ADVERTISEMENT

ಬಹುರೂಪಿ ಅಡಿಕೆ! ಏನೆಲ್ಲಾ ಉಪಯೋಗ ಇಲ್ಲಿ ನೋಡಿ..

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 19:30 IST
Last Updated 13 ಡಿಸೆಂಬರ್ 2025, 19:30 IST
<div class="paragraphs"><p>ಮಹಿಳೆಯೊಬ್ಬರು ಅಡಿಕೆಯನ್ನು ಒಣಗಿಸುತ್ತಿರುವ ದೃಶ್ಯ <br></p></div>

ಮಹಿಳೆಯೊಬ್ಬರು ಅಡಿಕೆಯನ್ನು ಒಣಗಿಸುತ್ತಿರುವ ದೃಶ್ಯ

   

–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

ADVERTISEMENT
ಅಡಿಕೆಮರದ ಸೋಗೆಯಿಂದ ಹಿಡಿದು ಹಾಳೆ, ಅಡಿಕೆಯ ರಸ/ಚೊಗರು, ಸಿಪ್ಪೆ, ಮರದ ಕಾಂಡ ಸೇರಿದಂತೆ ಅದರ ಭಾಗಗಳನ್ನು ಯಾವೆಲ್ಲಾ ರೀತಿಯಲ್ಲಿ ಉಪಯೋಗ ಮಾಡಬಹುದು ಎಂಬುದನ್ನು ಕಂಡುಕೊಳ್ಳುವುದರಲ್ಲಿ ಸಂಶೋಧಕರು, ಉದ್ಯಮಿಗಳು ಮತ್ತು ಕರಕುಶಲಿಗಳು ತೊಡಗಿದ್ದಾರೆ.

ಜಗತ್ತಿನಲ್ಲೇ ಅತಿ ದೊಡ್ಡ ಅಡಿಕೆ ಉತ್ಪಾದಕ ಮತ್ತು ಬಳಕೆಯ ದೇಶ ಭಾರತ. ಅಷ್ಟೇ ಅಲ್ಲ ದೊಡ್ಡ ಆಮದುದಾರ ದೇಶವೂ ಹೌದು. ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅಡಿಕೆಯನ್ನು ಹೆಚ್ಚು ಬೆಳೆಯಲಾಗುತ್ತದೆ. ರಾಜ್ಯಗಳ ಪೈಕಿ ಅಡಿಕೆ ಬೆಳೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜಗತ್ತಿನ ಅಡಿಕೆ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡ 60 ರಷ್ಟಿದ್ದರೆ, ಇದರಲ್ಲಿ ಕರ್ನಾಟಕದ ಕೊಡುಗೆಯೇ ಶೇಕಡ 70ರಷ್ಟು.

ವಿಶಿಷ್ಟ ಸ್ವಾದ, ಸುವಾಸನೆ, ಆಕಾರ, ಬಣ್ಣದಿಂದ ಪ್ರಸಿದ್ಧಿಗೆ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ‘ಶಿರಸಿ ಸುಪಾರಿ’ಯು ಭೌಗೋಳಿಕ ಗುರುತಿನ (ಜಿಐ) ಮಾನ್ಯತೆ ಪಡೆದಿರುವ ದೇಶದ ಏಕೈಕ ಅಡಿಕೆ ತಳಿ ಎಂಬ ಹೆಗ್ಗಳಿಕೆಯೂ ಇದೆ.

‘ಬಿಸಿ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಮತ್ತು ಸಾಕಷ್ಟು ಮಳೆಯಾಗುವ ರಾಜ್ಯದ ಮಲೆನಾಡು ಭಾಗದಲ್ಲಿ ಶತಮಾನಗಳಿಂದ ಅಡಿಕೆ ಕೃಷಿ ಇದೆ. ಈಗ ನೀರಾವರಿ ಸೌಲಭ್ಯ ವಿಸ್ತರಿಸಿರುವುದರಿಂದ ರಾಜ್ಯದ ಇತರ ಪ್ರದೇಶಗಳಲ್ಲೂ ಅಡಿಕೆ ಬೆಳೆಯಲಾಗುತ್ತಿದೆ’ ಎಂಬುದು ಶಿವಮೊಗ್ಗದ ಅತಿರಥ ಬಿಳುವೆ ಅವರ ಮಾತು. ಇವರು ತಮ್ಮ ಕುಟುಂಬದಲ್ಲಿ ನಾಲ್ಕನೇ ತಲೆಮಾರಿನ ಅಡಿಕೆ ಬೆಳೆಗಾರ.

