ಇವೆರಡೂ ಬಂಧನದಿಂದ ಬಿಡುಗಡೆಗೆ ಹಂಬಲಿಸಿದ ಕಥೆಗಳು. ನಮ್ಮದೇ ನೆಲದ ಕೊಡಗು ಜಿಲ್ಲೆಯವರಾದ ಅಮಾಯಕ ಸುರೇಶ, ಪೊಲೀಸರ ತಪ್ಪಿನಿಂದಾಗಿ ಪತ್ನಿಯ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ನೊಂದವರು. ಕೋರ್ಟು ಅವರು ನಿರಪರಾಧಿ ಎಂದು ಬಂಧನದಿಂದ ಮುಕ್ತಗೊಳಿಸಿದೆ.
‘ನೀನು ನಿರಪರಾಧಿ, ಹೆಂಡತಿಯ ಕೊಲೆ ಮಾಡಿಲ್ಲ. ಪೊಲೀಸರೇ ನಿನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಮೈಸೂರು ಕೋರ್ಟು ಹೇಳಿತು. ಆದರೆ ಆ ಕೆಲಸ ಮೊದಲೇ ಮಾಡಿದ್ದರೆ, ಯಾವ ತಪ್ಪೂ ಮಾಡದ ನಾನು ಇಷ್ಟೊಂದು ಹಿಂಸೆ, ನೋವು, ಅವಮಾನ, ಜೈಲುವಾಸ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ...’
ಕೊಡಗಿನ ಕುಶಾಲನಗರದ ಬಸವನಹಳ್ಳಿಯಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯು ಆದಿವಾಸಿಗಳಿಗಾಗಿ ನಿರ್ಮಿಸಿಕೊಟ್ಟಿರುವ ಪುನರ್ವಸತಿ ಬಡಾವಣೆಯ 125ನೇ ನಂಬರಿನ ಚಿಕ್ಕಮನೆಯ ಪಡಸಾಲೆಯಲ್ಲಿ ಕುಳಿತು ಹೀಗೆ ಹೇಳುವಾಗ 35ರ ಜೇನುಕುರುಬರ ಸುರೇಶ್ ಮುಂದಿನ ಮಾತುಗಳಿಗಾಗಿ ತಡಕಾಡುತ್ತಿದ್ದರು.
ಏಪ್ರಿಲ್ 23ರಂದು ಮೈಸೂರಿನ 5ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಅವರನ್ನು ನಿರಪರಾಧಿ ಎಂದು ಘೋಷಿಸಿದೆ. ಈ ಖುಷಿ, ಸಮಾಧಾನವನ್ನೂ ಮೀರಿ ಮಾಡದ ತಪ್ಪಿಗೆ ಅನುಭವಿಸಿದ ಜೈಲುವಾಸ, ಅದೇ ಕಾರಣಕ್ಕೆ ಅವಮಾನ ಅನುಭವಿಸಿದ ಸಂಕಟಗಳೇ ಅವರನ್ನು ಕಾಡುತ್ತಿವೆ.
ಹೆಂಡತಿ ಬಿಟ್ಟು ಹೋಗಿದ್ದರೂ, ಹಾಸಿಗೆ ಹಿಡಿದಿರುವ ಆಕೆಯ ತಾಯಿ ಗೌರಿ ಅವರನ್ನೂ ಸುರೇಶ್ ಆರೈಕೆ ಮಾಡುತ್ತಿದ್ದಾರೆ. ‘ಮಗ ಆರೋಪ ಮುಕ್ತನಾಗಿ ಮನೆಗೆ ಬಂದರೂ, ಅಮಾಯಕನ ಮೇಲೆ ಸುಳ್ಳು ಆರೋಪ ಹೊರಿಸಿದ ಪೊಲೀಸರಿಗೆ ಶಿಕ್ಷೆ ಏಕೆ ಆಗಿಲ್ಲ’ ಎಂದು ಅಸಮಾಧಾನದಿಂದ ತಂದೆ ಗಾಂಧಿ ಕುದಿಯುತ್ತಿದ್ದರು. ತಾಯಿ ಮುತ್ತಮ್ಮ ಮನೆ ಕೆಲಸದಲ್ಲಿ ಮುಳುಗಿದ್ದರು. ಸುರೇಶನ ಮಗ ಕೃಷ್ಣ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಲು ಸಿದ್ಧನಾಗುತ್ತಿದ್ದ. ಮಗಳು ಕೀರ್ತಿ ಪಡಸಾಲೆಯ ಬಳಿ ಪಾತ್ರೆ ತೊಳೆಯುತ್ತಿದ್ದಳು.
