ADVERTISEMENT

ಕೊಲ್ಹಾಪುರಿ ಜೋಡು ಪ್ರಸಿದ್ಧಿ ಜೋರು

ಇಮಾಮ್‌ಹುಸೇನ್‌ ಗೂಡುನವರ
Published 8 ಜೂನ್ 2025, 0:11 IST
Last Updated 8 ಜೂನ್ 2025, 0:11 IST
ಮದಭಾವಿಯಲ್ಲಿ ಮಹಿಳೆಯೊಬ್ಬರು ಕೊಲ್ಹಾಪುರಿ ಚಪ್ಪಲಿ ಹೆಣೆಯುತ್ತಿರುವುದು 
ಚಿತ್ರಗಳು: ಗೋವಿಂದರಾಜ ಜವಳಿ
ಮದಭಾವಿಯಲ್ಲಿ ಮಹಿಳೆಯೊಬ್ಬರು ಕೊಲ್ಹಾಪುರಿ ಚಪ್ಪಲಿ ಹೆಣೆಯುತ್ತಿರುವುದು  ಚಿತ್ರಗಳು: ಗೋವಿಂದರಾಜ ಜವಳಿ   

ಕೊಲ್ಹಾಪುರಿ ಮೆಟ್ಟು ಎಲ್ಲಾ ವರ್ಗದವರಿಗೂ ಅಚ್ಚುಮೆಚ್ಚು. ಈ ಮೆಟ್ಟಿಗೆ ಇರುವ ಜನಪ್ರಿಯತೆ ದೇಶದ ಗಡಿಯನ್ನೂ ದಾಟಿದೆ. ಆದರೆ, ಈ ಮೆಟ್ಟುಗಳು ಹೆಚ್ಚಾಗಿ ತಯಾರಾಗುವುದು ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಎನ್ನುವುದು ವಿಶೇಷ...

ಕೊಲ್ಹಾಪುರಿ ಚಪ್ಪಲಿಗಳು ಬರೀ ಚಪ್ಪಲಿಗಳಲ್ಲ; ಭಾರತೀಯ ಪರಂಪರೆಯ ಹೆಜ್ಜೆ ಗುರುತುಗಳು. ಒಮ್ಮೆಯಾದರೂ ಈ ಚಪ್ಪಲಿಗಳನ್ನು ಮೆಟ್ಟಿ ನೋಡಿ. ಅದರಲ್ಲಿ ಒಂದು ಗತ್ತು– ಗಮ್ಮತ್ತು ಇದೆ. ಇವುಗಳನ್ನು ಸಿದ್ಧಪಡಿಸುವವರ ಕೈಯಲ್ಲಿ ಅಂಥ ಕೌಶಲವಿದೆ. ಸಮಗಾರ ಸಮಾಜದವರು ಇಟ್ಟ ಹೆಜ್ಜೆಗಳು ಎರಡು ರಾಜ್ಯಗಳ ನಡುವೆ ಸಾಂಸ್ಕೃತಿಕ ಬಂಧ ಗಟ್ಟಿಗೊಳಿಸಿವೆ. ಇಂದು ನಿನ್ನೆಯಲ್ಲ; ಬರೋಬ್ಬರಿ 800 ವರ್ಷಗಳಿಂದಲೂ ಈ ಬಂಧ ಬಂಧುತ್ವವಾಗಿ ಬೆಳೆಯುತ್ತ ಬಂದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮದಭಾವಿಗೆ ಕಾಲಿಟ್ಟರೆ ಸಾಕು; ಚರ್ಮದ ವಾಸನೆ ಮೂಗಿಗೆ ಬಡಿಯುತ್ತದೆ. ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಮೆಟ್ಟುಗಳನ್ನು ತಯಾರಿಸುವುದೇ ಕಾಯಕ. ಒಬ್ಬೊಬ್ಬರನ್ನು ಮಾತಿಗೆಳೆದಾಗ, ‘ಈ ಚಪ್ಪಲ ಹಾಕೊಂಡ್ರ ಅದರ ಗತ್ತ ಬ್ಯಾರೇರಿ. ನೋಡಾಕಷ್ಟ ಅಲ್ಲ; ಆರೋಗ್ಯಕ್ಕೂ ಅನುಕೂಲ’ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ. ‘ಚಪ್ಪಲ ಹಾಕೊಂಡವ್ರ ಬದುಕೇನೋ ಚಂದ. ಆದ್ರ ನಮ್ದ ಸಂಕಷ್ಟದ ನಡಿಗಿ’ ಎನ್ನುವ ನೋವಿನ ಮಾತೂ ಕಿವಿಗೆ ಬಿದ್ದಿತು.

