ADVERTISEMENT

ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

ಗಣಂಗೂರು ನಂಜೇಗೌಡ
Published 21 ಡಿಸೆಂಬರ್ 2025, 0:24 IST
Last Updated 21 ಡಿಸೆಂಬರ್ 2025, 0:24 IST
ಅಬ್ಬೆ ಡುಬಾಯೀಸ್ ಚರ್ಚ್
ಅಬ್ಬೆ ಡುಬಾಯೀಸ್ ಚರ್ಚ್   

ಚಿತ್ರ: ಗಣಂಗೂರು ನಂಜೇಗೌಡ

ಪ್ರಾಗೈತಿಹಾಸಿಕ ಕಾಲದಿಂದ 18ನೇ ಶತಮಾನದ ಅಂತ್ಯದವರೆಗಿನ ನೂರಾರು ಪಳೆಯುಳಿಕೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಶ್ರೀರಂಗಪಟ್ಟಣ ಸರ್ವಧರ್ಮ ಸಮನ್ವಯ ತಾಣ.

ಇಲ್ಲಿ ದೇವಾಲಯ, ಮಸೀದಿ, ಜೈನ ಬಸದಿ ಮಾತ್ರವಲ್ಲದೆ ಚರ್ಚ್‌ಗಳೂ ಇವೆ. ಈ ಪೈಕಿ ಇಲ್ಲಿನ ಗಂಜಾಂನಲ್ಲಿ 225 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಅಮಲೋದ್ಭವ ಮಾತೆಯ ಚರ್ಚ್ (ಅಬ್ಬೆ ಡುಬಾಯೀಸ್ ಚರ್ಚ್) ತನ್ನ ರಚನಾ ಶೈಲಿ ಮತ್ತು ಪಾಶ್ಚಾತ್ಯ ಪರಂಪರೆಯ ಕಾರಣಕ್ಕೆ ಗಮನ ಸೆಳೆಯುತ್ತದೆ.

ADVERTISEMENT

ನಾಲ್ಕನೇ ಆಂಗ್ಲೋ–ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ ಬ್ರಿಟಿಷರ ಗುಂಡಿಗೆ ಬಲಿಯಾದ ಮರು ವರ್ಷ, ಅಂದರೆ 1800 ರಲ್ಲಿ ಪಾರಿಸ್ ಮಿಷನರಿ (ಎಂಇಪಿ)ಗೆ ಸೇರಿದ ರೋಮನ್‌ ಕ್ಯಾಥೊಲಿಕ್‌ ಪಂಥದ ಪಾದ್ರಿ ಅಬ್ಬೆ ಡುಬಾಯೀಸ್ ಈ ಚರ್ಚ್‌ನ ಸ್ಥಾಪಕರು. ಹೆಂಚಿನಮನೆಯಲ್ಲಿ ಆರಂಭವಾದ ಈ ಚರ್ಚ್ ಕಾಲಾನುಕಾಲಕ್ಕೆ ತನ್ನ ರೂಪವನ್ನು ಬದಲಿಸಿಕೊಂಡಿದೆ.