‘ಪತ್ನಿ ಮಲ್ಲಿಗೆ ಮನೆಬಿಟ್ಟು ಹೋಗಿದ್ದಳು. ಹುಡುಕಿ ಸಾಕಾಗಿ, ಕೊನೆಗೆ ಹುಡುಕಿಕೊಡಿ ಎಂದು ಕಂಪ್ಲೇಂಟು ಕೊಟ್ಟರೆ, ನೀನೇ ಅವಳನ್ನು ಕೊಂದಿದ್ದೀಯಾ ಅಂತ ಪೊಲೀಸರು ಕೊಡಬಾರದ ಹಿಂಸೆ ಕೊಟ್ಟರು. ಠಾಣೆಯಿಂದ ಠಾಣೆಗೆ ಅಲೆದಾಡಿಸಿದರು. ಮಹಜರಿನ ಹೆಸರಿನಲ್ಲಿ, ಅಪರಿಚಿತ ಶವ ಸಿಕ್ಕ ಜಾಗಕ್ಕೂ ಕರೆದೊಯ್ದರು. ‘ನಮ್ಮಪ್ಪ ಅಂಥವನಲ್ಲ’ ಎಂದು ನನ್ನ ಮಕ್ಕಳು ಹೇಳಿದರೂ, ಹೆಣ್ಣು ಕೊಟ್ಟ ಅತ್ತೆಯೇ ‘ನನ್ನ ಅಳಿಯ ಅಂಥವನಲ್ಲ’ ಎಂದರೂ ನಂಬಲಿಲ್ಲ. ಆದರೆ, ಪೊಲೀಸರು ಏನೇ ಪಿಚ್ಚರು ಮಾಡಿ, ಕೊಲೆ ಕೇಸಲ್ಲಿ ನನ್ನನ್ನು ಸಿಕ್ಕಿಸಿದರೂ ಪಾರಾಗಿ ಬರುವೆ ಎಂಬ ನಂಬಿಕೆ ಇತ್ತು’ ಎಂದರು.
‘2020ರ ಅಕ್ಟೋಬರ್‌ನಲ್ಲಿ ಹೆಂಡತಿ ಮಲ್ಲಿಗೆ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ಕೊಟ್ಟೆ. ಆಕೆ ಜೀವಂತವಾಗಿಯೇ ಇದ್ದಾಳೆ ಎಂದು ಪದೇಪದೇ ಹೇಳುತ್ತಿದ್ದೆ. ಆಕೆ ಇರುವ ಸ್ಥಳಗಳ ಬಗ್ಗೆ ಹಲವು ಬಾರಿ ಮಾಹಿತಿ ಕೊಟ್ಟೆ. ನನ್ನನ್ನೂ ಕರೆದೊಯ್ಯುತ್ತಿದ್ದರು. ಆದರೆ ಸರಿಯಾಗಿ ತನಿಖೆ ಮಾಡಲಿಲ್ಲ. ಎಲ್ಲೋ ಮಹಿಳೆಯ ಶವ ಸಿಕ್ಕಿದರೆ, ಅದು ನನ್ನ ಹೆಂಡತಿಯದ್ದೇ ಎಂದು, ನಾನೇ ಆಕೆಯನ್ನು ಕೊಂದು ಎಸೆದೆನೆಂದು ಕಥೆ ಕಟ್ಟಿದರು. ಅದೇ ಆರೋಪದಲ್ಲಿ ನಾನು ಒಂದೂ ಮುಕ್ಕಾಲು ವರ್ಷ ಜೈಲಿನಲ್ಲಿರಬೇಕಾಯಿತು. ಕೊನೆಗೂ ನಾನು ಆಕೆಯನ್ನು ಕೊಲೆ ಮಾಡಿಲ್ಲ ಎಂದು ಸಾಬೀತುಪಡಿಸಲು ಆಕೆಯೇ ಪ್ರತ್ಯಕ್ಷ ಬರಬೇಕಾಯಿತು. ಪೊಲೀಸರು ಮಾಡಿದ್ದ ಪಿಚ್ಚರು ಫೇಲ್ ಆಯಿತು. ನಾನಿದನ್ನು ಇಲ್ಲಿಗೇ ಬಿಡುವುದಿಲ್ಲ’ ಎಂದು ಇಡೀ ಪ್ರಕರಣವನ್ನು ಬಿಚ್ಚಿಟ್ಟರು.