ADVERTISEMENT

ಕೊಲ್ಹಾಪುರಿ ಚಪ್ಪಲಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಚಲನಚಿತ್ರ ನಟ-ನಟಿಯರು, ಕ್ರಿಕೆಟಿಗರು, ರಾಜಕಾರಣಿಗಳು, ರೈತರು ಹೀಗೆ... ಅವುಗಳ ವಿನ್ಯಾಸ, ಅಂದಕ್ಕೆ ಬೆರಗಾಗದವರೇ ಇಲ್ಲ. ಇವು ಧೋತರ, ಪೈಜಾಮ್‌, ಸಾಂಪ್ರದಾಯಿಕ ಸೀರೆ, ಚೂಡಿದಾರ್‌ ಜತೆಗೆ ಧರಿಸಲೂ ಸೈ, ಪಾಶ್ಚಾತ್ಯ ಉಡುಗೆಗೂ ಜೈ. 

ಬೆಳಗಾವಿ, ಧಾರವಾಡ,  ಬಾಗಲಕೋಟೆ, ವಿಜಯಪುರ, ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸಾತಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಇವುಗಳನ್ನು ತಯಾರಿಸಲಾಗುತ್ತದೆ. ಆದರೆ, ಬೆಳಗಾವಿಯ ಅಥಣಿ, ನಿಪ್ಪಾಣಿ ತಾಲ್ಲೂಕುಗಳಲ್ಲಿ ಈ ವೃತ್ತಿ ನೆಚ್ಚಿಕೊಂಡವರ ಪ್ರಮಾಣವೇ ಅಧಿಕ.

ಇತ್ತೀಚಿನ ವರ್ಷಗಳಲ್ಲಿ ಚಪ್ಪಲಿ ತಯಾರಿಕೆಗಾಗಿ ಹಲವರು ಯಂತ್ರಗಳ ಮೊರೆ ಹೋಗಿದ್ದಾರೆ. ಆದರೆ, ಕೈಯಿಂದ ಚಪ್ಪಲಿ ಹೊಲಿಯುವವರೇ ಹೆಚ್ಚು. ಮೆಟ್ಟು ತಯಾರಿಕೆಯಲ್ಲಿ ಪ್ರತಿಯೊಬ್ಬರಿಗೆ ಒಂದೊಂದು ಮಾದರಿಯ ಕೆಲಸ ಹಂಚಿಕೆಯಾಗುತ್ತದೆ. ಚಪ್ಪಲಿ ತಯಾರಿಸುವವರಲ್ಲಿ ಪುರುಷರಷ್ಟೇ ಅಲ್ಲ; ಮಹಿಳೆಯರೂ ಇದ್ದಾರೆ. ಅನಕ್ಷರಸ್ಥರಿಂದ ಹಿಡಿದು ಪದವೀಧರರೂ ಕಾಣಸಿಗುತ್ತಾರೆ.

ಕೈಯಿಂದ ಹೆಣೆಯುವ ಕಾರಣಕ್ಕೆ ಹೆಚ್ಚು ತಾಳಿಕೆ-ಬಾಳಿಕೆ ಬರುವ ಚಪ್ಪಲಿಗಳೀಗ ಸಾಂಪ್ರದಾಯಿಕವಾಗಿ ಅಷ್ಟೇ ಉಳಿದಿಲ್ಲ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅವುಗಳಿಗೆ ಆಧುನಿಕ ಸ್ಪರ್ಶವೂ ಸಿಕ್ಕಿದೆ. ನವನವೀನ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ‘ಟ್ರೆಂಡ್’ ಸೃಷ್ಟಿಸಿವೆ. ಮದುವೆ ಮತ್ತಿತರ ಸಮಾರಂಭಗಳಲ್ಲಿ ಯುವಜನರ ನೆಚ್ಚಿನ ಆಯ್ಕೆಯಾಗಿಯೂ ಹೊರಹೊಮ್ಮಿವೆ.

