ADVERTISEMENT

ಪ್ರಯೋಗಾತ್ಮಕತೆ ಪರಿಷ್ಕರಣೆಯ ಕಥನ 'ಪೂತನಿ'

ಡಾ.ರುದ್ರೇಶ್ ಅದರಂಗಿ
Published 31 ಆಗಸ್ಟ್ 2025, 0:12 IST
Last Updated 31 ಆಗಸ್ಟ್ 2025, 0:12 IST
ನಿರ್ಮಲ ನಾದನ್‌
ನಿರ್ಮಲ ನಾದನ್‌   

ನಿರ್ಲಕ್ಷ್ಯಕ್ಕೊಳಗಾಗಿರುವ ಮೂಡಲಪಾಯ ಯಕ್ಷಗಾನಕ್ಕೆ ಮತ್ತೆ ಚೈತನ್ಯವನ್ನು ತುಂಬುವಂತೆ ಡಿ.ಬಿ. ಮಲ್ಲಿಕಾರ್ಜುನ ಸ್ವಾಮಿ ಮಹಾಮನೆಯವರು ‘ಪೂತನಿ’ಯನ್ನು ಪ್ರಯೋಗಿಸಿದ್ದಾರೆ. ಸಂಸ್ಕೃತಭೂಯಿಷ್ಠವಾದ ಸುದೀರ್ಘವಾದ ಸಂಭಾಷಣೆ ಮತ್ತು ಹಾಡುಗಳಿಗೆ ಕತ್ತರಿ ಪ್ರಯೋಗಿಸಿ, ದಟ್ಟವಾದ ಕುಣಿತವನ್ನು ಸರಳಗೊಳಿಸಿದ್ದಾರೆ. ಮೇಳದಲ್ಲಿ ಹಲಗೆಯ ಮೇಲೆ ಕುಣಿದು, ಹಲಗೆಯನ್ನು ಮುರಿದವನೇ ದೊಡ್ಡ ನಟನೆಂಬ ಭ್ರಮಾತ್ಮಕತೆಯನ್ನು ಇಲ್ಲವಾಗಿಸಿರುವ ಇವರು, ಕಥನಕ್ಕೆ ಹೆಚ್ಚು ಒತ್ತನ್ನು ಕೊಟ್ಟಿದ್ದಾರೆ. ಪ್ರಸ್ತುತ ಪ್ರಯೋಗದ ಮೂಲಕ ಪ್ರಯೋಗಾತ್ಮಕತೆಯ ಜೊತೆಗೆ ಪರಿಷ್ಕರಣೆಯನ್ನು ಮಾಡಿದ್ದಾರೆ. ರಾತ್ರಿ ಪೂರ್ತಿ ಪ್ರದರ್ಶನಗೊಳ್ಳುವ ನಾಟಕವನ್ನು 90 ನಿಮಿಷಕ್ಕಿಳಿಸಿದ್ದಾರೆ.

ಮೂಡಲಪಾಯದಲ್ಲಿ ಬಣ್ಣಬಣ್ಣಗಳಿಂದ ಕೂಡಿದ, ಮರದಿಂದ ಮಾಡಿದ ಕಿರೀಟ, ತೋಳಬಂದಿ, ಖಡ್ಗ ಮೊದಲಾದವುಗಳ ಭಾರದಿಂದ ಕಲಾವಿದರು ಬಳಲುವಂತಾಗುತ್ತದೆ. ಮಹೇಂದ್ರರವರು ವಸ್ತ್ರವಿನ್ಯಾಸದಲ್ಲಿ ಲಘುವಾದ ಕ್ಯಾನ್ವಾಸಿನಿಂದ ಮಾಡಿದ ಕಿರೀಟ, ವಸ್ತ್ರಾಲಂಕಾರಗಳು ಆಕರ್ಷಕವಾಗಿವೆಯಲ್ಲದೆ ನಟರಿಗೆ ಪೂರಕ ಮತ್ತು ಪ್ರೇರಕವಾಗಿರುವುದು ಸಕಾರಾತ್ಮಕ ಬದಲಾವಣೆಯೇ ಸರಿ.