‘ಶವ ನನ್ನ ಹೆಂಡತಿಯದ್ದಲ್ಲ. ಅವಳು ಬದುಕಿದ್ದಾಳೆ. ಅವಳ ಪ್ರಿಯಕರ ಗಣೇಶ್‌ನನ್ನು ಪತ್ತೆ ಮಾಡಿ ಎಂದರೂ ಕೇಳದೆ, ಯಾವುದೇ ಸಂಬಂಧವಿಲ್ಲದ ಆ ತಲೆ ಬುರುಡೆ ಸೇರಿದಂತೆ ಮೂಳೆಗಳನ್ನು ನನ್ನ ಕೈಯಿಂದಲೇ ಹೂಳಿಸಿದರು’ ಎಂದು ವ್ಯಥೆಪಟ್ಟರು.
‘ಅಷ್ಟು ವರ್ಷ ನನ್ನನ್ನ ಒಳಗೇ ಕೂರಿಸಿದರೆಂದರೆ ಸುಳ್ಳಿಗೇ ಇಲ್ಲಿ ಬೆಲೆ. ಸತ್ಯಕ್ಕಲ್ಲ. ಪೊಲೀಸರೇ ಆಗಲಿ, ಯಾರೇ ಆಗಲಿ, ನ್ಯಾಯವಾಗಿ ಕೆಲಸ ಮಾಡಿದರೆ ಯಾರಿಗೂ ಅನ್ಯಾಯವಾಗಲ್ಲ’ ಎಂದು ಹೇಳುವಾಗ ಸುರೇಶ್ ಕಣ್ಣಲ್ಲಿ ನೀರು ಕಂಡೂ ಕಾಣದಂತೆ ಜಿನುಗಿತು.
‘ಜೈಲಿಗೆ ಹೋಗಿ ಬಂದಿರೋದ್ರಿಂದ ನನಗೂ ಜೀವನ ಇಲ್ಲ, ಮಕ್ಕಳಿಗೂ ಜೀವನ ಇಲ್ಲ. ಹಂಗೇ ಇದ್ದೀವಿ. ಮನೇಲಿ ಅಡುಗೆ ನಾನೇ ಮಾಡಬೇಕು. ತೋಟದಲ್ಲಿ ಕೂಲಿ ಕೆಲಸಾನೂ ಮಾಡಬೇಕು. ನರಕದಲ್ಲಿ ಅನುಭವಿಸೋದನ್ನೆಲ್ಲ ಈ ಜಲ್ಮಕ್ಕೆ ಇಲ್ಲೇ ಅನುಭವಿಸಿದ್ದೀನಿ’ ಎಂದು ಮೌನವಾದರು.
