ADVERTISEMENT

ಅಪ್ಪನ ನೆನಪು | ಮಕ್ಕಳಿಗೆ ನಾಟಕದ ರುಚಿ ಹತ್ತಿಸಲಿಲ್ಲ!

ಗೋಪಾಲ ಧುತ್ತರಗಿ
Published 20 ಜೂನ್ 2020, 19:45 IST
Last Updated 20 ಜೂನ್ 2020, 19:45 IST
ಪಿ.ಬಿ.ಧುತ್ತರಗಿ ಅವರ ಪುತ್ರ ಗೋಪಾಲ ಧುತ್ತರಗಿ ಚಿತ್ರದುರ್ಗದ ರಂಗಾಸಕ್ತರು ತಮ್ಮ ತಂದೆಗೆ ನೀಡಿದ್ದ ಬೆಳ್ಳಿ ಕಿರೀಟದ ಜೊತೆಗೆ...
ಪಿ.ಬಿ.ಧುತ್ತರಗಿ ಅವರ ಪುತ್ರ ಗೋಪಾಲ ಧುತ್ತರಗಿ ಚಿತ್ರದುರ್ಗದ ರಂಗಾಸಕ್ತರು ತಮ್ಮ ತಂದೆಗೆ ನೀಡಿದ್ದ ಬೆಳ್ಳಿ ಕಿರೀಟದ ಜೊತೆಗೆ...   

ನಮ್ಮ ತಂದೆ ಪುಂಡಲೀಕಪ್ಪ ಬಸನಗೌಡ ಧುತ್ತರಗಿ ಅವರು ಪಿ.ಬಿ.ಧುತ್ತರಗಿ ಎಂದೇ ರಂಗಭೂಮಿಯಲ್ಲಿ ಖ್ಯಾತಿ ಪಡೆದಿದ್ದರು. ಮನೆಯಲ್ಲಿ ದಿನನಿತ್ಯ ನೇಯ್ಗೆ ಕಾಯಕ ಮಾಡುತ್ತಾ ಬಿಡುವಿನ ಸಮಯದಲ್ಲಿ ನಾಟಕ ಬರೆಯುತ್ತಿದ್ದರು. ’ಕಲ್ಪನಾ ಪ್ರಪಂಚ‘, ಅನಕೃ ಕಾದಂಬರಿ ಆಧಾರಿತ ’ನಂದಾದೀಪ‘, ’ಮನಸ್ಸಿಲ್ಲದ ಮದುವೆ‘ ನಾಟಕಗಳನ್ನು ಬರೆದರು. 'ತಾಯಿ ಕರುಳು' ಅವರಿಗೆ ಖ್ಯಾತಿ ತಂದು ಕೊಟ್ಟಿತು. ಧುತ್ತರಗಿಯವರ ನಾಟಕ ಎಂದರೆ ಕಿಕ್ಕಿರಿದ ಜನಸಂದಣಿ. ರಂಗ ಚಟುವಟಿಕೆಗಳ ಬಿಡುವಿಲ್ಲದ ಸಮಯದಲ್ಲೂ ಮಕ್ಕಳನ್ನು ಮರೆಯಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರೂ ನಾವು ಅನಾಥರಾಗಲಿಲ್ಲ. ತಂದೆ ನಮ್ಮನ್ನು ಪೊರೆದರು.

