ಜನಜೀವನ ಹಾಗೂ ಅಂಚೆಯ ಒಡನಾಟ ಇಂದು ನಿನ್ನೆಯದಲ್ಲ. ಅಂಚೆ ಡಬ್ಬಿಯ ಕೆಂಪು ಬಣ್ಣದ ಹೊಳಪಿಗೆ ಪತ್ರದ ಮಿಂಚು ಸೇರಿ ನೋಡುಗರಲ್ಲಿ ಪುಳಕ ಹುಟ್ಟಿಸುವುದು ದಿಟ.
ಹತ್ತು ಹಲವು ಭಾವನೆಗಳ ಸಾರ ಹೊತ್ತ ಪತ್ರಗಳನ್ನು ತನ್ನೊಳಗೆ ಹೊತ್ತ ಅಂಚೆಯ ಡಬ್ಬಿ, ಆ ಪತ್ರಗಳನ್ನು ಮನೆಮನೆಗೆ ತಲುಪಿಸುತ್ತಿದ್ದ ಅಂಚೆಯಣ್ಣ, ಊರಿನ ಗಲ್ಲಿಯಲ್ಲಿ ಅವನ ಸೈಕಲ್‌ನ ಟ್ರಿಣ್ ಟ್ರಿಣ್ ಸದ್ದು... ಕೇಳಿದವರ ಕಿವಿ ನಿಮಿರುತ್ತಿತ್ತು, ಕಣ್ಣು ಅರಳುತ್ತಿತ್ತು, ಭಾವತರಂಗಗಳು ಪುಟಿದೇಳುತ್ತಿದ್ದವು, ಕೆಲವೊಮ್ಮೆ ಅದೇನು ಸುದ್ದಿ ಬಂತೋ ಅನ್ನುವ ದಿಗಿಲು ಸಹ. ಹೀಗೆ ಭಾವನೆಗಳ ಜೊತೆಗೆ ಕಾಳಜಿ, ಪ್ರೀತಿ, ಮಮತೆಯ ಬಂಧಗಳನ್ನು ಜತನ ಮಾಡುತ್ತಾ ಬೆಸುಗೆಯನ್ನು ಗಟ್ಟಿಯಾಗಿಸುವಲ್ಲಿ ಪತ್ರ ಸಂವಹನವೇ ಮೂಲವಾಗಿದ್ದ ಕಾಲ ಒಂದಿತ್ತು.
ಅಂಚೆಯ ಲಕೋಟೆ, ಇನ್‌ಲ್ಯಾಂಡ್ ಪತ್ರದ ಮಾದರಿ, ಕಾರ್ಡಿನ ವಿನ್ಯಾಸ ಎಲ್ಲವೂ ಅಳಿಸಲಾಗದಂತೆ ನಮ್ಮ ಮನದಂಗಳದಲ್ಲಿ ಅಚ್ಚೊತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಹಾವಳಿಯಲ್ಲಿ ಯುವಜನಾಂಗವು ಅಂಚೆ ವ್ಯವಸ್ಥೆಯಿಂದ ದೂರ ಸರಿದಿರುವುದು ದಿಟ. ಸಾಮಾಜಿಕ ಮಾಧ್ಯಮಗಳ ಮಿತಿಮೀರಿದ, ಅಸಮರ್ಪಕ ಬಳಕೆಯಿಂದ ಆಗುವ ಮಾನಸಿಕ ಹಾಗೂ ದೈಹಿಕ ಪರಿಣಾಮಗಳು ಬಹಳ. ಇದರಿಂದ ಬಾಂಧವ್ಯಗಳು ಯಾಂತ್ರಿಕ ಚೌಕಟ್ಟಿನೊಳಗೆ ಸೇರಿಹೋಗಿವೆ. ಇದನ್ನು ನೋಡಿದರೆ, ಅಂಚೆಯು ಅವಿನಾಭಾವ ಸಂಬಂಧಕ್ಕೆ ಮತ್ತು ಆರೋಗ್ಯಕರ ವಿಚಾರಧಾರೆಗಳಿಗೆ ನಿಲುಕುವ ಎಷ್ಟು ಅಪ್ಪಟ ವ್ಯವಸ್ಥೆ ಎನ್ನುವುದನ್ನು ಮನಗಾಣಬಹುದು.
