‘ಆಗ ದಸರಾ ರಜೆ ಇತ್ತು. ನನ್ನ ಸಹಪಾಠಿಗಳೆಲ್ಲರೂ ಆಟವಾಡುತ್ತಿದ್ದರು. ನಾನು ನೋಟ್‌ಬುಕ್, ಪೆನ್ನು ಹಿಡಿದು ಮನೆಯಿಂದ ಹೊರಟಿದ್ದೆ. ನನಗೆ ತಿಳಿಸಿದಂತೆ ಮನೆ ಸಮೀಪವಿರುವ ಬೀದಿಗಳಲ್ಲಿ ಓಡಾಡಿ, ‘ನಿಮ್ಮ ಸುತ್ತಮುತ್ತಲು ಏನಾದರೂ ಸಮಸ್ಯೆ ಇದೆಯೇ’ ಎಂದು ಜನರನ್ನು ಕೇಳುತ್ತಾ, ಅವರು ಹೇಳಿದನ್ನು ದಾಖಲಿಸುತ್ತಾ ಮನೆಯಿಂದ ಮನೆಗೆ ಓಡಾಡಿದೆ. ಬಹುತೇಕ ಎಲ್ಲರೂ ‘ಚರಂಡಿ ಸಮಸ್ಯೆ ಇದೆ ಕಣಮ್ಮಾ, ನೀರು ಸರಿಯಾಗಿ ಬರ್ತಾ ಇಲ್ಲ, ರಸ್ತೆ ಸರಿ ಇಲ್ಲ’ ಎಂದು ಹೇಳಿದರು. ಆ ಮಾತುಗಳಿಗೆ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಸಹಾಯ ಪಡೆದು ಪತ್ರದ ರೂಪ ನೀಡಿದೆ. ಅವರ ಸಮ್ಮುಖದಲ್ಲೇ ಅದನ್ನು ಗ್ರಾಮ ಪಂಚಾಯಿತಿ ಕಚೇರಿಗೆ ನೀಡಿದೆ. ಇದನ್ನು ನೋಡಿ ಗ್ರಾಮ ಪಂಚಾಯಿತಿಯವರು ನಮ್ಮ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ಮಾಡಿದರು. ನಾನು ಆ ಸಭೆಯಲ್ಲಿ ಬಹಳ ಖುಷಿಯಿಂದ, ಹೆಮ್ಮೆಯಿಂದ ಮಾತನಾಡಿದೆ...’
ಇದು ಬನ್ನೇರುಘಟ್ಟ ಸಮೀಪದ ಬಿಲ್ವರ್ಧನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಮೇಘನಾಳ ಮಾತು.
‘ಶಾಲೆಯಲ್ಲಿ ಮಕ್ಕಳ ಗ್ರಾಮಸಭೆ ನಡೆದಾಗ ನಮ್ಮ ಶಾಲೆಯ ಹಿಂದಿರುವ ರಾಜಕಾಲುವೆಯನ್ನು ಸ್ವಚ್ಛ ಮಾಡಿಕೊಡಬೇಕು, ಶಾಲೆಗೆ ಸ್ಪೋರ್ಟ್ಸ್ ಕಿಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಬೇಕು ಎಂದೂ ಕೇಳಿದೆ. ಎಲ್ಲವನ್ನೂ ಮಾಡುವ ಭರವಸೆಯನ್ನು ಗ್ರಾಮ ಪಂಚಾಯಿತಿ ನೀಡಿದೆ’ ಎನ್ನುವಾಗ ಮೇಘನಾ ಮಾತಿನಲ್ಲಿ ಯಾವುದೇ ಅಳುಕು ಕಾಣಲಿಲ್ಲ.
ಸಾಮಾನ್ಯವಾಗಿ ಗ್ರಾಮ ಸಭೆಗಳೆಂದರೆ ಅಧಿಕಾರಿಗಳು, ಜನಪ್ರತಿನಿಧಿಗಳು, ಹಿರಿಯರದ್ದೇ ಪಾರಮ್ಯ. ಅಂಥ ವೇದಿಕೆಯ ಮುಂದೆ ಮಕ್ಕಳೇ ತುಂಬಿದ್ದರೆ?! ಅವರೂ ಹಲವು ಸಮಸ್ಯೆಗಳನ್ನು ಮುಂದಿಟ್ಟರೆ? ಹೌದು, ಇಂತಹ ದೃಶ್ಯಗಳು ಕಂಡುಬಂದಿದ್ದು ಆನೇಕಲ್ ತಾಲ್ಲೂಕಿನ ಬಿಲ್ವರ್ಧನಹಳ್ಳಿ ಹಾಗೂ ಶಾಂತಿಪುರ ಹಾಗೂ ರಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ.
