ADVERTISEMENT

ಕೆರೆಗಳಿಗೆ ಮರುಜೀವ ಜನರಿಗೆ ಜಲಜೀವ

ಚಂದ್ರಹಾಸ ಚಾರ್ಮಾಡಿ
Published 23 ಫೆಬ್ರುವರಿ 2025, 0:00 IST
Last Updated 23 ಫೆಬ್ರುವರಿ 2025, 0:00 IST
ತುಮಕೂರಿನ ಗಾರೆನರಸಯ್ಯನಕಟ್ಟೆ ಕೆರೆ
ತುಮಕೂರಿನ ಗಾರೆನರಸಯ್ಯನಕಟ್ಟೆ ಕೆರೆ   

ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹರಾತಳು ಗ್ರಾಮದ ‘ಪಟ್ಟದ ಕೆರೆ’ ಇದೀಗ ನೀರಿನಿಂದ ತುಂಬಿ ತುಳುಕುತ್ತಿದೆ. ಶಿರಾ ತಾಲ್ಲೂಕಿನ ‘ಶಿಬಿ ಕೆರೆ’ ತುಂಬಿದ ಪರಿಣಾಮ ಒಂದಷ್ಟು ಯುವಕರು ನಗರಗಳಿಂದ ಊರಿಗೆ ಮರಳಿ ಮತ್ತೆ ಕೃಷಿಯಲ್ಲಿ ತೊಡಗಿದ್ದಾರೆ. ಕುಣಿಗಲ್ ತಾಲ್ಲೂಕಿನ ‘ಕಾವೇರಮ್ಮ ಕೆರೆ’ ಬರೋಬ್ಬರಿ ಎಪ್ಪತ್ತೈದು ವರ್ಷಗಳ ನಂತರ ಮತ್ತೆ ಭರ್ತಿಯಾಗಿದೆ. ಕಸದ ತೊಟ್ಟಿಯಾಗಿದ್ದ ಹಾವೇರಿಯ ‘ಕಬ್ಬೂರ ಕೆರೆ’ ಮಾದರಿ ಕೆರೆಯಾಗಿ ಕಂಗೊಳಿಸುತ್ತಿದೆ. ಚನ್ನಗಿರಿಯ ‘ಹೊಸಕಟ್ಟೆ ಕೆರೆ’ ತುಂಬಿದ ಕಾರಣ ಜನರಿಗೆ ಟ್ಯಾಂಕರ್ ನೀರು ಖರೀದಿಸುವ ಖರ್ಚಿನಿಂದ ಮುಕ್ತಿ ದೊರೆತಿದೆ. ಹೊಸನಗರದ ‘ಒಟ್ಟೂರು ಕೆರೆ’ ಸರ್ವಧರ್ಮಿಯರನ್ನು ಒಗ್ಗೂಡಿಸಿದೆ. ಶಿವಮೊಗ್ಗ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ‘ಮಾವಿನಕಟ್ಟೆ ಕೆರೆ’ ಒತ್ತುವರಿಯಿಂದ ಮುಕ್ತವಾಗಿ ಮೈದಳೆದು ನಿಂತಿದೆ. ಗಂಗಾವತಿಯ ‘ಅದಾಪುರ ಕೆರೆ’ ತುಂಬಿದ ಪರಿಣಾಮ ಅಲ್ಲಿನ ಮಂದಿ ವಲಸೆ ಹೋಗುವುದು ಕಡಿಮೆಯಾಗಿದೆ. ಮುಧೋಳ ತಾಲ್ಲೂಕಿನಲ್ಲಿರುವ ಬ್ರಿಟಿಷರ ಕಾಲದ ‘ಮೆಟಗುಡ್ಡ ಕೆರೆ’ ಭರ್ತಿಯಾಗಿದೆ. ವಿಜಯಪುರದ ‘ಹಿಟ್ನಳ್ಳಿ ಕೆರೆ’ ಊರ ಮಂದಿಗೆ ಪ್ಲೋರೈಡ್‌ಮುಕ್ತ ನೀರನ್ನು ಒದಗಿಸುತ್ತಿದೆ. ಯಾದಗಿರಿಯ ‘ಹುಲಿರಾಯನ ಬೆಟ್ಟದ ಕೆರೆ’ ಅಲ್ಲಿನ ಭತ್ತದ ಇಳುವರಿಯನ್ನು ಇಮ್ಮಡಿಗೊಳಿಸಿದೆ.

