ADVERTISEMENT

ನಾಟಕ ವಿಮರ್ಶೆ: ಬಹುಮುಖಿ ಒಳಸುಳಿಗಳ ‘ಪ್ರತಿ ಗಂಧರ್ವ’

ಡಾ.ದಾದಾಪೀರ್ ನವಿಲೇಹಾಳ್
Published 22 ನವೆಂಬರ್ 2025, 23:57 IST
Last Updated 22 ನವೆಂಬರ್ 2025, 23:57 IST
<div class="paragraphs"><p>‘ಪ್ರತಿಗಂಧರ್ವ’ ನಾಟಕದ ದೃಶ್ಯ &nbsp;&nbsp;</p></div>

‘ಪ್ರತಿಗಂಧರ್ವ’ ನಾಟಕದ ದೃಶ್ಯ   

   

ಚಿತ್ರ: ಸತೀಶ್ ಬಡಿಗೇರ

ಬಾಲಗಂಧರ್ವರ ರಂಗ ಸಾಧನೆಯನ್ನು ಗೌರವಿಸಲು ಪುಣೆಯ ನಾಗರಿಕ ಸನ್ಮಾನ ಸಮಿತಿ ತೀರ್ಮಾನಿಸಿ ಅವರನ್ನು ಆಹ್ವಾನಿಸಲು ಬಂದಿದೆ. ಸನ್ಮಾನಕ್ಕೆ ನಾನೊಬ್ಬನೇ ಬರುವುದಿಲ್ಲ, ಪತ್ನಿ ಗೋಹರ್ ಬಾಯಿಯೊಂದಿಗೆ ಬರುತ್ತೇನೆ ಎಂದು ಹೇಳುತ್ತಾರೆ. ಪುಣೆಗೆ ಇಬ್ಬರೂ ಬರುತ್ತಾರೆ. ಬಾಲಗಂಧರ್ವರಿಗೆ ಸನ್ಮಾನ ನಡೆಯುತ್ತದೆ. ನಂತರ ಬಾಲಗಂಧರ್ವರು ಅಭಂಗವೊಂದನ್ನು ಹಾಡುವಂತೆ ಆಗ್ರಹ ಬರುತ್ತದೆ. ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದ ತಾನು ಹಾಡಲಾಗುವುದಿಲ್ಲ, ಪತ್ನಿ ಗೋಹರ್ ಬಾಯಿ ಹಾಡುತ್ತಾಳೆ ಎನ್ನುತ್ತಾರೆ. ಅವರು ಮುಸ್ಲಿಮರು, ಕನ್ನಡದವರು ಎಂದು ಅವರಿಂದ ಹಾಡಿಸಲು ನಾಗರಿಕ ಸಮಿತಿ ಒಪ್ಪುವುದಿಲ್ಲ. ಬಾಲಗಂಧರ್ವರು 'ಹಾಗಾದರೆ ಸನ್ಮಾನದ ಈ ಹಾರ ತುರಾಯಿ, ಗೌರವಧನವನ್ನು ನೀವೇ ಇಟ್ಟುಕೊಳ್ಳಿ' ಎನ್ನುತ್ತಾ ಹೊರಡುತ್ತಾರೆ. ಸಮಿತಿಯವರೆಲ್ಲರೂ ಹೋಗದಂತೆ ಮನವಿ ಮಾಡುತ್ತಾರೆ. ಯಾವುದಾದರೂ ದೇವಸ್ಥಾನಕ್ಕೋ, ದರ್ಗಾಕ್ಕೋ ಕೊಟ್ಟು ಬಿಡಿ ಎಂದು ಎಲ್ಲವನ್ನೂ ಧಿಕ್ಕರಿಸಿ ಗೋಹರ್ ಬಾಯಿಯೊಂದಿಗೆ ಬಾಲಗಂಧರ್ವರು ಹೊರಟು ಹೋಗುತ್ತಾರೆ. ರಂಗದ ಮೇಲೆ ವಿಷಾದದ ಕತ್ತಲು ಆವರಿಸಿದರೆ, ಅಲ್ಲಿ ನೆರೆದಿದ್ದ ಭಾರಿ ಸಂಖ್ಯೆಯ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ.

ADVERTISEMENT

ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣವು ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ‘ಪ್ರತಿ ಗಂಧರ್ವ’ ನಾಟಕದ ಹೃದಯ ಭಾಗದಂತಿರುವ ಈ ದೃಶ್ಯ ಇಡೀ ನಾಟಕದ ತಾತ್ವಿಕತೆಯನ್ನು ಹೇಳುತ್ತದೆ.