ಎಷ್ಟೋ ವರ್ಷಗಳ ಹಿಂದೆ ಪ್ರತಿ ಶಾಲೆಗಳಲ್ಲಿ ಈ ರೀತಿ ಮಕ್ಕಳ ಗ್ರಾಮ ಸಭೆ ನಡೆಸಬೇಕು ಎಂಬ ಸುತ್ತೋಲೆ ಸರ್ಕಾರದಿಂದ ಹೊರಬಿದ್ದಿದೆ. ಆದರೆ ಇದು ಕೆಲವೆಡೆಯಷ್ಟೇ ಕಾರ್ಯರೂಪಕ್ಕೆ ಬರುತ್ತಿದೆ. ಇಂಥ ಸಭೆಗಳಲ್ಲಿ ಮಕ್ಕಳ ಮಾತುಗಳು ಕೃತಕವಾಗಿ ಭಾಷಣದಂತೆ ಇರುವುದನ್ನು ‘ಇನ್ವಾಲ್ವ್’ ಎಂಬ ಸರ್ಕಾರೇತರ ಸಂಸ್ಥೆ ಗಮನಿಸಿತು. ಇದಕ್ಕೆ ಚುರುಕು ಮುಟ್ಟಿಸಲು ‘ಹಾಲಿಡೇ ಪ್ರಾಜೆಕ್ಟ್’ ಎಂಬ ಯೋಜನೆಯನ್ನು ಈ ಸಂಸ್ಥೆ ಪ್ರಾರಂಭಿಸಿತು.
ಏನಿದು ‘ಹಾಲಿಡೇ ಪ್ರಾಜೆಕ್ಟ್’?
‘ವ್ಯವಸ್ಥೆಯೊಳಗೆ, ಸಮಾಜದಲ್ಲಿ ಮಕ್ಕಳ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ‘ಮಕ್ಕಳ ಗ್ರಾಮಸಭೆ’ ಪ್ರಾರಂಭಿಸಲಾಗಿತ್ತು’ ಎನ್ನುವ ‘ಇನ್ವಾಲ್ವ್’ನ ಸಹ ಸಂಸ್ಥಾಪಕಿ ಪ್ರತಿಭಾ ನಾರಾಯಣ್, ‘ಈ ಸಭೆಗಳು ಕೆಲವು ಶಾಲೆಗಳಲ್ಲಷ್ಟೇ ನಡೆಯುತ್ತಿರುವುದನ್ನು ಗಮನಿಸಿದೆವು. ಸಭೆಗಳಲ್ಲಿ ಮಕ್ಕಳ ಮಾತು ಭಾಷಣದಂತಿತ್ತು. ಹೀಗಾಗಿ ದಸರಾ ರಜೆಯಲ್ಲಿ ನಾವು ಮಕ್ಕಳ ಕೈಯಲ್ಲೇ ಒಂದು ಕಮ್ಯೂನಿಟಿ ಪ್ರಾಜೆಕ್ಟ್ ಮಾಡಿಸಿದ್ದೆವು. ಇದು ಸಮೀಕ್ಷೆಯ ಮಾದರಿಯಲ್ಲಿತ್ತು. ಈ ಪ್ರಾಜೆಕ್ಟ್ ಪೂರ್ಣಗೊಳಿಸಿ ಮಕ್ಕಳು ವರದಿಯನ್ನೂ ತಯಾರಿಸಿದ್ದರು. ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬಳಿ ವಿಸ್ತೃತವಾದ, ಅಂಕಿ–ಅಂಶ ಸಹಿತವಾದ ವಿಷಯಗಳಿದ್ದವು. ನನ್ನ ಸುತ್ತಮುತ್ತ ಇಂತಹ ಸಮಸ್ಯೆಗಳು ಇವೆ, ಅದಕ್ಕೆ ಇವುಗಳೇ ಸಾಕ್ಷಿ ಎಂದು ನಿರ್ದಿಷ್ಟವಾಗಿ ಅವರು ಉಲ್ಲೇಖಿಸಿದ್ದರು. ಜೊತೆಗೆ ತಾವು ಉಲ್ಲೇಖಿಸಿದ ಸಮಸ್ಯೆಗಳನ್ನು ಪರಿಹರಿಸಲು ಅವರೇ ಸಲಹೆಗಳನ್ನೂ ನೀಡಿದರು. ಇದು ಅವರ ಅನುಭವದ ಮಾತುಗಳಾಗಿದ್ದವು’ ಎಂದರು.
