ADVERTISEMENT

ಎಐ ಮತ್ತು ಭಾಷಾಂತರದಲ್ಲಿ ಸ್ಥಿತ್ಯಂತರ

ಡಾ.ಕೆ.ಎಸ್.ಪವಿತ್ರ
Published 1 ಮಾರ್ಚ್ 2025, 23:30 IST
Last Updated 1 ಮಾರ್ಚ್ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   
‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಇವತ್ತು ಎ.ಐ ಪ್ರಭಾವವಿಲ್ಲದ ಕ್ಷೇತ್ರವಿಲ್ಲ. ಭಾಷಾಂತರವು ಇದರಿಂದ ಹೊರತಾಗಿಲ್ಲ. ತರ್ಜುಮೆಯ ಸಾಮರ್ಥ್ಯದ ಜೊತೆಗೆ ಪಠ್ಯದ ಭಾವನೆಗಳನ್ನೂ ಗ್ರಹಿಸುವುದನ್ನು ರೂಢಿಸಿಕೊಂಡ ಕೃತಕ ಬುದ್ದಿಮತ್ತೆ ಬಂದರೆ ಭಾಷಾ ಕಲಿಕೆ ಯಾವ ದಿಕ್ಕಿಗೆ ಸಾಗಬಹುದು?

ಬಹುಭಾಷೆಗಳನ್ನು ಬಲ್ಲವಳು ನಾನು. ಈವರೆಗೆ ನನಗೆ ಅದೊಂದು ಹೆಮ್ಮೆಯ ಸಂಗತಿಯೇ ಆಗಿತ್ತು. ವಿವಿಧ ಭಾಷೆಗಳ ರೋಗಿಗಳು ಆರೈಕೆಗಾಗಿ ನಿಮ್ಹಾನ್ಸ್‌ಗೆ ಬರುತ್ತಿದ್ದರು. ಕನ್ನಡ ಓದಲಾಗದ ವಿದ್ಯಾರ್ಥಿ ಮಿತ್ರರು ರೋಗಿಗಳು ಕನ್ನಡದಲ್ಲಿ ಬರೆದ ತಮ್ಮ ಅನಿಸಿಕೆಗಳನ್ನು ಭಾಷಾಂತರ ಮಾಡಿ ಹೇಳುವಂತೆ ನನ್ನನ್ನು ಕೇಳುತ್ತಿದ್ದರು. ಆಗ ಮನಸ್ಸಿನಲ್ಲಿ ಓದುತ್ತಾ, ಬಾಯಿಯಲ್ಲಿ ಅವರವರ ಅಗತ್ಯಕ್ಕೆ ತಕ್ಕಂತೆ ಇಂಗ್ಲಿಷ್ ಅಥವಾ ಹಿಂದಿಗೆ ಭಾಷಾಂತರ ಮಾಡುವುದು ನನಗೆ ಪ್ರಿಯವಾದ ಕೆಲಸವಾಗಿತ್ತು. ಸಂಶೋಧನೆಯಲ್ಲಿ ಅಧ್ಯಯನಕ್ಕೆಂದು ಉಪಯೋಗಿಸುವ ಪ್ರಶ್ನಾವಳಿ ಇಂಗ್ಲಿಷ್‌ನಲ್ಲಿದ್ದರೆ ಅದನ್ನು ನಾನು ಕನ್ನಡ ಇಲ್ಲವೆ ಹಿಂದಿಗೆ ಭಾಷಾಂತರಿಸಿ, ಎರಡೂ ಭಾಷೆಗಳನ್ನು ಬಲ್ಲ ಮತ್ತೊಬ್ಬರಿಂದ ಮರು ಭಾಷಾಂತರ ಮಾಡಿಸುತ್ತಿದ್ದೆ. ಹೀಗೆ ಭಾಷಾಂತರ ವಿವಿಧ ರೂಪಗಳಲ್ಲಿ ವೃತ್ತಿಯ ಭಾಗವಾಗಿತ್ತು. ಇದು 15 ವರ್ಷಗಳ ಹಿಂದಿನ ಕಥೆ.