ಚಪ್ಪಲಿ ಖರೀದಿಗೆ ಶ್ರೀಮಂತ-ಬಡವ, ವಯಸ್ಸಿನ ಬೇಧವಿಲ್ಲ. ಎಲ್ಲ ವಯೋಮಾನದವರಿಗೂ, ಅವರವರ ಹಣಕಾಸಿನ ಸಾಮರ್ಥ್ಯಕ್ಕೆ ಅನುಗುಣವಾದ ಮೆಟ್ಟುಗಳು ಲಭ್ಯ ಇವೆ. ಆಕರ್ಷಕವಾಗಿ ಕಾಣಿಸುವ ಈ ಚಪ್ಪಲಿ ಧರಿಸಿ, ನಡೆಯುವಾಗ ಬರುವ ‘ಜುರ್ಕಿ’ ಶಬ್ದ ದೇಶದ ಗಡಿದಾಟಿ ಹೋಗಿದೆ. ಆದರೆ, ತಲೆಮಾರುಗಳಿಂದ ಮೆಟ್ಟು ತಯಾರಿಕೆಯ ಈ ಕುಲಕಸುಬನ್ನೇ ನೆಚ್ಚಿಕೊಂಡವರದ್ದು ಮಾತ್ರ ಸಂಕಷ್ಟದ ನಡಿಗೆಯೇ...

‘ಅಥಣಿ ತಾಲ್ಲೂಕಿನ ಮದಭಾವಿಯಲ್ಲಿ 800ಕ್ಕೂ ಹೆಚ್ಚು ಮಂದಿ ಕೊಲ್ಹಾಪುರಿ ಮೆಟ್ಟು ತಯಾರಿಸುತ್ತೇವೆ. ಇಡೀ ದೇಶದಲ್ಲಿ ಇವು ಖ್ಯಾತಿ ಗಳಿಸಿವೆ. ಆದರೆ, ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ 90 ಕಿಲೋಮೀಟರ್‌ ದೂರದ ಕೊಲ್ಹಾಪುರಕ್ಕೆ ಕಳುಹಿಸಬೇಕಿದೆ. ಸಾರಿಗೆಗೆ ಹೆಚ್ಚಿನ ಹಣ, ಸಮಯ ವ್ಯಯವಾಗುತ್ತಿದೆ. ಕಷ್ಟಪಟ್ಟು ಮೆಟ್ಟು ತಯಾರಿಸೋದು ನಾವು. ಆದರೆ, ನಮಗಿಂತ ಹೆಚ್ಚಿನ ಲಾಭ ಪಡೆಯೋದು ಮಹಾರಾಷ್ಟ್ರದ ವರ್ತಕರು’  ಎಂದು ಕುಶಲಕರ್ಮಿ ಕೇದಾರಿ ಭಂಡಾರೆ ಹೇಳುವಾಗ ಅವರ ದನಿಯಲ್ಲಿ ಬೇಸರವಿತ್ತು.

‘ನಾವು ಗುಣಮಟ್ಟದ ಕಚ್ಚಾವಸ್ತು ಬಳಸಿ ನಿರ್ದಿಷ್ಟ ದರಕ್ಕೆ ಚಪ್ಪಲಿ ಮಾರುತ್ತೇವೆ. ಆದರೆ, ಬೇರೆ ಕಡೆ ಕೆಲವರು ಕಳಪೆ ಕಚ್ಚಾವಸ್ತು ಬಳಸಿ, ಕಡಿಮೆ ದರಕ್ಕೆ ಮಾರುತ್ತಾರೆ. ಅಲ್ಲಲ್ಲಿ ಚೀನಾ ಮಾಡೆಲ್‌ಗಳೂ ಬರುತ್ತಿವೆ. ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ. ಪ್ರತಿ ಗುರುವಾರ ಕಾರ್ಮಿಕರಿಗೆ ಸಂಬಳ ಕೊಡಲು ಕಷ್ಟ. ಮಳೆಗಾಲದಲ್ಲಿ ನಾಲ್ಕು ತಿಂಗಳು ಕೆಲಸವೇ ಇರಲ್ಲ. ಹಾಗಾಗಿ ಸರ್ಕಾರವೇ ಸಮಿತಿ ರಚಿಸಿ, ಗುಣಮಟ್ಟಕ್ಕೆ ತಕ್ಕಂತೆ ಉತ್ಪನ್ನಕ್ಕೆ ಒಂದು ನಿರ್ದಿಷ್ಟ ದರ ನಿಗದಿಪಡಿಸಬೇಕು’ ಎನ್ನುತ್ತಾರೆ ಅದೇ ಊರಿನ ಮಹಾದೇವ ಕಾಂಬಳೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮದಭಾವಿಯಲ್ಲಿ ಕುಶಲಕರ್ಮಿಗಳು ಕೊಲ್ಹಾಪುರಿ ಚಪ್ಪಲಿ ತಯಾರಿಸುತ್ತಿರುವುದು

