ADVERTISEMENT

ಕುವೆಂಪು ಪದ ಸೃಷ್ಟಿ: ಅನ್ನರಣ

ಜಿ.ಕೃಷ್ಣಪ್ಪ
Published 3 ಮೇ 2025, 23:29 IST
Last Updated 3 ಮೇ 2025, 23:29 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಅನ್ನರಣ

ಈ ಪೃಥ್ವಿಯ ಮೇಲೆ ಪ್ರಾಣಿಗಳು ಪಕ್ಷಿಗಳು ಮಾನವರನ್ನೊಳಗೊಂಡ ಸಕಲ ಜೀವರಾಶಿಗಳು ಆಹಾರಕ್ಕಾಗಿ ಕಚ್ಚಾಡುತ್ತ ಹೋರಾಡಿ ಕಲಹದಿಂದ ರಣಕಣವಾಗಿಸಿರುವುದು ವಾಸ್ತವ ವಿಷಯ. (ರಣ = ಯುದ್ಧ, ಕಾಳಗ; ಕಲಹ). ಆದರೆ ಮನುಷ್ಯನಾದವನು ಸ್ವಾರ್ಥಪೂರಿತನಾಗಿ ಅಧಿಕಾರ ಬಂಡವಾಳಶಾಹಿ ಗುಣಗಳಿಂದ ವರ್ಣದ್ವೇಷಿಯಾಗಿ, ಜಾತಿ ಧರ್ಮ ದ್ವೇಷಿಯಾಗಿ, ಅಸಹಾಯಕ ದೀನ ದಲಿತರನ್ನು ಶೋಷಿಸುತ್ತಿರುವುದು ಕಠೋರ, ಕ್ರೂರ ಅಮಾನವೀಯ ನಡೆ. ಕುವೆಂಪು ಅವರು ಭಾರತದಲ್ಲಿ ಸದಾ ಅನ್ನಕ್ಕಾಗಿ, ನಡೆಯುತ್ತಿರುವ ಹಲವು ಬಗೆಯ ಕಲಹ ಹೋರಾಟಗಳನ್ನು ‘ಅನ್ನರಣ’ ಪದದಿಂದ ಚಿತ್ರಿಸಿದ್ದಾರೆ. ನಮ್ಮ ದೇಶ ಜನಸಂಖ್ಯಾಸ್ಫೋಟದಿಂದ ‘ಅನ್ನರಣದ ಭಾರತ’ವಾಗಿದೆ ಎಂದಿದ್ದಾರೆ. ಆ ಅನ್ನ ಕುರುಕ್ಷೇತ್ರದ ಅಗ್ನಿಯಲ್ಲಿ ಯಶಸ್ವಿಯಾಗಿ ಹೋರಾಡುತ್ತಿರುವ ರೈತನನ್ನು ‘ಹಲಾಯುಧದ ಭೀಷ್ಮಕಲಿ’ ಎಂದು ಬಣ್ಣಿಸಿದ್ದಾರೆ. ಅದು ಆಹಾರಕ್ಕಾಗಿ ಬೇಸಾಯ ಕಂಡುಹಿಡಿದು, ನೇಗಿಲು ಎಂಬ ಆಯುಧದಿಂದ ಹೊಲ ಉತ್ತು ಬೆಳೆ ತೆಗೆಯುವ ಈ ಲೋಕದ ಶೂರ ವ್ಯಕ್ತಿ ಎಂಬ ಅರ್ಥವನ್ನು ‘ಭೀಷ್ಮ’ ಪದ ಧ್ವನಿಸುತ್ತದೆ.ಅವನು ಸದಾ ಜಗತ್ತಿನ ಕ್ಷೇಮ, ಸುಖ, ಸಂತೋಷಕ್ಕಾಗಿ ದುಡಿದು ಆಹುತಿಯಾಗುತ್ತಿದ್ದಾನೆ. ಆ ತ್ಯಾಗ ಜೀವಿಯಾದ ಧನ್ಯ ಬೇಸಾಯಗಾರ (ಹಲಿ)ನಿಗೆ ನಮಸ್ಕಾರ ಎಂದು ಕಾವ್ಯ ರಚಿಸಿದ್ದಾರೆ.

