ADVERTISEMENT

ಕೋವಿಡ್-19‌ ನೀಡಿದ ಸಮಯ ಎಂಬ ಸ್ವಾತಂತ್ರ್ಯ

ರೇಷ್ಮಾ
Published 14 ಆಗಸ್ಟ್ 2020, 19:45 IST
Last Updated 14 ಆಗಸ್ಟ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದವು. ಈಗಿನ ಸಂದರ್ಭದಲ್ಲಿ ಸ್ವಾತಂತ್ರ್ಯ ಎಂದರೆ ಒಬ್ಬರೊಬ್ಬರದ್ದು ಒಂದೊಂದು ರೀತಿಯ ವ್ಯಾಖ್ಯಾನ. ಸ್ವಾತಂತ್ರ್ಯ ಎಂದರೆ ಸಂಭ್ರಮ, ಸ್ವಾತಂತ್ರ್ಯ ಎಂದರೆ ಹಣ, ಸ್ವಾತಂತ್ರ್ಯ ಎಂದರೆ ಬದುಕು, ಕೆಲವರಿಗೆ ಸ್ವೇಚ್ಛೆ.. ಹೀಗೆ ಸ್ವಾತಂತ್ರ್ಯದ ಬಗ್ಗೆ ಹತ್ತು ಮಂದಿಯನ್ನು ಕೇಳಿದರೆ ಹತ್ತಾರು ಬಗೆಯ ಉತ್ತರಗಳೇ ಬರುತ್ತವೆ.

ಸ್ವತಂತ್ರವಾಗಿ ಬೇಕೆಂದ ಕಡೆ ಬೇಕೆನ್ನಿಸಿದಂತೆ ತಿರುಗಾಡುತ್ತಿದ್ದ ನಾವು ಈಗ ಮನೆಯಿಂದ ಹೊರಗೆ ಕಾಲಿಡಲು ಅಂಜುವಂತಾಗಿದೆ. ಕೋವಿಡ್‌–19 ವ್ಯಕ್ತಿಯ ಸ್ವಾತಂತ್ರ್ಯ ಕಸಿದಿದೆ ಎಂಬುದು ಕೆಲವರ ಅಭಿಪ್ರಾಯವಾದರೆ, ಈಗ ನಾವು ಕಳೆಯುತ್ತಿರುವ ದಿನಗಳೇ ನಿಜವಾದ ಸ್ವಾತಂತ್ರ್ಯದ ದಿನಗಳು ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ. ಒಟ್ಟಾರೆ ಸ್ವಾತಂತ್ರ್ಯದ ಬಗ್ಗೆ ಅವರವರ ಮನಸ್ಸಿನಲ್ಲಿ ಅವರದ್ದೇ ಆದ ಪರಿಕಲ್ಪನೆಗಳಿವೆ.

ಹವ್ಯಾಸದ ಹಾದಿಗೆ ಸಿಕ್ಕ ಸ್ವಾತಂತ್ರ್ಯ
‘ಕೊರೊನಾ ಬಂದ ಮೇಲೆ ಹೊರಗಡೆ ತಿರುಗಾಡುವುದು ಕಷ್ಟವಾಗಿದೆ. ಅನಿವಾರ್ಯ ವಸ್ತುಗಳನ್ನು ತರಲು ಹೊರ ಹೋಗಲು ಚಿಂತಿಸಬೇಕಾಗಿದೆ. ಈ ರೀತಿ ಕೊರೊನಾ ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದೆ. ಆದರೆ ಇದು ನಮಗೆ ಸಮಯ ಎಂಬ ಸ್ವಾತಂತ್ರ್ಯವನ್ನು ನೀಡಿದೆ. ನನ್ನ ಹವ್ಯಾಸಕ್ಕೆ ಮರುಜೀವ ಕೊಡಲು ಸಾಧ್ಯವಾಗಿದ್ದು ಕೊರೊನಾದಿಂದ. ಜೊತೆಗೆ ನನ್ನ ಮನೆಯವರ ಜೊತೆ ಖುಷಿಯಿಂದ ಕಾಲ ಕಳೆಯುವಂತೆ ಮಾಡಿದೆ. ಎಲ್ಲರೂ ಒಂದಾಗಿ ಮನೆಯಲ್ಲೇ ಕಾಲ ಕಳೆಯುವಂತಾಗಲು ಸಾಧ್ಯವಾಗಿದ್ದು ಕೊರೊನಾದಿಂದ. ಈ ಸಮಯ ಇನ್ನೊಮ್ಮೆ ಸಿಗುವುದಿಲ್ಲ. ಹಾಗಾಗಿ ಈ ದಿನಗಳಲ್ಲಿ ಸಮಯವೇ ನಮ್ಮ ಸ್ವಾತಂತ್ರ್ಯ ಎಂದುಕೊಂಡು ಖುಷಿಯಿಂದ ಕಾಲ ಕಳೆಯೋಣ’ ಎನ್ನುವುದು ಫ್ರೀಲಾನ್ಸರ್‌ ನವ್ಯಾ ಅಯ್ಯನಕಟ್ಟೆ ಅವರ ಅಭಿಪ್ರಾಯ.