ನಾಟಕ ಕಂಪನಿಯವರು ನಾಟಕ ಬರೆಸುತ್ತಿದ್ದರು. ಕಂಪನಿ ಜೊತೆ ಉತ್ತಮ ಒಡನಾಟ ಬೆಳೆದು ಮನೆ ತೊರೆದು ಕಂಪನಿಗೇ ಸೇರಿದರು. ಅಜ್ಜ–ಅಜ್ಜಿಯ ಆಶ್ರಯದಲ್ಲಿ ನಾವು ನಾಲ್ವರು ಮಕ್ಕಳು ಬೆಳೆದೆವು. ಅಪ್ಪ ಊರಿಗೆ ಬರುತ್ತಾನೆಂದರೆ ನನಗೆ ಹೆದರಿಕೆ. ನಮ್ಮಪ್ಪನ ಜೊತೆ ಎಂದೂ ಕುಳಿತು ಮಾತನಾಡಿಲ್ಲ. ನಮ್ಮ ಕಮಲಕ್ಕ ಎಂದ್ರೆ ಅಪ್ಪನಿಗೆ ಪಂಚಪ್ರಾಣ. ನನ್ನನ್ನು ನಾಟಕದ ಉಸಾಬರಿಗೆ ಬರಗೊಡಲಿಲ್ಲ. ಅವರೊಬ್ಬ ಅದ್ವಿತೀಯ ನಾಟಕಕಾರಾಗಿ ಮೆರೆದರೂ ಮಕ್ಕಳಿಗೆ ಅದರ ರುಚಿ ತೋರಿಸಲಿಲ್ಲ. ಚಿತ್ರದುರ್ಗ ಜಿಲ್ಲಾಧಿಕಾರಿಯೊಬ್ಬರು ಅಪ್ಪನಿಂದ ’ದೇವಿ ಮಹಾತ್ಮೆ‘ ನಾಟಕ ಬರೆಸಿದರು. ನಾಟಕ ಬನಶಂಕರಿ ಜಾತ್ರೆಯಲ್ಲಿ ಭರ್ಜರಿಯಾಗಿ ಓಡಿತು. ಅಪಾರ ಜನಮನ್ನಣೆ ಗಳಿಸಿತು. ಆ ನಾಟಕ ಕಂಪನಿಯವರು ನಮ್ಮ ತಂದೆಯವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು. ಆ ಕಿರೀಟವನ್ನು ಜತನವಾಗಿ ಕಾಯ್ದುಕೊಂಡಿದ್ದೇನೆ. ಅಪಾರ ಹೆಸರು ಮಾಡಿದರೂ ಅಪ್ಪ ಹಣದ ಹಿಂದೆ ಬೀಳಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಹೊಟ್ಟೆ ತುಂಬಿಸಿದರೆ ಸಾಕು ಎಂಬ ಮನೋಭಾವನೆ ಹೊಂದಿದ್ದರು. ನಮ್ಮ ತಾಯಿ ತೀರಿಕೊಂಡಾಗ ನಮ್ಮಪ್ಪನಿಗೆ ವಯಸ್ಸು ಚಿಕ್ಕದು. ಹಿರಿಯರು, ಸ್ನೇಹಿತರು ಎರಡನೇ ಮದುವೆಯಾಗಲು ಒತ್ತಾಯಿಸಿದರೂ ಆಗಲಿಲ್ಲ. ಮಕ್ಕಳಿಗೆ ಮಲತಾಯಿಯನ್ನು ತರಲು ಇಷ್ಟವಿಲ್ಲವೆಂದು ಹೇಳುತ್ತಿದ್ದರು. ಅದೇ ಸಂದರ್ಭದಲ್ಲಿ ರಚಿತವಾದ ನಾಟಕವೇ ‘ಮಲಮಗಳು’.

ಮುಂದೆ ನಿರ್ದೇಶನಕ್ಕೆ ಇಳಿದಾಗ ರಂಗಕಲಾವಿದೆ ಸರೋಜಮ್ಮ ಪರಿಚಯವಾಗಿ ಅವರನ್ನು ಮದುವೆಯಾದರು. ಮದುವೆಯಾಗಿ ಸೂಳೇಬಾವಿ ಗ್ರಾಮಕ್ಕೆ ಬಂದಾಗ ಊರವರು ನಮ್ಮನ್ನು ಕೀಳಾಗಿ ನೋಡುತ್ತಿದ್ದರು. ನಾಟಕದವರ ಮಕ್ಕಳು ಎಂಬ ಕೀಳರಿಮೆ ತಲೆದೋರಿತು. ಸರೋಜಮ್ಮನವರು ನಮ್ಮನ್ನು ಮಾತೃ ವಾತ್ಸಲ್ಯದಿಂದಲೇ ಕಂಡರು. ನನ್ನ ಮದುವೆಯ ಸಂದರ್ಭದಲ್ಲಿ ತುಂಬಾ ಸಹಾಯ ಮಾಡಿದರು. ಎರಡನೇ ಮದುವೆಯಾದರೂ ನಮ್ಮಪ್ಪನ ಪ್ರೀತಿ ಎಳ್ಳಷ್ಟೂ ಕಡಿಯಾಗಲಿಲ್ಲ. ಅವರೊಬ್ಬ ಮಹಾಸಾಧಕ.

ADVERTISEMENT

ನಮ್ಮ ತಂದೆಯ ಹೆಸರಿನಲ್ಲಿ ಸರ್ಕಾರ ಧುತ್ತರಗಿ ಪ್ರತಿಷ್ಠಾನ ಮಾಡಿ, ಪ್ರತಿ ವರ್ಷ ₹ 12 ಲಕ್ಷ ಅನುದಾನ ನೀಡುತ್ತಿದೆ. ಆದರೆ ಸಂಸ್ಥೆಯ ಹೆಸರಿನಲ್ಲಿ ಯಾವೊಂದು ಕಾರ್ಯಕ್ರಮ ನಡೆಯದಿರುವುದು ದುರ್ದೈವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.