ಇಂಗ್ಲಿಷ್ ಅಕ್ಷರದ ‘ಟಿ’ ಆಕಾರದಲ್ಲಿರುವ ಫ್ರೆಂಚ್‌ ವಾಸ್ತುಶೈಲಿಯ, ಭಾಗಶಃ ಗ್ರೀಕ್‌ ಶೈಲಿಯ ಲಕ್ಷಣಗಳನ್ನೂ ಹೊಂದಿರುವ ಈ ಚರ್ಚ್‌ನ ಒಳಭಾಗದಲ್ಲಿ ಮೂರು ಪೀಠಗಳಿವೆ. ಮಧ್ಯಭಾಗದಲ್ಲಿರುವ ದೊಡ್ಡ ಪೀಠ ಯೇಸು ಕ್ರಿಸ್ತನನ್ನು ಶಿಲುಬೆ ಏರಿಸುವ ಸನ್ನಿವೇಶವನ್ನು ಬಿಂಬಿಸುತ್ತದೆ. ಮರದಿಂದ ಕೆತ್ತಿದ ತ್ರಿಭುಜಾಕೃತಿಯ ಗೋಪುರದ ಮಧ್ಯೆ ಯೇಸು ಕ್ರಿಸ್ತನ ಪ್ರತಿಮೆ ಇದ್ದು, ಅದರ ತುತ್ತ ತುದಿಯಲ್ಲಿ ಮಾತೆ ಮೇರಿಯ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಈ ಶಿಲುಬೆಯ ಎಡ ಪಾರ್ಶ್ವದಲ್ಲಿ ಮಾತೆ ಮೇರಿಯ ಮೂರ್ತಿ ಹಾಗೂ ಬಲ ಭಾಗದಲ್ಲಿ ಬಾಲ ಯೇಸುವನ್ನು ಹಿಡಿದಿರುವ ಜೋಸೆಫರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ರಥದ ಮಾದರಿಯಲ್ಲಿರುವ ಈ ಪೀಠ ಕಲಾತ್ಮಕವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ.

ಸುಮಾರು 150 ಮಂದಿ ಕುಳಿತು ಪ್ರಾರ್ಥನೆ ಮಾಡಬಹುದಾದ ಸಭಾಂಗಣಕ್ಕೆ ಮೂರು ದ್ವಾರಗಳಿದ್ದು ಇವು ಕೂಡ ತ್ರಿಭುಜಾಕೃತಿಯಲ್ಲಿವೆ. ಪೂರ್ವಾಭಿಮುಖವಾಗಿರುವ ಚರ್ಚ್‌ನ ಒಳಾವರಣದ ಬಲ ಭಾಗದಲ್ಲಿ ಪಾದ್ರಿ ಅಬ್ಬೆ ಡುಬಾಯೀಸ್ ಧರಿಸುತ್ತಿದ್ದ ಬಟ್ಟೆಗಳು, ನಂತರದ ವರ್ಷಗಳಲ್ಲಿ ಬಂದ ಪಾದ್ರಿಗಳು ಬಳಸುತ್ತಿದ್ದ ಗಡಿಯಾರ ಇತರ ಪರಿಕರಗಳನ್ನು ಸಂರಕ್ಷಿಸಲಾಗಿದೆ.

ಹದಿನಾಲ್ಕು ಪ್ರಸಂಗಗಳು

ಚರ್ಚ್‌ನ ಸಭಾಂಗಣದ ಗೋಡೆಗಳ ಮೇಲೆ ‘ಕ್ರಿಸ್ತನ ಹಾದಿ’ ಪ್ರಸಂಗವನ್ನು ಬಿಂಬಿಸುವ ಹದಿನಾಲ್ಕು ಚಿತ್ರಗಳು ಗಮನ ಸೆಳೆಯುತ್ತವೆ. ಜೆರುಸಲೇಂನಲ್ಲಿ ರೋಮ್ ಚಕ್ರವರ್ತಿಯ ಪ್ರತಿನಿಧಿಯಾಗಿದ್ದ ಪಿಲಾತನು ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸುವಂತೆ ತೀರ್ಪು ನೀಡುವುದು. ಯೇಸುವಿಗೆ ಶಿಲುಬೆ ಹೊರಿಸುವುದು. ಕ್ರಿಸ್ತನು ಮೊದಲ ಬಾರಿ ಬೀಳುವುದು. ತಾಯಿ ಮೇರಿಯನ್ನು ಸಂಧಿಸುವುದು. ಸಿರೇನ್ಯಾದ ಸಿಮೋನನು ಶಿಲುಬೆ ಹೊರಲು ಸಹಾಯ ಮಾಡುವುದು. ವೆರೊನಿಕಾ ಎಂಬ ಮಹಿಳೆ ಯೇಸುವಿನ ಮುಖವನ್ನು ಒರೆಸುವುದು. ಎರಡನೇ ಬಾರಿ ನೆಲಕ್ಕೆ ಬೀಳುವುದು. ಜೆರುಸಲೇಂನ ಮಹಿಳೆಯರು ಮರುಗುತ್ತಾ ರೋದಿಸುವುದು. ಯೇಸು ಮೂರನೇ ಸಾರಿ ನೆಲಕ್ಕೆ ಬೀಳುವುದು. ಬಟ್ಟೆಗಳನ್ನು ಕಳಚಿ ನಗ್ನಗೊಳಿಸುವುದು. ಯೇಸು ಕ್ರಿಸ್ತನನ್ನು ಶಿಲುಬೆಗೆ ಜಡಿಯುವುದು. ಶಿಲುಬೆಯಲ್ಲಿ ಪ್ರಾಣ ಬಿಡುವುದು. ಶಿಲುಬೆಯಿಂದ ಇಳಿಸುವುದು ಮತ್ತು ಶರೀರವನ್ನು ಸಮಾಧಿ ಮಾಡುವ ಪ್ರಸಂಗಗಳನ್ನು ಈ ಹದಿನಾಲ್ಕು ಚಿತ್ರಗಳು ಕ್ರಮಾನುಸಾರ ವಿವರಿಸುತ್ತವೆ.