ನಮಗೆ ಬಂದ ಪತ್ರವನ್ನು ಪಡೆದು, ಒಡೆದು ಓದುವಾಗ, ಸುತ್ತ ಮನೆ ಮಂದಿ ಕೂತು, ನಿಂತು, ಆತುಕೊಂಡು ಆಲಿಸುತ್ತಿದ್ದ ಪರಿ ನಿಜಕ್ಕೂ ಅವಿಸ್ಮರಣೀಯ, ಅನುಪಮ ಅನುಭವ. ಇಂತಹ ವಿನೂತನ ಚಾರಿತ್ರಿಕ ಅಂಚೆಯು ಪ್ರತಿವರ್ಷ ಅಕ್ಟೋಬರ್ 10ನ್ನು ‘ವಿಶ್ವ ಅಂಚೆ ದಿನ’ವನ್ನಾಗಿ ಆಚರಿಸುತ್ತಾ ಬಂದಿದೆ. ಇಷ್ಟೊಂದು ಆಧುನಿಕ ಸಂವಹನ ವ್ಯವಸ್ಥೆಗಳು, ಪರ್ಯಾಯ ವ್ಯವಸ್ಥೆಗಳ ಅಬ್ಬರದ ನಡುವೆಯೂ ಅಂಚೆಗೆ ಅಂಚೆಯೇ ಉಪಮೆ ಅನ್ನುವುದೇ ವಿಶೇಷ.
ಹೆಮ್ಮೆಯ ವಿಚಾರವೆಂದರೆ, ಅಂಚೆ ಈಗ ಮೊದಲಿನಂತಿಲ್ಲ. ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎನ್ನುವ ಡಿ.ವಿ.ಜಿ. ಅವರ ಕಗ್ಗದ ಸಾಲಿನಂತೆ ತನ್ನ ಮೂಲ ಉದ್ದೇಶ ಹಾಗೂ ಅಸ್ತಿತ್ವದ ಗುರುತಾಗಿರುವ ಟಪಾಲು ನಿರ್ವಹಣೆಯ ಜೊತೆ ಜೊತೆಗೆ ಬಹುತೇಕ ಬ್ಯಾಂಕಿಂಗ್ ವ್ಯವಹಾರಗಳು, ವಿಮೆ, ಮಿಂಚಂಚೆ, ಆಧಾರ್ ಸೇವೆ, ಅಂಚೆಚೀಟಿ ಸಂಗ್ರಹದಂತಹ ಹೆಚ್ಚಿನ ಕ್ಷೇತ್ರಗಳಿಗೆ ತನ್ನ ಕಾರ್ಯವಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಜೊತೆಗೆ ಸೇವಾ ನೈಪುಣ್ಯ ಹಾಗೂ ಓಡುವ ಜಗತ್ತಿನೊಡನೆ ಕೈಜೋಡಿಸಿ ಆನ್‌ಲೈನ್ ವ್ಯವಹಾರಕ್ಕೂ ಅಡಿಯಿಟ್ಟು ಯಶಸ್ವಿಯಾಗುತ್ತಿದೆ. ಇದು ಅದರ ಚಲನಶೀಲತೆಗೆ ಹಿಡಿದ ಕನ್ನಡಿಯೇ ಆಗಿದೆ.