‘ಜೈಲಿಗೆ ಹೋದಾಗ ದಿಕ್ಕೇ ತೋಚಲಿಲ್ಲ. ಮೊದಲು ಒಂದು ಚಿಕ್ಕ ರೂಂಗೆ ಹಾಕಿದರು. ನಾಲ್ಕು ಗೋಡೆ ಬಿಟ್ಟರೆ ಬೇರೆ ಏನೂ ಇಲ್ಲ. ಏನಾಗುತ್ತೋ ಅಂತ ಭಯ ಶುರುವಾಯಿತು. ಆಮೇಲೆ ಬೇರೆ ಕೈದಿಗಳಿದ್ದ ಕಡೆಗೆ ಕಳಿಸಿದರು. ಅಲ್ಲಿದ್ದವರು ಕೊಲೆ ಕೇಸು ಎಂದು ತಿಳಿದ ಮೇಲೆ, 302ನಾ, ನೀನೂ ನಮ್ಮ ಕಡೆಯವನೇ ಬಿಡು ಎಂದು ಹೇಳಿ ನಕ್ಕರು. ಅವರ ಮಾತಿನಿಂದ ಕಸಿವಿಸಿಯಾದರೂ ಏನೂ ಮಾಡುವಂತಿರಲಿಲ್ಲ’ ಎಂದು ಜೈಲುವಾಸದ ದಿನಗಳನ್ನು ಸುರೇಶ್ ನೆನಪಿಸಿಕೊಂಡರು.
‘ಹೆಂಡ್ತಿಯನ್ನು ಹೆಂಗೋ ಕೊಲೆ ಮಾಡ್ದೆ’ ಅಂತ ಪೊಲೀಸರು, ಕೈದಿಗಳು ಎಲ್ಲರೂ ಕೇಳೋರು. ಕೊಲೆ
ಮಾಡಿಲ್ಲ ಎಂದರೆ ನಂಬುತ್ತಿರಲಿಲ್ಲ. ಕೊಲೆ ಮಾಡದೆ ಹೆಂಗೋ ಬಂದೆ ಎಂಬ ಅವರ ಮಾತಿಗೆ ಏನು ಹೇಳಬೇಕೆಂದೇ ಗೊತ್ತಾಗ್ತಿರಲಿಲ್ಲ. ನನ್ನ ಪಾಡಿಗೆ ನಾನಿರುತ್ತಿದ್ದೆ. ಕೊನೆಗೆ ಒಳ್ಳೆಯವನೆಂದು ಅಡುಗೆ ಮನೆಗೆ ಕಳಿಸಿದರು. ಅಲ್ಲಿ ಕೊಂಚ ಸಮಾಧಾನವಾಯಿತು.’
‘ಜೈಲಿನಲ್ಲಿ ದೊಡ್ಡ ದೊಡ್ಡ ಪಾತ್ರೆಗಳನ್ನು ಒಬ್ಬನೇ ತೊಳೀತಿದ್ದೆ. ಸಕ್ಕತ್ ಕೆಲಸ ಮಾಡ್ತಿದ್ದೆ. ಮಾಡದ ತಪ್ಪಿಗೆ ಇಲ್ಲಿಗೆ ಬಂದು ಈ ಕೆಲಸ ಮಾಡಬೇಕಾಯಿತಲ್ಲ. ದೂರು ಕೊಟ್ಟವನನ್ನೇ ಜೈಲಿಗೆ ಹಾಕಿದ್ರಲ್ಲ ಎಂದು ಅಳುತ್ತಿದ್ದೆ’ ಎನ್ನುವಾಗ ದುಗುಡವಿತ್ತು.