‘ನಮ್ಮೂರು ನಮ್ಮ ಕೆರೆ’ ಯೋಜನೆಯಿಂದಾಗಿ ಹೀಗೆ ಪ್ರತಿಯೊಂದು ಕೆರೆಯ ಹಿಂದೆ ಒಂದೊಂದು ಯಶೋಗಾಥೆ ಇದೆ.

ಕೆರೆಗಳ ಕಾಯಕಲ್ಪ ಕೆಲಸಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ದಂಪತಿ 2016ರಲ್ಲಿ ‘ನಮ್ಮೂರು ನಮ್ಮ ಕೆರೆ’ ಎಂಬ ಹೆಸರನ್ನಿಟ್ಟರು. ಕೆರೆ ಕೆಲಸಗಳಲ್ಲಿ ಊರಿನ ಜನರನ್ನು ಒಗ್ಗೂಡಿಸಿದರು. ಪ್ರಾಯೋಗಿಕವಾಗಿ ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳ ಎಂಟು ಕೆರೆಗಳ ಹೂಳೆತ್ತಲಾಯಿತು. ಇದಕ್ಕೆ ಊರವರಿಂದ ದೊರೆತ ಭರಪೂರ ಸ್ಪಂದನೆಯನ್ನು ಗಮನಿಸಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೆರೆಗಳ ಹೂಳೆತ್ತುವ ಕೆಲಸವನ್ನು ಅಭಿಯಾನವಾಗಿ ರಾಜ್ಯದಾದ್ಯಂತ ವಿಸ್ತರಿಸಿದರು.

ADVERTISEMENT

ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕದ ಹೆಚ್ಚಿನ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಆ ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸುವ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವಾರು ದಶಕಗಳಿಂದ  ಮಾಡುತ್ತಾ ಬರಲಾಗಿದೆ. ರಾಜ್ಯದ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಯೋಚಿಸುತ್ತಿದ್ದಾಗ ಹೊಳೆದದ್ದೇ ಕೆರೆಗಳಿಗೆ ಕಾಯಕಲ್ಪ ನೀಡುವ ಯೋಜನೆ. ಪೂರ್ವಜರು, ರಾಜರಿಂದ ನಿರ್ಮಿಸಲ್ಪಟ್ಟ, ಊರ ಮಂದಿಗೆ ನೀರಿನ ಪ್ರಮುಖ ಮೂಲವಾಗಿದ್ದ ಕೆರೆಗಳು ಹೂಳಿನಿಂದ ತುಂಬಿ, ಒತ್ತುವರಿಯ ದವಡೆಗೆ ಸಿಲುಕಿ ಕಣ್ಮರೆಯಾಗಿವೆ. ಅವುಗಳನ್ನು ಹುಡುಕಾಡಿ ಒತ್ತುವರಿ ತೆರವುಗೊಳಿಸಿ ಊರವರ ಸಹಭಾಗಿತ್ವದೊಂದಿಗೆ ಮತ್ತೆ ಅವುಗಳಿಗೆ ಗತವೈಭವವನ್ನು ತಂದುಕೊಟ್ಟು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು. ಕೆರೆಯ ಅಗತ್ಯ ಕುರಿತು ಜಾಗೃತಿ ಮೂಡಿಸಿ ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಊರಿನ ಮಂದಿಗೆ ವಹಿಸಿಕೊಡುವುದು. ಅಳಿವಿನಂಚಿನಲ್ಲಿದ್ದ ಕೆರೆಗಳಿಗೆ ಮರುಜೀವ ನೀಡುವುದು. ಆಯಾ ಊರಿನ ಕೆರೆಗಳ ಮೂಲಕ ಅಲ್ಲಿನ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದು ಯೋಜನೆಯ ಉದ್ದೇಶ.

