ADVERTISEMENT

ಖಗೋಳದ ವಿಸ್ಮಯ ನಿಲುವುಗಲ್ಲುಗಳು

ಈರಣ್ಣ ಬೆಂಗಾಲಿ
Published 29 ಮಾರ್ಚ್ 2025, 23:28 IST
Last Updated 29 ಮಾರ್ಚ್ 2025, 23:28 IST
ನಿಲುವುಗಲ್ಲುಗಳು 
ನಿಲುವುಗಲ್ಲುಗಳು    

ತೆಲಂಗಾಣ ರಾಜ್ಯದ ಮುಡುಮಲ್‌ನ ವಿಸ್ಮಯಕಾರಿ ನಿಲುವುಗಲ್ಲುಗಳ ಕುರಿತು ಸ್ನೇಹಿತರು ಆಗಾಗ ಹೇಳುತ್ತಲೇ ಇದ್ದರು. ಕೂತುಹಲ ಹೆಚ್ಚಾಗಿ ಹೆಗಲಿಗೆ ಕ್ಯಾಮೆರಾ ಹಾಕಿಕೊಂಡು ರಾಯಚೂರಿನ ಕೃಷ್ಣಾ ದಾಟಿ 36 ಕಿಲೋಮೀಟರ್‌ ಕ್ರಮಿಸಿ ಆ ಊರು ತಲುಪಿದೆ. ಅಲ್ಲಿ ವಿಸ್ಮಯಕಾರಿ ನಿಲುವುಗಲ್ಲುಗಳ ಬಗ್ಗೆ ವಿಚಾರಿಸಿದೆ. ‘ಅವು ಊರ ಹೊರಗಿವೆ. ಮೂರ‍್ನಾಲ್ಕು ಕಿಲೋಮೀಟರ್‌ ದೂರ ಆಗುತ್ತದೆ’ ಎಂದ ಗ್ರಾಮದ ಯುವಕ ದಾರಿ ತೋರಿಸಿದ. ಆತ ತೋರಿಸಿದ ದಿಕ್ಕಿನಲ್ಲಿ ಹೋಗುತ್ತಿದ್ದಂತೆ ದೂರದಿಂದಲೇ ಬಯಲಲ್ಲಿ ಬೃಹತ್‌ ನಿಲುವುಗಲ್ಲುಗಳು ಆಕಾಶಕ್ಕೆ ಮುಖ ಮಾಡಿ ನಿಂತಿರುವುದು ಕಾಣಿಸಿತು. ಆ ಸ್ಥಳ ಸಮೀಪಿಸುತ್ತಲೇ ಒಮ್ಮೆಗೆ ರೋಮಾಂಚನವಾಯಿತು.

ವೈಜ್ಞಾನಿಕ ತಳಹದಿ ಮೇಲೆ ನಿಂತ ಈ ನಿಲುವುಗಲ್ಲುಗಳು ಜಗತ್ತಿನ ಗಮನ ಸೆಳೆದಿವೆ. ಇವುಗಳನ್ನು ದಿಕ್ಕುಗಳನ್ನು ತಿಳಿಯಲು, ಗ್ರಹಗಳು ಮತ್ತು ನಕ್ಷತ್ರಗಳ ಅಧ್ಯಯನಕ್ಕೆ ನಮ್ಮ ಪೂರ್ವಜರು ನಿಲ್ಲಿಸಿದ್ದರು. ಈಗ ವಿಜ್ಞಾನ–ತಂತ್ರಜ್ಞಾನ ಶರವೇಗದಲ್ಲಿ ಮುಂದುವರೆದಿದ್ದು ದಿಕ್ಕುಗಳನ್ನು ತಿಳಿಯಲು ಕಂಪಾಸ್, ನಕ್ಷತ್ರಗಳ ಅಧ್ಯಯನಕ್ಕೆ ಖಗೋಳ ವೀಕ್ಷಣಾಲಯಗಳು, ಟೆಲಿಸ್ಕೋಪ್‌ಗಳಿವೆ.