ಹಿಂದಿನಿಂದಲೂ ಅಡಿಕೆ ಕೃಷಿ ಎಂದರೆ ವೀಳ್ಯದೆಲೆಯೊಂದಿಗೆ ಸೇವಿಸಲು ಬೇಕಾದ ಅಡಿಕೆಯನ್ನು ಬೆಳೆಯುವುದು ಎಂದಷ್ಟೇ ಪರಿಗಣಿಸಲಾಗುತ್ತಿತ್ತು. ಧಾರ್ಮಿಕ ವಿಧಿವಿಧಾನಗಳಲ್ಲಿ, ಸಾಂಸ್ಕೃತಿಕ ಆಚರಣೆಗಳ ಭಾಗವಾಗಿ ವೀಳ್ಯದೆಲೆ ಅಡಿಕೆಯ ಬಳಕೆ ಮೊದಲಿನಿಂದಲೂ ಇದೆ. ವೀಳ್ಯದೆಲೆಯೊಂದಿಗೆ ಅಡಿಕೆ ಜಗಿಯುವುದು ಸಾಮಾಜಿಕ ವ್ಯವಸ್ಥೆಯಲ್ಲಿ ರೂಢಿಯೂ ಆಗಿದೆ. ಆದರೆ ಈಗ ಇದು ಬದಲಾಗಿದೆ. ಅಡಿಕೆ ಕೃಷಿಯು ಔದ್ಯಮಿಕ ಅಲೆಯೊಂದರ ಕೇಂದ್ರವೂ ಆಗಿ ರೂಪುಗೊಂಡಿದೆ. ಅಡಿಕೆಮರದ ಸೋಗೆಯಿಂದ ಹಿಡಿದು ಹಾಳೆ, ಅಡಿಕೆಯ ರಸ/ಚೊಗರು, ಸಿಪ್ಪೆ, ಮರದ ಕಾಂಡ ಸೇರಿದಂತೆ ಅದರ ಭಾಗಗಳನ್ನು ಯಾವೆಲ್ಲಾ ರೀತಿಯಲ್ಲಿ ಉಪಯೋಗ ಮಾಡಬಹುದು ಎಂಬುದನ್ನು ಕಂಡುಕೊಳ್ಳುವುದರಲ್ಲಿ ಸಂಶೋಧಕರು, ಉದ್ಯಮಿಗಳು ಮತ್ತು ಕರಕುಶಲಿಗಳು ತೊಡಗಿದ್ದಾರೆ.

‘ಅಡಿಕೆಮರದ ಉಪ ಉತ್ಪನ್ನಗಳು ಸುಸ್ಥಿರ ಮತ್ತು ಪರಿಸರಸ್ನೇಹಿಯಾಗಿದ್ದು, ನಾವು ಈಗ ಬಳಸುತ್ತಿರುವ ಹಲವು ಉತ್ಪನ್ನಗಳಿಗೆ ಪರ್ಯಾಯವಾಗಲ್ಲದು. ಪೀಠೋಪಕರಣಗಳಿಂದ ಹಿಡಿದು ಚರ್ಮದವರೆಗೆ ಹಲವಾರು ಉತ್ಪನ್ನಗಳನ್ನು ತಯಾರಿಸಬಹುದು’ ಎಂದು ಹೇಳುತ್ತಾರೆ ಪತ್ರಕರ್ತ, ಕೃಷಿಕ ಹಾಗೂ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶ್ರೀ ಪಡ್ರೆ.