ಚರ್ಚ್‌ನ ಮುಂದೆ, ಬಲ ಭಾಗದಲ್ಲಿ ಅಬ್ಬೆ ಡುಬಾಯೀಸ್ ಕಾಲದ ಗಂಟೆ ಗೋಪುರವಿದೆ. ಸುಮಾರು 25 ಅಡಿ ಎತ್ತರದ ಈ ಗೋಪುರ ಮೂರು ಭಾಗಗಳನ್ನು ಹೊಂದಿದ್ದು, ತುದಿಯಲ್ಲಿ ‘ಪವಿತ್ರ ಕ್ರಾಸ್’ ನಿಲ್ಲಿಸಲಾಗಿದೆ. ಅದರ ಕೆಳಗೆ ಫ್ರಾನ್ಸ್‌ನಿಂದ ತಂದಿರುವ ವಿಶೇಷ ರಿಂಗಣ ಧ್ವನಿಸುವ ಲೋಹದ ಗಂಟೆಯನ್ನು ಇರಿಸಲಾಗಿದೆ. ಗೋಪುರದ ಕೆಳ ಮಧ್ಯ ಭಾಗದಲ್ಲಿ ಆಳೆತ್ತರದ ಕ್ರಾಸ್ ನಿರ್ಮಿಸಿದ್ದು, ಅದರಲ್ಲಿ ಈ ಚರ್ಚ್ ಸ್ಥಾಪನೆಯಾದ ವರ್ಷ (ಕ್ರಿ.ಶ.1800)ವನ್ನು ಕೆತ್ತಲಾಗಿದೆ. ಈ ಪಟ್ಟಣದಲ್ಲಿ ನೆಲೆಸಿದ್ದ ಕ್ರೈಸ್ತರಿಗೆ ಪ್ರಾರ್ಥನೆಯ ಸಮಯವನ್ನು ನೆನಪಿಸಲು ಈ ಗಂಟೆಯನ್ನು ಬಾರಿಸಲಾಗುತ್ತಿತ್ತು ಎಂದು ಚರ್ಚ್‌ನ ಪಾದ್ರಿ ಸಗಾಯ್ ಪುಷ್ಪರಾಜ್ ಹೇಳುತ್ತಾರೆ.

