ಕೊಪ್ಪಳದ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಸಮೂಹ
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ ಜನವರಿ 15ರಂದು ನಡೆಯಲಿದೆ. ಜಾತ್ರೆಯ ಸಂಭ್ರಮ, ಜನರ ಸಂಗಮ, ದಾಸೋಹದ ರುಚಿ, ತಜ್ಞರ ಮಾತು ಈ ಎಲ್ಲ ಹೂರಣಗಳು ಇರಲಿವೆ. ಗವಿಮಠದ ಅಜ್ಜನ ಜಾತ್ರೆ ಸಡಗರವಷ್ಟೇ ಅಲ್ಲದೆ ಜಾಗೃತಿ ಜಾಥಾಗಳ ಮೂಲಕ ಜನರ ಬದುಕಿನಲ್ಲಿ ಪರಿವರ್ತನೆ ತಂದ ಯಾತ್ರೆಯೂ ಆಗಿದೆ.
ಅದು 2023ರ ಮೇ ಮೊದಲ ವಾರ. ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ನಲ್ಲಾ ದುರ್ಗಾರಾವ್ ಮೊಮ್ಮಗನ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿನಲ್ಲಿದ್ದ ಮಗಳ ಮನೆಗೆ ಹೋಗಿದ್ದರು. ಏಕಾಏಕಿ ಪಾರ್ಶ್ವವಾಯುವಿಗೆ ಒಳಗಾಗಿ ಮಿದುಳು ನಿಷ್ಕ್ರಿಯವಾಗಿತ್ತು. ಸಂಭ್ರಮದಲ್ಲಿದ್ದ ಕುಟುಂಬದವರಲ್ಲಿ ದುಃಖ ಮಡುಗಟ್ಟಿತ್ತು. ಇಂಥ ಸಮಯದಲ್ಲಿಯೂ ದಿಟ್ಟ ನಿರ್ಧಾರ ಕೈಗೊಂಡ ಕುಟುಂಬದವರು ದುರ್ಗಾರಾವ್ ಅವರ ಯಕೃತ್ತು, ಮೂತ್ರಪಿಂಡ, ಚರ್ಮ ಮತ್ತು ಕಣ್ಣುಗಳನ್ನು ದಾನ ಮಾಡಿದರು.
ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಉದ್ದಾರ, ಘಟನೆ ನಡೆದ ನಾಲ್ಕು ದಿನಗಳ ನಂತರ ಮೃತಪಟ್ಟರು. ಒತ್ತರಿಸಿ ಬರುತ್ತಿದ್ದ ದುಃಖದ ನಡುವೆಯೂ ಮಾನವೀಯ ನಿರ್ಧಾರ ಕೈಗೊಂಡ ಕುಟುಂಬದವರು ಅವರ ಹೃದಯ, ಯಕೃತ್ತು, ಮೂತ್ರಪಿಂಡ ದಾನ ಮಾಡಿದರು.
2024ರ ಡಿಸೆಂಬರ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದರಿಂದ ತಮ್ಮ ಪತ್ನಿ ಗೀತಾ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಲು ಶಿಕ್ಷಕರಾಗಿರುವ ಪತಿ ಸಂಗನಗೌಡರ ಗೌಡರ ಸಮ್ಮತಿಸಿ ಮಾದರಿ ಎನಿಸಿದರು.
ಹೀಗೆ ಅಂಗಾಂಗಗಳನ್ನು ದಾನ ಮಾಡಿ ಸಮಾಜಮುಖಿ ಬದುಕು ಸಾಗಿಸಲು ಮೃತ ವ್ಯಕ್ತಿಗಳ ಕುಟುಂಬದವರಿಗೆ ಪ್ರೇರೇಪಿಸಿದ್ದು ಕೊಪ್ಪಳದ ಗವಿಸಿದ್ಧೇಶ್ವರ ಮಠ. ಇವು ಕೆಲವು ಉದಾಹರಣೆಗಳಷ್ಟೇ. ಇಂಥ ಅನೇಕ ಮಾದರಿಯ ಕೆಲಸಗಳಿಗೆ ಗವಿಮಠದ ಜಾತ್ರೆ ಹಾಗೂ ಜಾತ್ರೆಯ ಅಂಗವಾಗಿ ನಡೆಯುವ ಬೃಹತ್ ಜಾಗೃತಿ ಯಾತ್ರೆಗಳು ಕಾರಣವಾಗಿವೆ.
