
ಇಂದೋರ್ ಬೀದಿಯಲ್ಲಿ ಸಾಲು ಸಾಲು ಸೀರೆ ಅಂಗಡಿಗಳು ಸಿಗುತ್ತವೆ. ಎಲ್ಲ ಮಳಿಗೆಗಳಲ್ಲಿಯೂ ಅಲ್ಲಿನ ರಾಣಿ ಮಾ ಸಾಹೇಬ್ ಅವರ ಒಂದು ಸಾಮಾನ್ಯ ಭಾವಚಿತ್ರ ಕಾಣಸಿಗುತ್ತದೆ. ಮೈಸೂರು ರಾಜ್ಯದಲ್ಲಿ ಕ್ಷಾಮ ಬಂದು ನೇಕಾರರಿಗೆ ಕೆಲಸವಿಲ್ಲವಾಗಿತ್ತು. ಆಗ ಇವರನ್ನು ಮಾಹೇಶ್ವರಕ್ಕೆ ಕರೆಸಿ ಆಶ್ರಯ ನೀಡಿದ್ದು ಇದೇ ರಾಣಿ...
ಭಾರತದ ಅತ್ಯಂತ ಸ್ವಚ್ಛ ನಗರ ಖ್ಯಾತಿಯ ಮಧ್ಯಪ್ರದೇಶದ ಇಂದೋರ್‌ಗೆ ಪ್ರವಾಸ ಕೈಗೊಂಡಿದ್ದೆವು. ಮುಸ್ಸಂಜೆಯಲ್ಲಿ ಸುಮ್ಮನೇ ನಗರ ಸಂಚಾರ ಹೊರಟಾಗ ಬೀದಿಗಳಲ್ಲಿ ಎಲ್ಲಿಯಾದರೂ ಕಸ ಇದೆಯೇ ಎಂಬ ಕುತೂಹಲ. ಆದರೆ ಕಾಣಿಸಿದ್ದು ಸಾಲು ಸಾಲು ಸೀರೆಗಳ ಅಂಗಡಿಗಳು! ಕುತೂಹಲಕ್ಕಾಗಿ ಅಂಗಡಿಯೊಂದನ್ನು ಪ್ರವೇಶಿಸಿದ್ದಾಯ್ತು. ಅಲ್ಲಿ ಮೊದಲು ಕಂಡಿದ್ದು ಗೋಡೆಯ ಮೇಲಿದ್ದ ಚಿತ್ರ. ಕೈಯಲ್ಲಿ ಶಿವಲಿಂಗವನ್ನು ಹಿಡಿದು, ಬಿಳಿಸೀರೆಯನ್ನು ತಲೆಯ ಮೇಲೆ ಹೊದ್ದ ತೇಜಸ್ವಿ ಮಹಿಳೆ. ‘ಯಾರಿವರು, ನಿಮ್ಮ ತಾಯಿಯೇ’ ಎಂದದ್ದಕ್ಕೆ, ‘ಅವರು ನಮ್ಮೆಲ್ಲರ ತಾಯಿ, ಲೋಕಮಾತಾ..ಮಾ ಸಾಹೇಬ್’ ಎಂಬ ಉತ್ತರ ಸಿಕ್ಕಿತು.
ಆಸಕ್ತಿ ಹೆಚ್ಚಾಯಿತು. ಅಂಗಡಿ ಮಾಲೀಕರನ್ನು ಮಾತಿಗೆಳದಾಗ ಗೊತ್ತಾಗಿದ್ದು ಇಷ್ಟು.
