ADVERTISEMENT

ಹತ್ತಿರವಿದ್ದೂ ದೂರವಾಗದಿರಿ.. ಹಸಿರಾಗಿರಲಿ ಸಂಬಂಧ

ನಿಹಾರಿಕಾ
Published 10 ಜನವರಿ 2021, 16:30 IST
Last Updated 10 ಜನವರಿ 2021, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಧುರಾ ಹಾಗೂ ವಿಶ್ವಾಸ್ ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದವರು. ಕಾಲೇಜು ಮುಗಿದ ಮೇಲೆ ಉದ್ಯೋಗ ಹಾದಿ ಹಿಡಿದು ಇಬ್ಬರೂ ಬೇರೆ ಬೇರೆ ಊರುಗಳಲ್ಲಿದ್ದರೂ ಪ್ರೀತಿ ಮಾತ್ರ ಹಾಗೇ ಮುಂದುವರಿದಿತ್ತು. ರಜೆ ಸಿಕ್ಕಾಗಲೆಲ್ಲಾ ತಿರುಗಾಡುವುದು, ಟ್ರಿಪ್‌ ಆಯೋಜಿಸುವುದು, ಪಾರ್ಟಿ ಮಾಡುವುದು ಹೀಗೆ ಜೀವನವನ್ನು ಎಂಜಾಯ್ ಮಾಡುತ್ತಿದ್ದರು.

ವಿಶ್ವಾಸ್‌ನ ಕ್ರಿಕೆಟ್ ಆಟದ ಹುಚ್ಚು, ಬೈಕ್ ರೈಡಿಂಗ್‌, ಸದಾ ಸುತ್ತಾಟ ಇದೆಲ್ಲಾ ಮಧುರಾಳಿಗೆ ಇಷ್ಟವಾಗುತ್ತಿತ್ತು. ಮಧುರಾಳ ಯೋಚನೆಗಳನ್ನು ವಿಶ್ವಾಸ್ ಗೌರವಿಸುತ್ತಿದ್ದ. ಆದರೆ ಮದುವೆಯಾಗಿ ಜೊತೆಗೆ ಕಾಲ ಕಳೆಯಲು ಆರಂಭಿಸಿದ ಮೇಲೆ ಇಬ್ಬರಿಗೂ ಇನ್ನೊಬ್ಬರ ಆಸೆ–ಆಕಾಂಕ್ಷೆಗಳು ಸಹ್ಯವಾಗುತ್ತಿರಲಿಲ್ಲ. ಅವಳು ಮಾಡಿದ್ದು ಇವನಿಗೆ ತಪ್ಪು ಎನ್ನಿಸಿದರೆ, ಅವನು ಮಾಡುತ್ತಿರುವುದು ಅಪರಾಧ ಎಂಬ ಭಾವನೆ ಇವಳಲ್ಲಿ. ದೂರವಿದ್ದಾಗ ಸುಂದರವಾಗಿದ್ದ ತಮ್ಮ ಸಂಬಂಧ ಹತ್ತಿರವಾದ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುತ್ತಿದೆ ಎಂಬ ಭಾವ ಇಬ್ಬರಲ್ಲೂ ಮೂಡಿದೆ.

ಇದು ಪ್ರೀತಿಸಿ ಮದುವೆಯಾದ ಅಥವಾ ಮದುವೆಯಾದ ಮೇಲೂ ಉದ್ಯೋಗ, ವ್ಯವಹಾರದ ಕಾರಣದಿಂದ ದೂರವಿದ್ದು ಮತ್ತೆ ಹತ್ತಿರವಾದ ಸಂಗಾತಿಗಳಲ್ಲಿನ ಸಾಮಾನ್ಯ ಸಮಸ್ಯೆ. ದೂರವಿದ್ದಾಗ ಸುಂದರವಾಗಿ ಕಾಣುವ ಸಂಬಂಧ ಹತ್ತಿರವಾದಂತೆ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡುತ್ತಾ ಹೋಗಬಹುದು. ತನ್ನ ಇಚ್ಛೆಗೆ ತಕ್ಕಂತೆ ಪತ್ನಿ ನಡೆದುಕೊಳ್ಳುತ್ತಿಲ್ಲ ಎಂಬುದು ಗಂಡನ ದೂರು. ನನ್ನ ಆಸೆಗೆ ಗಂಡ ಬೆಲೆ ಕೊಡುತ್ತಿಲ್ಲ ಎಂಬುದು ಹೆಂಡತಿಯ ಅಳಲು. ಆದರೆ ಜೊತೆಗೇ ಇದ್ದಾಗ ಸಂಬಂಧವನ್ನು ಹಿಂದಿಗಿಂತಲೂ ಹೆಚ್ಚು ಸುಂದರವಾಗಿರಿಸಿಕೊಳ್ಳಬೇಕು ಎಂದರೆ ಕೆಲವೊಂದು ಸೂತ್ರಗಳನ್ನು ಅನುಸರಿಸಬೇಕು ಎನ್ನುತ್ತಾರೆ ಆಪ್ತಸಮಾಲೋಚಕಿ ಜಾಹ್ನವಿ ಪಿ.