ಹೊಟ್ಟೆ-ಬಟ್ಟೆಗೇನೂ ತೊಂದರೆ ಇಲ್ಲ

ಮನೆ ಕೆಲಸ ಮಾಡುತ್ತಲೇ ಹಲವು ಮಹಿಳೆಯರು ಚಪ್ಪಲಿ ತಯಾರಿಕೆಯಲ್ಲಿ ತೊಡಗಿದ್ದು ಕಂಡುಬರುತ್ತದೆ. ಇದರಿಂದ ಹೆಚ್ಚಿನ ಗಳಿಕೆಯೇ ಆಗುವುದಿಲ್ಲ. ಆದರೆ ಹೊಟ್ಟೆ–ಬಟ್ಟೆಗೇನೂ ತೊಂದರೆ ಇಲ್ಲ ಎನ್ನುವವರೂ ಇದ್ದಾರೆ.

‘ನಾನು ಹತ್ತು ವರ್ಷಗಳಿಂದ ಮೆಟ್ಟುಗಳನ್ನು ಕೈಯಿಂದ ಹೊಲಿಯುತ್ತಿದ್ದೇನೆ. ಮನೆಯಲ್ಲೇ ಕೆಲಸ. ದಿನಕ್ಕೆ ₹200 ರಿಂದ ₹300 ಗಳಿಸುತ್ತೇನೆ’ ಎಂದು ರೇಖಾ ಭಂಡಾರೆ ಹೇಳಿದರೆ, ‘ನಾನು ಚಪ್ಪಲಿಯ ಉಂಗುಷ್ಟವನ್ನು (ಹೆಬ್ಬೆರಳಿಗೆ ಆಧಾರವಾಗುವ ಪಟ್ಟಿ) ಸಿದ್ಧಪಡಿಸುತ್ತೇನೆ. ಈ ಕೆಲಸ ಬದುಕಿಗೆ ಆಧಾರವಾಗಿದೆ’ ಎಂದರು ಶೋಭಾ ಹೊನಖಂಡೆ.

ಗಡಿಯಲ್ಲಿ ಈ ಮೆಟ್ಟುಗಳಿಗೆ ‘ಹೀಟ್‌ ಕಂಟ್ರೋಲರ್‌’ ಎಂತಲೂ ಹೆಸರುಂಟು. ‘ನಮ್ಮೂರಿನಲ್ಲಿ ಯಾರದ್ದಾದರೂ ಕಣ್ಣು ಉರಿಯಲು ಆರಂಭಿಸಿದರೆ, ಕೊಲ್ಹಾಪುರಿ ಚಪ್ಪಲಿ ಧರಿಸುವಂತೆ ಹಿರಿಯರು ಹೇಳುತ್ತಿದ್ದರು. ಶರೀರದ ಉಷ್ಣತೆ ಹೀರಬಲ್ಲ ಅಷ್ಟೊಂದು ಶಕ್ತಿ ಇದಕ್ಕಿದೆ’ ಎಂದು ಹೆಮ್ಮೆಯಿಂದ ಹೇಳುತ್ತ ತಾವು ಸಿದ್ಧಪಡಿಸುತ್ತಿದ್ದ ಚಪ್ಪಲಿಯನ್ನು ತೋರಿಸಿದರು ಮದಭಾವಿಯ ಮಾರುತಿ ಭಂಡಾರೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಹೆಚ್ಚಿನವರು ಕೊಲ್ಹಾಪುರಿ ಮೆಟ್ಟನ್ನು ಮೆಟ್ಟುತ್ತಾರೆ.