ಪ್ರತಿ ವರ್ಷ ಲಕ್ಷಾಂತರ ಭಕ್ತರು ಸಾಕ್ಷಿಯಾಗುವ ಗವಿಮಠದ ಜಾತ್ರೆಯ ಮೊದಲ ಕಾರ್ಯಕ್ರಮವೇ ಜಾಗೃತಿ ಜಾಥಾ. ಈ ಜಾಥಾಗಳು ಜನರನ್ನು ಪರಿವರ್ತನೆಯ ಹಾದಿಗೆ ಹೊರಳುವಂತೆ ಮಾಡಿ ಮಾದರಿ ಕೆಲಸಗಳನ್ನು ಮಾಡಿಸುತ್ತಿವೆ. 2023ರಲ್ಲಿ ಅಂಗಾಂಗ ದಾನದ ಮಹತ್ವದ ಬಗ್ಗೆ ಸಾವಿರಾರು ಸಂಖ್ಯೆಯಲ್ಲಿ ಜನರೊಂದಿಗೆ ಜಾಥಾ ಮಾಡಲಾಗಿತ್ತು. ಜಿಲ್ಲಾಡಳಿತವೂ ಕೈಜೋಡಿಸಿತ್ತು. ಅದರಿಂದ ಪ್ರೇರಣೆ ಪಡೆದ ಹಲವಾರು ಜನ ಅಂಗಾಂಗಗಳ ದಾನಕ್ಕೆ ಸಮ್ಮತಿಸಿದ್ದಾರೆ.
ನಲ್ಲಾ ಕುಟುಂಬದವರು ತಮ್ಮ ತಂದೆಯ ನಿಧನದ ಬಳಿಕ, ಅಂಗಾಂಗ ದಾನದ ಮಹತ್ವ ಅರಿತುಕೊಂಡಿದ್ದಾರೆ. ನಲ್ಲಾ ದುರ್ಗಾರಾವ್ ಅವರ ಪುತ್ರಿ ಅನುಷಾ ಹಾಗೂ ಅಳಿಯ ರಾಮಕೃಷ್ಣ ಅಂಗಾಂಗ ದಾನಕ್ಕೆ ಸಹಿ ಹಾಕಿದ್ದಾರೆ. ಜೊತೆಗೆ ಅಂಗಾಂಗಗಳ ದಾನ ಮತ್ತೊಬ್ಬರ ಬದುಕಿಗೆ ಹೇಗೆ ಆಸರೆಯಾಗುತ್ತದೆ ಎನ್ನುವ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.
ಗವಿಮಠದ ಆವರಣದಲ್ಲಿ ಬೆಳೆದು ನಿಂತ ಮರಗಳ ಸಾಲು
ಹೀಗಾಗಿ ಗವಿಮಠದ ಜಾತ್ರೆ ಕೇವಲ ಜನರ ಸಂಗಮ, ಸಂಭ್ರಮ, ಭಕ್ತಿ, ಮಹಾದಾಸೋಹಕ್ಕೆ ಸೀಮಿತವಾಗಿಲ್ಲ. 2015ರಲ್ಲಿ ಮೊದಲ ಬಾರಿಗೆ ಆರಂಭವಾದ ಈ
ಜಾಗೃತಿ ಜಾಥಾಗಳು ಪ್ರತಿವರ್ಷವೂ ಹೊಸ ಸ್ವರೂಪ ಪಡೆದುಕೊಂಡು ಜನರಲ್ಲಿ ಪರಿವರ್ತನೆಯ ಬೀಜಬಿತ್ತುವಲ್ಲಿ ಯಶಸ್ವಿಯಾಗಿದೆ.