ಇದಕ್ಕೆ ಪೂರಕವಾಗಿ ರಾಯಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಜನನಿ ಮಾತಿತ್ತು. ‘ನಮ್ಮ ಕೈಯಲ್ಲಿ ಹಾಲಿಡೇ ಪ್ರಾಜೆಕ್ಟ್ ಮಾಡಿಸಿದಾಗ, ಶಾಲೆಯ ಮುಂಭಾಗದ ರಸ್ತೆಗೆ ಉಬ್ಬು (ಹಂಪ್ಸ್) ಹಾಕಿಸಬೇಕು ಎಂದು ಹಲವರು ಹೇಳಿದರು. ಜೊತೆಯಲ್ಲಿ ರಸ್ತೆ ಕೆಟ್ಟು ಹೋಗಿದೆ, ಮಳೆ ಬಂದಾಗ ತರಗತಿಯೊಳಗಿರುವ ಬೋರ್ಡ್‌ನಲ್ಲಿ ಬರೆದಿದ್ದೇ ಕಾಣಿಸುವುದಿಲ್ಲ ಮುಂತಾದ ಸಮಸ್ಯೆ ಹೇಳಿದೆವು. ಕೆಲವು ತಿಂಗಳಲ್ಲಿ ರಸ್ತೆಗೆ ಡಾಂಬರು ಹಾಕಿದರು. ಶಾಲೆ ಸಮೀಪ ಬೆಳಕಿನ ವ್ಯವಸ್ಥೆಯನ್ನೂ ಮಾಡಿದರು’ ಎಂದು ಜನನಿ ಖುಷಿಯಿಂದ ಹೇಳಿದಳು.
‘ಸ್ಥಳೀಯ ಸಂಸ್ಥೆಗಳು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ವಿದ್ಯಾರ್ಥಿಗಳ ಸಲಹೆಗಳು ಎಷ್ಟು ಮುಖ್ಯ ಎನ್ನುವುದನ್ನು ತೋರಿಸಲು ಇಂತಹ ಸಭೆಗಳು ಮಹತ್ವದ್ದು. ಮಕ್ಕಳಿಗೆ ಮಾತನಾಡಲು ಹಲವು ವೇದಿಕೆಗಳಿವೆ. ಆದರೆ ಅವರ ಮಾತುಗಳನ್ನು ಕೇಳಿಸಿಕೊಂಡು ಅದಕ್ಕೆ ಸೂಕ್ತವಾದ ಉತ್ತರ, ಪರಿಹಾರವನ್ನು ನೀಡುವವರ ಸಂಖ್ಯೆ ವಿರಳ. ವಿದ್ಯಾರ್ಥಿಗಳಿಗೆ ಮಾತನಾಡಲು ಆತ್ಮವಿಶ್ವಾಸ, ಧೈರ್ಯವನ್ನು ಈ ಸಭೆಗಳು ತುಂಬಿವೆ. ಸಮುದಾಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ತಮ್ಮ ಕೊಡುಗೆಯನ್ನೂ ನೀಡಬಹುದು ಎಂಬ ಖುಷಿ ಅವರಲ್ಲಿತ್ತು. ಒಬ್ಬರ ಧೈರ್ಯ ಮತ್ತೊಬ್ಬರಿಗೆ ಸ್ಫೂರ್ತಿಯಾಗಿದೆ. ವಿದ್ಯಾರ್ಥಿಗಳ ಸಲಹೆ, ಮಾತುಗಳಿಂದ ಏನು ಪ್ರಯೋಜನ ಎಂಬ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳ ಮನಃಸ್ಥಿತಿಯೂ ಈ ಸಭೆಗಳ ಬಳಿಕ ಬದಲಾಗಿದೆ. ವಿದ್ಯಾರ್ಥಿಗಳಲ್ಲಿರುವ ಭಿನ್ನ ದೃಷ್ಟಿಕೋನಗಳು ಅವರನ್ನು ಆಶ್ಚರ್ಯಕ್ಕೆ ದೂಡಿದೆ’ ಎಂದು ಪ್ರತಿಭಾ ವಿವರಣೆ ನೀಡಿದರು.
ಇಂತಹ ಮಕ್ಕಳ ಗ್ರಾಮಸಭೆಯನ್ನು ರಾಜ್ಯದಾದ್ಯಂತ ನಡೆಸಲು ಇನ್ವಾಲ್ವ್ ಯೋಜನೆ ಹಾಕಿಕೊಂಡಿದೆ. ಮಕ್ಕಳಿಗೂ ಹತ್ತಾರು ಜನರ ಎದುರು ಎದ್ದುನಿಂತು ಮಾತನಾಡುವ ಆತ್ಮವಿಶ್ವಾಸವನ್ನು ತುಂಬುವ ಈ ಯೋಜನೆ ಇತರರಿಗೂ ಸ್ಫೂರ್ತಿಯಾಗಲಿ.
