ADVERTISEMENT

ಏಲಕ್ಕಿ ನಗರದಲ್ಲಿ ಕಲಾ ಗ್ಯಾಲರಿ

ಮನಸೆಳೆದ ಚಿತ್ರಕಲಾ ಶಿಬಿರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 19:30 IST
Last Updated 18 ನವೆಂಬರ್ 2019, 19:30 IST
  ಆರ್ಟ್‌ ಗ್ಯಾಲರಿ
  ಆರ್ಟ್‌ ಗ್ಯಾಲರಿ   

‘ಆರ್ಟ್‌ ಗ್ಯಾಲರಿ’– ಎಂದು ಹೆಸರು ಹೇಳುತ್ತಿದ್ದಂತೆ, ಚಿತ್ರ ಕಲಾವಿದರಿಗೆ, ಆ ಕಲೆಯನ್ನು ಪ್ರೀತಿಸುವವರಿಗೆ ಥಟ್‌ ಎಂದು ನೆನಪಾಗುವುದು ಬೆಂಗಳೂರಿನ ವೆಂಕಟಪ್ಪ ಆರ್ಟ್‌ ಗ್ಯಾಲರಿ. ಕೆಲವರಿಗೆ ಕರ್ನಾಟಕ ಚಿತ್ರಕಲಾ ಪರಿಷತ್ತು ಜ್ಞಾಪಕಕ್ಕೆ ಬರಬಹುದು. ಉತ್ತರ ಕರ್ನಾಟಕ ಭಾಗದವರಿಗೆ ಹುಬ್ಬಳ್ಳಿಯ ಮಿಣಜಗಿ ಆರ್ಟ್‌ ಗ್ಯಾಲರಿ, ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾ ವಿದ್ಯಾಲಯ ನೆನಪಿಗೆ ಬರಬಹುದು.

ನಿಜ, ಇವೆಲ್ಲ ದೊಡ್ಡ ದೊಡ್ಡ ಕಲಾವಿದರಿಗೆ, ಚಿತ್ರ ಪ್ರದರ್ಶನಕ್ಕೆ ವೇದಿಕೆ ನೀಡುತ್ತಿರುವ ಚಿತ್ರಕಲಾ ಮಹಾಮನೆಗಳು. ಇವುಗಳಲ್ಲಿ ಕೆಲವು ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಪುಟ್ಟ ‘ಕಲಾ ಗ್ಯಾಲರಿ‘ ಸೇರಿಕೊಂಡಿದೆ. ಅದೇ ಹಾವೇರಿಯ ‘ಹಂಚಿನಮನಿ ಆರ್ಟ್‌ ಗ್ಯಾಲರಿ’.

ಆದರೆ, ಇದು ಸರ್ಕಾರದ್ದಲ್ಲ. ಖ್ಯಾತ ಚಿತ್ರಕಲಾವಿದ ಕರಿಯಪ್ಪ ಹನುಮಂತಪ್ಪ ಹಂಚಿನಮನಿ ಅವರೇ ನಿರ್ಮಾಣ ಮಾಡಿಸಿರುವ ಕಲಾ ಗ್ಯಾಲರಿ. ಅದಕ್ಕೆ ‘ಹಂಚಿನಮನಿ ಆರ್ಟ್‌ ಗ್ಯಾಲರಿ’ ಎಂದು ಹೆಸರಿಟ್ಟಿದ್ದಾರೆ. ಇದು ‘ಏಲಕ್ಕಿ ನಗರ’ ಎಂದೇ ಹೆಸರಾದ ಹಾವೇರಿಯ ಹೊರ ವಲಯದ ನಂದಿ ಬಡಾವಣೆಯಲ್ಲಿದೆ.