ಸತತ ಬರಗಾಲದಿಂದ ಕೊಪ್ಪಳ ಜಿಲ್ಲೆಯಲ್ಲಿ ನೀರಿನ ಅಭಾವ ವ್ಯಾಪಕವಾಗಿತ್ತು. ಇದಕ್ಕಾಗಿ 2017ರ ಜಾತ್ರೆ ಸಮಯದಲ್ಲಿ ಜಲ ಸಂರಕ್ಷಣೆ ಜಾಗೃತಿ ಅಭಿಯಾನ ‘ಜಲದೀಕ್ಷೆ’ ಜಾಥಾ ನಡೆಯಿತು. ಇದು ರಾಜ್ಯದಲ್ಲಿ ಸಂಚಲನವನ್ನೂ ಉಂಟು ಮಾಡಿತು. ನೀರು ಮಿತವಾಗಿ ಬಳಸಬೇಕು ಎನ್ನುವ ಸಂದೇಶ ಸಾರಲಾಯಿತು. ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಸಮಾಜಮುಖಿ ಮಾತುಗಳು ಕೃತಿಗೂ ಇಳಿದವು. ಸ್ವಾಮೀಜಿಯೇ ಕೊಪ್ಪಳ ಸಮೀಪದ ಹಿರೇಹಳ್ಳದಲ್ಲಿ ಹಗಲಿರುಳು ಕೆಲಸ ಮಾಡಿ ಸುಮಾರು 26 ಕಿಲೊಮೀಟರ್ ಹಳ್ಳ ಸ್ವಚ್ಛಗೊಳಿಸಿದರು. ಸ್ವಾಮೀಜಿಯ ಈ ಕಾರ್ಯದಿಂದ ಪ್ರೇರಣೆಗೊಂಡು ಜನ ಯಲಬುರ್ಗಾ ತಾಲ್ಲೂಕಿನ ಕಲ್ಲಭಾವಿ ಕೆರೆ, ಕುಷ್ಟಗಿ ತಾಲ್ಲೂಕಿನ ತಾವರಗೇರಾದ ರಾಯನ ಕೆರೆ, ನಿಡಶೇಷಿ ಕೆರೆ, ಗಂಗಾವತಿಯ ದುರ್ಗಮ್ಮನ ಹಳ್ಳ– ಹೀಗೆ ಅನೇಕ ಜಲತಾಣಗಳನ್ನು ಸ್ವಚ್ಛ ಮಾಡಿದರು. ತ್ಯಾಜ್ಯದಿಂದ ತುಂಬಿ ಹೋಗಿದ್ದ ಕೊಪ್ಪಳ ತಾಲ್ಲೂಕಿನ ಗಿಣಿಗೇರಾದ ಕೆರೆಯಲ್ಲಿ ಗವಿಮಠದ ಸ್ವಾಮೀಜಿ ಹಾಗೂ ಜನರ ಪ್ರಯತ್ನದಿಂದಾಗಿ ನೀರು ತುಂಬಿಕೊಂಡಿದೆ. ಬೋಟಿಂಗ್ ವ್ಯವಸ್ಥೆ ಮಾಡಲಾಗಿದ್ದು ಪಾಳು ಬಿದ್ದಿದ್ದ ಕೆರೆ ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಜಾಗೃತಿ ಜಾಥಾಗಳ ಜೊತೆ ಗವಿಮಠ ಕಳೆದ ವರ್ಷ ‘ಜೀವನ ಸಂಗಾತಿ ಜೊತೆಗೆ ಜೀವನೋಪಾಯ’ ಎಂಬ ಘೋಷವಾಕ್ಯದಡಿ ಸಾಮೂಹಿಕ ವಿವಾಹ ಮಾಡಿ ಸೆಲ್ಕೊ ಫೌಂಡೇಷನ್ ನೆರವಿನೊಂದಿಗೆ ನವದಂಪತಿಗೆ ಸೌರಶಕ್ತಿಯ ವಿದ್ಯುತ್ ವ್ಯವಸ್ಥೆಯುಳ್ಳ ಪೆಟ್ಟಿಗೆ ಅಂಗಡಿಗಳನ್ನು ನೀಡಿತ್ತು. ಆಗ ದಾಂಪತ್ಯ ಬದುಕಿಗೆ ಕಾಲಿಟ್ಟವರು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಅಸಹಾಯಕ ಸ್ಥಿತಿಯಲ್ಲಿದ್ದ ಕುಕನೂರು ತಾಲ್ಲೂಕಿನ ಮಸಬಹಂಚಿನಾಳದ ಅರುಣಕುಮಾರ ಸೋಂಪುರ ಸ್ವಂತ ಅಂಗಡಿ ಆರಂಭಿಸಿದ್ದಾರೆ. ಅವರ ಅಂಗವಿಕಲ ಪತ್ನಿ ಭೀಮವ್ವ ಸೌರಶಕ್ತಿಯಿಂದ ನಡೆಯುವ ಯಂತ್ರದ ಮೂಲಕ ಬಟ್ಟೆ ಹೊಲೆಯುತ್ತಾರೆ.