‘ನಮ್ಮಲ್ಲಿ ಚಪ್ಪಲಿ ತಯಾರಿಸಲು ಯಾರಿಗೂ ತರಬೇತಿ ಕೊಟ್ಟಿಲ್ಲ. ಬಾಲ್ಯದಿಂದಲೇ ಅದು ಕರಗತವಾಗಿ ಬಂದಿದೆ. ನಮ್ಮ ಘಟಕದಲ್ಲಿ ಆರು ಮಂದಿ ಕೆಲಸ ಮಾಡುತ್ತಾರೆ. ತಿಂಗಳಿಗೆ 800 ಜೋಡಿ ಚಪ್ಪಲಿ ತಯಾರಾಗುತ್ತವೆ. ನಮ್ಮಲ್ಲಿ  ದುಡಿಯುವ ಪುರುಷರಿಗೆ ದಿನಕ್ಕೆ ₹350, ಮಹಿಳೆಯರಿಗೆ ₹200 ಕೂಲಿ ಸಿಗುತ್ತದೆ’ ಎಂದು ಮಾರುತಿ ಹೇಳುತ್ತಾರೆ.

‘ಚೆನ್ನೈ, ಮುಗಳಖೋಡ, ಸೈದಾಪುರ, ಮಾಲಗಾಂವದಿಂದ ಕಚ್ಚಾವಸ್ತು ತರಲಾಗುತ್ತದೆ. ಇದನ್ನು ಸುಣ್ಣದ ನೀರಿನಲ್ಲಿ ನೆನೆಸಿದಾಗ, ಕೂದಲು ಬೇರ್ಪಡುತ್ತವೆ. ನಂತರ ಸಸ್ಯಗಳ ಎಲೆ, ಬೀಜ, ತೊಗಟೆ ಬಳಸಿ ವಿವಿಧ ಪ್ರಕ್ರಿಯೆ ಮೂಲಕ ಚರ್ಮ ಹದಗೊಳಿಸಲಾಗುತ್ತದೆ. ಬಳಿಕ ಅಳತೆಗೆ ತಕ್ಕಂತೆ ಅದನ್ನು ಕತ್ತರಿಸಿ, ಚ‍ಪ್ಪಲಿ ಹೊಲಿಯಲಾಗುತ್ತದೆ. ಬಂಗಾರದ ಬಣ್ಣದ ಝರಿ, ಕುಂಚದಿಂದ ಅಲಂಕರಿಸಲಾಗುತ್ತದೆ. ಕಪ್ಪು, ಕಂದು ಸೇರಿ ಹಲವಾರು ಬಣ್ಣಗಳಲ್ಲಿ ಚಪ್ಪಲಿಗಳೀಗ ಲಭ್ಯವಿವೆ’ ಎಂದು ಅಥಣಿ ಲೆದರ್ ಕ್ಲಸ್ಟರ್‌ನ ಕಾರ್ಯದರ್ಶಿ ಶಿವರಾಜ ಸೌದಾಗರ ಹೇಳುತ್ತಾರೆ.

ಕೊಲ್ಹಾಪುರಿ ಚಪ್ಪಲಿ ಹುಟ್ಟಿನ ಬಗ್ಗೆ ಯಾರ ಬಳಿಯೂ ನಿಖರವಾದ ಮಾಹಿತಿ ಇಲ್ಲ. ‘ಇದನ್ನು ಪರಿಚಯಿಸಿದ್ದು ನಾವು’ ಎಂದು ಬೆಳಗಾವಿ ಜಿಲ್ಲೆಯವರು ಹೇಳಿದರೆ, ‘ಮಹಾರಾಷ್ಟ್ರದಲ್ಲೇ ಇದು ಹುಟ್ಟಿ ಖ್ಯಾತಿ ಗಳಿಸಿದೆ’ ಎಂಬುದು ಮಹಾರಾಷ್ಟ್ರದವರ ವಾದ.

