ADVERTISEMENT

ಅಲೋಕ- ದಿ ಪೀಸ್‌ ಡಾಗ್‌: ಸೆಲೆಬ್ರಿಟಿ ‘ಅಲೋಕ’ನ ಶಾಂತಿ ನಡಿಗೆ..

‘ಅಲೋಕ’ ಈಗ ವಿಶ್ವದಲ್ಲಿ ದೊಡ್ಡ ಸೆಲೆಬ್ರಿಟಿ!

ಸುಕೃತ ಎಸ್.
Published 25 ಜನವರಿ 2026, 0:07 IST
Last Updated 25 ಜನವರಿ 2026, 0:07 IST
<div class="paragraphs"><p>ಅಲೋಕ</p></div>

ಅಲೋಕ

   

‘ಅಲೋಕ’ ಈಗ ವಿಶ್ವದಲ್ಲಿ ದೊಡ್ಡ ಸೆಲೆಬ್ರಿಟಿ!

ಈತನ ಆಟ, ನಡಿಗೆಯ ರೀಲ್ಸ್‌ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ಇವನಿಗಾಗಿಯೇ ಫೇಸ್‌ಬುಕ್‌ನಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಪೇಜ್‌ಗಳಿವೆ. ಬಿಕ್ಕುಗಳು ನಡೆಯುವ ರಸ್ತೆಯ ಬದಿಯಲ್ಲಿ ಜನರು ‘ಅಲೋಕ’ನಿಗಾಗಿ ಕಾಯ್ದು ಕುಳಿತುಕೊಳ್ಳುತ್ತಾರೆ. ಬಿಕ್ಕುಗಳಿಗೆ ಹೂವು ನೀಡಿ ಸ್ವಾಗತಿಸಿದರೆ, ಈತನಿಗೆ ಟ್ರೀಟ್‌ (ಆಹಾರ) ನೀಡುತ್ತಾರೆ. ಪುಟಾಣಿಗಳಂತೂ ಈತನೊಂದಿಗೆ ಆಟವಾಡಲು ಕಾತರರಾಗಿರುತ್ತಾರೆ. ಇವನಿಗೂ ಹಾಗೆಯೇ, ಮಕ್ಕಳೆಂದರೆ ಅಚ್ಚುಮೆಚ್ಚು. ಪುಟಾಣಿಗಳು ಇವನ ಮೂತಿ ತಿಕ್ಕಿ, ಕುತ್ತಿಗೆ ಹಿಡಿದು ಆಲಂಗಿಸಿ ಮುದ್ದಿಸಿ, ಚುಂಬಿಸುತ್ತಾರೆ. ಇವನು ಮುದ್ದು ಮಾಡಿಸಿಕೊಳ್ಳುತ್ತಾ, ನಗುತ್ತಾ ಕುಳಿತಿರುತ್ತಾನೆ. ಫೋಟೊಗೆ ಪೋಸು ಕೊಡುವುದು ಎಂದರೆ ಎಲ್ಲಿಲ್ಲದ ಖುಷಿ. ದಾರಿಯಲ್ಲಿ ಸಿಗುವ ಎಲ್ಲರೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾ, ವಿಡಿಯೊ ಮಾಡುವಾಗ ಮೊಬೈಲ್‌ ಮೂಸಿ ನೋಡುತ್ತಾ, ಮುಂದೆ ಹೋಗುವುದು ಈ ತುಂಟನ ಚಾಳಿ.

ADVERTISEMENT

ಅಂದಹಾಗೆ ಈ ‘ಅಲೋಕ’ ಯಾರು ಅಂದುಕೊಂಡಿದ್ದೀರಿ? ಬಿಕ್ಕುಗಳ ಜೊತೆ ವಿಶ್ವಶಾಂತಿಗಾಗಿ ಹೆಜ್ಜೆ ಹಾಕುತ್ತಿರುವ ಭಾರತದ ಬೀದಿನಾಯಿ!

