ADVERTISEMENT

ಪೇಟ ಕಟ್ಟುವವರ ಪುಟ್ಟ ಕಥೆ..!

ಸುಷ್ಮಾ ಸದಾಶಿವ್
Published 23 ಡಿಸೆಂಬರ್ 2019, 19:30 IST
Last Updated 23 ಡಿಸೆಂಬರ್ 2019, 19:30 IST
ಪೇಟಗಳು
ಪೇಟಗಳು   

ಪುತ್ತೂರಿನ ಬೋಳುವಾರು ನಿವಾಸಿ ಕಿರಣ್ ಚೆಟ್ಟಿಯಾರ್‌ 22 ವರ್ಷಗಳಿಂದ ವೈವಿಧ್ಯಮಯವಾದ, ಕಲಾತ್ಮಕ ಪೇಟಗಳನ್ನು ತಯಾರಿಸುತ್ತಿದ್ದಾರೆ. ಇವರು ತಯಾರಿಸುವ ಪೇಟೆಗಳು ಬಣ್ಣ, ಅಲಂಕಾರ ಎಲ್ಲದರಲ್ಲೂ ವಿಭಿನ್ನವಾಗಿರುತ್ತವೆ. ಹಾಗಾಗಿ ಇವರನ್ನು ಪುತ್ತೂರಿನಲ್ಲಿ ಸುತ್ತ ಮುತ್ತ ಪೇಟ ದೊರೆ ಕಿರಣ್‌ ಎಂದೇ ಗುರುತಿಸುತ್ತಾರೆ!

ಕಿರಣ್‌ಗೆ ಪೇಟ ತಯಾರಿಸುವ ಕಲೆ, ತಂದೆ ಕೆ.ಶಿವರಾಮ್‌ ಚೆಟ್ಟಿಯಾರ್‌ ಅವರಿಂದ ಬಂದ ಬಳುವಳಿ. ಆ ಕಲೆಯನ್ನು ಮುನ್ನಡೆಸುತ್ತಾ, ಇದನ್ನೇ ಉದ್ಯೋಗ ವನ್ನಾಗಿಸಿಕೊಂಡಿದ್ದಾರೆ.

ಈ ಪೇಟ ತಯಾರಿಕೆ ಹಿಂದೆ ಒಂದು ಕಥೆ ಇದೆ. 36 ವರ್ಷ ಗಳ ಹಿಂದೆ, ಕಿರಣ್ ಹಿರಿಯ ಅಣ್ಣ ಉದಯ ಕುಮಾರ್ ಮದುವೆಗಾಗಿ ಅವರ ತಂದೆ, ₹1300 ಕೊಟ್ಟು ಕೇರಳದ ಕಲ್ಲಿಕೋಟೆಯಿಂದ ಪೇಟ ತರಿಸಿದ್ದರು. ಪೇಟ ತಂದ ಮೇಲೆ ಅವರಿಗೆ ‘ಇದಕ್ಕಾಗಿ ಇಷ್ಟೊಂದು ಹಣ ಕೊಡಬೇಕಾಗಿಬಂತಲ್ಲ’ ಎಂದು ಬೇಸರವಾಯಿತು. ತಂದಿದ್ದ ಪೇಟವನ್ನು ನೋಡುತ್ತಾ, ಇದನ್ನು ಹೇಗೆ ತಯಾರಿಸಿದ್ದಾರೆಂದು ಯೋಚಿಸುತ್ತಾ, ನಾಲ್ಕೈದು ಬಾರಿ ಬಿಚ್ಚಿ–ಕಟ್ಟಿ, ಬಿಚ್ಚಿ–ಕಟ್ಟಿ ಮಾಡಿದರು.