ಮಾ ಸಾಹೇಬ್, 18ನೆಯ ಶತಮಾನದಲ್ಲಿದ್ದ ದೇವಿ ಅಹಿಲ್ಯಾಬಾಯಿ ಹೋಳ್ಕರ್. ಮರಾಠರ ಪೇಶ್ವಾ ಮನೆತನದವಳಾಗಿದ್ದು, ಎಂಟು ವರ್ಷಕ್ಕೆ ಮದುವೆಯಾಗಿ ಇಂದೋರ್ ಗೆ ಬಂದವಳು. ಚಿಕ್ಕ ವಯಸ್ಸಿಗೆ ಎರಡು ಮಕ್ಕಳು, 29 ರಲ್ಲಿ ವಿಧವೆ, ನಂತರ ಇಬ್ಬರೂ ಮಕ್ಕಳ ಸಾವು.. ಇದಿಷ್ಟು ವೈಯಕ್ತಿಕ ಬದುಕು. ಸತಿಯಾಗ ಹೊರಟವಳು ಸುಭದ್ರ ಮಾಳ್ವ ಸಾಮ್ರಾಜ್ಯ ಕಟ್ಟಿ ತನ್ನ ಜನಪರ ಕಾರ್ಯದಕ್ಷತೆಯ ಆಡಳಿತದಿಂದ ಇಂದಿಗೂ ಜನಮಾನಸದಲ್ಲಿ ಲೋಕಮಾತೆಯಾಗಿ ಬೇರೂರಿದ್ದಾಳೆ.
ನರ್ಮದಾ ನದಿಯ ತಟದಲ್ಲಿರುವ ಮಾಹೇಶ್ವರವು ಶತಮಾನಗಳಿಂದ ಸಂಸ್ಕೃತಿ, ಅಧ್ಯಾತ್ಮ ಮತ್ತು ಕೈಗಾರಿಕೆಯ ಪ್ರಮುಖ ಕೇಂದ್ರವಾಗಿತ್ತು. ಇದನ್ನು ಮಾಳ್ವ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿ ಸಮರ್ಥ ರಾಜ್ಯಭಾರ ನಡೆಸಿದ್ದರ ಜತೆ ನ್ಯಾಯಪರ ಆಡಳಿತಕ್ಕೆ ಹೆಸರಾದವಳು ಅಹಿಲ್ಯಾಬಾಯಿ. ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಅವಳ ಮುಖ್ಯ ಕೊಡುಗೆ ಮಾಹೇಶ್ವರಿ ಸೀರೆಗಳು. ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಬಲವನ್ನು ಒದಗಿಸುವ ಜತೆಗೇ ಪಾರಂಪರಿಕ ಕೌಶಲ್ಯಗಳನ್ನು ಸಂರಕ್ಷಿಸುವ ಉದ್ದೇಶ ಹೊಂದಿದ್ದ ರಾಣಿಗೆ ಇದಕ್ಕೆ ಸೂಕ್ತವೆನಿಸಿದ್ದು ಕೈಮಗ್ಗದ ಬಟ್ಟೆ. ಸ್ವತಃ ನೇಯ್ಗೆ ಮತ್ತು ವಿನ್ಯಾಸದಲ್ಲಿ ಆಸಕ್ತಿ ಇದ್ದುದ್ದರಿಂದ ಅಹಿಲ್ಯಾಬಾಯಿ 1760 ರಲ್ಲಿ ಸುತ್ತಮುತ್ತಲಿನ ಪ್ರದೇಶದಿಂದ ಕುಶಲ ನೇಕಾರರನ್ನು ತನ್ನ ರಾಜ್ಯಕ್ಕೆ ಕರೆಸಿಕೊಂಡು ಬೇಕಾದ ಸೌಲಭ್ಯ ನೀಡಿ ಈ ಯೋಜನೆ ಆರಂಭಿಸಿದಳು.
