ADVERTISEMENT

ನಾಗವಲ್ಲಿ ಕಾಡುಪಾಪಗಳ ಜಾಡಿನಲ್ಲಿ.. ಉಪನ್ಯಾಸಕರೊಬ್ಬರ ಕುತೂಹಲ

ಉಪನ್ಯಾಸಕರೊಬ್ಬರ ಕುತೂಹಲ ಅಳಿವಿನಂಚಿನಲ್ಲಿರುವ ಕಾಡುಪಾಪಗಳ ಸಂರಕ್ಷಣೆಗೆ ಮುನ್ನುಡಿ ಬರೆಯಿತು.

ಪ್ರಕಾಶ್ ಕೆ ನಾಡಿಗ್
Published 20 ಏಪ್ರಿಲ್ 2025, 1:03 IST
Last Updated 20 ಏಪ್ರಿಲ್ 2025, 1:03 IST
ಕಾಡುಪಾಪ
ಕಾಡುಪಾಪ   

ಸಂಗ್ರಹ ಚಿತ್ರ

ಜೀವಶಾಸ್ತ್ರ ಅಧ್ಯಯನ ಮಾಡಿದ್ದ ಬಿ.ವಿ. ಗುಂಡಪ್ಪ, 1995ರಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ನಾಗವಲ್ಲಿ ಜೂನಿಯರ್ ಕಾಲೇಜಿಗೆ ಉಪನ್ಯಾಸಕರಾಗಿ ಬಂದರು. ಒಮ್ಮೆ ತರಗತಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಬಗ್ಗೆ ಪಾಠ ಮಾಡುತ್ತಾ, ಬೇರೆ ಪ್ರಾಣಿ ಪಕ್ಷಿಗಳ ಜೊತೆ ಇವರು ಕಾಡುಪಾಪಗಳ ಕುರಿತೂ ಹೇಳಿದರು. ಆಗ ವಿದ್ಯಾರ್ಥಿಗಳಲ್ಲಿ ಒಬ್ಬ ‘ಸಾರ್, ಕಾಡುಪಾಪಗಳನ್ನು ನೋಡಿದ್ದೇನೆ’ ಎಂದ. ‘ಹೌದಾ! ಎಲ್ಲಿ?’ ಎಂದಾಗ ‘ಶಾಲೆಯ ಹೊರಗಿನ ಪೊದೆಯಲ್ಲಿ’ ಎಂದ. ಗುಂಡಪ್ಪನವರಿಗೆ ಕುತೂಹಲ ಹೆಚ್ಚಾಯಿತು. ತರಗತಿ ಮುಗಿದ ಕೂಡಲೇ ಆ ವಿದ್ಯಾರ್ಥಿಯನ್ನು ಕರೆದುಕೊಂಡು ಕಾಡುಪಾಪಗಳನ್ನು ಹುಡುಕಿಕೊಂಡು ಹೊರಟೇಬಿಟ್ಟರು. ಆ ಜಾಗದಲ್ಲಿ ವಿಪರೀತ ಜಾಲಿ ಪೊದೆಗಳು. ಹೀಗೆ ಹುಡುಕಿಕೊಂಡು ಹೋದವರಿಗೆ ಒಂದಲ್ಲ, ಎರಡಲ್ಲ, ಒಟ್ಟು ನಾಲ್ಕು ಕಾಡುಪಾಪಗಳು ಮುದುಡಿಕೊಂಡು ಜಾಲಿಮರದ ಮೇಲೆ ಕುಳಿತಿರುವುದು ಕಾಣಿಸಿತು!