ಈಗ ಕೃತಕಬುದ್ಧಿಮತ್ತೆ (ಎ.ಐ) ಕಾಲಿರಿಸದ ಕ್ಷೇತ್ರವೇ ಇಲ್ಲ. ಮೊನ್ನೆ ವಿದ್ಯಾರ್ಥಿಗಳಿಗೆ ನೃತ್ಯೋತ್ಸವದಲ್ಲಿ ಕಲಾವಿದರ ಪರಿಚಯ ಮಾಡುವ ಕೆಲಸ ಕೊಟ್ಟೆ. ಅತಿಥಿಗಳು-ಕಲಾವಿದರು ಪರಿಚಯವನ್ನು ಇಂಗ್ಲಿಷ್‌ನಲ್ಲಿ ಕಳಿಸಿದ್ದರು. ನನ್ನ ವಿದ್ಯಾರ್ಥಿಗಳೋ ‘ಕೃತಕಬುದ್ದಿಮತ್ತೆಯ ಮಕ್ಕಳು'!. ಯಾರೂ ನನ್ನನ್ನೇನೂ ಭಾಷಾಂತರ ಮಾಡೆಂದು ಕೇಳಲಿಲ್ಲ. ಸರಸರ ಮೊಬೈಲ್ ತೆಗೆದು ಗೂಗಲ್ ಟ್ರಾನ್ಸ್ಲೇಟರ್‌ಗೆ  ಹಾಕಿ ಕನ್ನಡದ ಅನುವಾದವನ್ನು ಕ್ಷಣದಲ್ಲಿ ನನ್ನ ಮುಂದಿಟ್ಟರು. ಲೇಖಕರೊಬ್ಬರು ‘ಗೂಗಲ್ ಟ್ರಾನ್ಸ್ಲೇಟರ್‌ಗೆ ಹಾಕಿಕೊಂಡೇ ಪ್ರತಿ ವಾರ ಅಂಕಣ ಬರೆಹ ಬರೆಯುತ್ತೇನೆ ಇಲ್ಲವೆ 'speech typing' ಮಾಡುತ್ತೇನೆ’ ಎಂದರು! ಆ ಕ್ಷಣದಲ್ಲಿ ಮುತುವರ್ಜಿಯಿಂದ ಭಾಷಾಂತರ ಮಾಡುವ ನನ್ನ ಬಹುಭಾಷಾ ಪ್ರಾವೀಣ್ಯ ನಿಷ್ಪ್ರಯೋಜಕ ಎನ್ನುವ ಭಾವನೆ ಬರುವಂತೆ ಮಾಡಿದ್ದು ಸುಳ್ಳಲ್ಲ.

ADVERTISEMENT

ಇದೇ ವಿಷಾದದಲ್ಲಿ ವಿಶಾಖಪಟ್ಟಣಕ್ಕೆ ಹೋಗಿದ್ದೆ. ಅಲ್ಲಿ ಹರುಕು-ಮುರುಕು ತೆಲುಗುವಿನಲ್ಲಿ ಹೇಗೋ ನಿಭಾಯಿಸುತ್ತಿದ್ದೆ. ಒಮ್ಮೆ ನಾನು ಹೇಳಲು ಪ್ರಯತ್ನಿಸಿದ್ದು ಚಾಲಕನಿಗೆ ಅರ್ಥವಾಗಲೇ ಇಲ್ಲ. ತತ್‌ಕ್ಷಣ ಗೂಗಲ್ ಟ್ರಾನ್ಸ್ಲೇಟರ್ ತೆರೆದು ನಾನು ಹೇಳಬೇಕೆಂದಿದ್ದನ್ನು ಟೈಪಿಸಿದೆ. ಅದು ಕೊಟ್ಟ ವಾಕ್ಯವನ್ನು ಓದಿದೆ. ಮ್ಯಾಜಿಕ್! ನಮ್ಮ ಮುಖ ಅರಳಿತು. ನಾನು ತೆಲುಗುವಿನಲ್ಲಿ ಮಾತನಾಡುತ್ತಿದ್ದೆ!.