ಜಾಥಾದಲ್ಲಿ ನೇತ್ರದಾನದ ಜಾಗೃತಿ
ಮಠದ ಕಾರ್ಯಗಳು ಸಾಮಾನ್ಯ ಜನರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ. ಸಮಾಜಮುಖಿ ಬದಲಾವಣೆಗೆ ತೆರೆದುಕೊಳ್ಳುವಂತೆಯೂ ಪ್ರೇರೇಪಿಸುತ್ತಿವೆ. ರಕ್ತದಾನದ ಮಹತ್ವ, ಬಾಲ್ಯ ವಿವಾಹ ತಡೆಗೆ ಅರಿವು, ಜಲದೀಕ್ಷೆ, ಒತ್ತಡ ಮುಕ್ತ ಬದುಕಿಗಾಗಿ ಸಶಕ್ತ ಮನ ಸಂತೃಪ್ತ ಜೀವನಕ್ಕೆ ಪಣ, ನೇತ್ರದಾನದ ಮಹತ್ವ ಸಾರಲು ಕೃಪಾದೃಷ್ಟಿ, ಪರಿಸರ ರಕ್ಷಣೆಗಾಗಿ ಲಕ್ಷ ವೃಕ್ಷೋತ್ಸವ, ಸ್ವಯಂ ಉದ್ಯೋಗಕ್ಕಾಗಿ ಪ್ರೇರೇಪಿಸಲು ಕಾಯಕ ದೇವೋಭವ ಹೀಗೆ ಅನೇಕ ವಿಷಯಗಳ ಜಾಗೃತಿ ಜಾಥಾ ಜಾತ್ರೆಗೂ ಹೊಸತನ ತಂದುಕೊಟ್ಟಿವೆ.
2020ರಲ್ಲಿ ನಡೆದ ಲಕ್ಷ ವೃಕ್ಷೋತ್ಸವ ಜಾಥಾ ಕೊಪ್ಪಳ ಜಿಲ್ಲೆ ಹಾಗೂ ನಾಡಿನ ಹಲವು ಕಡೆ ಜನರ ಮೇಲೆ ಪರಿಣಾಮ ಬೀರಿವೆ. ಮಠದ ವತಿಯಿಂದಲೇ ಒಂದು ಲಕ್ಷ ಸಸಿಗಳನ್ನು ಜನರಿಗೆ ಉಚಿತವಾಗಿ ಹಂಚಲಾಗಿದೆ. ಹಿರೇಹಳ್ಳದ ಎಡಬಲಗಳಲ್ಲಿ ತೆಂಗು, ನೇರಳೆ ಸಸಿಗಳನ್ನು ನೆಡಲಾಗಿತ್ತು. ಮರಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ರೈತರಿಗೆ ಆದಾಯದ ಮೂಲ ಕಂಡುಕೊಳ್ಳಲು ಈ ಅಭಿಯಾನ ನೆರವಾಗಿತ್ತು. ಗವಿಮಠದ ಆವರಣವೇ ಮರಗಳಿಂದ ತುಂಬಿ ಹೋಗಿದೆ. ಎಲ್ಲೇ ಹೋದರೂ ತಂಪಾದ ಗಾಳಿ ಹಾಗೂ ನೆರಳಿಗೆ ಕೊರತೆಯಿಲ್ಲ. ಸಾಕಷ್ಟು ಜನರ ಜೀವ ಉಳಿಸಲು ರಕ್ತದಾನ ಶಿಬಿರಗಳು ನೆರವಾಗಿವೆ. ಹೀಗಾಗಿ ಅಜ್ಜನ ಜಾತ್ರೆಯ ಜಾಗೃತಿ ಯಾತ್ರೆಗಳು ಸಂಕಷ್ಟದಲ್ಲಿರುವ ಮನುಕುಲಕ್ಕೆ ಬೆಳಕು ಹಚ್ಚಿದ ಪ್ರಣತಿಗಳಿಂತಿವೆ.
ಗವಿಮಠದ ಜಾತ್ರೆಗೆ ನಿತ್ಯ ಬರುವ ಲಕ್ಷಾಂತರ ಭಕ್ತರಿಗೆ ಅಚ್ಚುಕಟ್ಟಾಗಿ ಮಾಡುವ ದಾಸೋಹದ ವ್ಯವಸ್ಥೆ ಪ್ರಮುಖ ಆಕರ್ಷಣೆ. ಜಾತಿ, ಧರ್ಮ, ಲಿಂಗದ ತಾರತಮ್ಯವಿಲ್ಲದೇ ಜನ ಸ್ವಯಂಪ್ರೇರಿತರಾಗಿ ಆಹಾರ ಸಾಮಗ್ರಿಗಳನ್ನು ನೀಡುತ್ತಾರೆ. ದಿನಸಿ ಹಾಗೂ ತರಕಾರಿ ವ್ಯಾಪಾರಿಗಳು ಪ್ರತಿ ವರ್ಷ ತಮ್ಮ ಗಳಿಕೆಯ ಒಂದಷ್ಟು ಭಾಗ ಮಠಕ್ಕೆ ಅರ್ಪಿಸುತ್ತಾರೆ. ಮಠದ ದಾಸೋಹಕ್ಕೆ ಭಕ್ತರೇ ಶಕ್ತಿಯಾಗಿದ್ದಾರೆ.
