ADVERTISEMENT

ಕುವೆಂಪು ಪದ ಸೃಷ್ಟಿ: ಅಳಲ್ವೆಂಕೆ

ಜಿ.ಕೃಷ್ಣಪ್ಪ
Published 31 ಆಗಸ್ಟ್ 2025, 1:21 IST
Last Updated 31 ಆಗಸ್ಟ್ 2025, 1:21 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಅಳಲ್ವೆಂಕೆ

ಅಳಲ್ವೆಂಕೆ, ಅಳಲುರಿ (ನಾ). ದುಃಖದ ಬೇಗೆ; ಅಳಲ ಬೆಂಕಿ

ದುಃಖ ಬೆಂಕಿಗೆ ಸಮನಾದುದು ಎಂದು ಪಾಳಿ ಸಾಹಿತ್ಯದಲ್ಲಿದೆ. ಬುದ್ಧನ ಉಪದೇಶಗಳಲ್ಲಿಯೂ ಇದೆ.

ADVERTISEMENT

ರಾಮನನ್ನು ಗಂಗೆಯ ಬಳಿ ಬೀಳ್ಕೊಟ್ಟು ಬಂದ ಸುಮಂತನ ನುಡಿಕೇಳಿ, ದಶರಥನು ಸಿಡಿಲ ಹೊಡೆತಕ್ಕೆ ಸಿಕ್ಕಂತೆ ಮೂರ್ಛೆ ಹೋಗುವನು. ಶೈತ್ಯೋಪಚಾರದಿಂದ ಮೂರ್ಛೆ ನಿವಾರಿಸಿ ಗುರುಗಳಾದ ವಾಸುದೇವ ವಸಿಷ್ಠಾದಿಗಳು ತಾವೇ ದುಃಖಿಸುತ್ತ ಸಮಾಧಾನ ಹೇಳುವರು. ಆಗಿನ ದೊರೆಯ ತೀವ್ರ ದುಃಖವನ್ನು ಕುವೆಂಪು ‘ಅಳಲ್ವೆಂಕೆ’ ಪದದಿಂದ ಹೀಗೆ ಬಣ್ಣಿಸಿದ್ದಾರೆ:

‘ಗುರುವರೇಣ್ಯರ ನುಡಿಗೆ ದೊರೆಯೆರ್ದೆಯಳಲ್‍ವೆಂಕೆ

ನೂರ್ಮಡಿಸುತುಕ್ಕಿದುದು.’ 

ನಿಲ್ನೀರು

ನಿಲ್ನೀರು (ನಾ). ನಿಂತನೀರು; ದಡದ ಬಳಿಯಿರುವ ನೀರು

ರಾಮ ಸೀತೆ ಲಕ್ಷ್ಮಣರು ಋಷಿ ಭರದ್ವಾಜರ ಆಶ್ರಮದಲ್ಲಿದ್ದು, ಅವರ ಸೂಚನೆಯಂತೆ ಚಿತ್ರಕೂಟಕ್ಕೆ ಹೋಗುವರು. ಕುವೆಂಪು ಅವರು ದಡದ ನೀರನ್ನು ‘ನಿಲ್ನೀರು’ ಎಂದು ಕರೆದು, ತೆಪ್ಪವನ್ನು ಹರಿನೀರಿಗೆ ನೂಕಿದ್ದನ್ನು ಹೀಗೆ ರೇಖಿಸಿದ್ದಾರೆ.

‘ಲಕ್ಷ್ಮಣನದಂ

ದಡದೆಡೆಯ ತೆಳ್ಳೆ ನಿಲ್‍ನೀರಿಂದೆ ಹರಿನೀರ್ಗೆ

ನೂಂಕಿದನ್ ನೀಳ್ಗಳುಗಳಿಂ.’

ತಲೆಮೆದೆ

ತಲೆಮೆದೆ (ನಾ). ತಲೆಯ ಬಣವೆ, ರಾಶಿ

ಯುದ್ಧದ ಎರಡನೆಯ ದಿನ ರಾವಣನಿಂದ ಮೃತ್ಯುನೇಮ (ಗೆಲ್ಲು ಅಥವಾ ಸಾಯಿ ಎಂಬ ನಿಯಮ) ಪಡೆದು ಬಂದ ವಜ್ರದಂಷ್ಟ್ರನು ನಡೆಸಿದ ಕ್ರೌರ್ಯದಿಂದ ಅಂಗದ ತತ್ತರಿಸಿ ಹೋಗುವನು. ಆ ರಾಕ್ಷಸನು ಹೊಲಕೊಯ್ಯುವ ದೊಡ್ಡ ಒಕ್ಕಲಿಗನಂತೆ ವಾನರರನ್ನು ತರಿದು ಹಾಕಿದ ಉಪಮಾನದಲ್ಲಿ ಕುವೆಂಪು ಅವರು ‘ತಲೆಮೆದೆ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ.

‘ಕಿಡಿಗರೆವ ತನ್ನ ಕರಚಕ್ರಮಂ

ಗಿರ್ರನೆ ತಿರುಗಿಸುತ್ತಾ ಕರ್ಬುರಂ ಕೆಯ್‍ಗೊಯ್ವ

ಪೇರೊಕ್ಕಲಿಗನಂತೆ ತರಿದೊಟ್ಟಿದನು ಬಣಬೆಯಂ

ಹಗೆಯ ತಲೆಮೆದೆಗಳಿಂ’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.