ಚರ್ಚ್‌ನ ಒಳಭಾಗ 

ದೊಡ್ಡ ಸ್ವಾಮಿಯೋರು

ಫ್ರಾನ್ಸ್‌ ಮೂಲದ ರೋಮನ್‌ ಕೆಥೋಲಿಕ್‌ ಕ್ರೈಸ್ತ ಧರ್ಮ ಪ್ರಚಾರಕ ಅಬ್ಬೆ ಡುಬಾಯೀಸ್ ಕ್ರಿ.ಶ.1792ರಲ್ಲಿ ಪಾಂಡಿಚೆರಿ ಮಿಷನ್‌ಗೆ ಬಂದವರು. ಅಂದಿನ ಬ್ರಿಟಿಷ್‌ ಭಾರತದ ಗವರ್ನರ್‌ ಜನರಲ್‌ ಮಾರ್ಕಸ್ ವೆಲ್ಲೆಸ್ಲಿ ಅವರ ಸೂಚನೆಯಂತೆ, ಶ್ರೀರಂಗಪಟ್ಟಣ ಪತನದ ಬಳಿಕವೂ ಇಲ್ಲೇ ಉಳಿದಿದ್ದ ಯೂರೋಪಿಯನ್ನರ ಧಾರ್ಮಿಕ ಆಚರಣೆಗೆ ಸಹಕರಿಸಲು ಮತ್ತು ಧರ್ಮ ಬೋಧನೆ ಉದ್ದೇಶದಿಂದ ಕ್ರಿ.ಶ.1800ರಲ್ಲಿ ಗಂಜಾಂಗೆ ಬಂದರು. ಫ್ರೆಂಚ್ ಭಾಷಿಕರಾದ ಡುಬಾಯೀಸ್‌ ಕೆಲವೇ ದಿನಗಳಲ್ಲಿ ಕನ್ನಡ ಕಲಿತು ಸ್ಥಳೀಯರ ಜತೆ ಒಡನಾಟ ಬೆಳೆಸಿಕೊಂಡರು. ಪರಂಗಿ ಜನರನ್ನು ಇಲ್ಲಿನ ಜನ ಅನುಮಾನದಿಂದ ನೋಡುತ್ತಿದ್ದುದನ್ನು ಮನಗಂಡು ಹಿಂದೂ ಸನ್ಯಾಸಿಯಂತೆ ಬಟ್ಟೆ ಧರಿಸಿ ಓಡಾಡಲಾರಂಭಿಸಿದರು. ಜನರ ವಿಶ್ವಾಸ ಗಳಿಸಲು ತಾವು ಸ್ಥಾಪಿಸಿದ ಚರ್ಚ್‌ಗೆ ‘ಅಮಲೋದ್ಭವ ಮಾತೆ ದೇವಾಲಯ’ ಎಂದು ಹೆಸರಿಟ್ಟರು.

ಪಾದ್ರಿ ಅಬ್ಬೆ ಡುಬಾಯೀಸ್

ಸಿಡುಬು, ಪ್ಲೇಗ್, ಕಾಲರಾದಂತಹ ರೋಗಗಳಿಗೆ ಆಧುನಿಕ ಲಸಿಕೆ ಪರಿಚಯಿಸಿ ಸಾಕಷ್ಟು ಮಂದಿಯನ್ನು ಗುಣಪಡಿಸಿದರು. ಮೈಸೂರು ರಾಜ ವಂಶಸ್ಥರು ಸೇರಿದಂತೆ 18 ತಿಂಗಳ ಅವಧಿಯಲ್ಲಿ 25,432 ಮಂದಿಗೆ ಲಸಿಕೆ ಹಾಕಿದ್ದಾಗಿ ಅವರೇ ಬರೆದಿಟ್ಟಿದ್ದಾರೆ.