ADVERTISEMENT

ಆಸೆ–ಆಕಾಂಕ್ಷೆಗಳನ್ನು ಹಂಚಿಕೊಳ್ಳಿ: ದೂರವಿದ್ದಾಗ ದಿನಗಟ್ಟಲೆ ಕರೆ ಮಾಡಿ ಮಾತನಾಡುತ್ತಾ, ಸಂದೇಶ ಕಳುಹಿಸುತ್ತಾ ಸಂಗಾತಿಯ ಇಷ್ಟ–ಕಷ್ಟಗಳನ್ನು ಆಲಿಸುತ್ತಿದ್ದವರು ಹತ್ತಿರವಾದ ಮೇಲೆ ಜೊತೆಗೆ ಇರುತ್ತೇವಲ್ಲ ಎಂಬ ಭಾವನೆಯೊಂದಿಗೆ ಸಂಗಾತಿಯ ಆಸೆ, ಆಕಾಂಕ್ಷೆಯ ಮೇಲೆ ಗಮನ ಹರಿಸುವುದಿಲ್ಲ. ಅದರ ಬದಲು ಹತ್ತಿರವಿದ್ದಾಗಲೂ ಸಂಗಾತಿಯೊಂದಿಗೆ ನಿಮ್ಮ ಮನದ ಭಾವನೆಗಳನ್ನು ಹಂಚಿಕೊಳ್ಳಿ. ಅವರಾಗಿ ಕೇಳದೇ ಇದ್ದರೆ ನೀವಾಗಿಯೇ ಹೇಳಿಕೊಳ್ಳಿ. ಸಂಗಾತಿಯ ಇಷ್ಟ–ಕಷ್ಟಕ್ಕೆ ದನಿಯಾಗಿ. ಅವರು ಮಾತಿನಲ್ಲಿ ವ್ಯಕ್ತಪಡಿಸಲಾಗದ್ದನ್ನು ಅರ್ಥ ಮಾಡಿಕೊಳ್ಳಿ.

ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳಿ: ಮನುಷ್ಯ ಎಂದ ಮೇಲೆ ಬದಲಾವಣೆ ಸಹಜ. ಆದರೆ ಸಂಗಾತಿಯ ವರ್ತನೆಯ ಬದಲಾವಣೆ ಸಂಬಂಧವನ್ನೇ ಹಾಳು ಮಾಡುವಂತಿರಬಾರದು. ನೇರವಾಗಿ ಪ್ರಶ್ನೆ ಕೇಳಿ, ಸಂಗಾತಿ ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿ. ಬದಲಾವಣೆಗೆ ಕಾರಣಗಳನ್ನು ಹುಡುಕಿ ಸಮಸ್ಯೆ ಸರಿಪಡಿಸಿಕೊಳ್ಳಿ.

ಜಗಳ, ಮನಸ್ತಾಪವಿರಲಿ: ಪ್ರೀತಿ, ಪ್ರೇಮ, ಮದುವೆ ಯಾವುದೇ ಸಂಬಂಧವಾಗಲಿ ಜಗಳ, ಮನಸ್ತಾಪಗಳು ಬರುವುದು ಸಾಮಾನ್ಯ. ಆದರೆ ಅವು ಮಿತಿ ಮೀರದಂತೆ ಹೇಗೆ ತಡೆಯುತ್ತೀರಿ ಎಂಬುದರ ಮೇಲೆ ಸಂಬಂಧವು ನಿಂತಿರುತ್ತದೆ. ಜಗಳ ಮನಸ್ತಾಪ ಹೆಚ್ಚಾದಾಗ ಸಂದರ್ಭವನ್ನು ತಿಳಿಗೊಳಿಸುತ್ತಾ ಹೋಗಿ. ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲು ಬಿಡದೇ ಪರಿಸ್ಥಿತಿಯನ್ನು ಹದಗೊಳಿಸಿ. ಸಂಜೆ ಹೊತ್ತಿಗೆ ಇಬ್ಬರೂ ಒಂದು ವಾಕ್‌ ಹೋಗಿ ನಿಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಿ. ಸಂಗಾತಿಯ ಮನವೊಲಿಸಲು ಪ್ರಯತ್ನಿಸಿ.

ಸಮಯ ಕಳೆಯಿರಿ: ದೂರವಿದ್ದಾಗ ತಿಂಗಳಿಗೊಮ್ಮೆ ಭೇಟಿ ಮಾಡಿ ಪಿಕ್ನಿಕ್, ಸಿನಿಮಾ ಎಂದು ತಿರುಗಾಡುವ ಹಲವರು ಮದುವೆಯಾದ ಮೇಲೆ ಇದನ್ನೆಲ್ಲಾ ಒಂದೇ ಬಾರಿಗೆ ನಿಲ್ಲಿಸುತ್ತಾರೆ. ಈಗೇನು ನಾವು ಮೊದಲಿನಂತೆ ಪ್ರೇಮಿಗಳಲ್ಲ ಎಂಬ ಭಾವನೆಯೂ ಅದಕ್ಕೆ ಕಾರಣವಿರಬಹುದು. ಆದರೆ ಜೊತೆಗಿದ್ದಾಗ ಎಷ್ಟೇ ಬ್ಯುಸಿ ಇದ್ದರೂ ಸಂಗಾತಿಯ ಜೊತೆ ಅರ್ಧಗಂಟೆ ಸಮಯ ಕಳೆಯಿರಿ. ಸಂಜೆ ಇಬ್ಬರೂ ಸೇರಿ ಒಂದು ಸಣ್ಣ ವಾಕ್ ಹೋಗಿ. ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.