ಹಾಳೆಯ ಉತ್ಪನ್ನಗಳು

ಕಣ್ಣಿಗೆ ಕಾಣಿಸುವಂತಹ ಹಾಗೂ ಈಗ ಹೆಚ್ಚು ಬಳಕೆಯಲ್ಲಿರುವ ಅಡಿಕೆಮರದ ಉಪ ಉತ್ಪನ್ನವೆಂದರೆ ಹಾಳೆಯಿಂದ ಮಾಡಲಾಗುತ್ತಿರುವ ಉತ್ಪನ್ನಗಳು. ತಟ್ಟೆ, ಬೋಗುಣಿ (ಬೌಲ್‌), ಚಮಚ ಸೇರಿದಂತೆ ಆಹಾರವನ್ನು ನೀಡಲು ಬಳಸುವ ಉತ್ಪನ್ನಗಳು ಹೆಚ್ಚು ಬಳಕೆಯಲ್ಲಿವೆ. ಅಡಿಕೆಮರದಿಂದ ಬಿದ್ದ ಹಾಳೆಯನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ, ಅಚ್ಚನ್ನು ಬಳಸಿಕೊಂಡು ಉಷ್ಣ–ಒತ್ತಡ ತಂತ್ರಜ್ಞಾನದಲ್ಲಿ ಬೇಕಾದ ಗಾತ್ರದ, ಆಕಾರದ ಹಾಳೆಯ ತಟ್ಟೆ ಸೇರಿದಂತೆ ಇತರ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.

ರಾಸಾಯನಿಕಗಳಿಂದ ಮುಕ್ತವಾಗಿರುವ ಇವುಗಳು ಪರಿಸರಸ್ನೇಹಿಯಾಗಿವೆ. ಬಳಸಿ ಎಸೆದ ಹಾಳೆಯ ಉತ್ಪನ್ನಗಳು ಮಣ್ಣಿನೊಂದಿಗೆ ಬೆರೆತು ಮಣ್ಣಾಗುತ್ತವೆ. ಫ್ರೀಜರ್‌/ಮೈಕ್ರೊವೇವ್‌ ಬಳಕೆಗೂ ಯೋಗ್ಯ. ಏಕ ಬಳಕೆಯ ಪ್ಲಾಸ್ಟಿಕ್‌ ಮತ್ತು ಕಾಗದದಿಂದ ತಯಾರಿಸಿದ ತಟ್ಟೆ, ಬೋಗುಣಿ, ಚಮಚ ಹಾಗೂ ಆಹಾರ ವಿತರಣೆಗೆ ಬಳಸುವ ಇನ್ನಿತರ ವಸ್ತುಗಳಿಗೆ ಇವು ಅತ್ಯುತ್ತಮ ಪರ್ಯಾಯವಾಗಿವೆ.

ಮರಮುಟ್ಟು ಆಗಿ ಬಳಕೆ

ಅಡಿಕೆಮರಗಳು 50 ಅಡಿ ಎತ್ತರದವರೆಗೂ ಬೆಳೆಯುತ್ತವೆ. ರೋಗಬಾಧೆ ಅಥವಾ ನೈಸರ್ಗಿಕ ಕಾರಣಗಳಿಂದ ಸತ್ತ ಅಡಿಕೆ ಮರವನ್ನು ಪೀಠೋಪರಣಗಳನ್ನು ತಯಾರಿಸುವ ಮರಮುಟ್ಟು ಆಗಿ ಕೂಡ ಬಳಸಬಹುದು. ‘ಅಡಿಕೆಮರ ತುಂಬಾ ಗಟ್ಟಿ ಮತ್ತು ಹೆಚ್ಚು ಬಾಳಿಕೆಯ ಸಾಮರ್ಥ್ಯ ಹೊಂದಿದೆ’ ಎಂದು ಹೇಳುತ್ತಾರೆ ಸಾಗರದ ಉದ್ಯಮಿ, ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಸಂತೋಷ್‌ ಕುಮಾರ್‌.