ಅನಕ್ಷರಸ್ಥರ ಸಂಖ್ಯೆ ದೊಡ್ಡದಿದ್ದ ಕಾಲದಲ್ಲಿ ಗಂಜಾಂನಲ್ಲಿ ಶಾಲೆ ತೆರೆದು ಮಕ್ಕಳಿಗೆ ಶಿಕ್ಷಣ ನೀಡಲು ಶುರು ಮಾಡಿದರು. ಡುಬಾಯೀಸ್ ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ಮನಸೋತ ಸ್ಥಳೀಯರು ಅವರನ್ನು ‘ದೊಡ್ಡ ಸ್ವಾಮಿಯೋರು’ ಎಂದೇ ಕರೆಯಲಾರಂಭಿಸಿದರು. 21 ವರ್ಷ ಗಂಜಾಂನಲ್ಲಿದ್ದ ಈ ಕ್ರೈಸ್ತ ಸನ್ಯಾಸಿ ಆರೋಗ್ಯ, ಶಿಕ್ಷಣ, ಮೌಢ್ಯಾಚರಣೆ ಬಗ್ಗೆ ಜಾಗೃತಿ ಮೂಡಿಸಿ ಸಾರ್ಥಕ ಸೇವೆ ಸಲ್ಲಿಸಿದರು. ಫ್ರೆಂಚ್ ಭಾಷೆಯಲ್ಲಿ ‘ಹಿಂದೂ ಮ್ಯಾನರ್ಸ್‌, ಕಸ್ಟಮ್ಸ್ ಆ್ಯಂಡ್ ಸೆರಮನೀಸ್’ ಹೆಸರಿನ ಕೃತಿಯನ್ನೂ ರಚಿಸಿದ್ದಾರೆ. ಇಲ್ಲಿಂದ ಫ್ರಾನ್ಸ್‌ಗೆ ಮರಳಿದ ಎರಡು ವರ್ಷಗಳ ಬಳಿಕ, 1823ರಲ್ಲಿ ಅವರು ನಿಧನರಾದರು.

ಹಲವು ವರ್ಷಗಳ ಹಿಂದೆ ಹೀಗಿತ್ತು ಚರ್ಚ್‌

ಮುಖ್ಯ ಆಚರಣೆಗಳು

ಅಮಲೋದ್ಭವ ಮಾತೆ ಚರ್ಚ್‌ನಲ್ಲಿ ಮಾರ್ಚ್‌ ತಿಂಗಳಲ್ಲಿ ಗಂಜಾಂ ಮತ್ತು ಆಸುಪಾಸಿನ ಗ್ರಾಮಗಳ ರೋಮನ್‌ ಕೆಥೊಲಿಕ್‌ ಕ್ರೈಸ್ತರು ಉಪವಾಸ ವ್ರತ ಆಚರಿಸುತ್ತಾರೆ. ಇದೇ ಮಾಸದ ಶುಭ ಗುರುವಾರ ಯೇಸು ಕ್ರಿಸ್ತನ ‘ಕಡೇ ಭೋಜನ’ (ದಿ ಲಾಸ್ಟ್‌ ಸಪ್ಪರ್)ದ ಸ್ಮರಣೆ ನಡೆಯುತ್ತದೆ. ಅದು ಯೇಸು ಕ್ರಿಸ್ತನು ತನ್ನ ಶರೀರವನ್ನು ರೊಟ್ಟಿಯ ರೂಪದಲ್ಲಿ ಹಂಚಿದ ದಿನವೆಂದು ಕ್ರೈಸ್ತರು ನಂಬುತ್ತಾರೆ. ಶುಭ ಶುಕ್ರವಾರ ‘ಯೇಸುವಿನ ಪಾಡು ಮತ್ತು ಮರಣ ಪ್ರಸಂಗ’ವನ್ನು ನೆನೆಯಲಾಗುತ್ತದೆ. ಅದರ ಮುಂದಿನ ಭಾನುವಾರ ಪುನುರುತ್ಥಾನದ ಸ್ಮರಣೆ ನಡೆಯುತ್ತದೆ.

ಡಿ.8ರಂದು ಚರ್ಚ್ ಸ್ಥಾಪನೆಯ ನೆನಪಿಗೆ ‘ಅಮಲೋದ್ಭವ ಮಾತೆಯ ಹಬ್ಬ’ದ ಆಚರಣೆ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾತೆ ಮೇರಿಯ ಉತ್ಸವ ನಡೆಯುತ್ತದೆ. ಡಿ.24ರ ರಾತ್ರಿ ಮತ್ತು ಡಿ.25ರ ಬೆಳಿಗ್ಗೆ ನಡೆಯುವ ಕ್ರಿಸ್‌ಮಸ್‌ ಆಚರಣೆಯಲ್ಲಿ ಕ್ರೈಸ್ತರು ಮಾತ್ರವಲ್ಲದೆ ಹಿಂದೂ ಧರ್ಮೀಯರೂ ಪಾಲ್ಗೊಂಡು ಮೊಂಬತ್ತಿ ಬೆಳಗುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.