.

ಪಾಪ ಬಡಪಾಯಿ ಗಂಡುಗಳು ಕಿಲೋಮೀಟರ್ ದೂರದಲ್ಲಿರುವ ಹಾಸ್ಟೆಲ್‌ಗೆ ಹೋಗೋಕೂ ಆಗದೆ, ಕ್ಲಾಸ್‌ರೂಂಗೆ ಹೋಗೋಕಾಗದೆ ಇಕ್ಕಳಿಕೆಯಲ್ಲಿ ಸಿಕ್ಕಂತಾಗಿ ಕೊನೆಗೆ ಸಿಕ್ಕ ಸಣ್ಣ ಸ್ಥಳದಲ್ಲಿ ತೂರಿಕೊಂಡಿದ್ದು ಕ್ಲಾಸ್‌ರೂಂ ಕಡೆಗೆ. ಮಸ್ತಾನ್ ಗುರುಗಳು ಆಗಲೇ ತರಗತಿಯಲ್ಲಿದ್ದರು. ಎಲ್ಲ ಆಸೆ, ಆಕಾಂಕ್ಷೆ, ನಿರಾಸೆಗಳ ಮಧ್ಯೆ ಬಾಗಿಲು ತಟ್ಟಿದೆವು. ಬಾಗಿಲು ತೆರೆಯಿತು. ಒಳಗೆ ಹೋಗಿ ಕುಳಿತೆವು. ಅವರು ಕಮ್ ಇನ್‌ಸೈಡ್ ಎಂದು ಹೇಳಿದ್ದಷ್ಟೇ ಮತ್ತೇನೂ ಹೇಳಲಿಲ್ಲ. ಬಹುಶಃ ಅವರಿಗೆ ತಿಳಿದಿರಬೇಕು ಗ್ರಂಥಾಲಯ ಮತ್ತು ಪ್ರಿನ್ಸಿಪಾಲರ ಸತ್ಯ.

ಮರುದಿನ ಫಿಸಿಕ್ಸ್ ಎಕ್ಸಾಂ. ನಾನು ಎಲ್ಲ ರೀತಿಯ ಶತಪ್ರಯತ್ನ ಮಾಡಿ ಬೆಳಿಗ್ಗೆ ತಡವಾಗಿ ಎದ್ದು ಎಕ್ಸಾಂ ಹಾಲ್‌ಗೆ ಹೋಗುವಷ್ಟರಲ್ಲಿ ಎಲ್ಲರೂ ಅವರವರ ಸ್ಥಳಗಳನ್ನು ಆಕ್ರಮಿಸಿಕೊಡಿದ್ದರು. ಇದುವರೆಗೆ ಕಂಡುಹಿಡಿಯದ ನಿಗೂಢ ಸತ್ಯ ಎಂದರೆ ನಮ್ಮ ಸಾಲಿನಲ್ಲಿ ಕುಳಿತುಕೊಳ್ಳುವ ಒಬ್ಬಳಿಂದ ಮಾತ್ರ ಎಲ್ಲರ ಸ್ಥಾನಗಳು ಪಲ್ಲಟವಾಗುತ್ತಿದ್ದವು. ಅದು ಹೇಗೆ ಎಂಬುದು ಬಹುಶಃ ನ್ಯೂಟನ್‌ಗೂ ಹೊಳೆಯದು ಏಕೆಂದರೆ ಇದು ಸಿ ಸೆಕ್ಷನ್ ಸಿಕ್ರೇಟ್. ನಾನು ತಡವಾಗಿ ಎಕ್ಸಾಂ ಹಾಲ್‌ಗೆ ಹೋದೆ. ಅಲ್ಲಿ ಕಂಡದ್ದು ಶಿವಾನಂದ ಸರ್! ಇವರ‍್ಯಾಕಪ್ಪಾ ಇಲ್ಲಿದ್ದಾರೆ ಈ ಕೊರೆಯುವ ಮನಸ್ಸಿನಲ್ಲೇ ಒಳಗೆ ಬರಬಹುದೇ? ಎಂದೆ.