ಕೆರೆಗಳ ಆಯ್ಕೆ ಹೇಗೆ?

ಒಂದು ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಸುಮಾರು 39 ಸಾವಿರ ಕೆರೆಗಳಿವೆ. ಅವುಗಳಲ್ಲಿ ಹೆಚ್ಚಿನವು ನಿರುಪಯುಕ್ತವಾಗಿವೆ. ಹಾಗಾದರೆ ಯೋಜನೆಗೆ ಕೆರೆಯ ಆಯ್ಕೆ ಹೇಗೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಎಲ್ಲೆಲ್ಲಿ ಬರಿದಾದ ಕೆರೆಗಳಿವೆ ಮತ್ತು ಆ ಊರಿನಲ್ಲಿರುವ ನೀರಿನ ಸಮಸ್ಯೆ ಕುರಿತು ಸಮೀಕ್ಷೆ ನಡೆಸಲಾಯಿತು. ನಂತರ ಪ್ರತಿ ವರ್ಷ ತಾಲ್ಲೂಕಿಗೊಂದರಂತೆ ಕೆರೆಗಳ ಹೂಳೆತ್ತಲು ಆಯ್ಕೆ ಮಾಡಲಾಯಿತು.

ಆಯಾ ಊರಿನ ಮಂದಿ ಆಸಕ್ತಿವಹಿಸಿದರೆ, ಭಾಗಿಗಳಾದರೆ ಮಾತ್ರ ಮುಂದೆ ಅವುಗಳ ರಕ್ಷಣೆ ಸಾಧ್ಯವೆಂಬ ನಿಟ್ಟಿನಲ್ಲಿ ಊರಿನವರನ್ನು ಒಟ್ಟು ಸೇರಿಸಿ ‘ಕೆರೆ ಅಭಿವೃದ್ಧಿ ಸಮಿತಿ’ ರಚಿಸಲಾಯಿತು. ಕೆರೆ ಅಭಿವೃದ್ಧಿ ಕೆಲಸಗಳಿಗೆ ಅಲ್ಲಿನ ಪಂಚಾಯಿತಿ, ಸರ್ಕಾರದ ಇಲಾಖೆ, ಶಾಸಕ, ಸಂಸದರು, ಗಣ್ಯರು.. ಹೀಗೆ ಎಲ್ಲರೂ ಉತ್ತಮ ರೀತಿಯ ಸಹಕಾರವನ್ನು ನೀಡಿದರು. ಹೆಚ್ಚಿನ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವಲ್ಲಿ ಅಲ್ಲಿನ ಪಂಚಾಯಿತಿ ಅಧಿಕಾರಿಗಳು ನೀಡಿದ ಕೊಡುಗೆ ಅಪೂರ್ವ.

ಕೆರೆಯ ಹೂಳೆತ್ತುವ ಕೆಲಸವನ್ನು ವೈಜ್ಞಾನಿಕವಾಗಿ ನಡೆಸುವ ನಿಟ್ಟಿನಲ್ಲಿ ಏಳು ಮಂದಿ ಅನುಭವಿ ಎಂಜಿನಿಯರ್‌ಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೇಮಕ ಮಾಡಲಾಯಿತು. ಕೆರೆಯ ಗಾತ್ರ, ಮಣ್ಣು, ಬೇಕಾಗುವ ಖರ್ಚು, ಅಲ್ಲಿನ ಸವಾಲು... ಹೀಗೆ ಎಲ್ಲವನ್ನು ಮೊದಲು ಅಧ್ಯಯನ ನಡೆಸಿ ನಂತರ ಕೆಲಸ ಆರಂಭಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ₹2 ಲಕ್ಷದಿಂದ ₹22 ಲಕ್ಷದವರೆಗೆ ಹೂಳೆತ್ತುವ ಯಂತ್ರಗಳ ಬಾಡಿಗೆ ಮೊತ್ತವನ್ನು ನೀಡಲಾಯಿತು. ಇದುವರೆಗೆ 800 ಕೆರೆಗಳ ಹೂಳೆತ್ತಲು ₹62 ಕೋಟಿ ಖರ್ಚು ಮಾಡಲಾಗಿದೆ.