‘ಆಗಾಗ ನನ್ನನ್ನು ನೋಡಲು ಜೈಲಿಗೆ ಬರುತ್ತಿದ್ದ ಅಪ್ಪ ಗಾಂಧಿ, ಮಗ ಕೃಷ್ಣ ಕೂಡ, ‘ಹೆಂಗೆ ಕೊಲೆ ಮಾಡಿದೆ’ ಎಂದು ಕೇಳುತ್ತಿದ್ದರು. ನಾನು ಕೊಲೆ ಮಾಡಿಲ್ಲ ಎಂದು ಹೇಳಿದರೆ ನಂಬಲಿಲ್ಲ. ಅವರೂ ಪೊಲೀಸರನ್ನೇ ನಂಬಿಬಿಟ್ಟಿದ್ದರು. ‘ಒಂದಲ್ಲಾ ಒಂದು ದಿನ ನಿಮಗೇ ಗೊತ್ತಾಗುತ್ತೇ ಹೋಗಿ’ ಎಂದಿದ್ದೆ.’
‘ಜಾಮೀನು ಪಡೆದು ಹೊರಗೆ ಬಂದಾಗ ಆರು ತಿಂಗಳು ಹಾಡಿಗೆ, ಮನೆಗೆ ಹೋಗಲಿಲ್ಲ. ಬೇಗೂರಿನಲ್ಲಿರುವ ಅಪ್ಪನ ಮನೇಲಿದ್ದೆ. ‘ಹೆಂಡ್ತಿನ ಸಾಯಿಸಿ ಒಳಗೆ ಹೋಗಿ ಬಂದವನೆ’ ಎಂದು ನೆರೆಹೊರೆಯವರು ಅವಮಾನ ಮಾಡುತ್ತಿದ್ದರು. ಎಲ್ಲರೂ ಪೊಲೀಸರ ಕಡೆಯೇ ಮಾತಾಡುತ್ತಿದ್ದರು.
‘ಮನೆಯವರೇ ನೋಡಿ ಮಾಡಿದ್ದ ಮದುವೆ. ಎಲ್ಲರೂ ಕಾಫಿ ತೋಟಗಳಲ್ಲಿ ಕೂಲಿ ಮಾಡ್ತಿದ್ದೆವು. ಇರೋದರಲ್ಲೇ ಚೆನ್ನಾಗಿದ್ದೆವು. ಇಬ್ಬರು ಮಕ್ಕಳು, ತಂದೆ, ತಾಯಿ, ಅತ್ತೆ ಕೂಡ ನಮ್ಮೊಂದಿಗೇ ಇದ್ದರು. ಸಾಲ ಇತ್ತು. ಹೆಂಡತಿ ಜೊತೆಗೆ ಮನಸ್ತಾಪವಿತ್ತು. ಆದರೆ ಜೀವನ ಹಿಂಗಾಗುತ್ತೆ ಅಂತ ಅನ್ಕೊಂಡಿರಲಿಲ್ಲ’ ಎಂದ ಸುರೇಶ್‌ಗೆ ಮತ್ತೊಂದು ಪ್ರಶ್ನೆ ಕೇಳಿದೆ; ‘ಈಗ ಮಲ್ಲಿಗೆ ಬಗ್ಗೆ ಏನನಿಸುತ್ತದೆ?‘. ಆಗ ಅವರ ಮೌನವೇ ಉತ್ತರವಾಯಿತು.
‘ಜಾಮೀನಿನ ಮೇಲೆ ಜೈಲಿಂದ ಹೊರಗೆ ಬಂದ ಮೇಲೆ ಹೆಂಡತಿಯನ್ನು ಹುಡುಕಾಡುತ್ತಿದ್ದೆ. ಎಲ್ಲಾದರೂ ಕಾಣಿಸಿದರೆ ತಕ್ಷಣ ತಿಳಿಸುವಂತೆ ಪರಿಚಯ ಇದ್ದೋರಿಗೆಲ್ಲ ಹೇಳಿದ್ದೆ. ಏಪ್ರಿಲ್ 1ನೇ ತಾರೀಖು ಸಂಜೆ ಫೋನ್ ಬಂತು. ಮಡಿಕೇರೀಲಿ ಗಣೇಶ್ ಜೊತೆ ಮಲ್ಲಿಗೆ ಇದ್ದಾಳೆ ಅಂತ. ತಕ್ಷಣ ಹೊರಟೆ. ಮಡಿಕೇರಿ ಪೊಲೀಸ್ ಸ್ಟೇಷನ್‌ಗೆ ಹೋದಾಗ ಅವಳು ಕಂಡಳು. ‘ಪೊಲೀಸರು ಮತ್ತೆ ಅವಳನ್ನು ನಾಪತ್ತೆ ಮಾಡಿಬಿಟ್ಟಾರು’ ಎಂಬ ಆತಂಕದಿಂದ ಇಡೀ ರಾತ್ರಿ ಸ್ಟೇಷನ್ ಮುಂದೆಯೇ ಇದ್ದೆವು’ ಎಂದು ಆ ದಿನದ ದುಗುಡವನ್ನು ತೆರೆದಿಟ್ಟರು.