ADVERTISEMENT

ಜಿಲ್ಲಾ ಮಟ್ಟದಲ್ಲೊಂದು ಕಲಾಗ್ಯಾಲರಿ ನಿರ್ಮಾಣ ಮಾಡುವುದೆಂದರೆ, ಅದು ಸರಳವಾದ ಯೋಚನೆಯಲ್ಲ. ಆದರೆ ಗ್ರಾಮೀಣ ಕಲಾವಿದರ ಬಗ್ಗೆ ಪ್ರೀತಿ ಹೊಂದಿರುವ ಕರಿಯಪ್ಪ, ಅಂಥ ಕಲಾವಿದರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಗ್ಯಾಲರಿ ನಿರ್ಮಿಸಿದ್ದಾರೆ. ಇಲ್ಲಿ ಚಿತ್ರ ಪ್ರದರ್ಶಿಸುವ ಕಲಾವಿದರಿಂದ ಶುಲ್ಕ ತೆಗೆದುಕೊಳ್ಳುವುದಿಲ್ಲ!

ಕಲಾತ್ಮಕ ‘ಗ್ಯಾಲರಿ’

ಚೌಕಾರದಲ್ಲಿರುವ ಆರ್ಟ್‌ ಗ್ಯಾಲರಿ, ಹೊರಗಿನಿಂದ ಇಂಗ್ಲಿಷ್‌ನ ‘ಎಲ್’ ಆಕಾರದಲ್ಲಿದೆ. ಚಕ್ಕಡಿ ಗಾಲಿನ ಗೇಟು, ಹೊಸ್ತಿಲು ಕೆಳಗೆ ಅಕ್ವೇರಿಯಂ, ಕಾಡು ಕಟ್ಟಿಗೆಯಿಂದ ನಿರ್ಮಿತ ಸಹಜ ಚೌಕಟ್ಟು, ಬಲ್ಬುಗಳಿಗೆ ತೂಗು ಬಿಟ್ಟ ಡೂಮ್‌ಗಳು ನೋಡುಗರನ್ನು ಆಕರ್ಷಿಸುತ್ತವೆ. ಕಲಾಗ್ಯಾಲರಿಯು 15 ಅಡಿ ಅಗಲ, 42 ಅಡಿ ಉದ್ದವಾಗಿದೆ. ಸರಿ ಸುಮಾರು 30 ರಿಂದ 40 ಚಿತ್ರಗಳು ಸ್ಪಾಟ್ ಲೈಟ್‍ನಲ್ಲಿ ಕಾಣುತ್ತವೆ.

ಗ್ಯಾಲರಿ ಒಳಗಡೆ ಪ್ರವೇಶಿಸುತ್ತಿದ್ದಂತೆ ತಿಳಿಬಿಳಿಯ ನಾಲ್ಕು ಗೋಡೆಗಳ ವಿನ್ಯಾಸವು ಕಲಾವಿದನ ಕ್ಯಾನವಾಸ್‌ನಂತೆ ಕಣ್ಮನಸೆಳೆಯುತ್ತದೆ. ಇಲ್ಲಿ ಸುಮಾರು 3/3 ಅಳತೆಯ 25 ರಿಂದ 30 ಪೇಂಟಿಂಗ್‌ಗಳನ್ನು ಪ್ರದರ್ಶನಕ್ಕಿಡಬಹುದು. ಉತ್ತಮವಾದ ಬೆಳಕಿನ ವಿನ್ಯಾಸ, ಅಲ್ಲಲ್ಲೇ ತೂಗು ಕೊಕ್ಕೆಗಳು ಕಲಾವಿದರು ಚಿತ್ರ ಪ್ರದರ್ಶನಕ್ಕೆ ನೆರವಾಗುತ್ತವೆ. ಇಲ್ಲಿ ಚಿತ್ರ ಪದರ್ಶನ ಮಾತ್ರವಲ್ಲ, ಅದನ್ನು ಪ್ರದರ್ಶಿಸಲು ಬರುವ ಕಲಾವಿದರಿಗೆ ಉಳಿಯುವ ವ್ಯವಸ್ಥೆಯೂ ಇಲ್ಲಿದೆ.