ಆಶಾ ರಘು ಅವರು ಪುರಾಣದ ‘ಪೂತನಿ’ಯನ್ನು ಮಾತೃಹೃದಯಿಯನ್ನಾಗಿ ಚಿತ್ರಿಸಿದ್ದಾರೆ. ಕಂಸನ ಆಜ್ಞಾಸೇವಕಿಯಾದ ಪೂತನಿ ಮಕ್ಕಳನ್ನು ಕೊಲ್ಲುವ ರಕ್ಕಸಿಯಾದರೆ, ಇಲ್ಲಿ ಮಾತೃಹೃದಯಿ ಮಹಾಮಾತೆಯಾಗಿದ್ದಾಳೆ. ಪೂತನಿಯೆಂದರೆ ಕಪ್ಪು ಬಣ್ಣ ಮತ್ತು ದಢೂತಿಯೆಂಬ ಅಪಕಲ್ಪನೆಯನ್ನು ತೊಡೆದು ಸಹಜ ಹೆಣ್ಣಾಗಿಸಿದ್ದಾರೆ. ಕುವೆಂಪು ಅವರ ಮಮತೆಯಸುಳಿ ಮಂಥರೆಯಂತೆ ಪೂತನಿ ಮಾತೃಹೃದಯಿಯಾಗಿದ್ದಾಳೆ. ಕಂಸನ ಆಜ್ಞೆಯಂತೆ ಕೃಷ್ಣನನ್ನು ಕೊಲ್ಲಲು ಬಂದರೂ ಮುದ್ದು ಬಾಲಕೃಷ್ಣನನ್ನು ನೋಡಿ ಗತಿಸಿದ ತನ್ನ ಮಗನನ್ನು ಅವನಲ್ಲಿ ಕಾಣುತ್ತಾಳೆ. ಕೊಲ್ಲಲೆಂದು ಬಂದವಳು ಮಹಾಮಾತೆಯಾಗಿ ಮರಳಿ ಹೋಗುತ್ತಾಳೆ. ಪುರಾಣದ ವಸ್ತುವನ್ನು ಜನಪರಗೊಳಿಸಿರುವ ನಾಟಕಕಾರರ ಆಶಯ ಪ್ರಸ್ತುತ ಕಾಲದ ಅವಶ್ಯವೂ ಹೌದು.

ADVERTISEMENT

ಏಕವ್ಯಕ್ತಿ ಪ್ರದರ್ಶನದಲ್ಲಿ ನಿರ್ಮಲ ನಾದನ್ ಅವರು ಪೂತನಿಯಾಗಿ ಅಭಿನಯದ ಮೂಲಕ ಪರಕಾಯಪ್ರವೇಶವನ್ನು ಪಡೆದಿದ್ದಾರೆ. ಮೂಡಲಪಾಯದ ಕುಣಿತದಲ್ಲಿ ತೋಂಗ, ಚೌಕ, ಪಕ್ಕ ಚೌಕ, ಗುಪ್ಪಡಗ, ಜರ್ಕು ತಾಳ ಮೊದಲಾದವುಗಳ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರು ಬೆರಗಾಗುವಂತೆ ಮಾಡುತ್ತಾರೆ. ಮೂಡಲಪಾಯದಲ್ಲಿ ಹೆಜ್ಜೆ ಹಾಕುವ ಮತ್ತು ಕುಣಿಯುವಲ್ಲಿ ಗಂಡು ಕುಣಿತ ಎಂದು ಹೇಳಲಾಗುತ್ತದೆ. ನಿರ್ಮಲ ನಾದನ್ ಕುಣಿತದಲ್ಲಿನ ಗಡಸುತನವನ್ನು ಕಳೆದು ಸೊಬಗನ್ನು ತುಂಬಿದ್ದು ಕೂಡ ಪ್ರಯೋಗಾತ್ಮಕತೆಯೇ. ಸಂಭಾಷಣೆ, ಹಾಡು ಮತ್ತು ಕುಣಿತಗಳಲ್ಲಿ ಭಾವಾಭಿನಯವು ಕ್ಲುಪ್ತವಾಗಿರುತ್ತದೆ. ಆದರೆ ನಿರ್ಮಲ ನಾದನ್ ಇಡೀ ಪ್ರದರ್ಶನದಲ್ಲಿ ಭಾವಾಭಿನಯವನ್ನೇ ಪ್ರಧಾನವಾಗಿಸಿದ್ದಾರೆ. ಹೆಣ್ಣಿನ ಸಹಜ ಹೊನಪು, ವೈಯಾರ, ಲಾವಣ್ಯವನ್ನು ಭಾವಾಭಿನಯಗಳೊಂದಿಗೆ ವ್ಯಕ್ತಪಡಿಸಿರುವುದು ಚೆನ್ನಾಗಿದೆ. ಗಂಡನೊಂದಿಗಿನ ಹೊನಪು, ಪ್ರಭುವಿನೊಂದಿಗೆ ವಿನಯವನ್ನು ಪ್ರದರ್ಶಿಸುವ ಇವರು, ತಾಯಿಯಾಗಿ ವಾತ್ಸಲ್ಯ ಭಾವವನ್ನು ಪ್ರಕಾಶಿಸಿದ್ದಾರೆ. ಕೃಷ್ಣನನ್ನು ಕೊಲ್ಲಲು ಬಂದವಳಲ್ಲಿ ಮಾತೃಭಾವ ಜಾಗೃತಗೊಂಡು, ಮ್ಲಾನವದನಳಾಗುವಲ್ಲಿನ ಅಭಿನಯ ಮನೋಜ್ಞವಾದುದು. ಕುಣಿತದಲ್ಲಿ ಇನ್ನೂ ಹೆಚ್ಚಿನ ನಾವೀನ್ಯತೆಯನ್ನು ಮೈಗೂಡಿಸಿಕೊಂಡರೆ ಪ್ರಯೋಗ ಮತ್ತಷ್ಟು ಉತ್ತಮವಾಗುತ್ತದೆ.