‘ಈ ಚಪ್ಪಲಿಗೆ 800 ವರ್ಷಗಳ ಇತಿಹಾಸವಿದೆ. 13ನೇ ಶತಮಾನದಲ್ಲಿ ಕೊಲ್ಹಾಪುರಿ ಚಪ್ಪಲಿ ತಯಾರಿಕೆ ಆರಂಭವಾಯಿತು. ಕೊಲ್ಹಾಪುರ ಸಂಸ್ಥಾನವನ್ನು ಛತ್ರಪತಿ ಶಾಹೂ ಮಹಾರಾಜರು ಆಳಿದ 20ನೇ ಶತಮಾನದಲ್ಲಿ ಇದಕ್ಕೆ ಮಾನ್ಯತೆ ಸಿಕ್ಕಿತು’ ಎಂದು ಕುಶಲಕರ್ಮಿಗಳು ಹೇಳುತ್ತಾರೆ.

ಕೊಲ್ಹಾಪುರಿ ಚಪ್ಪಲಿ

ಕೊಲ್ಹಾಪುರವೇ ಏಕೆ ಆಯ್ಕೆ?

‘ಕೊಲ್ಹಾಪುರ’ ಮಹಾರಾಷ್ಟ್ರದ ಪ್ರಮುಖ ಮಹಾನಗರ. ಇಲ್ಲಿ ಐತಿಹಾಸಿಕ ಮಹಾಲಕ್ಷ್ಮೀ ದೇವಸ್ಥಾನವಿದೆ. ದೇಶದ ವಿವಿಧೆಡೆಯಿಂದ ವರ್ಷವಿಡೀ ಇಲ್ಲಿಗೆ ಭಕ್ತರು, ಪ್ರವಾಸಿಗರು ಭೇಟಿ ಕೊಡುತ್ತಾರೆ. ಮದಭಾವಿ, ಅಥಣಿ, ನಿಪ್ಪಾಣಿಗೆ ಬೆಳಗಾವಿ ಹೋಲಿಸಿದರೆ, ಕೊಲ್ಹಾಪುರವೇ ಸಮೀಪವಿದೆ. ಹಾಗಾಗಿ ಉಭಯ ರಾಜ್ಯದವರು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಕೊಲ್ಹಾಪುರ ಮಾರುಕಟ್ಟೆಯನ್ನೇ ಆಶ್ರಯಿಸಿದ್ದಾರೆ. ಇದಲ್ಲದೆ, ದೆಹಲಿ, ಮುಂಬೈ, ಹೈದರಾಬಾದ್‌ ಮಾರುಕಟ್ಟೆಗೂ ಕಳುಹಿಸುತ್ತಾರೆ.

‘ಕೊಲ್ಹಾಪುರದಲ್ಲಿ ಚಪ್ಪಲಿ ಮಾರಾಟದ 150 ರಿಂದ 200 ಅಂಗಡಿಗಳಿವೆ. ಶಿವಾಜಿ ಪುತ್ಥಳಿ ಬಳಿ ‘ಚಪ್ಪಲ್ ಲೈನ್’ ಇದ್ದು, ಒಂದೇ ಕಡೆ 40ಕ್ಕೂ ಅಧಿಕ ಅಂಗಡಿಗಳಿವೆ. ಸೀಜನ್‌ ಅಂತೇನಿಲ್ಲ. ವರ್ಷವಿಡೀ ಇಲ್ಲಿ ಕೊಲ್ಹಾಪುರಿ ಚಪ್ಪಲಿ ಮಾರುತ್ತೇವೆ. ಸರಾಸರಿ ದರ ₹200ರಿಂದ ₹4 ಸಾವಿರದವರೆಗೆ ಇದೆ. ವಾರ್ಷಿಕ 10 ಲಕ್ಷಕ್ಕೂ ಅಧಿಕ ಜೋಡಿ ಚಪ್ಪಲಿಗಳನ್ನು ಮಾರಾಟ ಮಾಡುತ್ತೇವೆ. ಇದರಿಂದ ₹30 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ’ ಎನ್ನುತ್ತಾರೆ ವ್ಯಾಪಾರಿ ಶಶಿಕಾಂತ ವಾಟ್ಕರ್.

