ಮಲೆನಾಡು, ಉತ್ತರ ಕನ್ನಡ ಭಾಗದಲ್ಲಿ ಚೌತಿ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸುತ್ತಾರೆ. ಮಲೆನಾಡಿಗರಿಗೆ ದೀಪಾವಳಿ ಎಂಬುದು ದೊಡ್ಡ ಹಬ್ಬವಾದರೂ, ಗಣೇಶ ಚತುರ್ಥಿ ಕೂಡ ಬಲು ವಿಶೇಷ ಹಬ್ಬ. ಇದಕ್ಕಾಗಿ ಹದಿನೈದು ದಿನಗಳ ಮೊದಲಿನಿಂದಲೇ ಸಿದ್ಧತೆ ಪ್ರಾರಂಭವಾಗುತ್ತದೆ.
‘ನಿಮ್ಮನೆ ಚಕ್ಲಿ ಕಂಬ್ಳಾ ಯಾವಾಗಲೋ’ ಎನ್ನುವ ಮಾತು ಪರಸ್ಪರ ಸ್ನೇಹಿತರು, ಅದರಲ್ಲೂ ತಾಯಂದಿರು ಭೇಟಿಯಾದಾಗ ಕೇಳಿಬರುವುದು ಸಾಮಾನ್ಯ. ಗಣೇಶನಿಗೆ ನೈವೇದ್ಯಕ್ಕೆ ಬಗೆಬಗೆಯ ಭಕ್ಷ್ಯಗಳನ್ನು ಮಾಡುವುದು ವಾಡಿಕೆ. ಅದರಲ್ಲಿ ಚಕ್ಕುಲಿ ಬಹಳ ಮಹತ್ವದ್ದು. ಮಲೆನಾಡಿನ ಶಿರಸಿ, ಯಲ್ಲಾಪುರ ಮತ್ತು ಸಿದ್ದಾಪುರ ತಾಲ್ಲೂಕುಗಳ ಹಳ್ಳಿಗಳಲ್ಲಿ ಚೌತಿಯ ಸಂಭ್ರಮದ ‘ಕೈ ಚಕ್ಕುಲಿ ಕಂಬಳ’ ಹಿಂದೆ ಬಹಳ ಸಾಮಾನ್ಯವಾಗಿತ್ತು. ಕೈಯಲ್ಲಿಯೇ ಚಕ್ಕುಲಿ ಸುತ್ತುವ ಈ ಸಂಪ್ರದಾಯ ಈಗೀಗ ಮರೆಯಾಗುತ್ತಿದೆ.
ಚೌತಿ ಹಬ್ಬ ಬರುವ ಎರಡು ವಾರಗಳ ಮೊದಲಿಂದಲೇ ಕೈ ಚಕ್ಕುಲಿ ಕಂಬಳ ಪ್ರಾರಂಭವಾಗುತಿತ್ತು. ಊರಿನ ಹತ್ತಾರು ಮನೆಗಳ ಜನ ಸೇರಿ ಒಂದೊಂದು ಮನೆಯಲ್ಲಿ ಕೈ ಚಕ್ಕುಲಿ ಕಂಬಳ ನಡೆಸುತ್ತಿದ್ದರು. ಅಂದು ಅವರದೇ ಮನೆಯಲ್ಲಿ ಊಟ, ತಿಂಡಿ ಎಲ್ಲವೂ ನಡೆಯುತಿತ್ತು. ಇದರಿಂದ ಆ ಹಳ್ಳಿಯಲ್ಲಿ ಸೌಹಾರ್ದ, ಒಗ್ಗಟ್ಟು ತಾನಾಗಿಯೇ ಬೆಳೆಯುತಿತ್ತು. ಉಳಿದ ಚಕ್ಕುಲಿಗಳಿಗಿಂತ ಭಿನ್ನವಾದ, ಕೇವಲ ಕೈ ಚಳಕದಿಂದಲೇ ತಯಾರಿಸುವ ಈ ಚಕ್ಕುಲಿ ಮಾಡುವುದು ಕೂಡ ಸೂಕ್ಷ್ಮ ಕೆಲಸವಾಗಿತ್ತು. ಅಂಟಿನ ಗುಣ ಇರುವ ಮುಳ್ಳುರಿಯಾ, ಹೆಗ್ಗೆ, ಆಲೂರ ಸಣ್ಣಾ, ಮಟ್ಟಣಗಾ, ಪದ್ಮ ರೇಖಾ ಮುಂತಾದ ವಿಶೇಷ ತಳಿಯ ಅಕ್ಕಿಗಳನ್ನು ಬೀಸುವ ಕಲ್ಲಿನಿಂದ ಬೀಸಿ ಹದವಾಗಿ ಹಿಟ್ಟನ್ನು ತಯಾರಿಸಿ ಈ ಚಕ್ಕುಲಿ ಮಾಡುತ್ತಿದ್ದರು. ಹೆಚ್ಚಾಗಿ ಕೊಬ್ಬರಿ ಎಣ್ಣೆಯಿಂದ ಕರಿಯುತ್ತಿದ್ದರಿಂದ, ಈ ಚಕ್ಕುಲಿಯನ್ನು ಒಂದೆರಡು ತಿಂಗಳವರೆಗೆ ರುಚಿಗೆಡದಂತೆ ಇಡಬಹುದಿತ್ತು.
ಚಕ್ಕುಲಿ ಮುಟ್ಟುಗಳು, ಚಕ್ಕುಲಿ ಮಾಡುವ ಯಂತ್ರಗಳು ಬಂದ ಮೇಲೆ ಕೈಸುತ್ತು ಚಕ್ಕುಲಿ ತೀರ ಅಪರೂಪವಾಗಿದೆ. ಪೇಟೆಯಿಂದ ಚಕ್ಕುಲಿ ತಂದು ನೈವೇದ್ಯ ಮಾಡುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಶಿರಸಿಯ ಹೆಗಡೆಕಟ್ಟಾದ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಕೈ ಚಕ್ಕುಲಿ ತಯಾರು ಮಾಡುವ, ತಿನ್ನುವ, ಕೈ ಚಕ್ಕುಲಿ ಪ್ರದರ್ಶನ ಹಾಗೂ ಮಾರಾಟ ಮಾಡುವ ಮೇಳ ನಡೆಯಿತು. ಅದರ ನೆಪದಲ್ಲಿ ಈ ಕೈಸುತ್ತಿನ ಕಥೆ ನೆನಪಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.