ADVERTISEMENT

ಪಾರಂಪರಿಕ ತಾಣ: ವೆಂಕಟಪ್ಪ ನಾಯಕನ ಚಂಪಕ ಸರಸಿ

ಗೌರಿ ಚಂದ್ರಕೇಸರಿ
Published 17 ಜನವರಿ 2026, 23:30 IST
Last Updated 17 ಜನವರಿ 2026, 23:30 IST
ಚಂಪಕ ಸರಸಿ ಕೊಳ
ಚಂಪಕ ಸರಸಿ ಕೊಳ   

ಚಂಪಕ ಸರಸಿ ಅಥವಾ ಸರಸ್ಸು ಎಂದು ಕರೆಯಲ್ಪಡುವ ಮನಮೋಹಕ ಕೊಳವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಲಂದೂರು ಗ್ರಾಮದಲ್ಲಿದೆ. ಇದನ್ನು ಕೊಳ ಎನ್ನುವುದಕ್ಕಿಂತಲೂ ವಿಶಾಲವಾದ ಕಲ್ಯಾಣಿ ಎಂದು ಹೇಳಬಹುದು. ಈ ಹಿಂದೆ ಸಾರ್ವಜನಿಕರ ಗಮನಕ್ಕೆ ಬಾರದೇ ಇದ್ದ ಈ ಸ್ಥಳ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಈಗಷ್ಟೇ ಜನಮನ್ನಣೆಗೆ ಪಾತ್ರವಾಗುತ್ತಿದೆ.

ಹದಿನಾರನೇ ಶತಮಾನದಲ್ಲಿ ಜನಪ್ರಿಯ ನಾಯಕ ಎನ್ನಿಸಿಕೊಂಡಿದ್ದ ಕೆಳದಿಯ ವೆಂಕಟಪ್ಪ ನಾಯಕನಿಂದ ಈ ಸುಂದರ ಕೊಳ ನಿರ್ಮಾಣವಾಯಿತು. ಕೆಳದಿಯ ಅರಸರು ನೀರಾವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದವರು. ರಾಜ್ಯದಾದ್ಯಂತ ಸುಮಾರು 5,800 ಕೆರೆಗಳನ್ನು ನಿರ್ಮಾಣ ಮಾಡಿದರು ಎಂಬ ಉಲ್ಲೇಖವಿದೆ.

ಕೆಳದಿಯ ವೆಂಕಟಪ್ಪ ನಾಯಕ ಬೆಸ್ತರ ಕನ್ಯೆಯೊಬ್ಬಳನ್ನು ಪ್ರೇಮಿಸಿ ಮದುವೆಯಾಗುತ್ತಾನೆ. ಆದರೆ ಸಮಾಜದ ಚುಚ್ಚು ಮಾತುಗಳಿಗೆ ಮನನೊಂದು ಚಂಪಕ ಸರಸಿ ಅನ್ನಾಹಾರಗಳನ್ನು ತ್ಯಜಿಸಿ ದೇಹ ತ್ಯಾಗ ಮಾಡುತ್ತಾಳೆ. ಅವಳ ನೆನಪಿಗಾಗಿ ವೆಂಕಟಪ್ಪ ನಾಯಕ ಈ ಐತಿಹಾಸಿಕ ಕೊಳವನ್ನು ನಿರ್ಮಾಣ ಮಾಡಿದನೆಂದು ಹೇಳಲಾಗುತ್ತದೆ.

ADVERTISEMENT

ಕೊಳದ ಸುತ್ತಲೂ ಸ್ಥಳೀಯವಾಗಿ ಸಿಗುವ ಜಂಬಿಟ್ಟಿಗೆಗಳಿಂದ ಕಟ್ಟಿರುವ 76.8 ಮೀಟರ್‌ ಅಗಲ ಹಾಗೂ 77.8 ಉದ್ದದ ಆವಾರವಿದೆ. ಉತ್ತರ ದಿಕ್ಕಿನಿಂದ ನೀರು ಹರಿದು ಬಂದು ಕೊಳಕ್ಕೆ ಸೇರುತ್ತದೆ. ದಕ್ಷಿಣಕ್ಕೆ ತೂಬಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕೊಳದ ಮಧ್ಯದಲ್ಲಿ ಪುಟ್ಟದಾದ ದೇವಸ್ಥಾನವಿದ್ದು ಇದರಲ್ಲಿ ನಂದಿಯ ವಿಗ್ರಹವಿದೆ. ಈ ದೇವಸ್ಥಾನವನ್ನು ತಲುಪಲು ಕಲ್ಲಿನ ಹಲಗೆಗಳ ಒಂದು ಸೇತುವೆ ಇದೆ. ನೀಲಿಬಣ್ಣದ ನೀರಿನಿಂದ ಕೂಡಿದ ಈ ಕೊಳ ಮನಮೋಹಕವಾಗಿದ್ದು ಕೊಳದಲ್ಲಿ ಪುಟ್ಟ ಪುಟ್ಟ ಮೀನುಗಳ ರಾಶಿಯನ್ನು ಕಾಣಬಹುದು.

ಕೊಳದ ಮಧ್ಯಭಾಗದಲ್ಲಿರುವ ದೇವಸ್ಥಾನ

ಕೊಳದ ಸುತ್ತಲೂ ಇರುವ ಹಸಿರಿನ ವಾತಾವರಣವು ಮನವನ್ನು ಮುದಗೊಳಿಸುತ್ತದೆ. ಚಿತ್ರಕಾರನೊಬ್ಬ ರಚಿಸಿದ ಚಿತ್ರದಂತೆ ಈ ದೃಶ್ಯ ಭಾಸವಾಗುತ್ತದೆ. ಇತ್ತೀಚೆಗೆ ಪ್ರೀ ವೆಡ್ಡಿಂಗ್ ಶೂಟ್‌ಗೆ ಈ ಪರಿಸರ ವೇದಿಕೆಯಾಗಿದೆ. ಮದುವೆಗೂ ಮುನ್ನ ಜೋಡಿಗಳು ಇಲ್ಲಿ ಬಂದು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ಶಿವಮೊಗ್ಗದಿಂದ 50 ಕಿಲೋಮೀಟರ್‌ ದೂರದಲ್ಲಿರುವ ಈ ಪಾರಂಪರಿಕ ತಾಣ ಆನಂದಪುರದಿಂದ 3 ಕಿಲೋಮೀಟರ್‌ ದೂರದಲ್ಲಿದೆ. ವಿಶ್ವ ನೀರಾವರಿ ರಚನೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವಷ್ಟು ಈ ಕೊಳ ಮಹತ್ವ ಪಡೆದಿದ್ದರೂ ನಿರ್ಲಕ್ಷಕ್ಕೆ ಒಳಗಾಗಿದೆ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಈ ಸ್ಥಳ ಇನ್ನೂ ಹೆಚ್ಚು ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.