ಗ್ಯಾಲರಿ ಪ್ರವೇಶಿಸಲು ಎರಡು ದ್ವಾರಗಳಿವೆ. ಒಳಭಾಗದಿಂದ ಕಚ್ಚಾ ಮರದ ಬೊಡ್ಡೆಯ ಮೇಲೆ ನಿರ್ಮಿಸಿದ ಏಣಿಯಿದೆ. ಹೊರಭಾಗದಿಂದ ಬರುವವರಿಗೆ ಕಲ್ಲಿನ ಮೆಟ್ಟಿಲುಗಳ ದ್ವಾರವಿದೆ. ಎಂಜಿನಿಯರ್ ಎಂ. ಎಂ. ಹೂಲಿಹಳ್ಳಿ ಅವರು ಕಲಾಗ್ಯಾಲರಿ ನಿರ್ಮಾಣಕ್ಕೆ ಉಚಿತವಾಗಿ ಮಾರ್ಗದರ್ಶನ ನೀಡಿದ್ದಾರೆ.

ಕಲಾ ಶಿಬಿರದೊಂದಿಗೆ ಉದ್ಘಾಟನೆ

ಕಳೆದ ಸೆಪ್ಟೆಂಬರ್ 22ರಂದು ಹಂಚಿನಮನಿ ಆರ್ಟ್‌ ಗ್ಯಾಲರಿ ಉದ್ಘಾಟನೆಯಾಯಿತು. ನಾಡಿನ ಪ್ರಖ್ಯಾತ ಕಲಾವಿದ ಮತ್ತು ಕಲಾ ವಿಮರ್ಶಕ ಚಿ. ಸು. ಕೃಷ್ಣಶೆಟ್ಟಿ ಗ್ಯಾಲರಿ ಲೋಕಾರ್ಪಣೆ ಮಾಡಿದರು. ಕಲಾ ದಿಗ್ಗಜರಾದ ಟಿ. ಬಿ.ಸೊಲಬಕ್ಕನವರ, ಎಂ.ಆರ್.ಬಾಳಿಕಾಯಿ, ಎಸ್.ಜೆ.ಖಂಡೇರಾವ್, ಕಾಸರಗೋಡಿನ ಪುಂಚಿತಾಯ್ ಹಾಗೂ ಹಾವೇರಿಯ ನೆಲದ ಪ್ರತಿಭೆಗಳಾದ ಹರೀಶ ಮಾಳಪ್ಪನವರ, ರೇಣುಕಾ ಮಾರ್ಕಂಡೆ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಒಂದು ಕಲಾ ಶಿಬಿರವನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ 40 ಕಲಾವಿದರು ಶಿಬಿರದಲ್ಲಿ ಭಾಗವಹಿಸಿ ಕಲಾಕೃತಿ ರಚಿಸಿದರು.

ಹೆದ್ದಾರಿ ನಡುವಿನ ಕಲಾ ಕೇಂದ್ರ

ಹುಬ್ಬಳ್ಳಿ-ಧಾರವಾಡ ನಡುವೆ ಸೇತುವೆಯಂತಿರುವ ಹಾವೇರಿಯಲ್ಲಿ ಈ ಗ್ಯಾಲರಿ ನಿರ್ಮಾಣವಾಗಿರುವುದು ಉತ್ತರ ಕರ್ನಾಟಕದ ಕಲಾವಿದರಿಗೆ ಉತ್ತೇಜನ ನೀಡಿದಂತಾಗಿದೆ.

