ADVERTISEMENT

ಕುವೆಂಪು ಪದ ಸೃಷ್ಟಿ: ಸಿಂಗಾರಸೊಗ

ಜಿ.ಕೃಷ್ಣಪ್ಪ
Published 17 ಮೇ 2025, 23:30 IST
Last Updated 17 ಮೇ 2025, 23:30 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಸಿಂಗಾರಸೊಗ

ಸಿಂಗಾರಸೊಗ (ನಾ). ಪ್ರಣಯದ ಸುಖ

ADVERTISEMENT

ಕುವೆಂಪು ಅವರು ಪರಸ್ಪರ ಒಲಿದು ಕೂಡಿದ ನಲ್ಲ ನಲ್ಲೆಯರ ಪ್ರಣಯದ ಸುಖವನ್ನು ‘ಸಿಂಗಾರಸೊಗ’ ಪದದಿಂದ ಹೀಗೆ ಶೃಂಗರಿಸಿದ್ದಾರೆ:

‘ಪೆಣ್ಣೊಲಿದ ನಲ್ಲನಿರೆ, ಗಂಡೊಲಿದ ನಲ್ಲೆಯಿರೆ,

ಸಿರಿಬಾಳ್ತೆ ಸಿಂಗಾರ ಸೊಗಕೆ ಹೊಯಿಕೈಯಿಹುದೆ ಪೇಳ್

ಬದುಕಿನಲಿ?’ 

ವ್ಯಥೆತಿಮಿರ

ವ್ಯಥೆತಿಮಿರ (ನಾ). ಯಾತನೆಯ ಅಂಧಕಾರ

ಶತ್ರುಘ್ನನೊಡನೆ ಅಯೋಧ್ಯೆಗೆ ಬಂದ ಭರತನು ತಾಯಿ ಕೈಕೆಯನ್ನು ನೋಡುತ್ತಾನೆ. ಅವಳಿದ್ದ ಸ್ಥಿತಿಯನ್ನು ಕುವೆಂಪು ಅವರು ವ್ಯಥೆತಿಮಿರ ಪರಿವೃತೆಯೆಂದು ಚಿತ್ರಿಸಿದ್ದಾರೆ. ಅದು ಅವಳ ನೋವು ಬಾಧೆಗಳೊಡನೆ ದುಃಖದಿಂದೊಡಗೂಡಿದ ಕತ್ತಲೆಯಿಂದ ಸುತ್ತುವರಿದಂತಿದ್ದುದನ್ನು ಸಮರ್ಥವಾಗಿ ಧ್ವನಿಸಿದೆ.

‘ವ್ಯಥೆತಿಮಿರ ಪರಿವೃತೆಯನಳ್ಕಜದಿನೀಕ್ಷಿಸುತೆ

ಬೆದರದೆಯೆ ಕಂದನಮ್ಮನ ಕಾಲ ಮೇಲುರುಳಿದನ್. 

ಚೈತನ್ಯಧುನಿ

ಚೈತನ್ಯಧುನಿ (ನಾ). ಜೀವಂತಿಕೆಯ ಹೊಳೆ

ಚೈತ್ರೋದಯದ ಕಾಡಿನ ಹೃದಯದಲ್ಲಿ ಮಾಧುರ್ಯದ ಹೊಳೆ ಹರಿಯುತ್ತ ಇಡೀ ಲೋಕದ ಸಸ್ಯ ಹಾಗೂ ಜೀವಸಂಕುಲಕ್ಕೆ ಜೀವ ನೀಡಿ ಪೋಷಿಸುತ್ತದೆ. ಕುವೆಂಪು ಅವರು ಆ ನದಿಯನ್ನು ‘ಚೈತನ್ಯಧುನಿ’ ಎಂದು ಕರೆದಿದ್ದಾರೆ. ‘ನೀರು’ ಪದದ ಇನ್ನೊಂದು ಅರ್ಥ ‘ಜೀವನ’. ಅದನ್ನು ಅವರು ಹೀಗೆ ಚಿತ್ರಿಸಿದ್ದಾರೆ.

‘ಚೈತ್ರೋದಯದ ವಿಪಿನ ಹೃದಯದೊಳ್ ಚೈತನ್ಯ

ಧುನಿಯಾಗಿ ಬೇರು ಬೇರುಗಳಲ್ಲಿ ಕೊಂಬೆಯಲಿ,

ಪರ್ಣ ಪರ್ಣಾಂತರಂಗದಿ, ಮುದ್ದು ಮೊಗ್ಗಿನಲಿ

ಸೌಂದರ್ಯಮೆ ಶರೀರಮಂ ತಾಳ್ದು’

ದನಿಹನಿ

ರಾಮಸೀತೆಯರು ಪಂಚವಟಿಯಲ್ಲಿ ಅಯೋಧ್ಯೆಯನ್ನು ನೆನಪಿಸಿಕೊಳ್ಳುತ್ತ ಸಂಭಾಷಿಸುವರು. ಅವರು ಕೇಳುವ ಕ್ರೌಂಚಪಕ್ಷಿಯ ಇಂಪಾದ ಇಂಚರವನ್ನು ಕುರಿತು ರಾಮ ಹೇಳುವಾಗ, ಅದನ್ನು ಕುವೆಂಪು ಅವರು ‘ನ’ ಕಾರದ ಒಳಪ್ರಾಸದ ‘ದನಿಹನಿ’ ಪದದಿಂದ ಬಣ್ಣಿಸಿರುವರು.

‘ಆಹಾ!

ನಮ್ಮರಮನೆಯ ತೋಂಟದೊಳ್ ಕುಳಿತು ನಲಿವಂದು

ಈ ತೆರನ ದನಿಹನಿಯ ಸೋನೆಗಿಂತುಟೆವಲಂ

ಕಿವಿ ತಣಿದೆವಲ್ತೆ?’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.