ADVERTISEMENT

‘ಅರೆ, ಇಷ್ಟೆನಾ’ ಎನ್ನುತ್ತಾ ತಾವೂ ಪೇಟ ತಯಾರಿಕೆ ಶುರು ಮಾಡಿದರು. ಹೀಗೆ ಪ್ರಾಯೋಗಿಕವಾಗಿ ಶುರುವಾದ ಪ್ರಯತ್ನ, ಮುಂದೆ ನಿತ್ಯದ ಕಾಯಕವಾಯಿತು. ಆ ವೇಳೆ ತಂದೆಯ ಪೇಟ ತಯಾರಿಕೆಯಲ್ಲಿ ನೆರವಾಗುತ್ತಿದ್ದ ಮಗ ಕಿರಣ್, ಮುಂದೆ ಪದವಿ ಮುಗಿಸಿದ ಮೇಲೆ ಉದ್ಯೋಗ ಅರಸಿ ಹೋಗದೇ, ಇದನ್ನೇ ಉದ್ಯೋಗವಾಗಿಸಿಕೊಂಡರು. ಈಗ ಕಿರಣ್‌ ತಯಾರಿಸುವ ಪೇಟಗಳಿಗೆ ರಾಜ್ಯ, ಸೇರಿದಂತೆ ತಮಿಳುನಾಡು, ಕೇರಳ, ಆಂದ್ರಪ್ರದೇಶಗಳಲ್ಲೂ ಮಾರುಕಟ್ಟೆ ಇದೆ.

ಮನೆಯಲ್ಲೇ ಪೇಟ ತಯಾರಿಕೆ
ಬೊಳುವಾರಿನ ತಮ್ಮ ಮನೆಯಲ್ಲೇ ಪೇಟ ತಯಾರಿಸುತ್ತಾರೆ ಕಿರಣ್‌. ಇದಕ್ಕೆ ಬೇಕಾದ ಹೊಲಿಗೆಯಂತಹ ಕೆಲಸಗಳನ್ನು ಪತ್ನಿ ಯಾಮಿನಿ ಮಾಡಿಕೊಡುತ್ತಾರೆ.

ಪೇಟ ತಯಾರಿಕೆಗೆ ಹೆಚ್ಚಾಗಿ ಕಾಟನ್ ಅಥವಾ ನೈಲಾನ್ ಬಟ್ಟೆಗಳನ್ನು ಉಪಯೋಗಿಸುತ್ತಾರೆ. ಇದರ ಜೊತೆಗೆ ರಟ್ಟು, ಸೂಜಿ, ನೂಲು, ಗರಿ, ಗಮ್ ಸ್ಪಾಂಜ್, ವಿಭಿನ್ನ ಪ್ರಕಾರಗಳ ಪೆಂಡೆಂಟ್ ಹಾಗೂ ಜನರ ಅಭಿರುಚಿ ಆಧರಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ಉಪಯೋಗಿಸುತ್ತಾರೆ. ಮಧುಮಗನಿಗೆ ತೊಡಿಸುವ ಪಾರಂಪರಿಕ ಪೇಟಾದಿಂದ ಹಿಡಿದು ಆಧುನಿಕ ಶೈಲಿಯ ಪೇಟಗಳನ್ನೂ ಸಿದ್ಧಪಡಿಸುತ್ತಾರೆ. ಅಭಿರುಚಿಯ ಜತೆಗೆ, ಆಚಾರ-ವಿಚಾರ, ಸಂಪ್ರದಾಯ ಮತ್ತು ಟ್ರೆಂಡ್‌ಗಳಿಗೆ ಅನುಸಾರವಾಗಿಯೂ ಪೇಟ ತಯಾರಿಸುತ್ತಾರೆ. 15 ದಿನಗಳ ಒಳಗೆ 50 ಪೇಟಗಳನ್ನು ಮಾಡಿಕೊಡುತ್ತಾರೆ. ಇಲ್ಲಿವರೆಗೂ ₹150ರಿಂದ ಸಾವಿರಾರು ಬೆಲೆಯ ಪೇಟಗಳನ್ನು ಮಾಡಿಕೊಟ್ಟಿದ್ದಾರೆ.

