ADVERTISEMENT

ಬನ್ನಿ, ಕ್ರಿಸ್‌ಮಸ್‌ ಬಜಾರ್‌ಗೆ

ಹೇಮಾ ವೆಂಕಟ್
Published 18 ಡಿಸೆಂಬರ್ 2018, 19:35 IST
Last Updated 18 ಡಿಸೆಂಬರ್ 2018, 19:35 IST
   

ವರ್ಷದ ಕೊನೆಯ ಮಾಸ ಡಿಸೆಂಬರ್‌ ಬಂತೆಂದರೆ ಸಾಕು ಎಲ್ಲರಲ್ಲೂ ನವೋಲ್ಲಾಸ ತಂಬುತ್ತದೆ. ಹಿತವಾದ ಚಳಿಯ ವಾತಾವರಣ, ಕ್ರಿಸ್‌ಮಸ್‌ ಹಬ್ಬದ ಸಂಭ್ರಮ, ರಜೆಯ ಮೂಡ್‌, ಹೊಸ ವರ್ಷ ಎಲ್ಲವೂ ಒಂದಾಗಿ ಬಂದು ಉತ್ಸಾಹ ಹೆಚ್ಚಿಸುತ್ತದೆ. ಅದರಲ್ಲೂ ಈ ಮಹಾನಗರದಲ್ಲಿ ಕ್ರಿಸ್‌ಮಸ್‌ ಒಂದು ಧರ್ಮದವರ ಹಬ್ಬ ಮಾತ್ರವಾಗಿ ಉಳಿದಿಲ್ಲ. ಸಂಭ್ರಮಾಚರಣೆಯಲ್ಲಿ ಎಲ್ಲರೂ ಭಾಗಿಯಾಗುತ್ತಾರೆ. ಎಲ್ಲೋ ದೂರದಲ್ಲಿ ಕ್ಯಾರೋಲ್‌ ಸಂಗೀತ ಕೇಳಿದರೆ ಕಿವಿಯಗಲಿಸುತ್ತೇವೆ. ಕ್ರಿಸ್‌ಮಸ್‌ ವಿಶೇಷ ತಿನಿಸು, ವೈವಿಧ್ಯಮಯ ಕೇಕ್‌, ಪೇಸ್ಟ್ರೀ ಸವಿಯುತ್ತೇವೆ. ಚರ್ಚ್‌ಗಳ ದೀಪಾಲಂಕಾರ ನೋಡಿ ಸಂಭ್ರಮಿಸುತ್ತೇವೆ.

ಹಬ್ಬಕ್ಕೆ ಒಂದು ವಾರವಷ್ಟೇ ಉಳಿದಿದೆ. ನಗರದ ಬಹುತೇಕ ಚರ್ಚ್‌ಗಳ ಮುಂದೆ ಕ್ರಿಸ್‌ಮಸ್‌ ಮಾರುಕಟ್ಟೆ ಶುರುವಾಗಿದೆ.ನಗರದ ಹಳೆಯ ಚರ್ಚ್‌ಗಳಲ್ಲಿ ಒಂದಾದ ಶಿವಾಜಿನಗರದ ’ಸೇಂಟ್‌ ಮೇರೀಸ್‌ ಬೆಸಿಲಿಕಾ‘ ಮುಂಭಾಗದಲ್ಲಿ ಡಿಸೆಂಬರ್‌ 1ರಿಂದಲೇ ವ್ಯಾಪಾರ ಮಳಿಗೆಗಳು ಶುರುವಾಗಿವೆ. ಇದೇ 26ರವರೆಗೂ ಕ್ರಿಸ್‌ಮಸ್‌ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಒಟ್ಟು 30 ಮಳಿಗೆಗಳಿವೆ. ಎಲ್ಲ ಮಳಿಗೆಗಳಲ್ಲಿಯೂ ಗೋದಳಿ ನಿರ್ಮಾಣಕ್ಕೆ ಬಳಸುವ ಪುಟ್ಟ ಮನೆಗಳು, ಕೃತಕ ಕ್ರಿಸ್‌ಮಸ್‌ ಟ್ರೀ, ಸಾಂತಾಕ್ಲಾಸ್‌ ಟೋಪಿ, ಬಣ್ಣ ಬಣ್ಣದ ಆಲಂಕಾರಿಕ ಗಂಟೆಗಳು, ಬಾಲಯೇಸು, ತಾಯಿ ಮರಿಯಾ, ತಂದೆ ಜೋಸೆಫ್‌ ಮಾತ್ರವಲ್ಲದೇ ಏಸುಕ್ರಿಸ್ತನ ಜನ್ಮ ವೃತ್ತಾಂತ ಹೇಳುವ ಗೊಂಬೆಗಳ ಬೃಹತ್‌ ಸಂಗ್ರಹವಿದೆ. ಚೀನಾದ ಆಕರ್ಷಕ ಸೆರಾಮಿಕ್‌ ಬೊಂಬೆಗಳು, ಸ್ಥಳೀಯ ಮಣ್ಣಿನ ಬೊಂಬೆಗಳು, ಗಾತ್ರ, ವಿನ್ಯಾಸದ ನಕ್ಷತ್ರಗಳು ಪರಿಸರವನ್ನು ಕ್ರಿಸ್‌ಮಸ್‌ ಸಂಭ್ರಮದಲ್ಲಿ ತೋಯುವಂತೆ ಮಾಡಿವೆ.