ಅಪರೂಪಕ್ಕೆ ಏನಾದರೂ ಇವು ಇಲ್ಲಿಗೆ ಬಂದಿರಬಹುದೇ, ಅಥವಾ ನಾಗವಲ್ಲಿಯ ಪರಿಸರ ಇವುಗಳ ವಾಸಸ್ಥಾನವೇ, ಇಲ್ಲವೇ ಇನ್ನು ಹೆಚ್ಚಿನ ಕಾಡುಪಾಪಗಳು ಈ ಭಾಗದಲ್ಲಿ ಇರಬಹುದೇ ಎಂದು ತಿಳಿದುಕೊಳ್ಳಲು ಬೇರೆ ತರಗತಿಯ ಹುಡುಗರಿಗೂ ಕೇಳಿದರು. ಆಗ ಹುಡುಗರು ‘ತೋಟಗಳಲ್ಲಿ ಹೊಲಗದ್ದೆಗಳಲ್ಲಿ ಆಗೊಮ್ಮೆ ಈಗೊಮ್ಮೆ ನೋಡುತ್ತಿರುತ್ತೇವೆ’ ಎಂದರು. ಕೆಲ ರೈತರಲ್ಲಿ ವಿಚಾರಿಸಿದಾಗ ‘ಹೌದು, ರಾತ್ರಿ ಹೊಲಗದ್ದೆಗಳಲ್ಲಿ ಪಂಪ್‌ಸೆಟ್ ಹಾಕಿ ಹೊಲಕ್ಕೆ ನೀರು ಹರಿಸಲು ಹೋದಾಗ ಕಾಣುತ್ತವೆ. ಅವುಗಳ ಕಣ್ಣುಗಳು ದೊಡ್ಡದಿರುವುದರಿಂದ ಬ್ಯಾಟರಿ ಬೆಳಕಿನಲ್ಲಿ ಹೊಳೆಯುತ್ತವೆ’ ಎಂದಿದ್ದರು.

ADVERTISEMENT

ಇದು ನಿಶಾಚರಿಯಾದ್ದರಿಂದ ರಾತ್ರಿ ಹೊತ್ತು ಚಟುವಟಿಕೆಯಿಂದ ಇರುತ್ತದೆ ಎಂಬ ವಿಷಯ ಗೊತ್ತಾಯಿತು. ಅಂದಿನಿಂದ ಕಾಡುಪಾಪಗಳ ಬಗ್ಗೆ ಒಲವು ಮೂಡಿ ಅವುಗಳ ಬಗ್ಗೆ ಅಧ್ಯಯನ ಮಾಡಬೇಕೆಂಬ ಉದ್ದೇಶದಿಂದ ಕಾಡುಪಾಪಗಳ ಜಾಡನ್ನು ಹಿಡಿದು ಹೊರಟರು.