ಕೆರೆ ಆಯ್ಕೆ, ಗುದ್ದಲಿ ಪೂಜೆ, ಕೆಲಸ ಆರಂಭ, ಕೆರೆ ಹಸ್ತಾಂತರ.. ಹೀಗೆ ಕೆರೆ ಪುನಶ್ಚೇತನದ ಪ್ರತಿ ಹಂತದಲ್ಲೂ ಊರಿನವರು ನೀಡಿದ ಸಹಕಾರ ದೊಡ್ಡದು. ಗ್ರಾಮಸ್ಥರು ಕೆರೆ ಕೆಲಸ ಮುಗಿಯುವವರೆಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೂಳು ಸಾಗಿಸಲು ಟ್ರ್ಯಾಕ್ಟರ್, ಟಿಪ್ಪರ್‌ಗಳನ್ನು ಉಚಿತವಾಗಿ ನೀಡಿದ್ದಾರೆ.

ಸಾಮಾನ್ಯವಾಗಿ ಒಂದು ಕೆರೆ ಹಿಂದಿನ ಗಾತ್ರ ತಲುಪಬೇಕಾದರೆ ಒಂದು ವರ್ಷವಾದರೂ ಬೇಕಾಗುತ್ತದೆ. ಆದರೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಅವರ ಮಾರ್ಗದರ್ಶನದಂತೆ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಕೆರೆ ಕೆಲಸದ ಸಂಪೂರ್ಣ ಮೇಲುಸ್ತುವಾರಿಯನ್ನು ವಹಿಸಿಕೊಂಡ ಕಾರಣ ಒಂದರಿಂದ ಎರಡು ತಿಂಗಳಲ್ಲಿ ಪೂರ್ಣಗೊಂಡಿದೆ. ಧರ್ಮಸ್ಥಳದವರು ಕೆರೆಯ ಹೂಳೆತ್ತುತ್ತಿದ್ದಾರೆ ಎಂದಾಗ, ಹೆಚ್ಚಿನವರು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಕೆರೆ ಅಭಿವೃದ್ಧಿ ಸಮಿತಿಯವರು ಮನವೊಲಿಸಿ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.

ಸವಾಲುಗಳು ಹಲವು

ಹೆಚ್ಚಿನ ಕೆರೆಗಳ ಹೂಳೆತ್ತುತ್ತಿದ್ದಂತೆ ಜಲ ಉಕ್ಕಿದೆ. ಇನ್ನು ಕೆಸರುಯುಕ್ತ ಹೂಳಿನಿಂದ ತುಂಬಿದ್ದ ಕೆರೆಗಳಲ್ಲಿ ಹಿಟಾಚಿ ಹೂತು ಹೋದದ್ದು, ಪಾಯಸದಂತಹ ಹೂಳನ್ನು ಸಾಗಿಸಲು ಪ್ರಯಾಸಪಟ್ಟದ್ದು.. ಸವಾಲುಗಳ ಪಟ್ಟಿಯೂ ಬಲುದೊಡ್ಡದಿದೆ. ಹೂಳಿಗಾಗಿ ಕಿಲೋಮೀಟರ್‌ವರೆಗೆ ಟ್ರ್ಯಾಕ್ಟರ್‌ಗಳು ಸಾಲಾಗಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಕೆರೆಯಲ್ಲಿ ಪಾಚಿಯಂತಹ ಕಳೆಗಳಿದ್ದು, ಕೆಸರಿನಿಂದ ಕೂಡಿದ ಹೂಳಿದ್ದರೆ ಅವುಗಳನ್ನು ತೆಗೆಯುವುದೇ ದೊಡ್ಡ ಸವಾಲಿನ ಕೆಲಸ ಎನ್ನುತ್ತಾರೆ ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು.