ಭಾಗವತಿಕೆಯಲ್ಲಿ ಅರಳಗುಪ್ಪೆ ಪುಟ್ಟಸ್ವಾಮಿಯವರು ರಾಗಗಳನ್ನು ಹೆಚ್ಚು ಲಂಬಿಸದೆ ಅಡಕಗೊಳಿಸಿದ್ದಾರೆ. ಗಣೇಶ ಸ್ತುತಿ, ನಾಂದಿ ಪದ್ಯ, ಕಥಾಸಾರ, ಪಾತ್ರದ ಪ್ರವೇಶದೊಂದಿಗೆ ಪ್ರಾರಂಭವಾಗುವ ಭಾಗವತಿಕೆ ಪಾತ್ರದೊಂದಿಗೆ ಅನಗತ್ಯವಾಗಿ ಸಂಭಾಷಿಸದೆ, ಪಾತ್ರಕ್ಕೆ ಪ್ರಾಧಾನ್ಯತೆಯನ್ನು ನೀಡಿ ಭಾಗವತಿಕೆ ಹಿಮ್ಮೇಳವಾಗಿದೆ. ಮದ್ದಳೆಯಲ್ಲಿ ಯೋಗೇಶ ಮತ್ತು ಮುಖವೀಣೆಯಲ್ಲಿ ಮರೂರ್ ರಮೇಶ್ ಸಾಥ್ ನೀಡಿದ್ದಾರೆ.

ಇದು ಮೂಡಲಪಾಯದ ಸಂಪ್ರದಾಯದವರು ಆಕ್ಷೇಪಿಸಬಹುದಾದರೂ ಕಲಾಪ್ರಕಾರವನ್ನುಳಿಸುವ ನಿಟ್ಟಿನಲ್ಲಿ ಪರಿಷ್ಕರಣೆ ಮತ್ತು ಪ್ರಯೋಗಾತ್ಮಕತೆ ಸ್ವಾಗತಾರ್ಹವಾದುದು. ಪಡುವಲಪಾಯಕ್ಕೆ ವಿದ್ವಾಂಸರು ಮತ್ತು ಪಂಡಿತರು ಪರಿಷ್ಕರಣೆ ಮಾಡಿದರು. ಕೆ.ಶಿವರಾಮ ಕಾರಂತರ ಪ್ರಯೋಗಾತ್ಮಕತೆಯನ್ನು ಎಲ್ಲರೂ ಸ್ವಾಗತಿಸಿದರು. ಅಲ್ಲಿ ಪಾತ್ರಧಾರಿಗಳ ಸಂಭಾಷಣೆ ಸಮಕಾಲೀನಗೊಂಡು ಸ್ಪಷ್ಟತೆ ಮತ್ತು ಸ್ಪುಟತ್ವದಿಂದ ಕೂಡಿದೆ. ಆಶಾ ರಘು ಅವರ ನಾಟಕವನ್ನು ಸಂಪಿಗೆ ತೋಂಟದಾರ್ಯರವರು ಮೂಡಲಪಾಯದ ಸಂಭಾಷಣೆಗೆ ಒಗ್ಗಿಸಿದ್ದಾರೆ. ನರಸೇಗೌಡ ಅವರು ನಾಟಕಕ್ಕೆ ಬೇಕಾದ ಹಾಡುಗಳನ್ನು ಸಾಹಿತ್ಯ ಪ್ರಧಾನ ಮಾಡಿ ರಚಿಸಿದ್ದಾರೆ. ವಿಶ್ವನಾಥ ಅವರ ರಂಗಸಜ್ಜಿಕೆ, ರವಿಶಂಕರ ಅವರ ಬೆಳಕು ಎಲ್ಲವೂ ಕೂಡಿ ‘ಪೂತನಿ’ ಮೂಡಲಪಾಯ ಯಕ್ಷಗಾನದ ರಾಯಭಾರಿಯಂತೆ ನಾಡಿನೆಲ್ಲೆಡೆ ಸಂಚಾರಕ್ಕೆ ಸಿದ್ಧಗೊಂಡಿದೆ. ನಿರ್ಲಕ್ಷಿತ ಮೂಡಲಪಾಯ ಯಕ್ಷಗಾನಕ್ಕೆ ಮರುಚೈತನ್ಯವನ್ನು ನೀಡಿರುವ ರಂಗಮಂಡಲದ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಪ್ರಯೋಗಕ್ಕೆ ಪ್ರೇಕ್ಷಕರು ಮೊದಲ ಪ್ರದರ್ಶನದಲ್ಲಿಯೇ ಪ್ರೋತ್ಸಾಹಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.