ADVERTISEMENT

ಸಾಗರ ತಾಲ್ಲೂಕಿನ ಹಿರೇಭಾಸ್ಕರ ಜಲಾಶಯ: ಡ್ಯಾಂ ಒಳಗೊಂದು ಡ್ಯಾಂ- ವಿಶೇಷ ಲೇಖನ

ಆರು ದಶಕಗಳ ಹಿಂದೆ ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಅಣೆಕಟ್ಟು ಎದ್ದು ನಿಲ್ಲುತ್ತಿದ್ದಂತೆಯೇ ಸಾಗರ ತಾಲ್ಲೂಕಿನ ಮಡೇನೂರು ಬಳಿಯ ಹಿರೇಭಾಸ್ಕರ ಜಲಾಶಯ ಅದರೊಳಗೆ ಮುಳುಗಿತ್ತು.

ವೆಂಕಟೇಶ ಜಿ.ಎಚ್.
Published 9 ಜುಲೈ 2023, 0:57 IST
Last Updated 9 ಜುಲೈ 2023, 0:57 IST
ಹಿರೇಭಾಸ್ಕರ (ಮಡೇನೂರು) ಜಲಾಶಯದ ನೋಟ
ಹಿರೇಭಾಸ್ಕರ (ಮಡೇನೂರು) ಜಲಾಶಯದ ನೋಟ   

ಇವನು ಇರುಳಿಗೆ ಹಾದಿ ಮಾಡಿಕೊಡಲು ನಿತ್ಯ ಮುಳುಗುವ ಬಾನ ಭಾಸ್ಕರನಲ್ಲ. ಬದಲಿಗೆ ನಾಡಿನ ಬೆಳಕ ಬೇಡಿಕೆ ನೀಗಿಸಲು ಶರಾವತಿಯ ಒಡಲಲ್ಲಿ ಶಾಶ್ವತವಾಗಿ ಮುಳುಗಿದ ಹಿರೇಭಾಸ್ಕರ..

ಆರು ದಶಕಗಳ ಹಿಂದೆ ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಅಣೆಕಟ್ಟು ಎದ್ದು ನಿಲ್ಲುತ್ತಿದ್ದಂತೆಯೇ ಸಾಗರ ತಾಲ್ಲೂಕಿನ ಮಡೇನೂರು ಬಳಿಯ ಹಿರೇಭಾಸ್ಕರ ಜಲಾಶಯ ಅದರೊಳಗೆ ಮುಳುಗಿತ್ತು. ಈಗಲೂ ಮುಳುಗಡೆಯಾಗಿದ್ದ ಹಿರೇಭಾಸ್ಕರ ಜಲಾಶಯದ ಅವಶೇಷಗಳು ಪ್ರತಿ ವರ್ಷ ಬೇಸಿಗೆಯಲ್ಲಿ ಕಾಣಸಿಗುತ್ತವೆ. ದಶಕಗಳ ನೀರಿನಲ್ಲಿ ಮುಳುಗಿದ್ದರೂ ಅವು ಈಗಲೂ ಗಟ್ಟಿಮುಟ್ಟಾಗಿದ್ದು, ಆಗಿನ ಉತ್ಕೃಷ್ಟ ನಿರ್ಮಾಣ ತಾಂತ್ರಿಕತೆಗೆ ಕೈಗನ್ನಡಿಯಾಗಿವೆ.

ಈ ಬಾರಿಯ ಕಡು ಬೇಸಿಗೆ, ಮಳೆಯ ವಿಳಂಬದ ಕಾರಣ ಶರಾವತಿ ಬಸವಳಿದ್ದಾಳೆ. ಹೀಗಾಗಿ ಹಿರೇಭಾಸ್ಕರ ಜಲಾಶಯದ ದರ್ಶನ ಕಳೆದ ಮೂರು ತಿಂಗಳಿಂದ ಅಬಾಧಿತವಾಗಿದೆ. ನೋಡ ಬಂದವರಿಗೆ ತನ್ನ ವೈಭವದ ದಿನಗಳನ್ನು ಮೆಲುಕು ಹಾಕಲು ಜಲಾಶಯದ ಅವಶೇಷಗಳು ನೆರವಾಗುತ್ತಿವೆ.. ಹಿನ್ನೀರ ಹಾದಿಯಲ್ಲಿ, ಹಾಳುಬಿದ್ದ ಕಟ್ಟಡಗಳಲ್ಲಿ ಹೆಜ್ಜೆ ಹಾಕಿದರೆ ಡ್ಯಾಂನೊಳಗೊಂದು ಡ್ಯಾಂ ಮುಳುಗಿದ ವಿಶಿಷ್ಟ ಕಥನ ಬಿಚ್ಚಿಕೊಳ್ಳುತ್ತದೆ.