ಮರಾಠಿ ಮೂಲದ ಸಾಂಗಲಿ ಜಿಲ್ಲೆಯ ನಾಗಠಾಣದ ನಾರಾಯಣರಾವ್ ರಾಜಹಂಸ (18880-1967) ಅವರು ರಂಗಭೂಮಿ ಮತ್ತು ಸಂಗೀತ ಲೋಕದ ಅನನ್ಯ ತಾರೆ. ವೃತ್ತಿ ನಾಟಕ ಕಂಪನಿಗಳನ್ನು ನಿಭಾಯಿಸುವಲ್ಲಿ ಎದುರಾಗುವ ಬಗೆಬಗೆಯ ಕಷ್ಟ ನಿಷ್ಠುರಗಳ ನಡುವೆಯೂ ಕಲಾಸಕ್ತಿಯ ಅದಮ್ಯ ಪ್ರೇಮವನ್ನು ಪ್ರಕಟಿಸಿದ ಅವರು, ಬಾಲಗಂಗಾಧರ ತಿಲಕರಿಂದ ಬಾಲಗಂಧರ್ವರೆಂದು ಹರಸಿಕೊಂಡವರು. ಇತ್ತ ಬೀಳಗಿ ಸಹೋದರಿಯರು ಎಂದೇ ಖ್ಯಾತಿ ಪಡೆದ ಗೋಹರ್ ಬಾಯಿ ಮತ್ತು ಅಮೀರ್ ಬಾಯಿ ಅವರ ಗಾಯನ ಮತ್ತು ನೃತ್ಯ ಪಯಣ ಮುಂಬಯಿ ಶಹರವನ್ನು ತಲುಪುತ್ತದೆ.

ಭಜನ್ ಅಭಂಗ್ ಗಜಲ್‌ಗಳ ಮೂಲಕ ರಂಗಗೀತೆಗಳನ್ನು ಲೋಕಗೀತೆಗಳನ್ನಾಗಿ ರೂಪಿಸಿದ ಬಾಲಗಂಧರ್ವರು ಮತ್ತು ಗೋಹರ್‌ ಒಂದಾದ ಸೀಮೋಲ್ಲಂಘನದ ಕತೆಯಿದು. ಧರ್ಮ ಜಾತಿ ಭಾಷೆ ಭೌಗೋಳಿಕತೆ ಮತ್ತು ವಯಸ್ಸಿನ ಸೀಮೆಯನ್ನು ಒಟ್ಟಾಗಿ ದಾಟಿದ ಇವರು ಸಾಮಾಜಿಕ ಸಾಮರಸ್ಯದ ಮರುನಿರೂಪಣೆಯ ಸೃಜನಶೀಲ ಮಾದರಿಯನ್ನು ರಚಿಸಿದವರು. ರಂಗನಿಷ್ಠೆಯ ಕಾರಣಗಳಿಗಾಗಿ ಕೋರ್ಟ್ ಕೇಸಿನ ಸೋಲು ಗೆಲುವುಗಳನ್ನು ಮೀರಿ ಜೊತೆಯಾದ ಈ ಜೋಡಿಯ ಸಾಂಗತ್ಯ ಹುಸಿ ಧಾರ್ಮಿಕ ನಿರೂಪಣೆಗಳನ್ನು ಬಲವಾಗಿ ನಿರಾಕರಿಸುತ್ತದೆ. ಮನುಷ್ಯ ಸಮಾಜ ನಿರ್ಮಿಸಿಕೊಂಡ ಮುಳ್ಳು ಬೇಲಿಯನ್ನು ಪ್ರೇಮದ ಅನನ್ಯ ಆದರ್ಶದ ಮೂಲಕವೇ ಕಿತ್ತೆಸೆಯುವ ಇವರ ಬದುಕು ಧಾರ್ಮಿಕ ಅಸಹನೆಯ ಕುಲುಮೆಯಲ್ಲಿ ಕುದಿಯುವ ವರ್ತಮಾನಕ್ಕೆ ನಿಡುಗಾಲದ ಸೌಹಾರ್ದ ಪರಂಪರೆಯನ್ನು ನೆನಪಿಸುತ್ತದೆ.

ಹಿಂದೂ, ಮುಸ್ಲಿಮರ ಧಾರ್ಮಿಕ ನೆಲೆಗಳು ಭೌತಿಕ ವ್ಯವಹಾರದಲ್ಲೂ ಆಧ್ಯಾತ್ಮಿಕ ಚಿಂತನೆಗಳ ವಿಚಾರದಲ್ಲೂ ಏಕಮುಖವಾಗಿ ಚಲಿಸುತ್ತಿರುವ ಹೊತ್ತಿನಲ್ಲಿ ಪ್ರತಿ ಗಂಧರ್ವ ನಾಟಕದ ಪ್ರಸ್ತುತಿಯು ಬಹುಮುಖೀ ಸಮಾಜದ ಒಳಸುಳಿಗಳನ್ನು ತೆರೆದಿಡುತ್ತದೆ. ನಾಟಕ ಕಂಪನಿಗಳ ಬೆಳವಣಿಗೆ, ಆರ್ಥಿಕ ಸಂಕಷ್ಟಗಳು, ಅಭಿಜಾತ ಕಲಾವಿದರು ಅನುಭವಿಸುವ ತುಮುಲ ತಲ್ಲಣಗಳು, ವಿಶೇಷವಾಗಿ ವೃತ್ತಿ ರಂಗಭೂಮಿಯ ನಟಿಯರು ಎದುರಿಸುವ ಅಪಮಾನಗಳು ವರ್ತಮಾನಕ್ಕೆ ಅಪರಿಚಿತವೆಂಬಂತೆ ಇದ್ದ ವೃತ್ತಿ ರಂಗಭೂಮಿಯ ವೈರುಧ್ಯಗಳನ್ನು ಪರಿಚಯಿಸುತ್ತದೆ.