ಕರ್ನಾಟಕ, ಮುಂಬೈ, ತಮಿಳುನಾಡು, ರಾಜಸ್ಥಾನಿ ಶೈಲಿಯ ಪೇಟಗಳನ್ನು ತಯಾರಿಸಬಲ್ಲರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಾಸುಕೊಕ್ಕಾಗಿರುವ ಕಂಬಳ ಕ್ರೀಡೆಗಳಲ್ಲಿ ಬಳಸುವ ಪೇಟಗಳನ್ನು ಇವರೇ ತಯಾರಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಪೇಟ ಮಾಡಿ ಕೊಟ್ಟಿದ್ದಾರೆ. ಇವರ ಕೌಶಲ ಮೆಚ್ಚಿದ ಹೆಗ್ಗಡೆಯವರು ‘ಭೇಷ್’ ಎಂದು ಬೆನ್ನುತಟ್ಟಿದ್ದಾರಂತೆ. ಪೇಟ ಅಷ್ಟೇ ಅಲ್ಲ, ಬಾಸಿಂಗ, ಛದ್ಮವೇಷ ಹಾಗೂ ಕೃಷ್ಣಜನ್ಮಾಷ್ಟಮಿಯಂದು ರಾಧಾ-ಕೃಷ್ಣ ವೇಷಧಾರಿಗಳಿಗೆ ಬೇಕಾಗುವ ಪರಿಕರಗಳನ್ನು ಸಿದ್ಧಪಡಿಸುತ್ತಾರೆ.

ಪ್ರತಿ ತಿಂಗಳು 60 ರಿಂದ 70 ಪೇಟಗಳನ್ನು ತಮಿಳುನಾಡಿನ ಕೊಯಮತ್ತೂರಿಗೆ ಕೊಂಡಯ್ದು, ಹೋಲ್‌ಸೇಲ್‌ ನಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿಂದ ಹಿಂದಿರುಗುವಾಗ, ಪೇಟ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಖರೀದಿಸಿ ಕೊಂಡು ಬರುತ್ತಾರೆ. ಇದರ ಜೊತೆಗೆ ಕೇರಳ, ಆಂಧ್ರದ ಜವಳಿ ಮಳಿಗೆಯವರೊಂದಿಗೆ ವ್ಯಾಪಾರದ ಬಾಂಧವ್ಯ ಬೆಳೆಸಿಕೊಂಡಿ ದ್ದಾರೆ. ತಮಿಳುನಾಡಿನ ಮಾರುಕಟ್ಟೆಯಲ್ಲಿ ಇವರ ಪೇಟಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಕೊಟ್ಟ ಮಾತಿಗೆ ತಪ್ಪಲಾರರು
ಕಿರಣ್‌ ಅವರ ತಂದೆ ಶಿವರಾಮ ಅವರಿಗೆ ಒಮ್ಮೆ ಸುರತ್ಕಲ್ ಮತ್ತು ಮಡಿಕೇರಿಯಿಂದ ಮದುವೆಗಾಗಿ ಎರಡು ಪೇಟ ಮಾಡಿಕೊಡಲು ಬೇಡಿಕೆ ಬಂದಿತ್ತು. ಆದರೆ ದುರಾದೃಷ್ಟವಶಾತ್ ಆ ಮದುವೆಯ ಮುಂಚಿನ ದಿನ ಇವರ ಪತ್ನಿ ತೀರಿಕೊಂಡಿದ್ದರು. ಆದರೆ ‘ಕೊಟ್ಟ ಮಾತು ತಪ್ಪಬಾರದು’ ಎಂದುಕೊಂಡು ಪತ್ನಿ ಶವವನ್ನು ಮನೆಯಲ್ಲೇ ಇಟ್ಟುಕೊಂಡು, ಅವರು ಪೇಟ ಕಟ್ಟಿಕೊಟ್ಟಿದರು. ಈಗ ಕಿರಣ್‌ ತಮ್ಮ ತಂದೆಯ ಮಾರ್ಗವನ್ನೇ ಪಾಲಿಸುತ್ತಿದ್ದಾರೆ. ಪೇಟ ಮಾರಾಟ ವಿಷಯದಲ್ಲಿ ಶಿಸ್ತನ್ನು ಅನುಸರಿಸುತ್ತಿದ್ದಾರೆ.