ಅಂಚೆಯಣ್ಣನೂ ಕೈಯಲ್ಲೊಂದು ಡಿವೈಸ್ ಹಿಡಿದು ಮನೆ ಮನೆಗೆ ಎಡತಾಕುತ್ತಾ, ಹಣಕಾಸಿನ ವ್ಯವಹಾರಗಳು, ನಿವೃತ್ತ ಉದ್ಯೋಗಿಗಳ ಜೀವನ ಪ್ರಮಾಣಪತ್ರ ನೀಡುವುದು... ಹೀಗೆ ಡಿಜಿಟಲ್ ಯುಗದ ವೇಗಕ್ಕೆ, ಓಘಕ್ಕೆ ಒಗ್ಗಿ ಸೈ ಎನಿಸಿಕೊಂಡಿದ್ದಾನೆ.
ವಿದ್ಯಾರ್ಥಿ ಸ್ನೇಹಿ ಅಂಚೆ
ವಿದ್ಯಾರ್ಥಿಗಳನ್ನು ಈ ದಿಸೆಯಲ್ಲಿ ಹುರಿದುಂಬಿಸಲು ದೀನದಯಾಳ್ ಸ್ಪರ್ಶ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಕೊಡಲಾಗುತ್ತಿದೆ. ಅಲ್ಲದೆ ಆಗಾಗ ಬಹುತೇಕ ಶಾಲಾ ಕಾಲೇಜುಗಳಲ್ಲಿ ಅಂಚೆ ಚೀಟಿ ಪ್ರದರ್ಶನ, ಅದೇ ರೀತಿ ಪತ್ರ ಸಂಸ್ಕೃತಿ ಅಭಿಯಾನದಡಿ ರಾಷ್ಟ್ರ, ರಾಜ್ಯ ಮಟ್ಟದ ಪತ್ರಲೇಖನ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಪ್ರೇರಣೆಯ ಕಿರಿ ಮಿಂಚಿನಂತೆ ಭಾಸವಾಗುತ್ತಿದೆ. ಇನ್ನು ವಿಮಾ ವಲಯಕ್ಕೆ ಸಂಬಂಧಿಸಿದಂತೆ ಅಪಘಾತ ವಿಮೆ, ಜೀವ ವಿಮೆ ಎರಡನ್ನೂ ಗ್ರಾಮ ಮಟ್ಟದವರೆಗೂ ವಿಸ್ತರಿಸಿ ದಾಖಲೆಯ ಪ್ರಗತಿ ಸಾಧಿಸಲಾಗಿದೆ. ಅಂತೆಯೇ ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಕೇಂದ್ರ ಹಾಗೂ ರಾಜ್ಯದ ಹತ್ತು ಹಲವು ಅನುದಾನಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆಗೊಳ್ಳುತ್ತಿರುವುದು ಅಂಚೆ ಇಲಾಖೆಯ ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ.
ಅದೇ ರೀತಿ ಹಣಕಾಸು ಉಳಿತಾಯದ ವಿವಿಧ ಖಾತೆಗಳ ನಿರ್ವಹಣೆ ಅಚ್ಚುಕಟ್ಟಾಗಿ ಸಾಗುತ್ತಿದೆ. ಸಮಾಜದ ಅತ್ಯಂತ ಕೊನೆಯ ಮಟ್ಟಕ್ಕೂ ಎಟಕುವಂತೆ, ಅರ್ಥವಾಗುವಂತೆ, ಬಳಕೆಗೆ ಅನುಕೂಲವಾಗುವಂತೆ ಇರುವುದು ಅಂಚೆಯ ವಿಶೇಷ.
ಅಂಚೆಯು ರಿಜಿಸ್ಟರ್ಡ್ ಪತ್ರದ ಸೇವೆ ಸ್ಥಗಿತಗೊಳಿಸಿ, ಸ್ಪೀಡ್ ಪೋಸ್ಟ್ ಸೇವೆಯಲ್ಲೇ ಅದನ್ನು ವಿಲೀನಗೊಳಿಸಿರುವುದು ಇತ್ತೀಚಿನ ಬೆಳವಣಿಗೆ. ಆದರೆ ಇದು ಗ್ರಾಹಕ ವಲಯದಲ್ಲಿ ಕೊಂಚ ಗೊಂದಲ ಮೂಡಿಸಿದ್ದೂ ನಿಜ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.