ಒಂದಷ್ಟು ಕೆರೆಗಳು ಹೂಳೆತ್ತುತ್ತಿದ್ದಂತೆ ಭರ್ತಿಯಾದರೆ, ಇತರ ಕೆರೆಗಳು ಮಳೆಗಾಲದಲ್ಲಿ ಭರ್ತಿಗೊಂಡಿವೆ. ಸಾಮಾನ್ಯವಾಗಿ ಕೆರೆ ಒಮ್ಮೆ ಭರ್ತಿಯಾದರೆ ಮತ್ತೆ ಅದು ಬರಿದಾಗಲಾರದು.

ಕೆರೆ ಸುಂದರವಾಗಿ ಕಾಣುವಂತೆ ಹೂಳೆತ್ತಲಾಗಿದೆ. ಸಾಮಾನ್ಯವಾಗಿ ಮೂರರಿಂದ ಐದು ಅಡಿ ಆಳವಾಗಿ ಹೂಳೆತ್ತಲಾಗಿದ್ದು, ಕೆರೆ ಸುತ್ತ ಹೂಳು ಹಾಕಿ ರಸ್ತೆ ನಿರ್ಮಿಸಲಾಗಿದೆ. ಕೆರೆ ಏರಿ ರಿಪೇರಿ, ರಾಜಕಾಲುವೆ ನಿರ್ಮಾಣ ಮುಂತಾದ ಕೆಲಸಗಳನ್ನು ಮಾಡಲಾಗಿದೆ. ಕೆರೆ ದಡದಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಜಾನುವಾರುಗಳು ಕೆರೆಗೆ ಇಳಿಯದಂತೆ ಸುತ್ತ ಬೇಲಿ ನಿರ್ಮಿಸಲಾಗಿದೆ. ಕಸಕಡ್ಡಿ ಬಿಸಾಡಲು, ಕೆರೆಗೆ ಪಂಪ್ ಅಳವಡಿಸಲು, ಬಟ್ಟೆ ಒಗೆಯಲು ಅವಕಾಶವಿಲ್ಲ. ಹೆಚ್ಚಿನ ಕಡೆಗಳಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ನೀರಿನ ತೊಟ್ಟಿಯನ್ನು ಕಟ್ಟಲಾಗಿದೆ. ಕೆಲವೊಂದೆಡೆ ಕೆರೆಗೆ ಕಾವಲುಗಾರರನ್ನು ನೇಮಿಸಲಾಗಿದೆ. ಇದೀಗ ಹೆಚ್ಚಿನ ಕೆರೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಲ್ಲಿ ಯಶಸ್ವಿಯಾಗಿವೆ.