ವ್ಯಕ್ತಿಯ ತಲೆಯನ್ನು ನೋಡಿ, ಕಣ್ಣಳತೆಯಲ್ಲೇ ಇಷ್ಟೇ ಅಗಲದ ಪೇಟ ಸರಿ ಹೋಗುತ್ತೆ ಎಂದು ಹೇಳವಂತಹ ಕೌಶಲ ಕಿರಣ್ ಅವರದ್ದು. ಇಷ್ಟೆಲ್ಲ ಖ್ಯಾತಿಪಡೆದಿರುವ ಕಿರಣ್ ಅವರಿಗೆ, ಭವಿಷ್ಯದಲ್ಲಿ ಪೇಟ ಧರಿಸುವವರೇ ಇಲ್ಲವಾಗುತ್ತಾರೆ ಎಂಬ ಆತಂಕವೂ ಇದೆ. ‘ಇಂದಿನ ಯುವಕರು ಇಂತಹ ಶೈಲಿಗಳನ್ನು ಒಪ್ಪುವುದಿಲ್ಲ. ಅವರ ಮನೋಭವವನ್ನು ಕಂಡಾಗ ಮುಂದಿನ ಹತ್ತು ವರ್ಷಗಳಲ್ಲಿ ಪೇಟ ಧರಿಸುವವರ ಪ್ರಮಾಣವೇ ಕುಂದುತ್ತದೆ’ ವಿಷಾದಿಸುತ್ತಾರೆ ಅವರು.

ಪುತ್ತೂರಿಗೆ ವಲಸೆ ಬಂದವರು..
ಕಿರಣ್ ಅವರ ಮುತ್ತಜ್ಜ ಚಿನ್ನಯ್ಯ ಚೆಟ್ಟಿಯಾರ್ 120 ವರ್ಷಗಳ ಹಿಂದೆ ಕೊಯಮತ್ತೂರಿನಿಂದ ವಲಸೆ ಬಂದಿದ್ದರು. ‌ಅಗ ಪುತ್ತೂರಿನ ವೆಂಕಟರಮಣ ದೇವಾಲಯದ ಎದುರು ಚೆಟ್ಟಿಯಾರ್ ಅಂಗಡಿ ಇಟ್ಟು, ಬಳೆ ವ್ಯಾಪಾರ ಮಾಡುತ್ತಿದ್ದರು. ಜತೆಗೆ ಜಾಂಡಿಸ್ ಕಾಯಿಲೆಗೆ ಔಷಧ ನೀಡುತ್ತಿದ್ದರು. ಇದು ‘ಚೆಟ್ಟಿಯಾರ್ ಮದ್ದು’ ಎಂದೇ ಪ್ರಸಿದ್ಧಿಯಾಗಿತ್ತು. ಕಿರಣ್‌ ತಂದೆ ಶಿವರಾಮ್ ಚೆಟ್ಟಿಯಾರ್ ಆಂಧ್ರದವರು. ತಾಯಿ ತಮಿಳುನಾಡು ಹಾಗೂ ಪತ್ನಿ ಕೇರಳದವರು. ಇವರ ಮನೆಯಲ್ಲಿ ತಮಿಳು, ಮಲಯಾಳಂ, ತಮಿಳು, ಕನ್ನಡ, ಕೊಂಕಣಿ, ತುಳು, ಹಿಂದಿ ಭಾಷೆಗಳು ಹಾಸುಹೊಕ್ಕಾಗಿವೆ.

ಕಿರಣ್‌ ಚೆಟ್ಟಿಯಾರ್ಸಂಪರ್ಕ ಸಂಖ್ಯೆ: 9972993219

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.