ಆದರೆ ಆಗ ಖಗೋಳ ಅಧ್ಯಯನಕ್ಕೆ ಇವುಗಳಾವುವೂ ಇರಲಿಲ್ಲ. ಪೂರ್ವಜರು ತಾವೇ ಬೃಹತ್ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಂದ ಆಕಾಶ ಕಾಯಗಳ ಚಲನವಲನಗಳ ಅಧ್ಯಯನ ಮಾಡುತ್ತಿದ್ದರು. ಇದೊಂದು ಸ್ಕೈಮ್ಯಾಪ್ ಆಗಿ, ಬಯಲು ಖಗೋಳ ವೀಕ್ಷಣಾಲಯವಾಗಿತ್ತು. ಇವುಗಳ ಮೂಲಕ ಖಗೋಳದ ರಹಸ್ಯ ತಿಳಿಯುತ್ತಿದ್ದರು.

ADVERTISEMENT

ನೆಟ್ಟಗೆ ಆಕಾಶದತ್ತ ಮುಖ ಮಾಡಿ ನಿಂತ ಉದ್ದನೆಯ, ಬಲಿಷ್ಠವಾದ ಕಲ್ಲುಗಳು ಇವಾಗಿದ್ದು,  ಇವುಗಳನ್ನು ತೆಲುಗಿನಲ್ಲಿ ‘ನಿಲವು ರಾಳ್ಳು’ ಎಂದು ಕರೆಯುತ್ತಾರೆ. ಕನ್ನಡದಲ್ಲಿ ‘ನಿಲುವುಗಲ್ಲುಗಳು’ ಅಥವಾ ‘ನಿಂತ ಕಲ್ಲುಗಳು’ ಎನ್ನಬಹುದು. ಇಲ್ಲಿ ಹತ್ತರಿಂದ ಹದಿನೈದು ಅಡಿಗಳ ನಿಲುವುಗಲ್ಲುಗಳನ್ನು ಕಾಣಬಹುದು. ಒಂದೊಂದು ಕಲ್ಲನ್ನು ಒಂದೊಂದು ಕೋನದಲ್ಲಿ ನಿಲ್ಲಿಸಿದ್ದಾರೆ. ಈಗ ಇಲ್ಲಿ ಎಂಬತ್ತು ನಿಲುವುಗಲ್ಲುಗಳಿವೆ. 

ಮೊದಲು ಎಂಬತ್ತು ಎಕರೆಯಲ್ಲಿ ಸಾವಿರಕ್ಕೂ ಹೆಚ್ಚು ನಿಲುವುಗಲ್ಲುಗಳು ಹರಡಿಕೊಂಡಿದ್ದವಂತೆ. ಈಗ ಒಂದು ಎಕರೆ ಮಾತ್ರ ಉಳಿದಿದೆ. ತೆಲಂಗಾಣ ಸರ್ಕಾರವು ಇದರ ಮಹತ್ವವನ್ನು ಅರಿತು ರೈತರ ಹೊಲವನ್ನು ವಶಪಡಿಸಿಕೊಂಡು, ಸುತ್ತಲೂ ಬೇಲಿ ಹಾಕಿ ಸಂರಕ್ಷಿಸಿದೆ. ಹಲವು ಬೃಹತ್ ಕಲ್ಲುಗಳು ಕಾಲದ ಹೊಡೆತಕ್ಕೆ ಸಿಕ್ಕು ನೆಲಕ್ಕೆ ಉರುಳಿವೆ. ಮುಖ್ಯವಾಗಿ ಇಲ್ಲಿ ಈ ಬೃಹತ್ ನಿಲುವುಗಲ್ಲುಗಳು ಮಾತ್ರವಲ್ಲದೆ ಸುತ್ತಲೂ ಅರ್ಧ ಮೊಟ್ಟೆಯಾಕಾರದ ಕಲ್ಲುಗಳು ಪಸರಿಸಿಕೊಂಡಿರುವುದನ್ನು ಕಾಣಬಹುದು. ಇವುಗಳೂ ಖಗೋಳ ಅಧ್ಯಯನಕ್ಕೆ ಪೂರಕವಾಗಿದ್ದವು.

‘ಈ ಸ್ಥಳ ಖಗೋಳ ವೀಕ್ಷಣಾಲಯವಾಗಿದ್ದು, ನೆರಳಿನ ಆಧಾರದ ಮೇಲೆ ಸೂರ್ಯನ ಚಲನೆ ಹಾಗೂ ಋತುಮಾನಗಳ ಚಲನೆ ತಿಳಿಯಲು ಪೂರ್ವಜರು ನೆಟ್ಟ ಕಲ್ಲುಗಳಿವು’ ಎಂದು ಸಂಶೋಧಕ ಕೆ.ಪಿ.ರಾವ್ ಹೇಳುತ್ತಾರೆ. ಇವರು ಸತತವಾಗಿ ಅಧ್ಯಯನ ಮಾಡಿ, ಸಂಶೋಧಿಸಿ ಸತ್ಯವನ್ನು ಕಂಡುಕೊಂಡು ಅದನ್ನು ತಿಳಿಸಿದ್ದಾರೆ.