ADVERTISEMENT

ಮೈಸೂರು ಮಹಾರಾಜರಿಂದ ಅಡಿಗಲ್ಲು..

ಜೋಗದಲ್ಲಿ ಜಲವಿದ್ಯುತ್ ಉತ್ಪಾದನೆಗೆ ನೀರು ಸಂಗ್ರಹಿಸಿ ಬಳಕೆ ಮಾಡಲು 1939ರ ಫೆಬ್ರುವರಿ 5ರಂದು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಶರಾವತಿ ನದಿಗೆ ಅಡ್ಡಲಾಗಿ ಸಾಗರ ತಾಲ್ಲೂಕಿನ ಮಡೇನೂರು ಬಳಿ ಹಿರೇಭಾಸ್ಕರ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.

ಅಂದಿನ ಮೈಸೂರು ಸಂಸ್ಥಾನದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಎಂ.ನರಸಿಂಹಯ್ಯ ಮಾರ್ಗದರ್ಶನದಲ್ಲಿ ಈ ಜಲಾಶಯದ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಅಧೀಕ್ಷಕ ಎಂಜಿನಿಯರ್ ಸುಬ್ಬರಾವ್ ಅದರ ಉಸ್ತುವಾರಿ ವಹಿಸಿದ್ದರು. 25 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ, 114 ಅಡಿ ಎತ್ತರದ ಈ ಜಲಾಶಯದ ನಿರ್ಮಾಣ ಕಾರ್ಯ 1947ರಲ್ಲಿ ಪೂರ್ಣಗೊಂಡು, ನೀರು ಸಂಗ್ರಹ ಆರಂಭವಾದದ್ದು ಅದೇ ವರ್ಷ. ಜಲಾಶಯದ ನೀರು ಬಳಕೆ ಮಾಡಿ ವಿದ್ಯುತ್ ಉತ್ಪಾದಿಸುವ ಮಹಾತ್ಮಾ ಗಾಂಧಿ ಜಲ ವಿದ್ಯುದಾಗಾರ 1948ರ ಫೆಬ್ರುವರಿ 21ರಂದು ಪ್ರಾರಂಭವಾಗಿ, 120 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಶುರುವಾಯಿತು.

1956ರಲ್ಲಿ ಹಳೆಯ ಮೈಸೂರು ಸಂಸ್ಥಾನ ವಿಶಾಲ ಕರ್ನಾಟಕದ ಸ್ವರೂಪ ಪಡೆದಾಗ, ರಾಜ್ಯದಲ್ಲಿ ಹೆಚ್ಚಿದ ವಿದ್ಯುತ್ ಬೇಡಿಕೆ ನೀಗಿಸಲು ಸರ್ಕಾರ ಮುಂದಾಯಿತು. ಅದಕ್ಕಾಗಿ ಶರಾವತಿ ನದಿಯಲ್ಲಿ ವಿದ್ಯುತ್ ಉತ್ಪಾದಿಸುವ ಅವಕಾಶವನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇ ಮತ್ತೊಂದು ಜಲಾಶಯ ನಿರ್ಮಾಣದ ಆಲೋಚನೆ. ಅದರ ಫಲ ಲಿಂಗನಮಕ್ಕಿ ಜಲಾಶಯ ನಿರ್ಮಾಣ.