ಬುದ್ಧ ಹುಟ್ಟಿದ ದಿನ ಮತ್ತು ಆತನಿಗೆ ಜ್ಞಾನೋದಯವಾದ ದಿನವನ್ನು ರಾಷ್ಟ್ರೀಯ ರಜೆ ದಿನವನ್ನಾಗಿ ಘೋಷಿಸಬೇಕು ಎನ್ನುವುದು ಪನ್ನಕರ ಬಿಕ್ಕು ಅವರ ಬೇಡಿಕೆ. ಇದಕ್ಕಾಗಿ ತಮ್ಮ ನೇತೃತ್ವದಲ್ಲಿ ಹತ್ತೊಂಬತ್ತು ಬಿಕ್ಕುಗಳನ್ನು ಸೇರಿಸಿಕೊಂಡು ಅಕ್ಟೋಬರ್‌ 26, 2025 ರಿಂದ ಅಮೆರಿಕದಲ್ಲಿ ನಡಿಗೆ ಆರಂಭಿಸಿದ್ದಾರೆ. ಟೆಕ್ಸಾಸ್‌ನಿಂದ ಶುರುವಾಗಿ ಹನ್ನೆರಡು ರಾಜ್ಯಗಳನ್ನು ದಾಟಿ ಫೆಬ್ರುವರಿ, 2026 ರ ಮಧ್ಯದಲ್ಲಿ ವಾಷಿಂಗ್ಟನ್‌ ಸೇರುವುದು ಇವರ ಯೋಜನೆ. ಒಟ್ಟು 3,700 ಕಿಲೋಮೀಟರ್‌ಗಳು ನಡೆಯುವುದು ಇವರ ಗುರಿ. ಇವರೊಂದಿಗೆ ‘ಅಲೋಕ’ನೂ ಇದ್ದಾನೆ.

ಅಮೆರಿಕ ತಲುಪಿದ ಮೇಲೆ ‘ಅಲೋಕ’ ‘ದಿ ಪೀಸ್‌ ಡಾಗ್‌’ ಎಂದು ಮರುನಾಮಕರಣಗೊಂಡಿದ್ದಾನೆ. ಹೆಸರಷ್ಟೇ ಬದಲು, ಉಳಿದೆಲ್ಲವೂ ಅವೇ ಗುಣಗಳು.

‘ಅಲೋಕ’ ಬಿಕ್ಕುಗಳನ್ನು ಸೇರಿಕೊಂಡಿದ್ದು ಹೇಗೆ ಎನ್ನುವುದನ್ನು ಹೇಳಿಬಿಡುತ್ತೇನೆ.

ಅದು 2022. ಪನ್ನಕರ, ಕೆಲವು ಬಿಕ್ಕುಗಳೊಂದಿಗೆ ಜಗತ್ತಿನ ಶಾಂತಿಗಾಗಿ ಭಾರತದಲ್ಲಿ ನಡಿಗೆ ಆರಂಭಿಸಿದ್ದರು. ಭಾರತದಲ್ಲಿ ಅವರು ಸುಮಾರು 112 ದಿನಗಳ ನಡಿಗೆಯನ್ನು ಪೂರ್ಣಗೊಳಿಸಿದ್ದರು. ಇಲ್ಲಿಂದ ನೇಪಾಳಕ್ಕೆ ತೆರಳುವುದು ಅವರ ಯೋಜನೆ. ಪಶ್ಚಿಮ ಬಂಗಾಳದ ಕೋಲ್ಕತ್ತದ ವಿಮಾನ ನಿಲ್ದಾಣದ ಬಳಿ ಅವರು ನಡೆಯುತ್ತಿದ್ದರು. ಅಲ್ಲೇ ಬೀದಿಬದಿ ಮಲಗಿದ್ದ ನಾಯಿಮರಿಯೊಂದು ಅವರನ್ನು ಹಿಂಬಾಲಿಸಿತು. ಬಿಕ್ಕುಗಳಿಗೆ ಇದರಲ್ಲಿ ವಿಶೇಷವೇನೂ ಕಾಣಿಸಲಿಲ್ಲ. ಅವರು ನಡಿಗೆ ಮುಂದುವರಿಸಿದ್ದರು. ಅವರ ಜೊತೆಗೂಡಿದ್ದ ನಾಯಿಮರಿಯೊಂದಿಗೆ ಇನ್ನೂ ಕೆಲವು ನಾಯಿಗಳು ಜೊತೆಯಾಗಿದ್ದವು. ಆದರೆ, ಅವುಗಳು ಹೆಚ್ಚು ದೂರ ಬರಲಿಲ್ಲ. ಆದರೆ, ಈ ನಾಯಿಮರಿ ಮಾತ್ರ ಅವರನ್ನು ಬಿಡಲಿಲ್ಲ.