ಇದಾದ ಕೆಲ ದಿನಗಳಲ್ಲೇ ತುಮಕೂರಿನಲ್ಲಿ ‘ವಿಶ್ವ ವನ್ಯಜೀವಿ ನಿಧಿ ಸಂಸ್ಥೆ’ಯು ತುಮಕೂರಿನ ‘ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ’ಯ ಜೊತೆಗೂಡಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಅದಕ್ಕಾಗಿ ಗುಂಡಪ್ಪನವರು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಾಡುಪಾಪಗಳ ಬಗ್ಗೆಯೇ ಪ್ರಬಂಧ ಸಿದ್ಧಪಡಿಸಿದರು. ವಿಜ್ಞಾನ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಿದರು. ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಮೊದಲ ಬಹುಮಾನ ಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯಿತು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯು ಪ್ರೊ. ಮಾಧವ ಗಾಡ್ಗೀಳ್‌ ಜೊತೆಗೂಡಿ ಕರ್ನಾಟಕದ ಜೀವವೈವಿಧ್ಯದ ಬಗ್ಗೆ ದಾಖಲಾತಿ ಮಾಡುತ್ತಿತ್ತು. ಅದರಲ್ಲಿ ಪಾಲ್ಗೊಂಡ ಇವರು ನಾಗವಲ್ಲಿ ಪಂಚಾಯಿತಿ ಪ್ರದೇಶವನ್ನು ತೆಗೆದುಕೊಂಡು, ತಮ್ಮ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನಾಗವಲ್ಲಿಯ ಸುತ್ತಮುತ್ತ ಕೆರೆ ಕಟ್ಟೆ ತೋಟ ಹೊಲ ಗದ್ದೆಗಳಲ್ಲಿ ಎಲ್ಲೆಲ್ಲಿ ಕಾಡುಪಾಪಗಳು ಇರಬಹುದು ಎಂಬುದನ್ನು ಅಭ್ಯಾಸಿಸಿ, ಅವುಗಳು ಯಾವ ಪ್ರದೇಶದಲ್ಲಿ, ಯಾವ ಸಮಯದಲ್ಲಿ, ಎಲ್ಲೆಲ್ಲಿ ಇರುತ್ತವೆ ಎಂಬುದನ್ನು ತಿಳಿದುಕೊಂಡು ಅವುಗಳ ಬಗ್ಗೆ ಬರೆದು ಮ್ಯಾಪಿಂಗ್ ಮಾಡಿ ವರದಿ ಸಲ್ಲಿಸಿದರು. ಇದಕ್ಕೆ ಪ್ರಥಮ ಬಹುಮಾನವಾಗಿ ಹತ್ತು ಸಾವಿರ ರೂಪಾಯಿ ಬಂದಿತು. ಬಹುಮಾನದ ಮೊತ್ತವನ್ನು ಏನು ಮಾಡುವುದು ಎಂದು ಯೋಚಿಸಿದರು. ಕಾಡುಪಾಪಗಳ ಅಧ್ಯಯನದಿಂದ ಬಂದ ಹಣವನ್ನು ಅವುಗಳ ಸಂರಕ್ಷಣೆಗೆ ವಿನಿಯೋಗಿಸಬೇಕು ಎಂದು ನಿರ್ಧರಿಸಿದರು. ಕಾಡುಪಾಪಗಳ ವಾಸ, ಅವು ಏನನ್ನು ತಿನ್ನುತ್ತವೆ, ಅವುಗಳ ಸ್ವಭಾವ ಹಾಗೂ ರೈತರಿಗೆ ಹೇಗೆ ಸಹಾಯಕವಾಗಿವೆ. ಸಂರಕ್ಷಿತ ಪ್ರಾಣಿಯಾಗಿರುವುದರಿಂದ ಅವನ್ನು ಹಿಡಿಯುವುದು ಅಪರಾಧ ಎಂಬ ಮಾಹಿತಿಯುಳ್ಳ ಫಲಕವೊಂದನ್ನು ಬರೆಸಿ ನಾಗವಲ್ಲಿಯ ರಸ್ತೆಬದಿಯಲ್ಲಿ ಹಾಕಿಸಿದರು.

