ADVERTISEMENT

ಕುವೆಂಪು ಪದ ಸೃಷ್ಟಿ: ಸುಟ್ಟಿದೋರ್ಕೆ

ಜಿ.ಕೃಷ್ಣಪ್ಪ
Published 23 ಆಗಸ್ಟ್ 2025, 23:30 IST
Last Updated 23 ಆಗಸ್ಟ್ 2025, 23:30 IST
   

ಸುಟ್ಟಿದೋರ್ಕೆ

ಸುಟ್ಟಿದೋರ್ಕೆ (ಕ್ರಿ). ಬೆರಳನ್ನು ತೋರುವುದರ ಮೂಲಕ ಸೂಚಿಸುವಿಕೆ.

ಸುಗ್ರೀವನಿಗೆ ಹಾಸ್ಯ ಕೋವಿದನಾದ ಗಜನು ಒಂದು ಪ್ರಸಂಗವನ್ನು ಹೇಳುವನು. ತಮಗೆ ಓರ್ವನು ಸಿಗಲು ಅವನಿಗೆ ಮದಿರೆ ಕುಡಿಸಿ, ಲಂಕೆ ಎಲ್ಲಿದೆ ಎಂದು ಪೀಡಿಸಲು ಅವನು ಬೆರಳಿಂದ ತೋರಿಸಿದ ದಿಕ್ಕಿಗೆ, ಮಹೇಂದ್ರಾಚಲಕ್ಕೆ ಬಂದೆವು. ಆ ಘಟನೆಯಲ್ಲಿ ಬೆರಳು ತೋರಿ ಸೂಚಿಸುವುದನ್ನು ‘ಸುಟ್ಟಿದೋರ್ಕೆ’ ಪದದಿಂದ ಹೀಗೆ ಅಭಿವ್ಯಕ್ತಿಸಿದ್ದಾರೆ:

ADVERTISEMENT

‘ಬೀಸಾಟಮನೆ ಸುಟ್ಟಿದೋರ್ಕೆಗೆ ಗೆತ್ತು ನಾಮ್

ಬಂದೆವಿಲ್ಲಿಗೆ ಮಹೇಂದ್ರಾಚಲಕೆ!’ 

ಸಿಡಿರೋಷ

ಸಿಡಿರೋಷ (ನಾ). ಅತಿಯಾದ ರೋಷ; ಅಧಿಕವಾದ ಕ್ರೋಧ

ಒಂದು ಮಹೋಪಮೆಯಲ್ಲಿ ಬೇಡರ ಪಡೆ ಸಿಂಹಿಣಿಯನ್ನು ಹಿಡಿದಿರುವುದನ್ನು ಅದರ ಗೋಳಿನ ಅರಚುವಿಕೆಯಿಂದ ಸಿಂಹ ಅರಿಯುತ್ತದೆ. ಅದರ ಉಕ್ಕಿ ಬಂದ ಕ್ರೋಧವನ್ನು ಕುವೆಂಪು ‘ಸಿಡಿರೋಷ’ ಪದ ರೂಪಿಸಿ ಹೀಗೆ ಬಣ್ಣಿಸಿದ್ದಾರೆ:
‘ಗುಡುಗುಡಿಪ

ಸಿಡಿರೋಷಮುಕ್ಕಿ, ತಾಂ ನಿಂತ ಬಂಡೆಯನಾನೆಯೊರ್

ಮಮಡೆಯಂಗೆತ್ತು, ನಖದಿಂದವ್ವಳಿಸೆ

ಪಕ್ಷಿಯಕ್ಷತೆ

ಪಕ್ಷಿಯಕ್ಷತೆ (ನಾ). ಪಕ್ಷಿಗಳ ಅಕ್ಷತೆ

ಕುವೆಂಪು ಅವರು ಅಶೋಕವನದ ಒಂದು ಬೆಳಗನ್ನು ಉಪಮಾನದಲ್ಲಿ ಚಿತ್ರಿಸುವಾಗ ‘ಪಕ್ಷಿಯಕ್ಷತೆ’ ಪದ ರೂಪಿಸಿ ಹೀಗೆ ಪ್ರಯೋಗಿಸಿದ್ದಾರೆ:

‘ಮೂಡಲೆತ್ತಿದಾ ಉಷೆಯ ಆರತಿಗೆ ಮಂಗಳಗಾನಮಂ ಪಾಡಿ

ಸೇಸೆಯಂ ತಳಿವಂತೆ, ಲಕ್ಷಪಲ್ಲವಿಯುಲಿವ

ಪಕ್ಷಿಯಕ್ಷತೆಯೆರಚಿದಳು ಅಶೋಕವನಿಕಾ ಲಕ್ಷ್ಮಿ’’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.