1997ರಲ್ಲಿ ಹೊಸ ಜಿಲ್ಲೆಯಾದ ನಂತರ, ಇಲ್ಲಿ ಇಂಥ ವ್ಯವಸ್ಥೆ ಇರಲಿಲ್ಲ ಎಂಬ ಕೊರತೆಯನ್ನು ಕಲಾವಿದ ಕರಿಯಪ್ಪ ಅವರು ತುಂಬಿ ಕೊಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವುದರಿಂದ, ಕಲಾವಿದರಿಗೆ ಬಂದು ಹೋಗಲು ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಪುಣೆ– ಬೆಂಗಳೂರು ಮಾರ್ಗದಲ್ಲಿರುವ ಹಾವೇರಿಯನ್ನು ಹಾಯ್ದು ನಿತ್ಯ ನೂರಕ್ಕೂ ಹೆಚ್ಚು ಬಸ್‌ಗಳು ಓಡಾಡುತ್ತವೆ. ಹತ್ತಕ್ಕೂ ಹೆಚ್ಚು ರೈಲುಗಳು ಹಾವೇರಿ ಮಾರ್ಗವಾಗಿ ಸಂಚರಿಸುತ್ತವೆ. ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ವಿಮಾನ ನಿಲ್ದಾಣಗಳಿವೆ. ಹೀಗಾಗಿ, ಆ ಭಾಗದ ಚಿತ್ರ ಕಲಾವಿದರು ಈ ಗ್ಯಾಲರಿಯನ್ನು ಬಳಸಿಕೊಳ್ಳಬಹುದು ಎಂಬುದು ಹಿರಿಯ ಕಲಾವಿದರ ಅಭಿಪ್ರಾಯ.

ಹೊಸತನಕ್ಕೆ ತುಡಿಯುವ ಕಲಾವಿದ

ಗ್ಯಾಲರಿ ನಿರ್ಮಾತೃ ಕಲಾವಿದ ಕರಿಯಪ್ಪ ಹನುಮಂತಪ್ಪ ಹಂಚಿನಮನಿ ಅವರು ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದವರು. ಸದ್ಯ ಹಾವೇರಿ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್ ಆಗಿದ್ದಾರೆ. ಲಂಡನ್ ಮಹಾನಗರದಲ್ಲಿ ಕಲಾಪ್ರೇಮಿಗಳ ಆಹ್ವಾನದ ಮೇರೆಗೆ ಎರಡು ಬಾರಿ ತಮ್ಮ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದರು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಸಿಂಗಪುರದಲ್ಲೂ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ‘ವರ್ಲ್ಡ್‌ ಥ್ರೂ ಯಂಗ್ ಆಯ್ಸ್’ ಎಂಬ ರಷ್ಯಾ ದೇಶ ಪ್ರಕಟಿಸಿದ ವಿಶ್ವ ಕಲಾ ಸಂಪುಟದಲ್ಲಿ ಭಾರತೀಯ ಮೂಲದ ಮೂವರು ಪ್ರತಿಭಾವಂತ ಕಲಾವಿದರಿದ್ದು, ಅವರಲ್ಲಿ ಹಂಚಿನಮನಿ ಕೂಡ ಒಬ್ಬರು. ಇವರ ಚಿತ್ರಗಳು ಮತ್ತು ಪರಿಚಯ ಲೇಖನ ಈ ಸಂಪುಟದಲ್ಲಿ ಪ್ರಕಟವಾಗಿದೆ.

ಕರಿಯಪ್ಪ ಅವರ ಚಿತ್ರ ಕಲಾಸೇವೆ ಗುರುತಿಸಿದ ಧಾರವಾಡದ ಡಿ.ವಿ.ಹಾಲಬಾವಿ ಪ್ರತಿಷ್ಠಾನ ‘ಯುವ ಕುಂಚ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕಳೆದ ಬಾರಿ ಲಲಿತ ಕಲಾ ಅಕಾಡೆಮಿಯ ಚಿತ್ರ ಕಲಾ ಗೌರವವೂ ಇವರಿಗೆ ದೊರೆತಿದೆ.

ಗ್ಯಾಲರಿ ಸಂಪರ್ಕ ಸಂಖ್ಯೆ: 9986882493

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.