ಇಲ್ಲಿರುವ ವ್ಯಾಪಾರಿಗಳಲ್ಲಿ ಹಿಂದೂಗಳೇ ಹೆಚ್ಚು.ಹೆಚ್ಚಿನವರು ತಮಿಳು ಭಾಷಿಕರು. ವರ್ಷವಿಡೀ ಆಟೊ ಚಾಲನೆ, ಅಂಗಡಿ, ಬೇರೆ ಬೇರೆ ವ್ಯಾಪಾರ ಮಾಡಿಕೊಂಡಿರುವ ಇವರು ಪ್ರತಿವರ್ಷ ಬೆಸಿಲಿಕಾ ಚರ್ಚ್‌ ಮುಂದೆ ಮಳಿಗೆ ತೆರೆಯುತ್ತಾರೆ. ಡಿಸೆಂಬರ್‌ 1ರಿಂದ 26ರವರೆಗೆ ಮಾತ್ರ ವ್ಯಾಪಾರ ಮಾಡಲು ಬಿಬಿಎಂಪಿ ಅನುಮತಿ ನೀಡುತ್ತದೆ. ಹಿಂದೆ ಬೆರಳೆಣಿಕೆಯ ಮಳಿಗೆಗಳು ಮಾತ್ರ ಇರುತ್ತಿದ್ದವು. ಈ ವರ್ಷ ಅದು 30ಕ್ಕೆ ತಲುಪಿವೆ. ಇಷ್ಟೇ ಅಲ್ಲ, ಸ್ಥಿರ ಮಳಿಗೆಗಳೂ ಕ್ರಿಸ್‌ಮಸ್‌ ಗುಂಗಿನಲ್ಲಿ ಮುಳುಗಿವೆ. ಸಾಂತಾ ಎಲ್ಲ ಮಳಿಗೆಗಳಲ್ಲೂ ಸ್ವಾಗತಿಸುತ್ತಿದ್ದಾನೆ.