ಮೊದಲು ತಯಾರಾಗಿದ್ದು 9 ಗಜದ ನವಾರಿ ಸೀರೆಗಳು ಮತ್ತು ತಲೆಗೆ ಸುತ್ತುವ ರುಮಾಲು. ಆರಂಭದಲ್ಲಿ ರಾಜಮನೆತನದವರು ಮಾತ್ರ ಇದನ್ನು ಬಳಸುತ್ತಿದ್ದರು. ಆದರೆ ಇವುಗಳನ್ನು ಜನಪ್ರಿಯಗೊಳಿಸಲು ಮಾಹೇಶ್ವರಕ್ಕೆ ಆಗಮಿಸುತ್ತಿದ್ದ ಪ್ರತಿಷ್ಠಿತ ಗಣ್ಯರು-ಅತಿಥಿಗಳಿಗೆ ಉಡುಗೊರೆಯಾಗಿ ನೀಡುವ ಪದ್ಧತಿ ಆರಂಭವಾಯಿತು. ಉತ್ತಮ ಗುಣಮಟ್ಟದ ಜತೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿರಬೇಕು ಎಂದು ನಿರ್ಧರಿಸಿ ಅದಕ್ಕೆ ತಕ್ಕಂತೆ ವಿನ್ಯಾಸ ರೂಪಿಸಲಾಯ್ತು. ಕಾಲಕ್ರಮೇಣ ಈ ಸೀರೆಗಳ ಉತ್ಪಾದನೆ ಮತ್ತು ಜನಪ್ರಿಯತೆ ಹೆಚ್ಚಿದಂತೆ ಜನಸಾಮಾನ್ಯರೂ ಇದರತ್ತ ಆಕರ್ಷಿತರಾದರು. ಹೀಗೆ ಇವು ಭಾರತದೆಲ್ಲೆಡೆ ಹಾಗೂ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದವು. ರಾಣಿಯ ದೂರದರ್ಶಿತ್ವದ ಫಲದಿಂದ ನೇಕಾರಿಕೆ ವೃತ್ತಿ ಲಾಭದಾಯಕವಾಗಿ ಸಾವಿರಾರು ಜನರಿಗೆ ಬದುಕುವ ಮಾರ್ಗವಾಯಿತು; ಮಾಹೇಶ್ವರದ ಹೆಮ್ಮೆಯ ಗುರುತಾಗಿ ಪರಿಣಮಿಸಿತು.
ರೇಷ್ಮೆ ಮತ್ತು ಹತ್ತಿ ಎಳೆಗಳನ್ನು ಉಪಯೋಗಿಸಿ ಮಗ್ಗದಲ್ಲಿ ನೇಯಲಾಗುವ ಈ ಸೀರೆಗಳು ತಮ್ಮ ಚೆಲುವು, ಆಕರ್ಷಕ ಬಣ್ಣ, ವಿನ್ಯಾಸದ ಜತೆ ನುಣುಪಾಗಿ ಹಗುರವಾಗಿದ್ದು ಉಡಲು ಅನುಕೂಲವಾಗಿವೆ. ಆರಂಭದಲ್ಲಿ ಇವುಗಳನ್ನು ‘ಗರ್ಭ ರೇಷ್ಮಿ’ ಸೀರೆಗಳೆಂದು ಕರೆಯಲಾಗುತ್ತಿತ್ತು. ಇದರಲ್ಲಿ ಗರ್ಭ ರೇಷ್ಮೆ ಅಂದರೆ ನಿರ್ದಿಷ್ಟ ರೇಷ್ಮೆಹುಳುಗಳ ಜಾತಿಯ ಮೊಟ್ಟೆಗಳಿಂದ ತೆಗೆದ ಅತ್ಯುತ್ತಮ ದರ್ಜೆಯ ರೇಷ್ಮೆ ಎಳೆಗಳಿಗೆ ನೈಸರ್ಗಿಕ ಬಣ್ಣಗಳನ್ನೇ ಹಾಕಿ ನೇಯ್ದ ಬಟ್ಟೆ. ದಿನ ಕಳೆದಂತೆ ಇವು ತಯಾರಾಗುತ್ತಿದ್ದ ಮಾಹೇಶ್ವರದ ಹೆಸರಿನಿಂದ ಮಾಹೇಶ್ವರಿ ಸೀರೆಗಳೆಂದೇ ಪ್ರಸಿದ್ಧವಾಯಿತು.