1964ರಲ್ಲಿ ಲಿಂಗನಮಕ್ಕಿ ಆಣೆಕಟ್ಟೆ ನಿರ್ಮಾಣ ಕಾರ್ಯ ಪೂರ್ಣಗೊಂಡು ನೀರು ನಿಲ್ಲಿಸಲು ಆರಂಭಿಸಿದಾಗ ಹಿರೇಭಾಸ್ಕರ ಜಲಾಶಯ ಅದರಲ್ಲಿ ಪೂರ್ತಿ ಮುಳುಗಡೆಯಾಯಿತು. ನಿರ್ಮಾಣವಾಗಿ ಎರಡು ದಶಕ ಪೂರ್ಣಗೊಳ್ಳುವ ಮುನ್ನವೇ ತನ್ನ ಅಸ್ತಿತ್ವವನ್ನೂ ಕಳೆದುಕೊಂಡಿತು. ಲಿಂಗನಮಕ್ಕಿ ಜಲಾಶಯದ ಪೂರ್ಣಮಟ್ಟ ಇರುವುದು ಸಮುದ್ರಮಟ್ಟದಿಂದ 1819 ಅಡಿ ಎತ್ತರದಲ್ಲಿ. ಹಿರೇಭಾಸ್ಕರ ಸಮುದ್ರಮಟ್ಟದಿಂದ 1774 ಅಡಿ ಎತ್ತರದಲ್ಲಿದೆ. ಹೀಗಾಗಿ ಹಳೆಯ ಅಣೆಕಟ್ಟೆಯ ಮೇಲೆ 45 ಅಡಿ ನೀರು ಸಂಗ್ರಹವಾಗುತ್ತಿದೆ. 

ಶರಾವತಿ ನೀರ ಹಾದಿಯಲ್ಲಿ ಮರೆಯಾಗಿರುವ ಈ ಪುಟ್ಟ ಜಲಾಶಯ ನಿರ್ಮಾಣದ ಸೊಬಗು ಆಕರ್ಷಣೀಯ. ದೂರ ನಿಂತು ಅದರ ಅಸ್ತಿತ್ವವನ್ನು ಕಣ್ತುಂಬಿಕೊಳ್ಳಬಹುದು. ಆದರೆ ಹತ್ತಿರ ಹೋಗಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ.

ವಿಶಿಷ್ಟ ತಾಂತ್ರಿಕತೆ

ಅಣೆಕಟ್ಟೆಯ ಸಿವಿಲ್ ಕಾಮಗಾರಿಗೆ ಆ ಕಾಲದಲ್ಲಿ ₹2.85 ಕೋಟಿ ಖರ್ಚು ಆಗಿದೆ. ವಿದ್ಯುತ್ ಉತ್ಪಾದನೆಗೆ ಜಲಾಶಯದ ನೀರನ್ನು ನಿಯಂತ್ರಿತವಾಗಿ ಹೊರಬಿಡಲು ಆರು ಕ್ರಸ್ಟ್‌ಗೇಟುಗಳನ್ನು ಅಳವಡಿಸಲಾಗಿದೆ. ಪ್ರವಾಹದ ವೇಳೆ ಹೆಚ್ಚುವರಿ ನೀರು ಹೊರಗೆ ಹಾಕಲು ತಲಾ 58 ಅಡಿಯ ವಿಶೇಷ ಮಾದರಿಯ 11 ಕಿಂಡಿಗಳಿವೆ (ಸೈಫನ್‌). ಈ ಕಿಂಡಿಗಳು ವೊಲ್ಯೂಟ್ ಮಾದರಿಯಲ್ಲಿ ರೂಪುಗೊಂಡಿವೆ. ಇವು 18 ಅಡಿ ವ್ಯಾಸ ಹೊಂದಿವೆ. ಈ ಕಿಂಡಿಗಳ ನಿರ್ಮಾಣಕ್ಕೆ ಆರ್‌ಸಿಸಿ ಬಳಸಲಾಗಿದೆ. ಒಳಗೆ ಮರಮುಟ್ಟು ಸೇರಿದಂತೆ ಯಾವುದೇ ವಸ್ತು ಸಿಕ್ಕಿಕೊಳ್ಳದಂತೆ ಅವುಗಳ ಬಾಯಿಗೆ ಜಾಲರಿ ಹಾಕಲಾಗಿದೆ. ಪ್ರತಿ ಕಿಂಡಿಯಿಂದ 12,750 ಕ್ಯುಸೆಕ್ ನೀರು ಹೊರಹೋಗುವಂತೆ ವಿನ್ಯಾಸ ಮಾಡಲಾಗಿದೆ. ಈ ಡ್ಯಾಂ 65.73 ಲಕ್ಷ ಕ್ಯೂಬಿಕ್ ಅಡಿ ಜಲ ಸಂಗ್ರಹ ಸಾಮರ್ಥ್ಯ ಹೊಂದಿತ್ತು.

