ADVERTISEMENT

ಕೋಟಿ ವೃಕ್ಷದ ರಾಮಯ್ಯ! ಇದು ದಾರಿಪಲ್ಲಿ ರಾಮಯ್ಯರ ಕಥೆ

ಮಂಜುನಾಥ್ ಚಾಂದ್
Published 20 ಏಪ್ರಿಲ್ 2025, 0:31 IST
Last Updated 20 ಏಪ್ರಿಲ್ 2025, 0:31 IST
<div class="paragraphs"><p>ದಾರಿಪಲ್ಲಿ ರಾಮಯ್ಯ&nbsp;</p></div>

ದಾರಿಪಲ್ಲಿ ರಾಮಯ್ಯ 

   

ದಾರಿಪಲ್ಲಿ ರಾಮಯ್ಯ ‘ವನಜೀವಿ ರಾಮಯ್ಯ’ ಎಂದೇ ಪ್ರಖ್ಯಾತರು. ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ರೆಡ್ಡಿಪಲ್ಲಿಯವರು. ಇದು ನಮ್ಮ ಕಲಬುರಗಿಯಂತೆ ಬಿಸಿಲನಾಡು. ಈ ನೆಲದ ತಾಪ ತಗ್ಗಿಸಬೇಕು ಎಂದು ಹೊರಟವರು, ಸುಮಾರು ಆರು ದಶಕಗಳು ಬೀಜಗಳನ್ನು ಬಿತ್ತುತ್ತ, ಗಿಡಗಳನ್ನು ನೆಡುತ್ತ ಹೋದರು. ತಮ್ಮ ಜೀವನವನ್ನೇ ಇದಕ್ಕಾಗಿ ಮುಡಿಪಿಟ್ಟರು. ಅವರು ಬಿತ್ತಿದ ಬೀಜಗಳು ಮರಗಳಾಗಿ ಬೆಳೆದವು. ದಾರಿಗುಂಟ ತಂಪು ಚೆಲ್ಲಿದವು. ಜನ ಅವುಗಳ ಅಡಿಯಲ್ಲಿ ದಣಿವಾರಿಸಿಕೊಂಡರು, ಪಕ್ಷಿಗಳು ಆಸರೆ ಪಡೆದವು. ಹಾಗೆಯೇ ಖಮ್ಮಂ ಜಿಲ್ಲೆಯ ಉದ್ದಗಲಕ್ಕೂ ಬೆಳೆದು ನಿಂತಿರುವ ಮರಗಳ ಸಂಖ್ಯೆ ಒಂದು ಕೋಟಿಗೂ ಅಧಿಕ! ಈ ಕಾರಣಕ್ಕಾಗಿ ಜನ ಅವರನ್ನು ಪ್ರೀತಿಯಿಂದ ಚೇಟ್ಲಾ (ಮರ) ರಾಮಯ್ಯ ಎಂದೂ ಕರೆಯುತ್ತಾರೆ.

ಪ್ರತಿ ಮಳೆಗಾಲದ ನಂತರ ರಾಮಯ್ಯನವರ ತಾಯಿ ಪುಲ್ಲಮ್ಮ ಮುಂದಿನ ಮಳೆಗಾಲಕ್ಕೆ ಬೀಜಗಳನ್ನು ಎತ್ತಿಡುತ್ತಿದ್ದರು. ಎಂಥ ಬೀಜ? ಅವರೇ ಬೆಳೆದ ಹೀರೇಕಾಯಿ ಬೀಜಗಳು. ಕಾಯಿಯನ್ನು ಬಿಲಿಸಿಗೆ ಒಣಗಿಸಿದರೆ ವರ್ಷವಿಟ್ಟರೂ ಏನೂ ಆಗುವುದಿಲ್ಲ. ಮತ್ತೆ ಮುಂಗಾರು ಬಂತೆಂದರೆ ಕಾಯಿ ಒಡೆದು ಬೀಜ ಬಿತ್ತಿದರೆ ಸಾಕು. ಹೊಸ ಜೀವ, ಹೊಸ ಫಲ. ಪ್ರತಿ ಹಳ್ಳಿಯ ಬಹುತೇಕ ಮನೆಗಳಲ್ಲಿ ಇಂತಹುದೊಂದು ರೂಢಿ ಇದ್ದೇ ಇರುತ್ತದೆ. ಆದರೆ ತಾಯಿ ಮಾಡುತ್ತಿದ್ದ ಈ ‘ಬೀಜ ರಕ್ಷಣೆ’ ವಿಧಾನ ಸುಮಾರು ಎಪ್ಪತ್ತು ವರ್ಷಗಳ ಹಿಂದೆಯೇ ರಾಮಯ್ಯನವರ ಮೇಲೆ ಗಾಢ ಪ್ರಭಾವ ಬೀರಿತ್ತು. ಎಷ್ಟರ ಮಟ್ಟಿಗೆ ಎಂದರೆ, ಅದನ್ನು ತಮ್ಮ ಇಡೀ ಜೀವನಕ್ಕೆ ಅಳವಡಿಸಿಕೊಳ್ಳುವಷ್ಟು. ಚಂದನ, ಬೇವು, ಅರಳಿ, ಬಿಲ್ವ, ಕದಂಬದಂತಹ ಸ್ಥಳೀಯ ಗಿಡಗಳ ಬೀಜಗಳನ್ನು ಸಂಗ್ರಹಿಸುವ ಅಭ್ಯಾಸವು ಅವರಲ್ಲಿ ಬೇರೂರುವಂತೆ ಮಾಡಿದ್ದು ತಾಯಿಯೇ.