‘ಜಿಐ’ ಟ್ಯಾಗ್‌

ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸಾತಾರ, ಸೊಲ್ಲಾಪುರದಲ್ಲಿ ಸಿದ್ಧವಾಗುವ ಕೊಲ್ಹಾಪುರಿ ಚಪ್ಪಲಿಗಳಿಗೆ 2019ರಲ್ಲಿ ಭೌಗೋಳಿಕ ಸೂಚಕ(ಜಿಐ) ಟ್ಯಾಗ್ ಸಿಕ್ಕಿದೆ. ಈ ಚಪ್ಪಲಿಗೆ ‘ಕೊಲ್ಹಾಪುರೀಸ್‌’ ಎಂಬ ಪದ ಬಳಸುವ ಹಕ್ಕನ್ನು ಅಲ್ಲಿನ ಕುಶಲಕರ್ಮಿಗಳು ಪಡೆದಿದ್ದಾರೆ. ಆದರೆ, ಅಥಣಿ, ಮದಭಾವಿಯಲ್ಲಿ ಚಪ್ಪಲಿ ಸಿದ್ಧಪಡಿಸುವ ಬಹುತೇಕರಿಗೆ ಇದರ ಬಗ್ಗೆ ಗೊತ್ತೇ ಇಲ್ಲ.

ಮದಭಾವಿಯಲ್ಲಿ ಕುಶಲಕರ್ಮಿಗಳು ಕೊಲ್ಹಾಪುರಿ ಚಪ್ಪಲಿ ತಯಾರಿಸುತ್ತಿರುವುದು 

ಬೇಕಿದೆ ಬ್ರ್ಯಾಂಡಿಂಗ್

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣವೊಂದರಲ್ಲೇ ಒಂದೂವರೆ ಸಾವಿರಕ್ಕೂ ಅಧಿಕ ಕುಶಲಕರ್ಮಿಗಳು ಕೊಲ್ಹಾಪುರಿ ಚಪ್ಪಲಿ ತಯಾರಿಸುತ್ತಾರೆ. ‘ನಮಗೆ ಉತ್ತಮ ವರಮಾನ ಸಿಗಬೇಕಾದರೆ ಬೆಳಗಾವಿ ಅಥವಾ ಅಥಣಿ ಹೆಸರಿನಲ್ಲೇ ಅವುಗಳ ಬ್ರ್ಯಾಂಡಿಂಗ್ ಮಾಡಬೇಕು. ಲಿಡ್ಕರ್‌ನವರು ಅಂತರರಾಷ್ಟ್ರೀಯ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ನಮ್ಮ ಉತ್ಪನ್ನ ನಿಯಮಿತವಾಗಿ ಖರೀದಿಸಬೇಕು’ ಎನ್ನುತ್ತಾರೆ ಸ್ಥಳೀಯ ಉತ್ಪಾದಕರು.

‘ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಅಥಣಿ, ಮದಭಾವಿಯಲ್ಲಿ ತಯಾರಾಗುವ ಚಪ್ಪಲಿಗಳನ್ನು ‘ಅಥಣಿ’ ಬ್ರ್ಯಾಂಡ್‌ ಹೆಸರಿನಲ್ಲೇ ಮಾರಾಟ ಮಾಡಲು ಯೋಜನೆ ರೂಪಿಸಿದ್ದೇವೆ. ಆನ್‌ಲೈನ್‌ ಜತೆಗೆ, ರಾಜ್ಯದಲ್ಲಿರುವ ಲಿಡ್ಕರ್‌ನ ಎಲ್ಲ ಮಳಿಗೆಗಳು, ಆನ್‌ಲೈನ್‌ ಶಾಪಿಂಗ್‌(lidkar.com) ಮತ್ತು ವಿಮಾನ ನಿಲ್ದಾಣದಲ್ಲೂ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದೇವೆ’ ಎಂದು ಲಿಡ್ಕರ್‌ನ ವ್ಯವಸ್ಥಾಪಕ ನಿರ್ದೇಶಕಿ ವಸುಂಧರಾ ಕೆ.ಎಂ. ಹೇಳುತ್ತಾರೆ. 

ಕೊಲ್ಹಾಪುರಿ ಚಪ್ಪಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.