‘ದಶಕಗಳ ಹಿಂದೆ ಅಡಿಕೆಮರಗಳ ಕಾಂಡವನ್ನು ಅಟ್ಟಣಿಗೆ ನಿರ್ಮಿಸಲು ಬಳಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅದನ್ನು ತ್ಯಾಜ್ಯವಾಗಿ ಪರಿಗಣಿಸಲಾಗುತ್ತಿತ್ತು. ಆದರೆ. ನಾವೀಗ ಅಡಿಕೆಮರದ ಕಾಂಡಗಳನ್ನು ಪೀಠೋಪಕರಣಗಳು ಮತ್ತು ಇತರ ಉತ್ಪನ್ನಗಳಾಗಿ ಮಾರ್ಪಡಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ಸಂತೋಷ್‌ ಅವರು ಅಡಿಕೆಮರದ ದೃಢವಾದ ಕಾಂಡದಿಂದ ಬೆಂಚುಗಳು, ಗೋಡೆಗೆ ಅಳವಡಿಸುವ ಪಟ್ಟಿಗಳು (ವಾಲ್‌ ಪ್ಯಾನಲ್‌), ಗೋಡೆ ವಿಭಜಕಗಳು, ಸುಲಭವಾಗಿ ಅಳವಡಿಸಬಹುದಾದ ಆಕರ್ಷಕ ಬೇಲಿ ಮತ್ತು ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಅಡಿಕೆಮರದ ಕೆಲಸ ಸುಲಭವಲ್ಲ. ಅದಕ್ಕೆ ವಿಶೇಷ ಯಂತ್ರೋಪಕರಣ ಮತ್ತು ತರಬೇತಿ ಪಡೆದ ಕುಶಲಕರ್ಮಿಗಳು ಬೇಕು ಎಂಬುದು ಸಂತೋಷ್‌ ಅವರ ಅನುಭವದ ಮಾತು.

‘ಅಡಿಕೆಮರದಿಂದ ಪ್ಲೈವುಡ್‌ ತಯಾರಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ, ಇದರ ಬಗ್ಗೆ ಇನ್ನಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳು ನಡೆಯಬೇಕು’ ಎಂದು ಪ್ರತಿಪಾದಿಸುತ್ತಾರೆ ಅವರು.

ಸಾವಯವ ಗೊಬ್ಬರ

ಒಂದು ಕಾಲದಲ್ಲಿ ತ್ಯಾಜ್ಯವಾಗಿ ಸುಡುತ್ತಿದ್ದ ಅಡಿಕೆಮರದ ಸೋಗೆ ಮತ್ತು ಅಡಿಕೆ ಸಿಪ್ಪೆಯು ಈಗ ಸಾವಯವ ಗೊಬ್ಬರ ತಯಾರಿಕೆಯಲ್ಲೂ ಬಳಕೆಯಾಗುತ್ತಿದೆ. ‘ಎರೆಹುಳಗೊಬ್ಬರ ತಯಾರಿಕೆಯಲ್ಲಿ ನಾವು ಅಡಿಕೆ ಸೋಗೆ ಮತ್ತು ಸಿಪ್ಪೆಯನ್ನು ಬಳಸುತ್ತೇವೆ. ಈ ಎರಡನ್ನೂ ಸೆಗಣಿಯೊಂದಿಗೆ ಬೆರೆಸಿ ಅದನ್ನು ದ್ರವರೂಪದ ಗೊಬ್ಬರವನ್ನಾಗಿ ಮಾಡಿ ನಂತರ ಅದಕ್ಕೆ ಎರೆಹುಳಗಳನ್ನು ಬಿಟ್ಟು ಗೊಬ್ಬರ ತಯಾರಿಸುತ್ತೇವೆ’ ಎಂದು ಮೈಸೂರು ಮೂಲದ ಸುರಭಿ ಪ್ಲಾನ್‌ಟೆಕ್‌ ಸಂಸ್ಥೆಯ ಟೀಮ್‌ ಮ್ಯಾನೇಜರ್‌ ರವಿ ಕೆ.ಜಿ ಅವರು ಹೇಳುತ್ತಾರೆ.