ಈ ಸೀರೆಗಳಲ್ಲಿ ಕಂಡುಬರುವ ರೇಖೆಗಳು, ತ್ರಿಕೋನ, ಚೌಕಾಕಾರದ ವಿನ್ಯಾಸಗಳಿಗೆ ಮಾಹೇಶ್ವರ ಕೋಟೆಯ ಕಿಟಕಿಗಳು, ಮೆಟ್ಟಿಲುಗಳೇ ಸ್ಫೂರ್ತಿ. ಹಾಗೆಯೇ ಸುತ್ತಮುತ್ತಲೂ ಕಾಣುವ ಮಲ್ಲಿಗೆ-ಹತ್ತಿಯ ಹೂವು, ನರ್ಮದಾ ನದಿ, ಕಮಲ, ಹಂಸ, ನವಿಲು ಇವೆಲ್ಲವೂ ಸೀರೆಯ ಮೇಲಿನ ಪ್ರಮುಖ ಚಿತ್ತಾರಗಳು. ಏಳು ಹಂತಗಳಲ್ಲಿ ತಯಾರಾಗುವ ಒಂದು ಸಾಮಾನ್ಯ ಮಾಹೇಶ್ವರಿ ಸೀರೆಯ ನೇಯ್ಗೆಗೆ 4-10 ದಿನ ಬೇಕು. ಬೆಲೆ ₹2 ರಿಂದ ₹20 ಸಾವಿರದವರೆಗಿದೆ. ರಾಣಿಯ ದೂರದೃಷ್ಟಿ - ಸೃಜನಶೀಲತೆ ಫಲವಾಗಿ ರೂಪಗೊಂಡ ಈ ಸೀರೆಗಳು ಕಾಲ ಕಳೆದಂತೆ ಅನೇಕ ಬದಲಾವಣೆಗಳನ್ನು ಹೊಂದಿವೆ. ಈಗ ಸೀರೆ ರುಮಾಲು ಅಲ್ಲದೆ ಚೂಡಿದಾರ್, ಶರ್ಟ್,ಕರ್ಟನ್, ದಿಂಬಿನ ಕವರ್, ಹೀಗೆ ಎಲ್ಲದರಲ್ಲಿಯೂ ಮಾಹೇಶ್ವರಿ ಬಟ್ಟೆಯನ್ನು ಬಳಸಲಾಗುತ್ತಿದೆ.
ಜನರಿಗಾಗಿಯೇ ಅವರು ಬದುಕಿದರು. ಅಂದು ಅವರು ಮಾಡಿದ ಕೆಲಸದಿಂದ ಲಕ್ಷಾಂತರ ಕುಟುಂಬಗಳು ಸ್ವಾಭಿಮಾನದಿಂದ ಬಾಳುತ್ತಿವೆ. ಹಾಗಾಗಿ ಅವರು ಲೋಕಮಾತಾ. ಪವರ್ ಲೂಮ್ ಬಂದಂತೆ ಮಾಹೇಶ್ವರಿ ಸೀರೆಗಳ ಬೇಡಿಕೆ ಕುಗ್ಗಿತ್ತು. ಆದರೆ ರಾಣಿಯ ಮನೆತನದವರು ಈ ಸೀರೆಗಳನ್ನು ಮತ್ತೆ ಪುನರುಜ್ಜೀವನಗೊಳಿಸಿದ್ದಾರೆ ಎಂದು ಅಂಗಡಿ ಮಾಲೀಕ ಗೌರವದಿಂದ ಕೈ ಮುಗಿದರು.