ಪ್ರತಿ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರುತ್ತಿದ್ದಂತೆ ಕಣ್ಮರೆಯಾಗುವ ಈ ಜಲಾಶಯ, ನೀರು ಕಡಿಮೆಯಾದಾಗ ವೀಕ್ಷಣೆಗೆ ತೆರೆದುಕೊಳ್ಳುತ್ತದೆ. ಮೇ ತಿಂಗಳ ಅಂತ್ಯ ಇದನ್ನು ನೋಡಲು ಸೂಕ್ತ ಕಾಲ.

ಆ ಆಣೆಕಟ್ಟು ನೀರಿನಲ್ಲಿ ಮುಳುಗಿ ಆರು ದಶಕ ಕಳೆದರೂ ಈಗಲೂ ಅತ್ಯಂತ ಸುಸ್ಥಿತಿಯಲ್ಲಿ ಇದೆ. ಆದರೆ ಡ್ಯಾಂನ ಎರಡು ಬದಿಯಲ್ಲಿ ಕಟ್ಟಲಾಗಿರುವ ಪಿಚ್ಚಿಂಗ್ ಕಲ್ಲುಗಳು ಕಣ್ಮರೆಯಾಗುತ್ತಿವೆ. ಕಲ್ಲುಗಳು ಉದುರಿ ಹಿನ್ನೀರಿನ ತಳ ಸೇರುತ್ತಿವೆಯೋ ಇಲ್ಲವೇ ಕಿತ್ತು ಸಾಗಾಟ ಮಾಡಲಾಗುತ್ತಿದೆಯೋ ಗೊತ್ತಿಲ್ಲ. ಆ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕಿದೆ.

ಪೂರಕ ಮಾಹಿತಿ: ಅಜಯ್ ಶರ್ಮಾ, ಇತಿಹಾಸ ಸಂಶೋಧಕ, ಶಿವಮೊಗ್ಗ

ಹಿರೇಭಾಸ್ಕರ (ಮಡೇನೂರು) ಜಲಾಶಯದ ನೋಟ
ಹಿರೇಭಾಸ್ಕರ (ಮಡೇನೂರು) ಜಲಾಶಯ ಕಟ್ಟಡ
ಜಲಾಶಯದ ಕಟ್ಟಡದ ಸದೃಢ ಸ್ತಂಭಗಳು
ಮೆಟ್ಟಿಲುಗಳಿನ್ನೂ ಗಟ್ಟಿಮುಟ್ಟು
ಹಿರೇಭಾಸ್ಕರ (ಮಡೇನೂರು) ಜಲಾಶಯದ ಹಿನ್ನೀರು
ಮಡೇನೂರು ಬಳಿಯ ಹಿರೇಭಾಸ್ಕರ ಅಣೆಕಟ್ಟಿನ ನೋಟ
ಡಾ.ನಾ.ಡಿಸೋಜ