‘ನೀನೇ ತಾನೇ ಆವತ್ತು ದೂರು ಕೊಟ್ಟಿದ್ದು, ದೇವರು ದೊಡ್ಡವನು, ಈಗ ನಿನ್ನ ಹೆಂಡತಿ ಸಿಕ್ಕಿದ್ದಾಳೆ’ ಎಂದು ಮಡಿಕೇರಿ ಪೊಲೀಸರು ಹೇಳಿದರು. ಅವರಿಗೆ ದೇವರು ದೊಡ್ಡವನಾಗಿ ಕಂಡ. ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದ ಈ ಕಡೆಯ ಪೊಲೀಸರು, ಯಾವ ದೇವರು ಬಂದರೂ ನಿನ್ನನ್ನು ಬಿಡಿಸಲು ಆಗಲ್ಲ ಎನ್ನುತ್ತಿದ್ದರು’ ಎಂದು ನಕ್ಕರು. ಈಗ ನಾನು ಆರೋಪದಿಂದ ಮುಕ್ತನಾಗಿದ್ದೇನೆ, ಹಾಗೆಯೇ ಬಂಧನದಿಂದಲೂ...ಎಂದು ನಿರಾಳಭಾವದಿಂದ ಹೇಳಿದರು.
‘ಮಗ ಜೈಲುಪಾಲಾದ ಮೇಲೆ ಪೊಲೀಸರೇ ವಕೀಲರೊಬ್ಬರನ್ನು ಗೊತ್ತುಪಡಿಸಿದ್ದರು. ಆದರೆ ಅವರು ನಾಲ್ಕು ಲಕ್ಷ ರೂಪಾಯಿ ತರುವಂತೆ ಹೇಳಿದರು. ನಾವು ಬಡವರೆಂದು ಹೇಳಿದರೂ ಕೇಳಿಸಿಕೊಳ್ಳಲಿಲ್ಲ. ನಂತರ ನಾನು ಅವರ ಬಳಿಗೆ ಹೋಗಲಿಲ್ಲ. ಹೀಗೇ ಇರುವಾಗ ಪೊಲೀಸರೊಬ್ಬರು ಮೈಸೂರಿನ ವಕೀಲರಾದ ಪಾಂಡು ಪೂಜಾರಿಯವರ ಫೋನ್ ನಂಬರ್ ಕೊಟ್ಟರು. ದೇವರೇ ನನ್ನನ್ನು ಅವರ ಬಳಿಗೆ ನೂಕಿದನೇನೋ ಅನ್ನಿಸುತ್ತದೆ. ಅವರೇ ನಮ್ಮ ಪಾಲಿನ ದೇವರು..’
ಸುರೇಶ್ ಅವರ ತಂದೆ ಗಾಂಧಿಯವರ ಮಾತುಗಳಲ್ಲಿ ಅಪರಿಮಿತ ಕೃತಜ್ಞತೆ ಹೊಳೆಯಿತು.