ಮಕ್ಕಳಿಗೆ ಪರಿಸರದ ಬಗ್ಗೆ ಪ್ರಾಣಿ ಪಕ್ಷಿಗಳ ಬಗ್ಗೆ ಕುತೂಹಲ ಹೆಚ್ಚು. ಆ ಕುತೂಹಲವನ್ನು ಗುಂಡಪ್ಪನವರು ಬೆಳೆಸಿ ಪೋಷಿಸಿದರು. ಇವರ ಜೊತೆಯಲ್ಲಿ ಕಾಡುಪಾಪಗಳ ಅಧ್ಯಯನದಲ್ಲಿ ಪಳಗಿದ ಮಕ್ಕಳು ದೊಡ್ಡವರಾಗುತ್ತಾ ಕಾಡುಪಾಪಗಳ ಸಂರಕ್ಷಣೆಯಲ್ಲಿ ತೊಡಗಿರುವುದು ಗುಂಡಪ್ಪನವರಿಗೆ ಸಾರ್ಥಕ ಭಾವವನ್ನು ಉಂಟು ಮಾಡಿದೆ. ಕಾಡುಪಾಪಗಳು ನಿರುಪದ್ರವಿ ಪ್ರಾಣಿಯಾಗಿರುವುದುರಿಂದ ಬೇರೆ ಪ್ರಾಣಿ ಪಕ್ಷಿಗಳು ಇವುಗಳನ್ನು ಹಿಡಿಯುವುದು, ಕಣ್ಣನ್ನು ಕುಕ್ಕುವುದು, ಹಿಂಸಿಸುವುದು ಜಾಸ್ತಿ. ಹಾಗಾಗಿ ಆಗಾಗ ಈ ರೀತಿಯ ದಾಳಿಯಿಂದ ಗಾಯಗೊಂಡು ಬಿದ್ದ ಕಾಡುಪಾಪಗಳು ಸಿಕ್ಕರೆ ವಿದ್ಯಾರ್ಥಿಗಳು ಅವುಗಳನ್ನು ಗುಂಡಪ್ಪನವರ ಬಳಿ ತರುತ್ತಾರೆ.  ನಂತರ ಪಶುವೈದ್ಯರಲ್ಲಿ ತೋರಿಸಿ ಸೂಕ್ತ ಚಿಕಿತ್ಸೆ ಕೊಡಿಸುತ್ತಾರೆ. ಅವಶ್ಯಕತೆ ಬಿದ್ದರೆ ಬ್ಯಾಂಡೇಜ್ ಕಟ್ಟಿ ಒಂದೆರಡು ದಿನದ ನಂತರ ಮತ್ತೆ ಅವುಗಳ ಸ್ವಸ್ಥಾನಕ್ಕೆ ಬಿಡುತ್ತಾರೆ.

ಪೊದೆಗಳನ್ನು ದಾಟುವಾಗ ಮಧ್ಯ ಹಾದು ಹೋದ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿ ಕೆಲವೊಮ್ಮೆ ಕಾಡುಪಾಪಗಳು ಸಾಯುತ್ತವೆ. ಅಷ್ಟೇ ಅಲ್ಲದೇ ರಾತ್ರಿ ರಸ್ತೆ ದಾಟುವಾಗ ಇವುಗಳು ನಿಧಾನವಾಗಿ ಹೋಗುವುದರಿಂದ ವಾಹನಗಳು ಹರಿದು ಸತ್ತು ಹೋಗುತ್ತವೆ, ಇಲ್ಲವೇ ಗಾಯಗೊಳ್ಳುತ್ತವೆ. ಇವರು ಕಾಡುಪಾಪಗಳ ಬಗ್ಗೆ ನಾಗವಲ್ಲಿಯಲ್ಲಿ ಜಾಗೃತಿ ಫಲಕ ಬರೆಸಿ ಹಾಕಿದ ಮೇಲೆ ಇಲ್ಲಿಗೆ ಬರುವ ಜೀವಶಾಸ್ತ್ರ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಯಿತು. 

ಜವಾಹಾರಲಾಲ್ ಸಂಶೋಧನ ಕೇಂದ್ರದ ವಿದ್ಯಾರ್ಥಿಗಳು, ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಗಳ ಮನಃಶಾಸ್ತ್ರ ಅಧ್ಯಯನ ಮಾಡುವ ಪ್ರೊ. ಮೇವಾ ಸಿಂಗ್‌ ಅವರ ಸಂಶೋಧನಾ ವಿದ್ಯಾರ್ಥಿ ಕುಮಾರ್, ಗುಂಡಪ್ಪನವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ. ಪುಣೆ ವಿಶ್ವವಿದ್ಯಾಲಯ, ಬಾಂಗ್ಲಾ ವಿಶ್ವವಿದ್ಯಾಲಯ ಹಾಗೂ ಆಫ್ರಿಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಇವರು ಕಾಡುಪಾಪಗಳ ಅಧ್ಯಯನದಲ್ಲಿ ಮಾರ್ಗದರ್ಶನ ಮಾಡಿದ್ದಾರೆ.