ಈಗಲೂ ಕಟ್ಟಿಗೆ ಒಲೆ ಉರಿಸಿ ಅಡುಗೆ ತಯಾರಿಸುತ್ತಾರೆ. ಜಾತ್ರೆಯಲ್ಲಿ ಸುಮಾರು 16 ಲಕ್ಷದಷ್ಟು ಜೋಳದ ರೊಟ್ಟಿ, 800 ಕ್ವಿಂಟಲ್ ಅಕ್ಕಿ, 900 ಕ್ವಿಂಟಲ್‌ನಷ್ಟು ಜಿಲೇಬಿ, ಮಾದಲಿ, ರವೆ ಉಂಡಿ, ಶೇಂಗಾ ಹೋಳಿಗೆ ಹೀಗೆ ಅನೇಕ ಸಿಹಿ ತಿನಿಸುಗಳು, 400 ಕ್ವಿಂಟಲ್ ತರಕಾರಿ, 350 ಕ್ವಿಂಟಲ್ ದ್ವಿದಳ ಧಾನ್ಯಗಳು, 15 ಸಾವಿರ ಲೀಟರ್ ಹಾಲು, ಒಂದು ಸಾವಿರ ಕೆ.ಜಿ. ತುಪ್ಪು, ಐದು ಸಾವಿರ ಕೆ.ಜಿ. ಉಪ್ಪಿನಕಾಯಿ, 15 ಕ್ವಿಂಟಲ್ ಕಡ್ಲೇಪುಡಿ, ಮೂರ್ನಾಲ್ಕು ಲಕ್ಷ ಮಿರ್ಚಿ ಹೀಗೆ ತರಹೇವಾರಿ ತಿನಿಸುಗಳು ಜಾತ್ರೆಯ ವೈಶಿಷ್ಟ್ಯ.
ವಾರಾಣಸಿಯಿಂದ ಬಂದ ರುದ್ರಮುನಿ ಶಿವಯೋಗಿಗಳಿಂದ ಆರಂಭವಾದ ಕೊಪ್ಪಳದ ಗವಿಮಠವು ಅಕ್ಷರ ದಾಸೋಹಕ್ಕೆ ಮೊದಲ ಆದ್ಯತೆ ನೀಡಿದೆ. ವಿದ್ಯೆಯನ್ನು ಮಕ್ಕಳಿಗೆ ಉಚಿತವಾಗಿ ನೀಡಿ ಸ್ವಾವಲಂಬಿ ಬದುಕು ರೂಪಿಸುತ್ತಿದೆ.
ಮಠದ 16ನೇ ಪೀಠಾಧಿಪತಿಯಾಗಿದ್ದ ಲಿಂಗೈಕ್ಯ ಮರಿಶಾಂತವೀರ ಶಿವಯೋಗಿಗಳು ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಪರಿಹಾರ ಎಂದು ಅರಿತು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಆಗ ಅವರು ಆರಂಭಿಸಿದ ಜ್ಞಾನದ ಜ್ಯೋತಿ ಈಗಲೂ ಪ್ರಕಾಶಿಸುತ್ತಿದೆ. ಅವರ ನಂತರ ಬಂದ ಶಿವಶಾಂತವೀರ ಶಿವಯೋಗಿ ಸ್ವಾಮೀಜಿ ಮತ್ತು ಈಗಿನ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಮಠದ ಮುಂಭಾಗದಲ್ಲಿ ಐದು ಸಾವಿರ ಮಕ್ಕಳಿಗೆ ಉಚಿತ ವಸತಿ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿದ್ದು ಮಕ್ಕಳ ಓದಿನ ಬಗ್ಗೆ ಖುದ್ದು ಸ್ವಾಮೀಜಿಯೇ ನಿಗಾ ವಹಿಸುತ್ತಾರೆ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕೊಪ್ಪಳ ಸಮೀಪದ ಹಿರೇಹಳ್ಳ ಸ್ವಚ್ಛ ಮಾಡಿದ್ದ ಸಂದರ್ಭ –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.