ADVERTISEMENT

ಬೀಜ ಬಿತ್ತುತ್ತಾ ಹೊರಟರು...

ಅಲ್ಲಿಂದ ಶುರುವಾಯಿತು ಬೀಜ ಬಿತ್ತುವ ಮಹಾಯಜ್ಞ. ಪ್ರತಿ ವರ್ಷ ಮಳೆ ಸುರಿಯಲು ಶುರುವಾಯಿತು ಎಂದರೆ, ರಾಮಯ್ಯ ಸೈಕಲ್ ಏರಿ ಹೊರಟು ಬಿಡುತ್ತಿದ್ದರು. ಸೈಕಲ್‌ಗೊಂದು ಚೀಲ, ಅದರ ತುಂಬಾ ಬಗೆ ಬಗೆಯ ಬೀಜಗಳು. ಅಂಗಿಯ ಕಿಸೆ ತುಂಬ ಬೀಜಗಳೇ. ಹಾದಿಗುಂಟ ಎಲ್ಲೆಲ್ಲಿ ಖಾಲಿ ಜಾಗ ಕಾಣಿಸುತ್ತದೋ ಅಲ್ಲಿ ಬೀಜಗಳನ್ನು ಬಿತ್ತಿ ಮುಂದೆ ಸಾಗುತ್ತಿದ್ದರು. ಆಸ್ಪತ್ರೆ, ಶಾಲೆ, ಗ್ರಂಥಾಲಯಗಳ ಆವರಣಗಳಲ್ಲಿ ಬೀಜಗಳನ್ನು ಬಿತ್ತುತ್ತಿದ್ದರು. ಒಂದಲ್ಲ, ಎರಡಲ್ಲ, ಮೈಲುಗಟ್ಟಲೆ ಸೈಕಲ್‌ನಲ್ಲಿ ಹೀಗೆ ಸಾಗುತ್ತಲೇ ಇರುತ್ತಿದ್ದರು. ತಮ್ಮ ಬೀಜದ ಕೋಠಿ ಖಾಲಿಯಾಗುವ ತನಕ.

ಸೈಕಲ್ ಏರಿ ರಾಮಯ್ಯ ಹೊರಟರು ಎಂದರೆ ಊರಿನ ಜನಕ್ಕೆ ಅರ್ಥವಾಗಿ ಬಿಡುತ್ತಿತ್ತು; ಭೂಮ್ತಾಯಿ ಮಡಿಲು ಇನ್ನಷ್ಟು ಹಸಿರಾಗಲು ಅಣಿಯಾಯಿತು ಎಂದು.

‘ವಿಕಾಸದ ಅದ್ಭುತ ಜೀವಶಕ್ತಿ ಪುಟ್ಟ ಬೀಜದಲ್ಲಿದೆ. ತಂಪಾದ ಮಣ್ಣಿನಲ್ಲಿ ಅವಿತ ಬೀಜ ಮೊಳಕೆಯೊಡೆದು ಮರವಾಗಿ ತನ್ನೊಳಗಿನ ಪ್ರಪಂಚವನ್ನು ಮನುಕುಲಕ್ಕೆ ತೋರಿಸುತ್ತದೆ’ ಎನ್ನುತ್ತಿದ್ದರು ರಾಮಯ್ಯ. ವಿಕಾಸವಾದದ ಅರಿವಿದ್ದರೂ ಮನುಷ್ಯ ಅರಿವುಗೇಡಿಯಂತೆ ವರ್ತಿಸುತ್ತಿರುತ್ತಾನೆ ಎಂಬ ಬೇಸರ ಅವರಲ್ಲಿತ್ತು. ದಾರಿಗುಂಟ ಗಿಡಗಳನ್ನು ನೆಡಲು ಜೇಬು ತುಂಬಾ ಹಣವಿರಬೇಕಿಲ್ಲ. ಬೇಕಿರುವುದು ಇಚ್ಛಾಶಕ್ತಿಯಷ್ಟೇ. ಒಬ್ಬ ಶಾಸಕನಾದವನು, ಸಂಸದನಾದವನು ತನ್ನ ಕ್ಷೇತ್ರದಲ್ಲಿ ಇಂತಹ ಕೆಲಸ ಮಾಡುವುದಿಲ್ಲ. ಅದಕ್ಕೆ ಒಬ್ಬ ರಾಮಯ್ಯನೇ ಬೇಕಿತ್ತು ಎಂಬುದು ಸತ್ಯ. ಅದನ್ನವರು ಅಕ್ಷರಶಃ ಜಾರಿಗೆ ತಂದಿದ್ದರು.