ADVERTISEMENT

ಒಂದು ತಿಂಗಳು ವ್ಯಾ‍ಪಾರ

ಲಿಂಗರಾಜಪುರದ ಅರುಣ್‌ 15 ವರ್ಷಗಳಿಂದ ಬೆಸಿಲಿಕಾ ಚರ್ಚ್‌ ಮುಂದೆ ಗೋದಲಿ ಮನೆಗಳು ಮತ್ತು ಆಲಂಕಾರಿಕ ವಸ್ತುಗಳ ವ್ಯಾಪಾರ ಮಾಡುತ್ತಿದ್ದಾರೆ. ಹಿಂದೆ ಇವರ ತಂದೆಯೂ ಇದೇ ವ್ಯಾಪಾರ ಮಾಡುತ್ತಿದ್ದರಂತೆ. ವರ್ಷದ ಹನ್ನೊಂದು ತಿಂಗಳು ಆಟೋ ಚಾಲಕರಾಗಿ ಕೆಲಸ ಮಾಡುವ ಅರುಣ್‌, ಡಿಸೆಂಬರ್‌ ತಿಂಗಳನ್ನು ಕ್ರಿಸ್‌ಮಸ್‌ ಸಂತೆಗೇ ಮೀಡಸಲಿಡುತ್ತಾರೆ. ಈ ವರ್ಷ ಹುಣಸೆ ಮರದ ತೊಗಟೆಗಳನ್ನು ಬಳಸಿ ದೊಡ್ಡ ಗೋದಲಿಯೊಂದನ್ನು ರಚಿಸಿದ್ದಾರೆ. ಬೆಲೆ ₹ 5 ಸಾವಿರ. ಮೊದಲೇ ಆರ್ಡರ್‌ ಕೊಟ್ಟಿದ್ದರಂತೆ. ಒಂದು ದಿನದ ಕೆಲಸ, ₹ 2 ಸಾವಿರ ಖರ್ಚಾಗಿದೆ ಎನ್ನುವ ಇವರು ತಿಂಗಳಲ್ಲಿ ಸುಮಾರು ಒಂದು ಲಕ್ಷದಷ್ಟು ವಹಿವಾಟು ನಡೆಯುತ್ತದೆ ಎನ್ನುತ್ತಾರೆ.

ನಾಗವಾರದ ಪ್ರಕಾಶ್‌ ಕೇಕ್‌ ಜೋನ್‌ನ ಮಾರುಕಟ್ಟೆ ಪ್ರತಿನಿಧಿ. ಒಂದು ತಿಂಗಳು ರಜೆ ಹಾಕಿ ಕ್ರಿಸ್‌ಮಸ್‌ ವ್ಯಾಪಾರ ನಡೆಸುತ್ತಾರಂತೆ. ‘20 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ನಷ್ಟವಾದರೂ ಇಷ್ಟು ವರ್ಷ ನಡೆಸಿಕೊಂಡು ಬಂದಿರುವ ವ್ಯಾಪಾರವನ್ನು ಬಿಡಲು ಮನಸ್ಸಾಗದು’ ಎನ್ನುತ್ತಾರೆ.

ಚೀನಾದಲ್ಲಿ ತಯಾರಾಗುವ ಸೆರಾಮಿಕ್‌ ಗೊಂಬೆಗಳನ್ನು ಇವರು ಮಾರುತ್ತಾರೆ. ಹೈದರಾಬಾದ್‌ನಿಂದ ಹೋಲ್‌ಸೇಲ್‌ ದರದಲ್ಲಿ ತರಿಸಿಕೊಳ್ಳುತ್ತಾರಂತೆ. ಮಾರುಕಟ್ಟೆಯಲ್ಲಿ ಸಿಗುವ ಹಣ್ಣಿನ ಬಾಕ್ಸ್‌ಗಳಿಂದ ಪುಟ್ಟ ಮನೆಗಳನ್ನು ನಿರ್ಮಾಣ ಮಾಡುತ್ತಾರೆ. ಈ ಮನೆಗಳ ಬೆಲೆ ₹100ರಿಂದ ₹ 150 ಇದೆ. ಉಳಿದಂತೆ ಗ್ರಾಹಕರ ಬೇಡಿಕೆಗೆ ತಕ್ಕಂಥ ಮನೆಗಳನ್ನು ತಯಾರಿಸಿ ಕೊಡುತ್ತಾರೆ.

‘ಈ ವರ್ಷ ವ್ಯಾಪಾರ ಕಡಿಮೆಯಿದೆ. ಎಲ್ಲ ಅಂಗಡಿಗಳಲ್ಲೂ ಒಂದೇ ತೆರನಾದ ವಸ್ತುಗಳು ಸಿಗುತ್ತವೆ. ಅಲ್ಲದೇ ಹಿಂದೆ ಎಲ್ರೂ ಇಲ್ಲಿಗೇ ಬರುತ್ತಿದ್ದರು. ಈಗ ನಗರದ ವಿವಿಧ ಕಡೆಗಳಲ್ಲಿ ಕ್ರಿಸ್‌ಮಸ್‌ ಮಾರುಕಟ್ಟೆಗಳಿವೆ. ಎಲ್ಲ ಅಲ್ಲಲ್ಲೇ ಖರೀದಿಸುತ್ತಾರೆ. ಹಿಂದೆ ಕೆಲವೇ ಅಂಗಡಿಗಳಿದ್ದವು. ಹೆಚ್ಚು ವ್ಯಾಪಾರ ನಡಿತಿತ್ತು. ಈಗ ತುಂಬ ಅಂಗಡಿಗಳಿವೆ, ಗ್ರಾಹಕರು ಹಂಚಿ ಹೋಗಿದ್ದಾರೆ’ ಎನ್ನುತ್ತಾರೆ ಪ್ರಕಾಶ್‌.