‘ಗೊಬ್ಬರ ತಯಾರಿಸಲು ನಾಲ್ಕು ತಿಂಗಳು ಬೇಕಾಗುತ್ತದೆ. ಗೊಬ್ಬರವನ್ನು ಅತ್ಯಂತ ವ್ಯವಸ್ಥಿತವಾಗಿ ದಾಸ್ತಾನು ಇರಿಸಿದರೆ ಅದು ಹಾಳಾಗುವುದೇ ಇಲ್ಲ. ರಾಸಾಯನಿಕ ರಸಗೊಬ್ಬರಗಳಿಗೆ ಹೋಲಿಸಿದರೆ ಈ ಗೊಬ್ಬರ ಅಗ್ಗವೂ ಹೌದು’ ಎನ್ನುವುದು ಅವರ ವಿವರಣೆ.

ಅಡಿಕೆ ಹಾಳೆಯಿಂದ ತಯಾರಿಸಿದ ಸಸ್ಯಜನ್ಯ ಚರ್ಮದ ಹ್ಯಾಂಡ್‌ಬ್ಯಾಗ್‌

ಸಸ್ಯ ಜನ್ಯ ಚರ್ಮ ಪ್ರವರ್ಧಮಾನಕ್ಕೆ

ಅಡಿಕೆಮರದ ಹಾಳೆಯನ್ನು ಸಂಪೂರ್ಣ ಸಸ್ಯಜನ್ಯ ಚರ್ಮವನ್ನಾಗಿ ಮಾರ್ಪಡಿಸಿರುವುದು ಅಡಿಕೆಗೆ ಸಂಬಂಧಿಸಿದಂತೆ ನಡೆದಿರುವ ಮತ್ತೊಂದು ಸಂಶೋಧನೆ. ಸಸ್ಯಗಳ ಸೊನೆ ಅಥವಾ ಹಾಲಿನಂಥ ದ್ರಾವಣವು ಈ ಸಸ್ಯಜನ್ಯ ಚರ್ಮಕ್ಕೆ ಮೂಲ ಆಧಾರವಾಗಿದೆ. ಅಡಿಕೆ ಹಾಳೆಯ ನಾರುಗಳು ಸದೃಢವಾಗಿದ್ದು ನೇಯ್ಗೆಗೆ ಹೇಳಿಮಾಡಿಸಿದಂತೆ. ಆದರೆ ಸಣ್ಣ ಹಾಳೆಗಳನ್ನು ಈ ಉದ್ದೇಶಕ್ಕೆ ಬಳಸುವುದು ದೊಡ್ಡ ಸವಾಲು ಎಂಬುದು ಈಗಷ್ಟೇ ಪ್ರವರ್ಧ ಮಾನಕ್ಕೆ ಬರುತ್ತಿರುವ ಈ ಕ್ಷೇತ್ರದಲ್ಲಿ ಪೇಟೆಂಟ್‌ ಪಡೆದಿರುವ ಶಿವಮೊಗ್ಗದ ಉದ್ಯಮಿ ಸುರೇಶ್‌ ಎಸ್‌.ಆರ್‌. ಅವರ ಅಭಿಮತ.

‘ಹತ್ತಿಯೊಂದಿಗೆ ಅಡಿಕೆ ಹಾಳೆಯ ನಾರನ್ನು ಸೇರಿಸಿದರೆ ಪೇಟಾ-ಪ್ರಮಾಣಿತ ಕೊಳೆಯಬಲ್ಲ ಚರ್ಮವನ್ನು ತಯಾರಿಸಬಹುದು. ಇದು ಬಾಳಿಕೆಯಲ್ಲಿ ಪ್ರಾಣಿಗಳ ಚರ್ಮಕ್ಕೆ ಸವಾಲೆಸೆಯಬಹುದು. ಇದು ಉತ್ತಮವಾದ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ಹೊಂದಿದೆ. ನೀರು ತಾಗಿದರೂ ಏನಾಗದು. ಇಂಗಾಲ ಉಗುಳುವಿಕೆಯೂ ಕಡಿಮೆ’ ಎಂಬುದು ಸುರೇಶ್‌ ವಿವರಣೆ.