ಮೈಲುಗಟ್ಟಲೆ ಸೈಕಲ್ ತುಳಿದು ಬೀಜಗಳನ್ನು ಬಿತ್ತಿದರಷ್ಟೇ ಸಾಕೆ? ಅವು ಬೆಳೆದು ಮರಗಳಾಗುವುದು ಬೇಡವೇ? ನಿಜ, ಆ ಕೆಲಸವನ್ನೂ ರಾಮಯ್ಯ ಶಿಸ್ತುಬದ್ಧವಾಗಿ ಮಾಡಿದ್ದಕ್ಕೇ ಅವು ಬೆಳೆದು ನಿಂತಿವೆ. ಅವರ ಆಸಕ್ತಿ ಇಷ್ಟಕ್ಕೇ ನಿಂತಿರಲಿಲ್ಲ. ಮರಗಳ ಬಗ್ಗೆ ಮಾಹಿತಿ ಸಿಗುವ ಪುಸ್ತಕಗಳನ್ನೆಲ್ಲ ಸಂಗ್ರಹ ಮಾಡುತ್ತಿದ್ದರು. ಅವುಗಳನ್ನು ಪಟ್ಟಾಗಿ ಕುಳಿತು ಓದುತ್ತಿದ್ದರು. ಎಂಥ ಬೀಜಗಳನ್ನು ಬಿತ್ತಬೇಕು, ಎಂಥ ಗಿಡಗಳನ್ನು ನೆಡಬೇಕು ಎಂಬುದರ ಪೂರ್ಣ ಅರಿವು ಅವರಿಗಿತ್ತು.

ಸೈಕಲ್‌ನಲ್ಲಿ ಸಾಗುವ ರಾಮಯ್ಯ ಜನರು ಬೀದಿಬದಿಯಲ್ಲಿ ಎಸೆದ ಪ್ಲೇಟುಗಳು, ಡಬ್ಬಾದ ತುಂಡುಗಳನ್ನು ತಂದು ಅವುಗಳಿಗೆ ಬಣ್ಣ ಬಳಿಯುತ್ತಿದ್ದರು. ಅವುಗಳ ಮೇಲೆ ತೆಲುಗಿನಲ್ಲಿ ‘ವೃಕ್ಷೋ ರಕ್ಷತಿ ರಕ್ಷಿತಃ’ ಎಂದು ಘೋಷಣೆ ಬರೆಯುತ್ತಿದ್ದರು. ಮತ್ತೆ ಆ ಫಲಕಗಳನ್ನು ಹಳ್ಳಿ ಹಳ್ಳಿಯ ಮರಗಳಿಗೆ ನೇತು ಹಾಕುತ್ತಿದ್ದರು.

‘ಒಬ್ಬ ಬೂದಿಬಡುಕ ಸ್ವಾಮೀಜಿಯನ್ನು ನಂಬುತ್ತೀರಿ. ಖಾಕಿ ತೊಟ್ಟ ಪೊಲೀಸರನ್ನು ನಂಬುತ್ತೀರಿ. ಹಸಿರು ಶಾಲು ಸುತ್ತಿಕೊಂಡ ನನ್ನ ಮಾತನ್ನೇಕೆ ಕೇಳುವುದಿಲ್ಲ’ ಎಂದು ರಾಮಯ್ಯ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಫಲಕವೊಂದನ್ನು ತಮ್ಮ ತಲೆಗೆ ಕಿರೀಟದಂತೆ ಧರಿಸುತ್ತಿದ್ದ ಅವರು, ‘ನಾನು ವಿಶ್ವ ಸುಂದರಿ ರೀತಿ ಕಾಣಿಸುವುದಿಲ್ಲವೇ? ಇದು ನನ್ನ ಅಸ್ತಿತ್ವ. ಇದೇ ನನ್ನ ರೂಪ’ ಎನ್ನುತ್ತಿದ್ದರು.