ಸೆರಾಮಿಕ್‌ ಮತ್ತು ಮಣ್ಣಿನ ಗೊಂಬೆಗಳು

ಗೋದಲಿಯ ನಿರ್ಮಾಣಕ್ಕೆ ಬಳಸುವ ಗೊಂಬೆಗಳು ಈಗ ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಚೀನಾದಿಂದ ಪೂರೈಕೆಯಾಗುವ ಸೆರಾಮಿಕ್‌ ಗೊಂಬೆಗಳಿಗೆ ಬಹಳ ಬೇಡಿಕೆ ಇದೆ. ಕ್ರಿಸ್‌ಮಸ್‌ ಮಾರುಕಟ್ಟೆಯಲ್ಲಿ ಈಗ ಚೀನಾದ ಗೊಂಬೆಗಳದ್ದೇ ಕಾರುಬಾರು. ಅವು ಕಡಿಮೆ ದರದಲ್ಲಿ ಸಿಗುತ್ತವೆ ಎಂದು ವ್ಯಾಪಾರಿಗಳುಹೇಳುತ್ತಾರೆ. ಸೆರಾಮಿಕ್‌ ಮತ್ತು ಮಣ್ಣಿನ ಗೊಂಬೆಗಳ ಒಂದು ಪ್ಯಾಕ್‌ನಲ್ಲಿ ನಾಲ್ಕು, ಆರು, ಎಂಟು, ಹತ್ತು, ಹನ್ನೆರಡು ಇಂಚುಗಳ 11 ಗೊಂಬೆಗಳಿರುತ್ತವೆ. ಮಣ್ಣಿನ ಗೊಂಬೆಗಳ ಬೆಲೆ ಇಂಚಿಗೆ ಅನುಗುಣವಾಗಿ ₹550ರಿಂದ 1,600 ಇದ್ದರೆ, ಸೆರಾಮಿಕ್‌ ಗೊಂಬೆಗಳ ಬೆಲೆ ₹800ರಿಂದ 6,500 ಇದೆ.

ಬಾಲ ಯೇಸುವಿನ ಗೋದಲಿ

ಕ್ರಿಸ್‌ಮಸ್‌ಗೆ ವಾರವಿರುವಾಗಲೇ ಕ್ರಿಶ್ಚಿಯನ್ನರು ಮನೆಯ ಮುಂದೆ ಪುಟ್ಟ ಗುಡಿಸಲು ನಿರ್ಮಾಣ ಮಾಡಿ ಯೇಸುವಿನ ಜನನ ಸ್ಥಳದ ಪ್ರತಿಕೃತಿ ನಿರ್ಮಾಣ ಮಾಡುತ್ತಾರೆ. ಇದಕ್ಕೆ ಗೋದಲಿ ಎಂದು ಕರೆಯುತ್ತಾರೆ. ಯೇಸುವಿನ ಜನನ ಗೋವುಗಳ ಹಟ್ಟಿಯಲ್ಲಾಯಿತು ಎಂಬ ಕಾರಣದಿಂದ ಹುಲ್ಲಿನ ಮೇಲೆ ಬಾಲಯೇಸುವನ್ನು ಮಲಗಿಸಿ ಸುತ್ತಲೂ ಗೋವುಗಳು, ಸೇವಕರು ಕೆಲಸದಲ್ಲಿ ಮಗ್ನರಾಗಿರುವಂತೆ ಗೊಂಬೆಗಳನ್ನಿಟ್ಟು ಸುಂದರ ಪರಿಸರವನ್ನು ನಿರ್ಮಾಣ ಮಾಡುತ್ತಾರೆ. ನಕ್ಷತ್ರ, ಆಕರ್ಷಕ ಗಂಟೆ, ದೀಪಗಳಿಂದ ಅಲಂಕಾರ ಮಾಡುತ್ತಾರೆ. ಇದು ಹೊಸ ವರ್ಷದವರೆಗೂ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.