ರಹಮತ್ ತರೀಕೆರೆ ಅವರ ಅಮೀರ್ ಬಾಯಿ ಕರ್ನಾಟಕಿ ಕೃತಿಯೇ ಪ್ರತಿ ಗಂಧರ್ವ ನಾಟಕಕ್ಕೆ ಪ್ರೇರಣೆ. ರಾಜಪ್ಪ ದಳವಾಯಿ ಇದನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ. ಇವರಿಬ್ಬರ ಸಾಮಾಜಿಕ ಕಳಕಳಿಯಿಂದ ಕೂಡಿದ ಹಲವು ವರ್ಷಗಳ ಸಂಶೋಧನಾಸಕ್ತಿಯ ಪರಿಣಾಮ ಕೃತಿ ರಚನೆ ಮತ್ತು ನಾಟಕ ನಿರೂಪಣೆಯಲ್ಲಿ ಅಭಿವ್ಯಕ್ತವಾಗಿದೆ.

ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಮತ್ತವರ ತಂಡದ ಪ್ರಥಮ ಪ್ರಯತ್ನದ ಭಾಗವಾಗಿ ಪ್ರದರ್ಶಿತವಾದ ಈ ನಾಟಕವು ರಾಜ್ಯದ ಬೇರೆ ಬೇರೆ ಭಾಗದ ಕಲಾವಿದರನ್ನು ಕಲೆ ಹಾಕಿ ಸದಾ ಲಾಭ ನಷ್ಟಗಳನ್ನು ಉಸಿರಾಡುವ ಮಂಡಿಪೇಟೆಯ ಮಂದಿಗೆ ರಂಗ ಚಟುವಟಿಕೆಯ ಮಿರ್ಚಿಮಂಡಕ್ಕಿ ಸವಿಯನ್ನು ಧಾರಾಳ ಉಣಬಡಿಸಿತು.

ಕಲಾವಿದರ ಭಾವಪೂರ್ಣ ಅಭಿನಯ, ವಿಶೇಷವಾಗಿ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ ಸುರೇಂದ್ರ ಗೌಡ ಗೋಕರ್ಣ ಮತ್ತು ಶೃತಿರಾಜ್ ಭಾವ ತಲ್ಲೀನತೆ ಕಟ್ಟಿಹಾಕುವಂತಿತ್ತು. ನಿರ್ದೇಶಕ ಮಾಲತೇಶ್ ಬಡಿಗೇರ ಚಿಕ್ಕ ಪುಟ್ಟ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ. ರವಿ ಮುರೂರು ಸಂಗೀತ ಆ‍ಪ್ತವಾಗಿದೆ. ವೃತ್ತಿ ರಂಗಭೂಮಿಯ ಪ್ರಚಾರ ಕೌಶಲಗಳನ್ನು ಬಳಸಿಕೊಂಡ ರೀತಿ, ಸೀಮಿತ ಪರದೆಗಳು ಮತ್ತು ರಂಗಪರಿಕರಗಳ ನಡುವೆಯೂ ನಿರ್ವಹಿಸಿದ ಅಚ್ಚುಕಟ್ಟುತನ, ತಣ್ಣನೆಯ ಸಂಭಾಷಣೆ ನಾಟಕದ ಹೈಲೈಟ್ಸ್.

ಧಾರ್ಮಿಕ ಅಸಹನೆಯ ಮೂಲಕ ಸಮಷ್ಟಿಯನ್ನು ವಿಭಜಿಸುವ ರಾಜಕೀಯ ಹುನ್ನಾರಗಳಿಗೆ ಸಹಜ ಸೀಮೋಲ್ಲಂಘನೆಯ ಮೂಲಕವೇ ಪ್ರತಿರೋಧ ತೋರುವ ಪ್ರತಿ ಗಂಧರ್ವದಂತಹ ನಾಟಕಗಳು ಎಲ್ಲ ಕಾಲದ ಎಚ್ಚರಗಳಿಗೆ ಕಣ್ಣಾಗಬಲ್ಲವು. ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ಕ್ರಿಯಾಶೀಲ ಪ್ರಯೋಗಗಳು ಈ ದಿಶೆಯಲ್ಲಿ ಭರವಸೆ ಹುಟ್ಟಿಸುವಂತಿವೆ. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.