ಪ್ರತಿ ಮಳೆಗಾಲಕ್ಕೂ ಮುನ್ನ ಮಕ್ಕಳಿಗೆ ತಮ್ಮ ಸಂಗ್ರಹದಲ್ಲಿದ್ದ ಬೀಜಗಳನ್ನು, ಗಿಡಗಳನ್ನು ವಿತರಿಸುತ್ತ, ಈ ಭೂಮ್ತಾಯಿಯನ್ನು ರಕ್ಷಿಸಿ ಅನ್ನುತ್ತಿದ್ದರು. ತೆಲಂಗಾಣದ ಹಸಿರುಕ್ರಾಂತಿಯ ಹರಿಕಾರ ಎಂದೇ ಜನಜನಿತರಾಗಿದ್ದ ಅವರಿಗೆ 2017ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.

ರಾಮಯ್ಯ ಸಾಮಾಜಿಕ ಅರಣ್ಯೀಕರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಅವರು ತೆಲಂಗಾಣದ ಅನೇಕ ಗ್ರಾಮಗಳಿಗೆ ಭೇಟಿ ನೀಡಿ, ಜನರ ಕೈಗೆ ಗಿಡಗಳನ್ನು ಹಸ್ತಾಂತರಿಸಿ ಅದರ ಮಹತ್ವವನ್ನು ತಿಳಿಸುತ್ತಿದ್ದರು.

ತೆಲಂಗಾಣ ಸರ್ಕಾರ ಆರನೇ ತರಗತಿಯ ಸಮಾಜ ಪಠ್ಯ ಪುಸ್ತಕದಲ್ಲಿ ಅವರ ಜೀವನಯಾನದ ಅಧ್ಯಾಯವನ್ನು ಸೇರಿಸಿದೆ. ಮಹಾರಾಷ್ಟ್ರ ಸರ್ಕಾರ ಅಲ್ಲಿನ ತೆಲುಗು ಮಾಧ್ಯಮದ ಮಕ್ಕಳಿಗಾಗಿ 9ನೇ ತರಗತಿಯ ಪಠ್ಯದಲ್ಲಿ ರಾಮಯ್ಯನವರ ಸಾಧನೆಯನ್ನು ತಿಳಿಸಿದೆ. ಸುಸ್ಥಿರ ಪರಿಸರಕ್ಕಾಗಿ ನೀಡಿದ ಕೊಡುಗೆಗಾಗಿ ‘ಅಕಾಡೆಮಿ ಆಫ್ ಯೂನಿವರ್ಸಲ್ ಗ್ಲೋಬಲ್ ಪೀಸ್ ಸಂಸ್ಥೆ’ ಗೌರವ ಡಾಕ್ಟರೇಟ್ ನೀಡಿದೆ.

ವನಜೀವಿ ರಾಮಯ್ಯ ತೆಲಂಗಾಣಕ್ಕೆ ಸೀಮಿತ ಎಂದರೆ ತಪ್ಪಾದೀತು. ಅವರ ಜೀವನ ಈ ಧರೆಯ ಮೇಲಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿ. ‘ಪ್ರಕೃತಿಯಿಂದ ಬಂದವರು ನಾವು, ಮರಳಬೇಕಾಗಿರುವುದು ಪ್ರಕೃತಿಗೇ’ ಎಂಬ ಸಂದೇಶವನ್ನು ಬಿತ್ತಿದ ರಾಮಯ್ಯ, ಪ್ರಕೃತಿಗೇ ಮರಳಿದ್ದಾರೆ.

ರಾಮಯ್ಯ ಕೊಟ್ಟ ಶಿಕ್ಷೆ ಏನು?

2022 ರಲ್ಲಿ ಖಮ್ಮಂನಲ್ಲಿ ನಡೆದ ಘಟನೆ ಇದು. ಅಂದು ಸಂಭವಿಸಿದ ಅಪಘಾತದಲ್ಲಿ ರಾಮಯ್ಯ ತೀವ್ರವಾಗಿ ಗಾಯಗೊಂಡಿದ್ದರು. ಆ ಅಪಘಾತಕ್ಕೆ ಕಾರಣನಾದ ವ್ಯಕ್ತಿಯ ವಿರುದ್ಧ ದೂರು ದಾಖಲಿಸುವಂತೆ ಅವರನ್ನು ಒತ್ತಾಯಿಸಲಾಯಿತು. ಆದರೆ ರಾಮಯ್ಯ ಮಾಡಿದ್ದೇನು? ಆ ವ್ಯಕ್ತಿಗೆ ನೂರು ಗಿಡಗಳನ್ನು ಕೊಟ್ಟು ಅವನ್ನು ಜೀವನವಿಡೀ ಕಾಪಾಡಿಕೊಂಡು ಬರುವಂತೆ ಹೇಳಿದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.