ಮಾನವನ ಭಾಷಾ ಕೌಶಲ ಅದ್ಭುತ ಅಂದುಕೊಂಡಿದ್ದೆ. ಫೇಸ್‌ಬುಕ್‌ನಲ್ಲಿ ತನ್ನಿಂತಾನೇ ಕನ್ನಡದ ಸಂದೇಶಗಳು ಇಂಗ್ಲಿಷ್‌ಗೆ ಭಾಷಾಂತರಗೊಳ್ಳುವುದು ನೋಡುತ್ತಿದ್ದೆ. ಕೆಲವೊಮ್ಮೆ ಕನ್ನಡ ಪದ ಬೇಕೆಂದು ಗೂಗಲ್ ಮಾಡಿ ಇಂಗ್ಲಿಷ್ ಸಮಾನ ಪದ ಹಾಕಿದರೆ ಅದೇ ಪದ ಕನ್ನಡ ಲಿಪಿಯಲ್ಲಷ್ಟೆ ಬರುತ್ತಿತ್ತು. ಆದರೆ ಈ ಫಜೀತಿಗಳು ಕ್ರಮೇಣ ಸುಧಾರಿಸುತ್ತಿದ್ದವು. ಕೃತಕಬುದ್ದಿಮತ್ತೆಯನ್ನು ನಾವು ಉಪಯೋಗಿಸಿ, ಮತ್ತೆ ಮತ್ತೆ ಅದನ್ನು ಪ್ರಶ್ನೆ ಕೇಳಿದಷ್ಟೂ ಅದು ಕಲಿಯುವುದು ಹೆಚ್ಚಾಗುತ್ತಿತ್ತು; ನಾವು ಕಲಿಯುವುದು ಕಡಿಮೆಯಾಗುತ್ತಿತ್ತು. ನನ್ನಂತಹ ಭಾಷೆಗಳ ಕುತೂಹಲಿಯನ್ನೂ ‘ಗೂಗಲ್ ಮಾಡಿದರೆ ಸಾಕು, ಸಿಕ್ಕಿಬಿಡುತ್ತದೆ’ ಎಂಬ ಧೋರಣೆ ತಳೆಯುವಷ್ಟು ಅದರ ಭಾಷಾ ಪರಿಣತಿ ಇದೆ.

