ನೀರ್ಮಸಣ
ನೀರ್ಮಸಣ (ನಾ). ನೀರು ಶ್ಮಶಾನ
ಮೇಘನಾದನ ಮಾತಿನಲ್ಲಿ ಕುವೆಂಪು ಅವರು ‘ನೀರ್ಮಸಣ’ ಪದ ಬಳಸಿ, ಅವನ ಸಾಹಸದ ಉದ್ಗಾರವನ್ನು ಹೀಗೆ ಅಭಿವ್ಯಕ್ತಿಸಿದ್ದಾರೆ.
‘ಕಡಲ್
ನೀರ್ಮಸಣವಾಗದಿರಲವರಿಗೆ, ಸಮಾಧಿಯಂ
ತನ್ನ ಮಣ್ಣೊಡಲೊಳೀ ಲಂಕೆ ರಚಿಪುದೆ ದಿಟಂ
ಶತ್ರುಗಾತ್ರಕ್ಕೆ!’
ಚಿತ್ತನಾರಾಚ
ಚಿತ್ತನಾರಾಚ (ನಾ). ಚಿತ್ತವೆಂಬ ಬಾಣ
ಶ್ರೀ ರಾಮಚಂದ್ರನು ಕಡಲಿನ ಎದುರು ಪುಣ್ಯವೇದಿಕೆಯಲ್ಲಿ ಕುಳಿತು ‘ಮರಣ ಅಥವಾ ಶರಧಿಯನ್ನು ದಾಟುವುದು’ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳುವನು. ಅವನ ರೌದ್ರವನ್ನು ತಡೆ ಎಂದು ವರುಣನು ವಿಶ್ವಕರ್ಮನಿಗೆ ಹೇಳುವನು. ರುದ್ರ ಭೀಷಣ ರಾಮನನ್ನು ಬಣ್ಣಿಸುತ್ತ ಕುವೆಂಪು ಅವರು ‘ಚಿತ್ತನಾರಾಚ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ:
‘ಲೋಕಪ್ರಳಯಕರ ಭಯಂಕರ ಕಾರ್ಯಕ್ಕೆ
ಕೋಪಚಾಪಕೆ ಘೋರ ಚಿತ್ತನಾರಾಚಮಂ
ಸಂಧಾನಗೈವ ವಿಕಟಕ್ರಿಯಾ ನಿಕಟನಂ
ಬಳಿಸಾರ್’
ವಾಗಸಿಪತ್ರ
ವಾಗಸಿಪತ್ರ (ನಾ). ಮಾತಿನ ಕತ್ತಿಯ ಅಲಗು
ಮೈಂದ ಮತ್ತು ದ್ವಿವಿದರು ರಾಘವನ ಅಪೇಕ್ಷೆ ತಿಳಿಸಲು ವಿಭೀಷಣನಲ್ಲಿಗೆ ಬರುವರು. ಮೈಂದನ ನುಡಿಗಳಿಂದ ವಿಭೀಷಣ ಘಾಸಿಗೊಳ್ಳುವನು. ಆಗ ಅವನು ಹೇಳುವ ಮಾತಿನಲ್ಲಿ ಕುವೆಂಪು ‘ವಾಗಸಿಪುತ್ರ’ ನುಡಿರಚಿಸಿ ಹೀಗೆ ಆಡಿಸಿದ್ದಾರೆ:
‘ಕ್ರೂರ ವಾಗಸಿಪತ್ರದಿಂದೆನ್ನ ಹೃದಯಮಂ
ಸೀಳುತಿರ್ಪ್ಪಯ್.’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.