ಮಕ್ಕಳಲ್ಲಿ ಧೈರ್ಯ ಮೂಡಿಸಿದ ಸಭೆ
ಮಕ್ಕಳೆದುರು ಕುಳಿತು ಅವರ ಮಾತುಗಳನ್ನು ಕೇಳಿದ ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಮದನ್ ಅವರಿಗೆ ಮಕ್ಕಳ ಭವಿಷ್ಯವೂ ಕಂಡಿದೆ. ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇಡೀ ಪಂಚಾಯಿತಿಯೇ ಅಲ್ಲಿ ಸೇರಿತ್ತು. ಶಾಲೆಯಲ್ಲಿ ಆಟದ ಮೈದಾನವಿಲ್ಲ, ತಟ್ಟೆ ತೊಳೆಯಲು ಸೂಕ್ತ ವ್ಯವಸ್ಥೆಯಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ, ಗ್ರಂಥಾಲಯವಿಲ್ಲ ಎನ್ನುವುದು ಸೇರಿದಂತೆ ಶಾಲೆಯೊಳಗಿನ ಕುಂದುಕೊರತೆಗಳ ಜೊತೆಗೆ ತಮ್ಮೂರಿನ ಚರಂಡಿ–ರಸ್ತೆ, ಬೀದಿ ದೀಪಗಳ ಸಮಸ್ಯೆಗಳ ಬಗ್ಗೆ ಮಕ್ಕಳು ವಿಸ್ತೃತವಾಗಿ ವಿವರಿಸಿದರು. ಇವುಗಳಲ್ಲಿ ಹಲವು ಸಮಸ್ಯೆಗಳನ್ನು ಬಗೆಹರಿಸಿದೆವು. ಇದು ಮಕ್ಕಳಲ್ಲೂ ಭರವಸೆ ಮೂಡಿಸಿತು’ ಎಂದರು.
‘ಮೊದಲ ಮಕ್ಕಳ ಗ್ರಾಮಸಭೆ ಮಾಡಿ ಎರಡನೇ ಸಭೆ ನಡೆಸುವ ಹೊತ್ತಿನಲ್ಲಿ ಮಕ್ಕಳು ಮಾತನಾಡುವ ಶೈಲಿ ಬದಲಾಗಿತ್ತು. ಅವರಲ್ಲಿ ಧೈರ್ಯ ಬಂದಿತ್ತು. ಈ ಸಭೆಯಿಂದ ಊರಿನ ಸಮಸ್ಯೆಗಳು ನೇರವಾಗಿ ನಮಗೆ ತಲುಪಿತ್ತು. ಮಕ್ಕಳೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಡಿಕೆ ಇಟ್ಟಿದ್ದರು. ಈ ಮಕ್ಕಳ ಗ್ರಾಮಸಭೆಯ ಬಳಿಕ ಎರಡೂ ಶಾಲೆಗಳಲ್ಲಿ ಶಾಲಾ ವಾರ್ಷಿಕೋತ್ಸವಗಳನ್ನು ಮಾಡಿಸಿದೆ’ ಎಂದರು ಮದನ್.
‘ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಮಕ್ಕಳ ಗ್ರಾಮಸಭೆ ನಡೆಸುವುದು ಉತ್ತಮ. ಈ ಮಕ್ಕಳು ಮುಂದೆ ಜನಪ್ರತಿನಿಧಿಗಳಾಗಲು, ಧೈರ್ಯದಿಂದ ಮಾತನಾಡಲು ಇದು ಅಡಿಪಾಯ. ಮುಂದಿನ ಸಭೆಗಳಿಗೆ ಪೊಲೀಸ್ ಅಧಿಕಾರಿಗಳನ್ನೂ ಕರೆಸುವ ಆಲೋಚನೆ ಇದೆ. ಈ ಮೂಲಕ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದೇವೆ’ ಎನ್ನುತ್ತಾರೆ ಅವರು.
ನನ್ನ ಹಳ್ಳಿಯಲ್ಲಿ ಸಾಕ್ಷರತೆಯ ಸಮಸ್ಯೆ ತೀವ್ರವಾಗಿದೆ ಎನ್ನುವುದು ಹಾಲಿಡೇ ಪ್ರಾಜೆಕ್ಟ್ ಮೂಲಕ ತಿಳಿದುಕೊಂಡೆ. ಓದಲು ಬರೆಯಲು ಬಾರದವರು ಮೋಸ ಹೋಗುವುದು ಸಾಮಾನ್ಯವಾಗಿತ್ತು. ಹೀಗಾಗಿ ಶಾಲಾ ಅವಧಿಯ ಬಳಿಕ ಅಂತಹವರಿಗೆ ತರಗತಿಗಳನ್ನು ತೆಗೆದುಕೊಳ್ಳುವ ಸಲಹೆಯನ್ನು ಸಭೆಯಲ್ಲಿ ನೀಡಿದೆ.ಕುಶಾಲ್, ಶಾಂತಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.