ಬಸ್‌ ಇಳಿದು ಹೋಗುತ್ತಿದ್ದ ಅನುಭವ

‘1950ರ ದಶಕದಲ್ಲಿ ನಾನು ಹೈಸ್ಕೂಲ್ ಓದುತ್ತಿದ್ದೆ. ಸಾಗರ–ಮಡೇನೂರು–ಜೋಗದ ನಡುವೆ ಸಿಕೆಎಂಎಸ್ ಹೆಸರಿನ ಬಸ್ ಓಡಾಡುತ್ತಿತ್ತು. ಜೋಗ ಜಲಪಾತ ನೋಡಲು ತಾಳಗುಪ್ಪ ರೈಲಿಗೆ ಬಂದವರು ಇದೇ ಬಸ್‌ ಏರುತ್ತಿದ್ದರು. ಮಧ್ಯಾಹ್ನ 3 ಗಂಟೆಗೆ ಮಡೇನೂರಿಗೆ ಬರುತ್ತಿತ್ತು. ಅಣೆಕಟ್ಟು ಮೇಲಿನ ರಸ್ತೆಯ ಮೂಲಕ ಬಸ್‌ ಸಾಗುತ್ತಿತ್ತು. ಅಣೆಕಟ್ಟು ಬರುತ್ತಿದ್ದಂತೆಯೇ ಜನರನ್ನು ಇಳಿಸಿ ಬಸ್ ಮಾತ್ರ ಮುಂದೆ ಹೋಗುತ್ತಿತ್ತು. ಜನರು ನಡೆದು ಅಣೆಕಟ್ಟನ್ನು ದಾಟಿ ಬಸ್‌ ಹತ್ತಿ ಹೋಗುತ್ತಿದ್ದರು’ ಎಂದು ಹಿರಿಯ ಸಾಹಿತಿ ನಾ.ಡಿಸೋಜಾ ನೆನಪಿಸಿಕೊಳ್ಳುತ್ತಾರೆ. ಆರಂಭದಿಂದಲೂ ಈ ಜಲಾಶಯ ದುರ್ಬಲವಾಗಿದೆ ಎಂಬ ಸುದ್ದಿ ಆಗ ಹಬ್ಬಿತ್ತು. ಹೀಗಾಗಿ ಪರ್ಯಾಯ ಅಣೆಕಟ್ಟು ಯೋಜನೆ ಇಟ್ಟುಕೊಂಡೇ ಇದ್ದರು. ಹಿರೇಭಾಸ್ಕರ ಪೂರ್ತಿ ಗಾರೆಯಲ್ಲಿ ಕಟ್ಟಿದ ಜಲಾಶಯ. ಆಗ 12 ಹಳ್ಳಿಗಳು ಮುಳುಗಡೆ ಅಗಿದ್ದವು. ಅದರಲ್ಲಿ ಮಡೇನೂರು ಕೂಡ ಒಂದು. ಅಲ್ಲಿಯ ಹಿರೇಬತ್ತಿಗಾರು ಎಂಬಲ್ಲಿ ಗಣಪತಿ ಗುಡಿ ಇತ್ತು. ಅದನ್ನು ನಂತರ ಕಾರ್ಗಲ್ ಬಳಿಗೆ ಸ್ಥಳಾಂತರಿಸಿದರು. ಅದಕ್ಕೆ ಈಗಲೂ ಬತ್ತಿಗಾರು ದೇವಸ್ಥಾನ ಎಂದೇ ಕರೆಯುತ್ತಾರೆ ಎಂದು ತಿಳಿಸಿದರು.

ಹೊರ ರಾಜ್ಯಕ್ಕೆ ವಿದ್ಯುತ್ ಪೂರೈಸಿದ ಶ್ರೇಯ

ಹಿರೇಭಾಸ್ಕರ ಜಲಾಶಯದಿಂದ ಉತ್ಪಾದಿಸುತ್ತಿದ್ದ ವಿದ್ಯುತ್‌ ಅನ್ನು ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಪಕ್ಕದ ಕಾರವಾರ ಹಾಗೂ ಮದ್ರಾಸ್ ಪ್ರೆಸಿಡೆನ್ಸಿಗೂ ಪೂರೈಸಲಾಗುತ್ತಿತ್ತು. ಹೊರ ರಾಜ್ಯಗಳಿಗೆ ವಿದ್ಯುತ್ ಪೂರೈಸಿದ ಮೊದಲ ಯೋಜನೆ ಎಂಬ ಖ್ಯಾತಿಯೂ ಇಲ್ಲಿಯದಾಗಿತ್ತು. ಆಗ ಅಲ್ಲಿಂದ ₹1.5 ಕೋಟಿ ವೆಚ್ಚದಲ್ಲಿ ಭದ್ರಾವತಿಗೆ ವಿದ್ಯುತ್ ತಂದು ಅಲ್ಲಿನ ಸ್ವೀಕರಣಾ ಕೇಂದ್ರದಿಂದ ಅಲ್ಲಿನ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ಬೆಂಗಳೂರು ಹಾಗೂ ಮೈಸೂರು ನಗರಗಳಿಗೂ ವಿದ್ಯುತ್ ಪೂರೈಸಲಾಗುತ್ತಿತ್ತು ಎಂದು ಇತಿಹಾಸ ಸಂಶೋಧಕ ಅಜಯ್ ಶರ್ಮಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.