ಅಲ್ಲಿಯವರೆಗೆ ಸ್ಥಳೀಯರು ಇವುಗಳನ್ನು ಪ್ರಾಚೀನರ ಸಮಾಧಿಗಳು, ದೆವ್ವದ ದಿಬ್ಬಗಳು, ಋಷಿ ಶಾಪಕ್ಕೆ ಆದಿಮಾನವರು ಕಲ್ಲಾಗಿ ನಿಂತಿದ್ದಾರೆ ಎಂದು ನಂಬಿಕೊಂಡಿದ್ದರು. ಅಲ್ಲದೆ ಇವುಗಳನ್ನು ಮುಟ್ಟಿದರೆ ಸಾಯುತ್ತಾರೆ ಎಂದೆಲ್ಲಾ ಭಯಭೀತರಾಗಿದ್ದರು. ಸತ್ಯ ತಿಳಿದ ನಂತರ ಇಂತಹ ಮಹತ್ವದ ಸ್ಥಳ ತಮ್ಮೂರಿನಲ್ಲಿದೆ ಎಂದು ಹೆಮ್ಮೆ ಪಡುತ್ತಾರೆ.

ಈ ನಿಲುವುಗಲ್ಲುಗಳ ವಿಷಯ ತಿಳಿದ ವಿವಿಧ ದೇಶಗಳ ಸಂಶೋಧಕರು, ವಿಜ್ಞಾನಿಗಳು, ಖಗೋಳ ಆಸಕ್ತರು, ಅಧ್ಯಯನಕಾರರು ಈ ವಿಶೇಷ ತಾಣಕ್ಕೆ ಭೇಟಿ ನೀಡಿದ್ದಾರೆ. ಬೃಹತ್ ನಿಲುವುಗಲ್ಲುಗಳನ್ನು ಅದ್ಯಾವ ಲೆಕ್ಕಾಚಾರದ ಮೇಲೆ ಹೀಗೆ ನಿಲ್ಲಿಸಿ ಕಾಲ ಗಣನೆ ಮಾಡುತ್ತಿದ್ದರು, ಸೂರ್ಯ, ನಕ್ಷತ್ರಗಳ, ಗ್ರಹಗಳ ಅಧ್ಯಯನ ಹೇಗೆ ಮಾಡಿದ್ದರು ಎಂಬುದನ್ನು ಪರಿಶೀಲಿಸಿ, ಅಚ್ಚರಿಗೊಂಡಿದ್ದಾರೆ. ತೆಲಂಗಾಣ ಸರ್ಕಾರ ಈ ತಾಣವನ್ನು ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲು ಯುನೆಸ್ಕೋ ಮುಂದೆ ಪ್ರಸ್ತಾಪವಿಟ್ಟಿತು. ಅದು ಈಗ ತಾತ್ಕಾಲಿಕ ಪಟ್ಟಿಗೆ ಸೇರಿಸಿದೆ. ತೆಲಂಗಾಣ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಗಳ ಇಲಾಖೆ ಈ ಪ್ರಾಚೀನ ಸ್ಮಾರಕ, ಪುರಾತತ್ವಶಾಸ್ತ್ರದ ಸ್ಥಳ ಮತ್ತು ಅವಶೇಷಗಳ ಸಂರಕ್ಷಿತ ಪ್ರದೇಶವಾಗಿ ಕಾಪಾಡುತ್ತಾ ಬಂದಿದೆ. ಈ ಮಹತ್ವದ ಸ್ಥಳವನ್ನು ಅಭಿವೃದ್ಧಿಪಡಿಸಲು ಹೈದರಾಬಾದ್‌ನ ಡೆಕ್ಕನ್ ಹೆರಿಟೇಜ್ ಅಕಾಡೆಮಿ ಟ್ರಸ್ಟ್‌ನ ಅಡಿಯಲ್ಲಿ ಸಂಶೋಧನೆ ಮತ್ತು ಮರುಸ್ಥಾಪನೆಯ ಯೋಜನೆ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.