ಹತ್ತಿರದ ಭವಿಷ್ಯದಲ್ಲಿ ಕೃತಕಬುದ್ದಿಮತ್ತೆ ಮನುಷ್ಯನ ಭಾಷಾ ಕೌಶಲಗಳನ್ನೇ ಅನವಶ್ಯಕ ಎನಿಸುವಂತೆ ಮಾಡಿಬಿಡಬಹುದೆ? ಭಾಷಾಂತರದ ಇಂಜಿನ್‌ಗಳು ಸುಮಾರು ನೂರು ಭಾಷೆಗಳನ್ನು ಸಾಕಷ್ಟು ನಿಖರವಾಗಿ ಒಂದರಿಂದ ಇನ್ನೊಂದಕ್ಕೆ ತರ್ಜುಮೆ ಮಾಡಬಲ್ಲವು. ಈ ಭಾಷಾಂತರ ಮೇಲ್ನೋಟಕ್ಕೆ ಸರಿ ಎನಿಸಬಹುದು; ವ್ಯಾಕರಣ ಬದ್ಧವಾಗಿದೆ ಎನ್ನಿಸಬಹುದು. ಆದರೆ ಅದರಲ್ಲಿ ಎದ್ದು ಕಾಣುವ ಕೊರತೆ ಭಾವಹೀನತೆ. ಹಾಸ್ಯ-ವ್ಯಂಗ್ಯ-ದುಃಖ-ಪ್ರೀತಿ ಮೊದಲಾದ ಭಾವನೆಗಳನ್ನು ಭಾಷೆಯಲ್ಲಿ-ಅಕ್ಷರಗಳಲ್ಲಿ ಹಿಡಿದಿಡುವ ಸಾಮರ್ಥ್ಯ ಕೃತಕವಲ್ಲ. ಒಂದು ಭಾಷೆಯ ಧ್ವನಿ ಅದೇ ಭಾಷೆಯ ಅಕ್ಷರಗಳಲ್ಲಿಯೂ ಹಿಡಿದಿಡಲ್ಪಡುವುದೂ ಕಷ್ಟ. ಭಾಷಾಂತರದಲ್ಲಿ ಅದು ಮತ್ತಷ್ಟು ಕಷ್ಟ. ಭಾಷಾಂತರಕಾರ ಒಟ್ಟು ಸಂದರ್ಭ ಗ್ರಹಿಸದೆ ಭಾಷಾಂತರಿಸುವ ಪ್ರಯತ್ನ ಮಾಡಿದರೆ ಈ ಧ್ವನಿ ಇಲ್ಲವಾಗುವ ಸಾಧ್ಯತೆಯೇ ಹೆಚ್ಚು. ಕನ್ನಡದ ಕಾದಂಬರಿಗಳನ್ನು ಇಂಗ್ಲಿಷಿನಲ್ಲಿ ಓದುವಾಗ ಈ ಅನುಭವ ಅರಿವಿಗೆ ಬರುತ್ತದೆ. ಅತ್ಯುತ್ತಮ ಭಾಷಾಂತರ ಎನಿಸಬೇಕಾದಾಗ ಕಥೆ ಇಂತಹ ಭಾಷೆಯದು ಎಂಬ ಅರಿವೇ ನಮಗಾಗಬಾರದು. ಇಂತಹ ಭಾಷಾಂತರ ಈಗ ಪರಿಣತ-ಸೃಜನಶೀಲ ಮನುಷ್ಯ ಭಾಷಾಂತರಕಾರನಿಗೆ ಮಾತ್ರ ಸಾಧ್ಯವಿರಬಹುದಾದರೂ, ಮನುಷ್ಯರು ಅಂತಹ ಆಲ್ಗೋರಿಥಮ್ ಅನ್ನು ಕೆಲವೇ ವರ್ಷಗಳಲ್ಲಿ ರೂಪಿಸುವ ಎಲ್ಲ ಸಾಧ್ಯತೆಗಳೂ ಬಲವಾಗಿಯೇ ತೋರುತ್ತವೆ.

ತರ್ಜುಮೆಯ ಸಾಮರ್ಥ್ಯದ ಜೊತೆಗೆ ಪಠ್ಯದ ಭಾವನೆಗಳನ್ನೂ ಗ್ರಹಿಸುವುದನ್ನು ರೂಢಿಸಿಕೊಂಡ ಕೃತಕಬುದ್ದಿಮತ್ತೆ ಬಂದರೆ ಭಾಷಾ ಕಲಿಕೆ ಯಾವ ದಿಕ್ಕಿಗೆ ಸಾಗಬಹುದು? ಭಾಷೆ ಎಂದರೆ ಕೇವಲ ಮಾತಲ್ಲ, ಅದು ಒಂದು ಸಮಾಜದ ಸಾಂಸ್ಕೃತಿಕ-ಭೌದ್ಧಿಕ-ಭಾವನಾತ್ಮಕ ಪ್ರಕ್ರಿಯೆಗಳ ಒಟ್ಟು ಸಂಕೇತವಾಗಿ, ಆ ಸಮಾಜದ ಜನರನ್ನು ಬೆಸೆಯುವ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಭಾಷೆ-ಭಾವನೆ-ಸಮಾಜ-ಸಂಸ್ಕೃತಿಗಳ ಮಾತಾದರೆ, ಮಿದುಳಿನ ಆರೋಗ್ಯಕ್ಕೆ ಹೊಸ ಭಾಷೆಗಳನ್ನು ಕಲಿಯುವುದು ಅತ್ಯವಶ್ಯ ಎನ್ನುತ್ತದೆ ನರವಿಜ್ಞಾನ. ಅದು ಡಿಮೆನ್ಷಿಯಾ ತಡೆಯುವ ಒಂದು ಉಪಾಯ ಎನ್ನುತ್ತದೆ. ಸಮಸ್ಯಾ ಪರಿಹಾರದ ಸಾಮರ್ಥ್ಯ, ನೆನಪಿನ ಶಕ್ತಿ, ವಿಮರ್ಶಾತ್ಮಕ ಚಿಂತನೆ ಇವು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವವರಿಗೆ ಆಗುವ ಆನುಷಂಗಿಕ ಲಾಭಗಳು. ಹೀಗಿರುವಾಗ ಕೃತಕಬುದ್ದಿಮತ್ತೆವನ್ನೇ ನೆಚ್ಚಿಕೊಂಡು ಸೋಮಾರಿತನ ರೂಢಿಸಿಕೊಳ್ಳುವ ನಾವು ಸಹಜವಾಗಿ ಇವೆಲ್ಲವನ್ನೂ ಇಲ್ಲವಾಗಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.