ಪನ್ನಕರ ಅವರು ಇದನ್ನೆಲ್ಲ ತುಂಬಾ ಆಪ್ತವಾಗಿ ವಿವರಿಸುತ್ತಾರೆ: ‘ಇವನು ಯಾಕೋ ನಮ್ಮನ್ನು ಬಿಡಲೇ ಇಲ್ಲ. ನೇಪಾಳದವರೆಗೂ ನಮ್ಮ ಜೊತೆಗೇ ನಡೆದ. ಮಧ್ಯೆ ಇವನಿಗೆ ಆರೋಗ್ಯದಲ್ಲಿ ಏರುಪೇರಾಯಿತು. ನಾನು ಇವನನ್ನು ಅಪ್ಪಿಕೊಂಡೇ ಆರೈಕೆ ಮಾಡಿದೆ. ಕೆಲವೇ ದಿನಗಳಲ್ಲಿ ಸರಿಹೋದ. ಆಮೇಲೆ ಕಾರು ಅಪಘಾತವಾಯಿತು. ಆಗಲೂ ಇವನ ಆರೈಕೆ ಮಾಡಿದೆ’.

‘ಬರು ಬರುತ್ತಾ ಇವನು ನಮಗೆ ನಾಯಕನಾದ. ನಮ್ಮ ಚಾಲನಾಶಕ್ತಿಯಾದ. ನಡೆದು ನಡೆದು ನಮಗೆ ಬೇಸರವಾದರೆ, ಇವನೇ ನಮ್ಮನ್ನು ಎಳೆದು ಮುನ್ನಡೆಸಿದ. ಅದಕ್ಕೆ ಇವನಿಗೆ ‘ಅಲೋಕ’ ಎಂದು ಹೆಸರಿಟ್ಟೆ. ‘ಅಲೋಕ’ ಎಂದರೆ, ಪ್ರಕಾಶ ಅಥವಾ ಬೆಳಕು ಎಂಬೆಲ್ಲಾ ಅರ್ಥಗಳಿವೆ. ಈತ ನಮ್ಮ ಆತ್ಮದ ಬೆಳಕು. ಇವನ ಹಣೆಯ ಮೇಲೊಂದು ಹೃದಯದ ಚಿತ್ರವಿದೆ; ಸೂಕ್ಷ್ಮವಾಗಿ ಗಮನಿಸಿ. ಮಮತೆಯ, ಪ್ರೀತಿಯ ಪ್ರತಿರೂಪ ಇವನು’ ಎನ್ನುವುದು ಪನ್ನಕರ ಅವರ ಕರುಣೆಯ ಮಾತು.

ಬಿಕ್ಕುಗಳ ನಡಿಗೆ ಮುಕ್ತಾಯವಾಯಿತು. ಆದರೆ, ಅವರಿಗೆ ಅಲೋಕನನ್ನು ಬಿಡಲು ಮನಸ್ಸಾಗಲಿಲ್ಲ. ಇವನು ಅವರನ್ನು ಬಿಡಲಿಲ್ಲ ಎನ್ನುವುದೇ ಸರಿ ಅನಿಸುತ್ತದೆ. ಬಿಕ್ಕುಗಳು ಅಮೆರಿಕದವರು. ಇವನನ್ನು ಅಲ್ಲಿಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದರು. ಅದಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡರು ಮತ್ತು ಇವನನ್ನು ಕರೆದುಕೊಂಡು ಹೋದರು.

ಅಲ್ಪವಿರಾಮ...