ನಾಗವಲ್ಲಿಗೆ ಹೋಗಿ ಕಾಡುಪಾಪಗಳನ್ನು ನೋಡುತ್ತೇವೆ ಎಂದರೆ ಅವು ಸಿಗುವುದಿಲ್ಲ. ಅವು ಎಲ್ಲಿರುತ್ತವೆ, ಎಷ್ಟೊತ್ತಿಗೆ ಹೊರಗೆ ಬರುತ್ತವೆ ಎಂದು ಗುಂಡಪ್ಪನವರಿಗೆ ನಿಖರವಾಗಿ ಗೊತ್ತು. ಕಾಡುಪಾಪಗಳನ್ನು ಹುಡುಕಿಕೊಂಡು ಹೋದರೂ ಅವು ಮರ-ಪೊದೆಗಳಲ್ಲಿ ಇರುತ್ತವೆ. ಅವು ನಿಮ್ಮ ಕಣ್ಣಮುಂದೆ ಇದ್ದರು ಗುರುತಿಸಲಾರಿರಿ. ಅದಕ್ಕೆ ಗುಂಡಪ್ಪನವರ ಮಾರ್ಗದರ್ಶನ ಬೇಕು. ಸದ್ಯ ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರದ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ವಾರ ಇಲ್ಲವೇ ತಿಂಗಳಿಗೊಮ್ಮೆ ನಾಗವಲ್ಲಿಗೆ ಹೋಗಿ ಬರುತ್ತಾರೆ. ಅಲ್ಲದೇ ಇವರ ವಿದ್ಯಾರ್ಥಿಗಳು ಇವರಿಗೆ ಮಾಹಿತಿ ನೀಡುತ್ತಿರುತ್ತಾರೆ.

ಇಂಗ್ಲಿಷ್‌ನಲ್ಲಿ ಲೊರಿಸ್ (Loris) ಎಂದು ಕರೆಯಲ್ಪಡುವ ಇವುಗಳಲ್ಲಿ ಬೂದು ಮತ್ತು ಕಂದು ಬಣ್ಣದವು ಇವೆ. ಕರ್ನಾಟಕದಲ್ಲಿ ತುಮಕೂರಿನ ನಾಗವಲ್ಲಿ, ದೇವರಾಯನ ದುರ್ಗ, ಶಿರಾ, ಮಾಗಡಿ, ಕನಕಪುರ, ರಾಮನಗರ ಹಾಗೂ ಚಾಮರಾಜನಗರ ಭಾಗದಲ್ಲಿಯೂ ಇವೆ. ಆದರೆ ನಾಗವಲ್ಲಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳು ಇಲ್ಲಿನ ತೋಟಗಳು, ಹೊಲಗದ್ದೆಗಳಲ್ಲಿ ಕಂಡುಬರುವುದರಿಂದ ‘ಕಾಡುಪಾಪ ಸಂರಕ್ಷಿತ ಪ್ರದೇಶ’ ಎಂದು ಘೋಷಿಸುವುದು ಕಷ್ಟ. ಆದರೂ ಗುಂಡಪ್ಪನವರು ಅರಣ್ಯ ಇಲಾಖೆಗೆ ಇವುಗಳ ಸಂರಕ್ಷಣೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಅಳಿವಿನಂಚಿನಲ್ಲಿರುವ ಈ ಪ್ರಾಣಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಅದರ ಸಂರಕ್ಷಣೆಯಲ್ಲಿ ಸದ್ದಿಲ್ಲದೇ ತೊಡಗಿಸಿಕೊಂಡಿರುವ ಗುಂಡಪ್ಪನವರ ಕಾರ್ಯ ಅನನ್ಯ. ಇವರು ‘ನ್ಯಾಷನಲ್ ಗ್ರೀನ್ ಟೀಚರ್’ ಪ್ರಶಸ್ತಿಯನ್ನು ಎಂ.ಎಸ್. ಸ್ವಾಮಿನಾಥನ್ ಅವರಿಂದ ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.