ಅಡಿಕೆ ಹಾಳೆ ಬಳಸಿ ತಯಾರಿಸಿದ ಚರ್ಮವು ಹಾವು ಅಥವಾ ಆನೆಯ ಚರ್ಮದಂತೆಯೇ ಇರುತ್ತದೆ. ಸದ್ಯ ಇದನ್ನು ಪರ್ಸ್‌, ಹ್ಯಾಂಡ್‌ಬ್ಯಾಗ್‌ಗಳು, ಚಪ್ಪಲಿಗಳು ಮತ್ತು ಡೈರಿಗಳ ಕವರ್‌ ತಯಾರಿಸಲು ಬಳಸಲಾಗುತ್ತಿದೆ.

ಅಡಿಕೆ ಹಾಳೆಯಿಂದ ತಯಾರಿಸಿದ ಚಪ್ಪಲಿಗಳು

ಸ್ಪಿರಿಟ್‌ ತಯಾರಿಕೆ

ಅಡಿಕೆಯನ್ನು ಈಗ ವೈನ್‌ ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಶಿವಮೊಗ್ಗದ ಸುಷ್ಮಾ ಸಂಜಯ್‌ ಮತ್ತು ಅವರ ಮಗ ಆಕರ್ಷ್‌ ಸಂಜಯ್‌ ಅವರ ತಲಿಸ್ವ ವೈನ್ಸ್‌ ಸಂಸ್ಥೆಯು ಜೇನು, ವೀಳ್ಯದೆಲೆ ಮತ್ತು ಅಡಿಕೆಯನ್ನು ಉಪಯೋಗಿಸಿಕೊಂಡು ಪಾನ್‌-ಸ್ವಾದದ ವೈನ್‌ ತಯಾರಿಸಿದೆ.

‘ಪಾನ್‌ ಜಗಿಯುವುದು ನಮ್ಮ ಸಂಸ್ಕೃತಿಯ ಭಾಗ. ಆದರೆ, ಯುವಜನರಿಗೆ ಇದು ಅಷ್ಟೊಂದು ಇಷ್ಟವಾಗುವುದಿಲ್ಲ. ಹಾಗಾಗಿ, ನಾವ್ಯಾಕೆ ಇದನ್ನು ಪಾನೀಯವನ್ನಾಗಿ ಮಾಡಬಾರದು ಎಂದು ಯೋಚಿಸಿದೆವು. ಅದರ ಫಲಿತಾಂಶವೇ ಸಿಹಿಯ ಜೊತೆಗೆ ಸ್ವಲ್ಪ ಖಾರ ರುಚಿಯನ್ನು ಹೊಂದಿರುವ ವೈನ್‌. ಇದರಲ್ಲಿ ಆಲ್ಕೊಹಾಲ್‌ನ ಪ್ರಮಾಣ ಶೇಕಡ 9ರಷ್ಟು ಇದೆ. ಜೊತೆಗೆ ವೀಳ್ಯದೆಲೆಯ ವಿಶಿಷ್ಟ ಕಂಪು ಕೂಡ ಇದೆ’ ಎಂದು ಮತ್ತು ಆಕರ್ಷ್‌ ಹೇಳುತ್ತಾರೆ.