 ಭಾಷೆಯಲ್ಲಿ ಐದು ಮುಖ್ಯ ಅಂಶಗಗಳಿವೆ. ಸೃಜನಶೀಲತೆ (ಪ್ರಾಸ-ಪದ ಸಂಪತ್ತು, ಕಾವ್ಯ), ಆತ್ಮಾನುಭೂತಿ-ಸಹಾನುಭೂತಿ (ಸಮಾಧಾನ-ಪ್ರೋತ್ಸಾಹ-ಕಾಳಜಿ), ಬೌದ್ಧಿಕತೆ (ಗಾದೆ, ಬೋಧನೆ, ತತ್ತ್ವ), ಭಾವನಾತ್ಮಕತೆ (ಪ್ರೀತಿ-ಹಾಸ್ಯ-ದುಃಖ), ಸಂಸ್ಕೃತಿ (ಮೌಲ್ಯ, ಪರಂಪರೆ, ನಂಬಿಕೆ) ಇವು ಮಾತಿನ ಸಂವಹನವನ್ನು ಭಾಷೆ ಎನಿಸುವಂತೆ ಮಾಡುತ್ತವೆ. ‘ಕೈ ಕೆಸರಾದರೆ ಬಾಯಿ ಮೊಸರು' ಎಂಬ ಗಾದೆಗೆ ಮನುಷ್ಯ ನೀಡುವ ಭಾಷಾಂತರ 'no pain no gain'. ಕೃತಕಬುದ್ದಿಮತ್ತೆ ನೀಡುವ ಭಾಷಾಂತರ, 'If the hands are muddy, the mouth is curdled'!

ಕ್ಷಣಗಳಲ್ಲಿ ಭಾಷಾಂತರ ಮಾಡುವ, ಪ್ರವಾಸಿಗಳಿಗೆ ತತ್‌ಕ್ಷಣ ಭಾಷಾಂತರ ಮಾಡಿ ಸಹಕರಿಸುವ ಕೃತಕಬುದ್ದಿಮತ್ತೆ ನಿರುಪಯುಕ್ತವೆ? ಇಲ್ಲ. ಆದರೆ ಅನುಭವಗಳಿಂದ ಶ್ರೀಮಂತವಾದ, ಮಾನವ ಮೂಲವಾದ ಭಾಷಾ ಸಂಪತ್ತನ್ನು ನಾವು ಯಂತ್ರದ ಕೈಗೆ ಹಾಕಿ ಕೈಕಟ್ಟಿ ಕುಳಿತಿರುವಂತಿಲ್ಲ. ಅದರ ಸಹಾಯದಿಂದ ಹೊಸ ಭಾಷೆಯನ್ನು ಕಲಿಯುವ ಪ್ರಯತ್ನವನ್ನು ಮಾಡಬಹುದು. ಭಾಷಾ ಪ್ರಜ್ಞೆ-Linguistic consciousness ಅನ್ನು ಬಹುಭಾಷೆಗಳನ್ನು ಕಲಿಯುವ ಮೂಲಕ ರೂಢಿಸಿಕೊಳ್ಳುವ ಪ್ರಯತ್ನ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.