‘ಈ ವಕೀಲರು ನಮ್ಮಿಂದ ಇದುವರೆಗೆ ಒಂದು ರೂಪಾಯಿ ಪಡೆದಿಲ್ಲ. ಬದಲಿಗೆ ಅವರೇ ನಮಗೆ ಆಗಾಗ ಹಣ ಕೊಟ್ಟು ನೆರವಾಗಿದ್ದಾರೆ. ಒಮ್ಮೆ ವಿಚಾರಣೆ ಮುಗಿದ ಮೇಲೆ, ಮಾರನೇ ದಿನವೂ ಕೋರ್ಟಿಗೆ ಬರಬೇಕಾಗಿತ್ತು. ನಾವು ಮನೆಯವರೆಲ್ಲರೂ ಮತ್ತೆ ಹಾಡಿಗೆ ಹೋಗಿ ವಾಪಸು ಬರುವುದು ಕಷ್ಟವಾಗುತ್ತದೆ ಎಂದಾಗ, ವಕೀಲರೇ ಹೋಟೆಲ್‌ನಲ್ಲಿ ರೂಂ ಮಾಡಿಕೊಟ್ಟಿದ್ದರು. ಕಾರಿನಲ್ಲಿ ಊರಿಗೆ ಕಳಿಸಿಕೊಟ್ಟರು’ ಎಂದು ಕಣ್ಣೀರಾದರು ಗಾಂಧಿ.
‘ಜಾಮೀನಿಗೆ ಶ್ಯೂರಿಟಿ ಹಾಕಲು ಜನ ಸಿಗಲಿಲ್ಲ. ಎಲ್ಲೆಲ್ಲೋ ಹುಡುಕಾಡಿದೆ. ನಂತರ, ವಕೀಲರು ಒಬ್ಬರನ್ನು ಕರೆಸಿದರು. ತನ್ನ ಹೆಸರಿನಲ್ಲಿದ್ದ ಪಹಣಿ ಇಟ್ಟು ಪತ್ನಿ ಜಾಮೀನು ಹಾಕಿದಳು’ ಎಂದರು.
‘ಪತ್ತೆಯಾದ ಅಪರಿಚಿತ ಶವದ ಮೂಳೆಗಳು ಮತ್ತು ‘ಕೊಲೆಯಾಗಿದ್ದಾಳೆ’ ಎಂದು ಪೊಲೀಸರು ಬಿಂಬಿಸಿದ್ದ ಮಲ್ಲಿಗೆಯ ತಾಯಿ ಗೌರಿಯ ರಕ್ತದ ಮಾದರಿಯ ಕುರಿತು ಡಿಎನ್‌ಎ ವರದಿ ಬರುವ ಮುಂಚೆಯೇ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನೇ ಲೋಪವೆಂದು ಪರಿಗಣಿಸಿದ ಹೈಕೋರ್ಟ್, ಸುರೇಶ್ ಅವರಿಗೆ ಜಾಮೀನು ನೀಡಿತು’ ಎಂದು, ಪ್ರಕರಣಕ್ಕೆ ತಿರುವು ನೀಡಿದ ಮಹತ್ವದ ಸಂಗತಿಯನ್ನು ವಕೀಲರಾದ ಬಿ.ಎಸ್.ಪಾಂಡು ಪೂಜಾರಿ ವಿವರಿಸಿದರು.
‘ಪೊಲೀಸರು ಸಲ್ಲಿಸಿದ್ದ 156 ಪುಟದ ಆರೋಪ ಪಟ್ಟಿ, 56 ಸಾಕ್ಷಿಗಳೆಲ್ಲವೂ, ಮಲ್ಲಿಗೆ ಜೀವಂತ ಬಂದ ಕೂಡಲೇ ಹುಸಿ ಎಂಬುದು ಸಾಬೀತಾಗಿಹೋಯಿತು. ಎಲ್ಲವೂ ನಕಲಿ, ಸೃಷ್ಟಿಸಿದ ಕತೆ ಎಂಬುದೂ ಕೋರ್ಟಿಗೆ ಮನದಟ್ಟಾಯಿತು’ ಎಂದು ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.