ಭಾರತದಲ್ಲಿ ಕಾರು ಅಪಘಾತವಾಗಿದ್ದರಿಂದ ಇವನ ಕಾಲಿಗೆ ಗಂಭೀರವಾದ ಗಾಯವೇ ಆಗಿತ್ತು. ಆದರೆ, ಇದಕ್ಕೆ ಭಾರತದಲ್ಲಿ ಚಿಕಿತ್ಸೆ ಕೊಡಿಸಲಾಗಲಿಲ್ಲ. ಗಾಯ ಸಂಪೂರ್ಣ ವಾಸಿ ಆಗಿರಲಿಲ್ಲ. ಅಮೆರಿಕಕ್ಕೆ ಬಂದ ಮೇಲೆ ಇಲ್ಲಿಯೂ ನಡಿಗೆ ಆರಂಭವಾಯಿತು. ಆದರೆ, ಕೆಲವೇ ದಿನಗಳಲ್ಲಿ ಇವನಿಗೆ ನಡಿಗೆಗೆ ತೊಂದರೆ ಕಾಣಿಸಿಕೊಂಡಿತು. ಅದಕ್ಕಾಗಿ ಬಿಕ್ಕು ಇವನಿಗಾಗಿಯೇ ‘ಕ್ಯಾರವಾನ್‌’ (ಬಸ್‌ ರೀತಿಯ ವ್ಯಾನ್‌ನಂತಿರುತ್ತದೆ. ಇಲ್ಲಿ ಮನೆಯೊಂದರಲ್ಲಿ ಇರುವ ಎಲ್ಲ ವ್ಯವಸ್ಥೆಯೂ ಇರುತ್ತದೆ) ತರಿಸಿದರು. ದಿನದಲ್ಲಿ ಸ್ಪಲ್ಪ ಹೊತ್ತು ಮಾತ್ರವೇ ಇವನು ನಡೆಯುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.

ಆದರೆ, ಅಲೋಕನಿಗೆ ಯಾವ ಅಂಕೆ. ಇವನಿಗೆ ನಡಿಗೆಯೇ ಜೀವಂತಿಕೆ. ಬಿಕ್ಕುಗಳ ಮಾತು ಕೇಳಲಿಲ್ಲ. ಅವರೊಡನೆ ಮತ್ತೆ ರಸ್ತೆಗಿಳಿದ. ಇದು ಆಗು ಹೋಗುವ ಮಾತಲ್ಲ ಎಂದು ಇವನನ್ನು ಬಿಕ್ಕುಗಳು ಪಶುಚಿಕಿತ್ಸಾ ಆಸ್ಪತ್ರೆಗೆ ಸೇರಿಸಿದರು. ಈಗ ಇವನಿಗೆ ಹಿಂದಿನ ಒಂದು ಕಾಲಿಗೆ ಶಸ್ತ್ರಚಿಕಿತ್ಸೆಯಾಗಿದೆ. ಆರಾಮವಾಗಿ ಇದ್ದಾನೆ. ದಿನದಲ್ಲಿ ಇವನು ಹತ್ತು ನಿಮಿಷ ನಡೆಯಬಹುದಷ್ಟೆ.

ಇವನಿಗೆ ಬಿಕ್ಕುಗಳನ್ನು ಬಿಟ್ಟು ಇರುವುದಕ್ಕೆ ಇಷ್ಟವಿಲ್ಲ. ಅವರೊಂದಿಗೆ ಇರುವಷ್ಟು ಹೊತ್ತು ಆಟವಾಡಿ, ಓಡಾಡಿಕೊಂಡು ಇರುತ್ತಾನೆ. ಆಮೇಲೆ ಮಲಗುವುದು ಇದ್ದೇ ಇದೆ. ಮಾತ್ರೆಗಳನ್ನು ತಿನ್ನಲೂ ಇವನು ರಂಪ ಮಾಡುವುದಿಲ್ಲ ಎನ್ನುತ್ತಾರೆ ವೈದ್ಯರು.