ಜಲ ಜಾಗೃತಿಗೆ ಮುನ್ನುಡಿ

ಕೆರೆಗಳ ಹೂಳೆತ್ತಿದ ಪರಿಣಾಮವಾಗಿ ರಾಜ್ಯದಲ್ಲಿ ಸುಮಾರು 2,836 ಕೋಟಿ ಲೀಟರ್ ನೀರಿನ ಮಟ್ಟ ಹೆಚ್ಚಳವಾಗಿದೆ. ಸಾವಿರಾರು ಕೊಳವೆಬಾವಿಗಳು ಮರುಪೂರಣಗೊಂಡಿವೆ. ಕೆರೆ ಆಸುಪಾಸಿನಲ್ಲಿ ಮತ್ತೆ ಭತ್ತ ಕೃಷಿಯನ್ನು ಆರಂಭಿಸಿದ ಯಶಸ್ಸಿನ ಕಥೆಗಳಿವೆ. ಒಟ್ಟಾರೆ ಕೃಷಿಕರಿಗೆ ಆದ ಪ್ರಯೋಜನ ಅಷ್ಟಿಷ್ಟಲ್ಲ. ಊರಿನ ನೀರಿನ ಕಷ್ಟ ಪರಿಹಾರವಾಗುವುದರೊಂದಿಗೆ ತಮ್ಮ ಊರಿನ ಕೆರೆಯನ್ನು ತಾವೇ ರಕ್ಷಿಸಬೇಕೆಂಬ ಜಾಗೃತಿ ಮೂಡಿದೆ. ಕೆರೆ ಹಸ್ತಾಂತರದ ದಿನ ಪ್ರತಿವರ್ಷ ಊರವರ ಜೊತೆ ಸೇರಿ ‘ಕೆರೆ ಹಬ್ಬ’ ಎಂಬ ಹೆಸರಿನಲ್ಲಿ ಊರಿನ ಕೆರೆಯನ್ನು ಸ್ವಚ್ಛಗೊಳಿಸುವ ಕೆಲಸ ಕೆಲವೆಡೆ ನಡೆಯುತ್ತಿದೆ. ನೀರಿನ ಮಿತ ಬಳಕೆಯ ಅರಿವು ಒಡಮೂಡಿದೆ.

800 ನೇ ಕೆರೆ ಹಸ್ತಾಂತರ

ಹಾಸನ ಜಿಲ್ಲೆಯ ಬೇಲೂರಿನ ಕೂಶಾವರದ ಚೌಡನಹಳ್ಳಿಯ ‘ಊರ ಮುಂದಿನ ಕೆರೆ’ ಎಂಟುನೂರನೇ ಕೆರೆಯನ್ನು ಹೆಗ್ಗಡೆ ದಂಪತಿ
ಡಿಸೆಂಬರ್ 17, 2024 ರಂದು ಆನ್‌ಲೈನ್ ಮೂಲಕ ಹಸ್ತಾಂತರಿಸಿದರು. ಕೆರೆಯ ಹೂಳೆತ್ತುವಷ್ಟೇ ಪ್ರಮುಖ ಕೆಲಸ ಅವುಗಳ ರಕ್ಷಣೆ. ಈ ನಿಟ್ಟಿನಲ್ಲಿ ರಾಜ್ಯದ ಐವತ್ತುರಿಂದ ಅರವತ್ತು ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರನ್ನು ಒಟ್ಟು ಸೇರಿಸಿ ಹೂಳೆತ್ತಲಾದ ಕೆರೆಗಳನ್ನು ಮುಂದೆ ಹೇಗೆ ಜೋಪಾನವಾಗಿ ಕಾಪಾಡಬೇಕೆಂಬ ಮಾರ್ಗದರ್ಶನ ನೀಡಲಾಗಿದೆ.

ಎಲ್ಲಾ ಕೆಲಸವನ್ನು ಸರ್ಕಾರವೇ ಮಾಡಲಿ ಎಂದು ಅರ್ಜಿ, ಮನವಿಪತ್ರಗಳನ್ನು ಕೊಡುತ್ತಾ ಕುಳಿತರೆ ಕೆಲಸ ಆಗದು. ಹೀಗೆ ಸಂಘಸಂಸ್ಥೆಗಳು ಸ್ವಯಂ ಮುಂದೆ ಬಂದು ಕಾರ್ಯಪ್ರವೃತ್ತವಾದರೆ ಒಂದಿಷ್ಟು ಸಮಾಜಮುಖಿ ಕೆಲಸಗಳು ಸಾಧ್ಯ.