ಮರುದಿನ ಅಹಿಲ್ಯಾಬಾಯಿ ವಾಸಿಸುತ್ತಿದ್ದ ಇಂದೋರ್‌ನ ರಾಜವಾಡೆಗೆ ಭೇಟಿ ನೀಡಿದೆವು. ಅದರ ಹಿಂದಿರುವ ಮ್ಯೂಸಿಯಂನಲ್ಲಿ ಗೊಂಬೆಗಳ ಮೂಲಕ ಆಕೆಯ ಜೀವನ ಕಥೆಯನ್ನು ತೆರೆದಿಡಲಾಗಿದೆ. ಹಾಗೆ ನೋಡುವಾಗ ಗಾಜಿನ ಪೆಟ್ಟಿಗೆಯಲ್ಲಿದ್ದ ಕೈಮಗ್ಗದ ಮುಂದಿದ್ದ ಟಿಪ್ಪಣಿಯಲ್ಲಿ ಮೈಸೂರು ಎಂದು ಕಂಡಿತು! ‘ಮೈಸೂರು ರಾಜ್ಯದಲ್ಲಿ ಕ್ಷಾಮ ಬಂದು ನೇಕಾರರಿಗೆ ಕೆಲಸವಿಲ್ಲವಾಗಿತ್ತು. ಆಗ ಇವರನ್ನು ಮಾಹೇಶ್ವರಕ್ಕೆ ಕರೆಸಿ ಆಶ್ರಯ ನೀಡಿದ್ದು ರಾಣಿ. ಅದರ ಫಲವಾಗಿ ಹುಟ್ಟಿದ್ದು ಮಾಹೇಶ್ವರಿ ಸೀರೆ’ ಎಂದು ಬರೆಯಲಾಗಿತ್ತು. ಹಿಂದಿನ ದಿನ ಸೀರೆ ಖರೀದಿಸುವಾಗ ಮನಸ್ಸಿನಲ್ಲಿ ನಮ್ಮ ಮೈಸೂರು ಸಿಲ್ಕ್ ಸೀರೆಗಳ ನೆನಪಾಗಿತ್ತು. ಅಲ್ಲಿನ ವಿವರದ ಪ್ರಕಾರ ಮೈಸೂರಿನವರು ಇಲ್ಲಿಗೆ ಬಂದು ಮಾಹೇಶ್ವರಿ ಸೀರೆಗಳ ನೇಯ್ಗೆಗೆ ಕಾರಣವಾಗಿದ್ದನ್ನು ಕೇಳಿ ಬಹಳ ಹೆಮ್ಮೆ ಮತ್ತು ಖುಷಿಯಾಯಿತು. ಮೈಸೂರು, ಮಾ ಸಾಹೇಬ್ ಮತ್ತು ಮಾಹೇಶ್ವರಿ ಸೀರೆ… ಎಲ್ಲಿಯ ನಂಟು!
ಅಂತೂ ಇಂದೋರ್ ಪ್ರವಾಸದಲ್ಲಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಪಾರ್ಕ್‌ಗಳಿಗೆ ರಾಣಿಯ ಹೆಸರು, ಅಲ್ಲಲ್ಲಿ ಪ್ರತಿಮೆಗಳನ್ನು ನೋಡಿದೆವು. ಮರಳಿ ಬರುವಾಗ ಗಮನಿಸಿದ್ದು ವಿಮಾನ ನಿಲ್ದಾಣದ ಹೆಸರೂ ದೇವಿ ಅಹಿಲ್ಯಾಬಾಯಿ ಹೋಳ್ಕರ್ ಎಂದೇ! ಅಲ್ಲಿರುವ ರಾಣಿಯ ದೊಡ್ಡ ಪ್ರತಿಮೆಯನ್ನು ಕಂಡಾಗ ಒಂದು ಕ್ಷಣ ನಿಂತು, ತಲೆ ಬಗ್ಗಿಸಿ ‘ಮಾ ಸಾಹೇಬ್’ ಗೆ ಗೌರವ ಸಲ್ಲಿಸಿದ್ದೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.