ಜಗತ್ತಿನಾದ್ಯಂತ ಇವನಿಗೆ ಅಭಿಮಾನಿಗಳಿದ್ದಾರೆ. ಬಿಕ್ಕುಗಳೊಂದಿಗೆ ಈತ ನಡೆಯುತ್ತಿದ್ದ. ಆದರೆ, ಈಗ ಇವನ ಹಿಂದೆ ನೂರಾರು ಜನರು ನಡೆಯುತ್ತಾರೆ. ಮುಂದಿನ ಊರು ದಾಟಿಸಿ ಬರುತ್ತಾರೆ. ಅಲೋಕನಿಗಾಗಿ ಜನರು ಕಾಯುತ್ತಾ ರಸ್ತೆ ಬದಿಯಲ್ಲಿ ನಿಂತುಕೊಳ್ಳುತ್ತಾರೆ. ಇವನಿಗೂ ಜನರನ್ನು ಕಂಡರೇ ಅಷ್ಟೇ ಅಕ್ಕರೆ. ನಡೆಯುವಲ್ಲೆಲ್ಲಾ ಪ್ರೀತಿ ಹಂಚುತ್ತಾ, ಶಾಂತಿ ಸಾರುತ್ತಾ ಮುನ್ನಡೆಯುತ್ತಿದ್ದಾನೆ, ನಮ್ಮ ಅಲೋಕ.

ಫ್ಯಾಷನ್‌ ವಾಲಾ...

ಅಮೆರಿಕದಲ್ಲಿ ಈಗಂತೂ ಚಳಿಗಾಲ. ತಣ್ಣಗೆ ಗಾಳಿ ಬೀಸುತ್ತಿರುತ್ತದೆ. ಇವನಿಗೆ ಜಾಕೆಟ್‌ ಬೇಕು. ಇಲ್ಲ, ಶರ್ಟ್‌ ಹಾಕಬೇಕು. ಕುತ್ತಿಗೆಗೆ ಹಾಕಲು ಮಫ್ಲರ್‌ (ಬಂದನ್‌) ಬೇಕು. ದಿನಕ್ಕೊಂದು ಜಾಕೆಟ್‌, ಶರ್ಟ್‌ ಹಾಕಿಕೊಂಡು ಬಿಕ್ಕುಗಳ ಹಿಂದೆ ಮುಂದೆ ಓಡಾಡುತ್ತಾನೆ. ಅವನ ಬಳಿ ಕೆಂಪು, ಗುಲಾಬಿ ಬಣ್ಣದ ಬೂಟುಗಳಿವೆ. ಹೆಚ್ಚು ಕಡಿಮೆ ದಿನವೂ ಅವನು ಸ್ನಾನ ಮಾಡುತ್ತಾನೆ. ಸ್ನಾನಕ್ಕಂತೂ ಸ್ವಲ್ಪವೂ ರಗಳೆ ಮಾಡಲ್ಲ.

ಬಿಕ್ಕುಗಳು ಮಾರುಕಟ್ಟೆಯಲ್ಲಿ ನಿಂತರೆ, ಯಾವುದೇ ಅಂಗಡಿ ಹೊಕ್ಕರೆ ಇವನೂ ಒಳಗೆ ಹೋಗಬೇಕು. ಅವರೊಂದಿಗೆ ಶಾಪಿಂಗ್‌ ಮಾಡಬೇಕು. ಅಮೆರಿಕದಲ್ಲಿ ಇವನನ್ನು ಕಂಡರೆ ಸಾಕು, ಜನರು ಬಂದು ಮೈಸವರುತ್ತಾರೆ. ಒಂದು ಕಡೆಯಂತೂ ಮಹಿಳೆಯೊಬ್ಬಳು ಮೈಸವರಲು ಬಂದರೆ, ಅಂಗಡಿಯ ನೆಲದ ಮೇಲೆಯೇ ಹೊಟ್ಟೆ ನೀಡಿ ಮಲಗಿಯೇ ಬಿಟ್ಟ ಈ ಪುಣ್ಯಾತ್ಮ.

ನಾನೂ ನಿಮ್‌ ಜೊತೆ ಹೆಜ್ಜೆ ಹಾಕ್ತೀನಿ...
ನಮ್ಮ ಫ್ಯಾಷನ್‌ ಫ್ರೀಕ್‌...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.