‘ನೀರಿನ ಸಮಸ್ಯೆಗೆ ಪರಿಹಾರ’

ಗ್ರಾಮಗಳಲ್ಲಿರುವ ಕೆರೆಗಳ ಹೂಳೆತ್ತಿ ಅವು ಉಪಯೋಗವಾಗುವಂತಾದರೆ ಆ ಊರಿನಲ್ಲಿರುವ ಬಾವಿಗಳ ಜಲಮಟ್ಟ ಸುಧಾರಿಸುತ್ತದೆ. ಈ ಕಾರಣದಿಂದಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೆರೆಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಿದೆವು. ಜನರ ಪಾಲುದಾರಿಕೆಯಿಲ್ಲದೆ ಯಾವುದೇ ಕೆಲಸ ಮಾಡಿದರೂ ಅದರ ಮೇಲೆ ಹೆಮ್ಮೆ, ಪ್ರೀತಿ ಇರುವುದಿಲ್ಲ. ಆದ್ದರಿಂದ ಕೆರೆಗಳ ಹೊಳೆತ್ತುವ ಕೆಲಸದಲ್ಲಿ ಊರವರ ಪಾಲುದಾರಿಕೆ ಇರಬೇಕೆಂದು ತೀರ್ಮಾನಿಸಿದೆವು. ಊರವರೇ ಸೇರಿ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ಮುಂದೆ ಅದನ್ನು ಉಳಿಸಿ, ಬಳಸಿಕೊಂಡು ಹೋಗುತ್ತಾರೆ.

-ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

‘ಚಿನ್ನದ ಬೆಲೆ ಬಂದಿದೆ’

ಹಿಂದೆ ನಮ್ಮ ಹೊಲಕ್ಕೆ ಬೇರೆಯವರ ಹೊಲದ ಮೇಲೆ ಹೋಗಬೇಕಿತ್ತು‌. ಟ್ರ್ಯಾಕ್ಟರ್ ಮೂಲಕ ಗೊಬ್ಬರ ಸಾಗಿಸಲು ಅವರು ಬಿಡುತ್ತಿರಲಿಲ್ಲ. ಇದರಿಂದಾಗಿ ತಲೆ ಮೇಲೆ ಗೊಬ್ಬರ ಹೊತ್ತು ಪ್ರತಿವರ್ಷ ಬೆಳೆ ಬೆಳೆಯುತ್ತಿದ್ದೆ. ಕಳೆದೆರಡು ವರ್ಷಗಳಿಂದ ಆರೋಗ್ಯ ಕೈಕೊಟ್ಟ ಕಾರಣ ಕೃಷಿ ಮಾಡುವುದನ್ನೇ ಬಿಟ್ಟಿದ್ದೆ. ನಮ್ಮೂರಿನ ‘ಬಿದಿರಗಡ್ಡಿ ಕೆರೆ’ ಅಭಿವೃದ್ಧಿಯಿಂದ ರಸ್ತೆ ನಿರ್ಮಾಣದ ಕನಸು ಈಡೇರಿದೆ. ಈ ವರ್ಷ ಟ್ರ್ಯಾಕ್ಟರ್ ಮೂಲಕ ಹೊಲಕ್ಕೆ ಮಣ್ಣು ಹಾಕಿಸಿ ಸೊಯಾಬಿನ್ ಬೆಳೆದೆ. ಉತ್ತಮ ಆದಾಯ ಸಿಕ್ಕಿತು. ರಸ್ತೆ ನಿರ್ಮಾಣವಾಗದಿದ್ದರೆ ನಾನು ಈ ಬಾರಿ ಕೃಷಿ ಮಾಡುತ್ತಿರಲಿಲ್ಲ. ಇದೀಗ ನಮ್ಮ ಭೂಮಿಗೆ ಚಿನ್ನದ ಬೆಲೆ ಬಂದಿದೆ.

-ಚೆನ್ನಪ್ಪ ಬಿದರಗಡ್ಡಿ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ

ಕೆರೆಯೊಂದರಿಂದ ಹೂಳೆತ್ತುತ್ತಿರುವುದು
ಡಿ.ವೀರೇಂದ್ರ ಹೆಗ್ಗಡೆ 
ಬಸವನ ಬಾಗೇವಾಡಿಯ ಭೈರವಾಡಗಿ ಕೆರೆಯಿಂದ ನೀರು ಕೊಂಡೊಯ್ಯುತ್ತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.