ADVERTISEMENT

‘ಅನ್ನರಣದ ಭಾರತದಲಿ

ಕುರುಕ್ಷೇತ್ರದಗ್ನಿಯಲಿ

ಹಲಾಯುಧದ ಭೀಷ್ಮಕಲಿ,

ಜಗದ ಸೊಗಕೆ ಬೇಳ್ದಬಲಿ,

ನಮೋ ನಿನಗೆ, ಧನ್ಯಹಲಿ!

(ಕುಳದ ಕಲಿಗೆ – ಪ್ರೇತ-ಕ್ಯೂ)

ರತಿಯೋಕುಳಿ

ಕುವೆಂಪು ಅವರು ಸೂರ್ಯೋದಯವನ್ನು ಬಣ್ಣಿಸುತ್ತ ಅದು ದ್ವಾರ ತೆರೆದು ಬರುತ್ತಿದೆ. ಸ್ವರ್ಗ ಸ್ವರ್ಣ ಕಿರಣಗಳಿಂದ ನದಿಯ ಜಲವು ಸ್ವರ್ಣ ದ್ರವದಂತೆ ಆನಂದ ವರ್ಣದಿಂದಿದೆ. ಅದು ರತಿಮನ್ಮಥರ ಪ್ರೀತಿಯ ಶೃಂಗಾರದಾಟದ ಓಕುಳಿ ಎರಚಾಡಿದಂತಿದೆ ಎಂದಿದ್ದಾರೆ. ಅವರು ಆ ಮನೋಹರ ಬೆಳಗಿನ ಜಲ ಪ್ರಕೃತಿಯನ್ನು ‘ರತಿಯೋಕುಳಿ’ ಪದದಿಂದ ವರ್ಣಿಸಿರುವುದು ಅವರು ನಿಸರ್ಗದಲ್ಲಿ ಕಂಡ ಪ್ರೀತಿಯ ವಿಶೇಷ ಅಭಿವ್ಯಕ್ತಿಯಾಗಿದೆ.

‘ಕಾಣಿದೊ ಸರಸಿಯ ಜಲವಿಸ್ತೀರ್ಣಂ

ಸ್ವರ್ಣದ್ರವವೆನೆ ಸುಮನೋವರ್ಣಂ

ರತಿಯೋಕುಳಿಯಂತೆ!’

(ಇಂದ್ರ ದಿಗಂತದಿ - ಪಕ್ಷಿಕಾಶಿ)

ನೆಲವೆಣ್ಣಿನೊಳ್ನಗೆ

ನೆಲವೆಣ್ಣಿನೊಳ್ನಗೆ (ನಾ). ಭೂದೇವಿಯ ಚೆಲುವಾದ ನಗೆ

ಕುವೆಂಪು ಅವರು ಭೂಮಿಯ ಮೇಲೆ ಸ್ಫಟಿಕದಂತೆ ಹೊಳೆದು ಶೋಭಿಸುವ ಸರೋವರವನ್ನು ‘ನೆಲವೆಣ್ಣಿನೊಳ್ನಗೆ’ ಪದ ರೂಪಿಸಿ ಬಣ್ಣಿಸಿದ್ದಾರೆ. ಕವಿ ಸೃಷ್ಟಿಸಿರುವ ಆ ಪ್ರತಿಮೆಯಲ್ಲಿ ಭೂದೇವಿಯ ನಗುವೆ ನೀರಾಗಿ ಹರಿದು ಸರೋವರವಾಗಿದೆ!

ನೆಲವೆಣ್ಣಿನೊಳ್ನಗೆಯೆ ನೀರಾಯ್ತೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.