ಅಡಿಕೆ ಪರ್ಸ್‌

ಬೇಕಿದೆ ಸುಸ್ಥಿರ ಪ್ರಯತ್ನಗಳು

ಜಗತ್ತಿನ ಅತ್ಯಂತ ದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದರೂ ಭಾರತ ಈಗಲೂ ಅಡಿಕೆಯನ್ನು ಪ್ರಮುಖವಾಗಿ ಸೇವನೆ ಮತ್ತು ಆಚರಣೆಗಳ ಉದ್ದೇಶಕ್ಕಷ್ಟೇ ಬಳಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಆಗ್ನೇಯ ಏಷ್ಯಾದ ರಾಷ್ಟ್ರಗಳು ವೈವಿಧ್ಯಮಯವಾಗಿ ಬಳಸುತ್ತಿವೆ. ವಿಶೇಷವಾಗಿ ಅಡಿಕೆಯಲ್ಲಿನ ಔಷಧೀಯ ಗುಣಗಳನ್ನು ಅವುಗಳು ಕಂಡು ಕೊಂಡಿವೆ. ಅಡಿಕೆಯ ಟೂತ್‌ಪೇಸ್ಟ್‌, ಐಸ್‌ಕ್ರೀಂಗಳು, ಸ್ಕ್ವಾಶ್‌ಗಳು ಮಾತ್ರವಲ್ಲದೆ ಅಂಟು ಪದಾರ್ಥ ಸೇರಿದಂತೆ ಹಲವು ಉದ್ದೇಶಗಳಿಗೆ ಉಪಯೋಗಿಸುತ್ತಿವೆ.

‘ಅಡಿಕೆಯನ್ನು ತರಹೇವಾರಿ ಉದ್ದೇಶಗಳಿಗೆ ಬಳಸುವ ವಿಚಾರದಲ್ಲಿ ನಾವು ಅವರಿಂದ ಕಲಿಯಬೇಕು’ ಎಂಬುದು ಶ್ರೀ ಪಡ್ರೆ ಅವರ ಅಭಿಪ್ರಾಯ.

‘ಯಾವುದೇ ವಸ್ತು ಅಥವಾ ಉತ್ಪನ್ನವು ಮಾರುಕಟ್ಟೆಯಲ್ಲಿ ಯಶಸ್ವಿಯಾಗಬೇಕಾದರೆ ವೈವಿಧ್ಯತೆ, ಸಂಶೋಧನೆ ಮತ್ತು ವಾಣಿಜ್ಯೀಕರಣ ಮುಖ್ಯ. ನಮ್ಮಲ್ಲಿ ಯಾವುದೇ ಹೊಸ ಸಂಶೋಧನೆ ಅಥವಾ ನಾವಿನ್ಯ ಕಲ್ಪನೆಯು ಸಂಶೋಧನಾ ವರದಿಗಷ್ಟೇ ಸೀಮಿತವಾಗುತ್ತದೆ. ವರದಿ ಪ್ರಕಟಗೊಂಡ ನಂತರ ಅದು ಮಾರುಕಟ್ಟೆಗೆ ಬರುವುದಿಲ್ಲ. ಸುಸ್ಥಿರ ಬೆಂಬಲ ಮತ್ತು ವ್ಯವಸ್ಥಿತ ಹಣಕಾಸಿನ ನೆರವು ಸಿಕ್ಕಿದರೆ ಅಡಿಕೆಯು ಕೇವಲ ಬೆಳೆಯಾಗಿರದೆ, ಆವರ್ತನದ ಸುಸ್ಥಿರ ಆರ್ಥಿಕತೆಯ ಸಂಕೇತವಾಗಲಿದೆ’ ಎಂದು ಪ್ರತಿಪಾದಿಸುತ್ತಾರೆ ಅವರು.

ಅಡಿಕೆ ಹಾಗೂ ಅದರ ಮರದ ಉಪ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲದಿರುವುದು ಮತ್ತು ಉತ್ಪನ್ನಗಳ ಬೆಲೆ ದುಬಾರಿಯಾಗಿರುವುದರಿಂದ ಸುಸ್ಥಿರವಾದ ಮತ್ತು ಪರಿಸರ ಸ್ನೇಹಿಯಾದ ಇವುಗಳ ಬಳಕೆ ತುಂಬಾ ಕಡಿಮೆ ಎಂದು ಹೇಳುತ್ತಾರೆ ತಜ್ಞರು.

ಕೃಷಿಯಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿದಾಗ ಮಾತ್ರ ಹೆಚ್ಚು ಆದಾಯ ಗಳಿಸಲು ಸಾಧ್ಯ. ಇಂತಹ ಪ್ರಯತ್ನಗಳು ಹೆಚ್ಚಾಗಲಿ, ರೈತರ ಜೇಬು ತುಂಬಲಿ.

ಕೆಂಪಡಿಕೆ ಮತ್ತು ಕೆಂಪಡಿಕೆಯ ಚೊಗರಿನಿಂದ ತಯಾರಿಸಿದ ಬಣ್ಣ
ನೈಸರ್ಗಿಕ ಬಣ್ಣ
ಅಡಿಕೆಯ ಮತ್ತೊಂದು ಪ್ರಮುಖ ಉಪ ಉತ್ಪನ್ನ ಎಂದರೆ ಚೊಗರು. ಮಲೆನಾಡು ಭಾಗದಲ್ಲಿ ಹಸಿ ಅಡಿಕೆಯನ್ನು (ಕೆಂಪಡಿಕೆ) ಬೇಯಿಸುವಾಗ ಸಿಗುವ ಕೆಂಪು ಬಣ್ಣದ ದ್ರಾವಣವನ್ನು ಈಗ ಬಣ್ಣವಾಗಿ ಬಳಸುವ ಪ್ರಯೋಗಗಳು ನಡೆಯುತ್ತಿವೆ. ಮೊದಲೆಲ್ಲ ಈ ಚೊಗರನ್ನು ಎಸೆಯಲಾಗುತ್ತಿತ್ತು. ಆದರೆ ಕುಶಲಕರ್ಮಿಗಳು ಉಡುಪುಗಳನ್ನು ತಯಾರಿಸುವಾಗ ಈ ಚೊಗರನ್ನು ಈಗ ನೈಸರ್ಗಿಕ ಬಣ್ಣವಾಗಿ ಬಳಸುತ್ತಿದ್ದಾರೆ. ‘ಅಡಿಕೆಯ ಚೊಗರು ಸಾಮಾನ್ಯವಾಗಿ ಕಂದು ಕೆಂಪು ಗಾಢ ಕೆಂಪು ಮತ್ತು ಕಂದು ಬಣ್ಣಗಳಿಂದ ಕೂಡಿರುತ್ತದೆ. ಹತ್ತಿ ಉಣ್ಣೆ ಮತ್ತು ರೇಷ್ಮೆಯಿಂದ ಮಾಡಿದ ಬಟ್ಟೆಗಳಿಗೆ ಈ ಬಣ್ಣಗಳು ಅತ್ಯುತ್ತಮವಾಗಿ ಹೊಂದುತ್ತವೆ’ ಎಂದು ಹೇಳುತ್ತಾರೆ ಶಿವಮೊಗ್ಗದ ಸಹಕಾರ ಕೈಮಗ್ಗ ಸಂಘ ‘ಚರಕ’ದ ಟೆರೆನ್ಸ್‌ ಪೀಟರ್‌. ಈ ಸಂಘವು ಪ್ರತಿ ಲೀಟರ್‌ಗೆ ₹100 ನೀಡಿ ಅಡಿಕೆ ಬೆಳೆಗಾರರಿಂದ ಚೊಗರನ್ನು ಖರೀದಿಸುತ್ತಿದೆ. ಇದು ಬೆಳೆಗಾರರಿಗೆ ಹೆಚ್ಚುವರಿ ಆದಾಯವನ್ನು ತಂದುಕೊಡುತ್ತಿದೆ. ಚರ್ಮವನ್ನು ಹದಮಾಡುವ ಉದ್ದಿಮೆಯಲ್ಲೂ ಅಡಿಕೆ ಚೊಗರಿನ ಬಳಕೆ ಇದೆ.
ಹಾಳೆಯ ಪಾದರಕ್ಷೆ
ಅನುವಾದ: ಸೂರ್ಯನಾರಾಯಣ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.