ಹಿಂದಿನ ಬಾರಿಯೂ ತಡವಾಗಿ ಹೋಗಿದ್ದರಿಂದ ಅವರಿಗೆ ಸ್ವಲ್ಪ ಕೋಪ ಹೆಚ್ಚಾಗಿತ್ತು. ಬಾಗಿಲಲ್ಲೇ ನಿಲ್ಲಿಸಿ ಏನೇನೋ ಪುರಾಣ ಪ್ರವಚನ ಹೇಳಿ ಒಳಗೆ ಕಳುಹಿಸಿದರು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕ್ಲಾಸ್‌ರೂಂ ಎಂದರೆ ಸೆಂಟ್ರಲ್ ಜೈಲ್, ಎಕ್ಸಾಂ ಹಾಲ್ ಎಂದರೆ ಗೋಲಿಬಾರ್, ಡಿಸ್ಕಷನ್ ಕ್ಲಾಸ್ ಎಂದರೆ ಲಾಕಪ್ ಡೆತ್. ಎಕ್ಸಾಂ ಮುಗಿಸಿ ಹೊರಗೆ ಬಂದರೆ ನನ್ನ ಗೆಳೆಯ ನಿಂತಿದ್ದ ‘ಇಲ್ಲಿ ಯಾಕೋ’ ಎನ್ನುವ ಪ್ರಶ್ನೆಗೆ ‘ವೈರಸ್‌ನ ನೋಡಲು’ ಎಂಬ ಉತ್ತರದಿಂದ ಒಂದು ಸತ್ಯ ನನಗನ್ನಿಸಿದ್ದು ಕಾಲೇಜಿನಲ್ಲಿ ಒನ್‌ಸೈಡ್ ಲವ್ ಹೇರಳವಾಗಿವೆ ಎಂದು.

‘ವೈರಸ್ ಯಾರೋ?’ ಪ್ರಶ್ನೆಗೆ ಅವನು ತೋರಿಸಿದ. ‘ಹೆಸರು ಮ್ಯಾಚ್ ಆಗುತ್ತೆ’ ಎಂದ. ಹಿಂದಿನಿಂದ ಬಂದವನೊಬ್ಬ. ಮೂವರೂ ನಮ್ಮ ನಮ್ಮ ಕ್ಲಾಸಿನ ಕಡೆಗೆ ಮುಖ ಮಾಡಿದೆವು.

ಇದೆಲ್ಲ ‘ಸಿ’ ಸೆಕ್ಷನ್ ಮಹಿಮೆ. ಉಳಿದ ಎಲ್ಲ ವಿಭಾಗಗಳಿಗಿಂತ ಈ ಮೂರನೇ ವಿಭಾಗದಲ್ಲಿನ ಸಂಗತಿಗಳು ಬಹಳ ವಿಚಿತ್ರ ಆದರೆ ಸಚಿತ್ರ. ಒಂದು ವೇಳೆ ಕುಮಾರ ವ್ಯಾಸ ಸಿ ಸೆಕ್ಷನ್‌ಗೆ ಬಂದಿದ್ದರೆ ಅವನು ಕರ್ಣಾಟ ಭಾರತ ಕಥಾ ಮಂಜರಿ ಬರೆಯದೇ ‘ಸಿ ವಿಭಾಗ ಕಥಾ ಮಂಜರಿ’ ಎಂಬ ತಲೆಬರಹದಲ್ಲಿ ‘ತುಂಗಳದ ಅಂಗಳದೋಳ್ ಸಿ ವಿಭಾಗದೋಳ್ ಪೊಕ್ಕು ನೋಡೆ ಕಾಣದಾ ಆನಂದವಂ ಪಡೆಯುವಿರಿ’ ಎಂದು ಬರೆಯುತ್ತಿದ್ದನು.

ಎಲ್ಲಿಯೂ ಸಿಗದ ಅನೇಕ ಅನುಭವಗಳು, ರಸ ನಿಮಿಷಗಳು, ಕಹಿ ನೆನಪುಗಳು, ಸವಿ ಗಳಿಗೆಗಳ ಮಧ್ಯ ತುಂಗಳದ ‘ಸಿ’ ಸೆಕ್ಷನ್‌ಗೆ ಒಮ್ಮೆ ಭೇಟಿ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.