ADVERTISEMENT

ಸ್ವಾತಂತ್ರ್ಯಕ್ಕೆ ಕೋವಿಡ್‌ ಬೇಲಿ
‘ಕೊರೊನಾ ಬಂದ ಮೇಲೆ ನನಗೆ ನಿಜವಾದ ಸ್ವಾತಂತ್ರ್ಯ ಏನು ಎನ್ನುವುದು ಅರ್ಥವಾಗಿದ್ದು. ಮೊದಲೆಲ್ಲಾ ತಿಂಗಳಿಗೊಮ್ಮೆ ಪಿಕ್ನಿಕ್, ವಾರಕೊಮ್ಮೆ ಪಾರ್ಟಿ, ಶಾಪಿಂಗ್ ಎಂದು ಹೊರಗಡೆ ತಿರುಗುತ್ತಿದ್ದೆ. ಆದರೆ ಈಗ ಕೊರೊನಾ ಬಂದು ಮತ್ತೆ ಆ ದಿನಗಳು ಮರಳಿ ಸಿಗುತ್ತವೋ ಇಲ್ಲವೋ ಎಂಬ ಭಾವನೆ ಮೂಡುತ್ತಿದೆ. ಒಟ್ಟಾರೆ ನನ್ನ ಆಸೆ, ಆಕಾಂಕ್ಷೆಯ ಸ್ವಾತಂತ್ರ್ಯಕ್ಕೆ ಕೊರೊನಾ ಬೇಲಿಯಾಗಿದೆ’ ಎನ್ನುವುದು ಚಿತ್ರದುರ್ಗದ ಉದ್ಯಮಿ ಮನೋಜ್ ಹೊಸ್ಮನೆ ಅವರ ಮಾತು.

ಕೂಡು ಕುಟುಂಬದ ನಡುವೆ ಸ್ವಾತಂತ್ರ್ಯ
ಈ ಕುರಿತು ಪುತ್ತೂರಿನ ಗೃಹಿಣಿ ಹಾಗೂ ಉದ್ಯಮಿ ಚಿತ್ರಕಲಾ ಪಟ್ರಮೆ ಹೇಳುವುದು ಹೀಗೆ ‘ಕೊರೊನಾ ಬಂದು ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಮೊದಲೆಲ್ಲಾ ಸಮಯ ಸಿಕ್ಕರೆ ಸಾಕು ಶಾಪಿಂಗ್ ಹೋಗುವುದು, ಕಣ್ಣಿಗೆ ಕಂಡಿದ್ದನ್ನೆಲ್ಲಾ ಕೊಳ್ಳುವುದು ಹೀಗೆ ದುಂದುವೆಚ್ಚ ಮಾಡುತ್ತಿದ್ದೆವು. ಜೊತೆಗೆ ಹೊರಗಡೆ ಆಹಾರ ತಿನ್ನುವ ಮೂಲಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ದುಂದುವೆಚ್ಚಕ್ಕೆ ಕಡಿವಾಣ ಬಿದ್ದಿದೆ. ನಾವು ಈಗ ಪುತ್ತೂರಿನ ನಮ್ಮ ಮನೆಯಲ್ಲಿದ್ದೇವೆ. ಕೂಡು ಕುಟುಂಬದ ಜೊತೆ ಎಲ್ಲರೂ ಒಂದಾಗಿ ಸಮಯ ಕಳೆಯುತ್ತಿದ್ದೇವೆ. ಇದೇ ನನಗೆ ಸ್ವಾತಂತ್ರ್ಯ ಎನ್ನಿಸುತ್ತಿದೆ. ಇರುವುದರಲ್ಲೇ ಬದುಕುವುದು ಹೇಗೆ ಎನ್ನುವುದನ್ನು ಕಲಿತಿದ್ದೇವೆ. ಆರ್ಥಿಕವಾಗಿ ಚೇತರಿಕೆ ಬೇಕು ಎನ್ನುವುದನ್ನು ಹೊರತು ಪಡಿಸಿದರೆ ಕೊರೊನಾ ನಿಜಕ್ಕೂ ಸ್ವಾತಂತ್ರ್ಯ ಎಂದರೆ ಏನು ಎಂಬುದನ್ನು ಅರ್ಥಮಾಡಿಸಿದೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.